ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಪ್ರಚಾರಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಭಾನುವಾರ ಕೆಲವು ನಿಮಿಷಗಳ ಕಾಲ ಡೆಲಿವರಿ ಬಾಯ್ ಆದರು. ಸ್ಕೂಟರ್‌ನಲ್ಲಿ ಬೆಂಗಳೂರಿನ ಬೀದಿ ಸುತ್ತಿದರು. ಈ ಸುತ್ತಾಟ ಮತ್ತು ಸಂವಾದಗಳ ಮೂಲಕ ಗಿಗ್ ವರ್ಕರ್ (Gig Workers) ಗಳೆಂದು ಕರೆಯಲಾಗುವ ಡೆಲಿವರಿ ಬಾಯ್‌ಗಳ ಕಷ್ಟಗಳನ್ನು ಅರ್ಥ ಮಾಡಿಕೊಂಡರು.
ಕಳೆದ ಹಲವಾರು ದಿನಗಳಿಂದ ರಾಜ್ಯಾದ್ಯಂತ ಪಕ್ಷದ ಸಮಾವೇಶ, ರೋಡ್ ಶೋಗಳಲ್ಲಿ ಭಾಗವಹಿಸುತ್ತಿರುವ ರಾಹುಲ್ ಗಾಂಧಿ ಭಾನುವಾರ ಬೆಂಗಳೂರಿನಲ್ಲಿದ್ದರು. ಇಲ್ಲಿ ಅವರಿಗೆ ಡೆಲಿವರಿ ಬಾಯ್‌ಗಳ ಜತೆ ಒಂದು ಸಂವಾದವನ್ನು ಏರ್ಪಡಿಸಲಾಗಿತ್ತು.
ಬೆಂಗಳೂರಿನ ಏರ್‌ಲೈನ್ಸ್ ಹೋಟೆಲ್‌ನಲ್ಲಿ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಡಂಜೋ, ಸ್ವಿಗ್ಗಿ, ಜೊಮ್ಯಾಟೊ, ಬ್ಲಿಂಕಿಟ್ ಸೇರಿದಂತೆ ಹಲವು ಮನೆ ಮನೆಗೆ ವಸ್ತುಗಳನ್ನು ತಲುಪಿಸುವ ಡೆಲಿವರಿ ನೆಟ್‌ವರ್ಕ್ (Delivery Network) ಕೆಲಸಗಾರರ ಜತೆ ರಾಹುಲ್ ಮಾತನಾಡಿದರು. ಅವರೊಂದಿಗೆ ಕುಳಿತು ಕಾಫಿ ಮತ್ತು ಮಸಾಲೆ ದೋಸೆ ತಿಂದ ರಾಹುಲ್ ಗಾಂಧಿ ಅವರು, ಡೆಲಿವರಿ ಬಾಯ್‌ಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಉದ್ಯೋಗ ಹಾಗೂ ಇತರ ಕ್ಷೇತ್ರಗಳಲ್ಲಿ ಸಮಸ್ಯೆಗಳ ಬಗ್ಗೆ ಅರಿತುಕೊಂಡರು.
ಯಾಕೆ ಹೆಚ್ಚು ಮಂದಿ ಡೆಲಿವರಿ ಬಾಯ್‌ಗಳಾಗುತ್ತಾರೆ, ಡೆಲಿವರಿ ಬಾಯ್‌ಗಳಾಗುವ ಮುನ್ನ ಅವರು ಏನಾಗಿದ್ದರು ಎನ್ನುವುದರ ಬಗ್ಗೆ ಚರ್ಚೆ ನಡೆಸಿದ ಅವರಿಗೆ ಸರಿಯಾದ ಸ್ಥಿರ ಉದ್ಯೋಗ ಇಲ್ಲದಿರುವುದು, ಹೆಚ್ಚುತ್ತಿರುವ ಬೆಲೆ ಏರಿಕೆಗಳು ಈ ವೃತ್ತಿಗೆ ಇಳಿಯುವಂತೆ ಮಾಡಿದವು ಎಂಬ ವಿಚಾರ ತಿಳಿಯಿತು. ಡೆಲಿವರಿ ಬಾಯ್‌ಗಳ ಕಷ್ಟಗಳನ್ನೂ ಅವರು ಕೇಳಿ ತಿಳಿದುಕೊಂಡರು.
ತಾವು ಮೊದಲು ಬಟ್ಟೆ ವ್ಯಾಪಾರ ಮಾಡುತ್ತಿದ್ದು, ಈಗ ಡೆಲಿವರಿ ಬಾಯ್ ಆಗಿದ್ದೇನೆ ಎಂದು ಕೆಲವರು ಹೇಳಿದರು. ಜಿಎಸ್‌ಟಿಯಿಂದಾಗಿ ಸಮಸ್ಯೆ ಆಯಿತೇ ಎಂದು ಕೇಳಿದಾಗ ಹೌದು ಎಂದರು.
ಬೆಂಗಳೂರು ಒಂದರಲ್ಲೇ ಸುಮಾರು 2 ಲಕ್ಷ ಮಂದಿ ಗಿಗ್ ಕಾರ್ಮಿಕರಿದ್ದು, ಕಾಂಗ್ರೆಸ್ ಅವರಿಗಾಗಿ ಕೆಲವೊಂದು ನಿರ್ದಿಷ್ಟ ಭರವಸೆಗಳನ್ನು ನೀಡಿದ್ದಾಗಿ ರಾಹುಲ್ ಗಾಂಧಿ ಮಾತುಕತೆಯ ವೇಳೆ ತಿಳಿಸಿದರು. ಸುಮಾರು 3000 ಕೋಟಿ ರೂ.ಗಳ ಆವರ್ತನ ನಿಧಿಯನ್ನು ಸ್ಥಾಪಿಸಿ ಡೆಲಿವರಿ ಬಾಯ್‌ಗಳ ಕಲ್ಯಾಣಮಂಡಳಿಯನ್ನು ಸ್ಥಾಪಿಸಲಾಗುವುದು, ಕೆಲಸಗಾರರಿಗೆ ಕನಿಷ್ಠ ಕೆಲಸದ ಅವಧಿಯನ್ನು ನಿಗದಿಪಡಿಸುವ ಬಗ್ಗೆ ಕಾಂಗ್ರೆಸ್ ಭರವಸೆ ನೀಡಿದೆ.
ಹೋಟೆಲ್‌ನಲ್ಲಿ ಮಾತುಕತೆ ನಡೆಸಿದ ಬಳಿಕ ರಾಹುಲ್ ಗಾಂಧಿ ಅವರು ಬ್ಲಿಂಕಿಟ್‌ಗೆ ಸೇರಿದ ಒಬ್ಬ ಡೆಲಿವರಿ ಬಾಯ್ ಸ್ಕೂಟರನ್ನು ಏರಿ ಪಿಲಿಯನ್ ರೇಡರ್ ಆಗಿ ಸುಮಾರು ಎರಡು ಕಿಲೋಮೀಟರ್ ದೂರ ಸಂಚರಿಸಿದರು. ಈ ಸಂದರ್ಭದಲ್ಲಿಯೂ ಅವರು ಡೆಲಿವರಿ ಬಾಯ್ ಜತೆ ಮಾತನಾಡಿದರು. ಕರ್ನಾಟಕದಲ್ಲಿರುವ 40% ಸರ್ಕಾರದಿಂದ ಆಗಿರುವ ತೊಂದರೆಗಳ ಬಗ್ಗೆ ಚರ್ಚಿಸಿದರು ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ತಿಳಿಸಿದ್ದಾರೆ.
ಇದನ್ನೂ ಓದಿ : Karnataka Election: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ; ಕೊನೆಯ ದಿನ ಕಸರತ್ತು