ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ʻನಾಲಾಯಕ್ ಮಗʼ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿರುವ ಕಾಂಗ್ರೆಸ್ ನಾಯಕ (Karnataka Election 2023) ಪ್ರಿಯಾಂಕ ಖರ್ಗೆ (Priyanka Kharge) ಅವರು ಇದೀಗ ತಮ್ಮ ಮಾತಿಗೆ ಸ್ಪಷ್ಟೀಕರಣ ನೀಡಿದ್ದು, ನಾನು ಹೇಳಿದ್ದು ಹಾಗಲ್ಲ ಎಂದಿದ್ದಾರೆ.
ಕಲಬುರಗಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಪ್ರಿಯಾಂಕ ಖರ್ಗೆ ಅವರು, ಮೋದಿ ಅವರನ್ನು ʻನಾಲಾಯಕ್ ಮಗʼ ಎಂದು ಹೇಳಿದ್ದು ತಕ್ಷಣವೇ ಕಾಳ್ಗಿಚ್ಚಿನಂತೆ ಹರಡಿತು. ಪತ್ರಿಕಾಗೋಷ್ಠಿಯಲ್ಲೇ ಮಾಧ್ಯಮದವರು ಕೂಡಾ ಇದನ್ನು ಪ್ರಶ್ನಿಸಿದರು. ಆಗ ಸಾವರಿಸಿಕೊಂಡು ವಿವರಣೆ ನೀಡಿದ ಪ್ರಿಯಾಂಕ ಅವರು ನಾನು ಹೇಳಿದ್ದೇ ಬೇರೆ ರೀತಿ ಎಂದರು.
ʻʻನಾನು ಯಾರಿಗೂ ನಾಲಾಯಕ್ ಅಂದಿಲ್ಲ, ನಾಲಾಯಕ್ ಮಗ ಇದ್ರೆ ಮನೆ ಹೇಗೆ ನಡೆಯುತ್ತೆ ಅಂತಾ ಹೇಳ್ತಿದ್ದೇನೆ ಅಷ್ಟೇ* ಎಂದು ಹೇಳಿದರು. ಪ್ರಧಾನಿ ಮೋದಿ ಅವರು ಕಲಬುರಗಿಗೆ ಬಂದಾಗ ಬಂಜಾರಾಕಾ ಏಕ್ ಬೇಟಾ ದೆಹಲಿಮೇ ಬೈಠಾ ಹೈ ಅಂತಾ ಹೇಳಿ ಹೋಗಿದ್ರು. ಇಂತಹ ನಾಲಾಯಕ್ ಮಗ ಇದ್ರೆ ಮನೆ ನಡೆಸಲು ಆಗುತ್ತಾ?ʼʼ ಎಂದು ಕೇಳಿದ್ದೇನೆ.
ʻʻನಾವು ವಿರೋಧ ಪಕ್ಷದಲ್ಲಿ ಇದ್ದೇನೆ, ಟೀಕೆ ಮಾಡುತ್ತೇನೆ, ವೈಯಕ್ತಿಕವಾಗಿ ಟೀಕೆ ಮಾಡಲ್ಲʼʼ ಎಂದು ಸ್ಪಷ್ಟೀಕರಣ ನೀಡಿದರು ಪ್ರಿಯಾಂಕ ಖರ್ಗೆ.
ಪ್ರಿಯಾಂಕ ಖರ್ಗೆ ಹೇಳಿದ್ದೇನು?
ಪ್ರಧಾನಿ ಮೋದಿ ಅವರು ಕಲಬುರಗಿಯಲ್ಲಿ ಪ್ರಚಾರಕ್ಕೆ ಬಂದಾಗ ಬಂಜಾರ ಸಮುದಾಯವನ್ನು ಸೆಳೆಯುವ ಉದ್ದೇಶದಿಂದ ನಿಮ್ಮ ಒಬ್ಬ ಮಗ ದೆಹಲಿಯಲ್ಲಿ ಕುಳಿತಿದ್ದಾನೆ ಎಂದು ಹೇಳಿದ್ದರು. ಇದನ್ನು ಪ್ರಿಯಾಂಕ ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ʻʻಕಲಬುರಗಿಗೆ ಬಂದಾಗ ಬಂಜಾರ ಸಮಾಜಕ್ಕೆ ಧೈರ್ಯ ಹೇಳಿದ್ದೀರಿ.. ಬಂಜಾರ ಸಮುದಾಯದ ನಿಮ್ಮ ಮಗ ದೆಹಲಿಯಲ್ಲಿ ಕುಳಿತಿದ್ದಾನೆ ಎಂದು. ಇಂತಹ ನಾಲಾಯಕ್ ಮಗ ಇದ್ದರೆ ಮನೆ ನಡೆಸೋಕೆ ಆಗುತ್ತಾ?ʼʼ ಎಂದು ಪ್ರಶ್ನಿಸಿದ್ದಾರೆ ಖರ್ಗೆ. ಕೋಲಿ ಕುರುಬ ಸಮುದಾಯಕ್ಕೆ ಯಾವಾಗ ಎಸ್ಟಿ ಮೀಸಲು ಕೊಡುತ್ತೀರಾ ಎಂದು ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು. ʻʻನಮ್ಮ ಕಾಂಗ್ರೆಸ್ ನಾಯಕರ ಬಗ್ಗೆ ಟೀಕೆ ಮಾಡೊದಕ್ಕೆ ನಿಮಗೆ ಏನು ನೈತಿಕತೆ ಇದೆ? ನೀವು ಏನು ಕೆಲಸ ಮಾಡಿದ್ದೀರಿ ಹೇಳಿʼʼ ಎಂದರು ಪ್ರಿಯಾಂಕ ಖರ್ಗೆ.
ʻʻಗೊಂಡ ಹಾಗೂ ಕೋಲಿ ಸಮಾಜದ ಮೀಸಲಾತಿ ಬೇಡಿಕೆ ಬಗ್ಗೆ ಏನು ಮಾಡಿದಿರಿ? ನಾನು ಖುದ್ದಾಗಿ ನಿಮ್ಮ ಸಚಿವರಿಗೆ ಹೋಗಿ ಮೂರು ಬಾರಿ ಮನವಿ ಕೊಟ್ಟಿದ್ದೇನೆ. ನಾನು ಸಚಿವನಾಗಿದ್ದಾಗಲೇ ಹೋಗಿ ಪತ್ರ ಕೊಟ್ಟು ಬಂದಿದ್ದೇನೆ.. ನಿಮ್ಮ ಕುಲ ಬಾಂಧವರಿಗೆ ನೀವೇ ಚೂರಿ ಹಾಕುತ್ತಿದ್ದೀರಿʼʼ ಎಂದು ಹೇಳಿದರು ಪ್ರಿಯಾಂಕ ಖರ್ಗೆ.
ಇದನ್ನೂ ಓದಿ : Karnataka Election : ಮೋದಿಯನ್ನು ನಾಲಾಯಕ್ ಮಗ ಎಂದ ಪ್ರಿಯಾಂಕ ಖರ್ಗೆ; ಕಾಂಗ್ರೆಸ್ ಮತ್ತೊಂದು ಎಡವಟ್ಟು