Site icon Vistara News

ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋಗೆ ಪ್ರತಿಯಾಗಿ ಮೇ 7ರಂದು ರಾಹುಲ್‌ ಗಾಂಧಿ ರೋಡ್‌ ಶೋ

Rahul Gandhi and Narendra Modi

ಬೆಂಗಳೂರು: ವಿಧಾನಸಭೆ ಚುನಾವಣೆಗೆ (Karnataka Election) ಕೆಲವೇ ದಿನಗಳು ಬಾಕಿ ಇರುವ ಕಾರಣ ಪಕ್ಷಗಳ ಪ್ರಚಾರದ ಭರಾಟೆ ಜೋರಾಗುತ್ತಿದೆ. ಅದರಲ್ಲೂ, ಬಿಜೆಪಿ ಹಾಗೂ ಕಾಂಗ್ರೆಸ್‌ನ ಕೇಂದ್ರ ನಾಯಕರ ಪ್ರಚಾರದ ಅಬ್ಬರ ಇಮ್ಮಡಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿ ಹಲವರು ಪ್ರಚಾರ, ಸಮಾವೇಶ, ರೋಡ್‌ ಶೋ ನಡೆಸುತ್ತಿದ್ದಾರೆ. ಮೇ 6ರಂದು ಬೆಂಗಳೂರಿನಲ್ಲಿ ನರೇಂದ್ರ ಮೋದಿ ಅವರು 37 ಕಿ.ಮೀ ರೋಡ್‌ ಶೋ ನಡೆಸಲು ಯೋಜನೆ ರೂಪಿಸಿರುವ ಬೆನ್ನಲ್ಲೇ, ಮೇ 7ರಂದು ರಾಹುಲ್‌ ಗಾಂಧಿ ಅವರು ಕೂಡ ಬೆಂಗಳೂರಿನಲ್ಲಿ ರೋಡ್‌ ಶೋ ಕೈಗೊಳ್ಳಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. “ನರೇಂದ್ರ ಮೋದಿ ಅವರು 37 ಕಿ.ಮೀ ಅಲ್ಲ, 370 ಕಿ.ಮೀ ರೋಡ್‌ ಶೋ ಮಾಡಲಿ. ನಾವು ಕೂಡ ರೋಡ್‌ ಶೋ ಮಾಡುತ್ತೇವೆ. ಮೇ 7ರಂದು ಬೆಂಗಳೂರಿನಲ್ಲಿ ರಾಹುಲ್‌ ಗಾಂಧಿ ಅವರು ರೋಡ್‌ ಶೋ ಕೈಗೊಳ್ಳಲಿದ್ದಾರೆ” ಎಂದು ತಿಳಿಸಿದರು. ಬಿಜೆಪಿ ವಿರುದ್ಧ ಹರಿಹಾಯ್ದ ಡಿಕೆಶಿ, “ಬಿಜೆಪಿಯವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪೊಲೀಸರು ಬಿಜೆಪಿ ಕಾರ್ಯಕರ್ತರ ರೀತಿ ವರ್ತಿಸುತ್ತಿದ್ದಾರೆ. ನಮಗೂ ಅವಕಾಶ ಕೊಡಿ, ನಾವೂ ರ‍್ಯಾಲಿ ಮಾಡುತ್ತೇವೆ. ರ‍್ಯಾಲಿ, ಖರ್ಚು, ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ವಿಚಾರದಲ್ಲಿ ಏಕಪಕ್ಷೀಯ ಧೋರಣೆ ಅನುಸರಿಸಲಾಗುತ್ತಿದೆ” ಎಂದು ದೂರಿದರು.

ಇಡೀ ದಿನ ಮೋದಿ ರೋಡ್‌ ಶೋ

ಮೇ 6ರಂದು ಮೋದಿ ಅವರು ಬೆಂಗಳೂರಿನಲ್ಲಿ ಇಡೀ ದಿನ ಎರಡು ರೋಡ್‌ ಶೋ ನಡೆಸಲಿದ್ದಾರೆ. ಬೆಳಗ್ಗೆ 10ರಿಂದ 1 ಗಂಟೆಯವರೆಗೆ 1ನೇ ರೋಡ್ ಶೋ ನಡೆಯಲಿದ್ದರೆ, ಮಧ್ಯಾಹ್ನ 3ರಿಂದ 8.30ರವರೆಗೆ 2ನೇ ರೋಡ್ ಶೋ ನಡೆಯಲಿದೆ. ಮೋದಿ ನಡೆಸುವ 1ನೇ ರೋಡ್‌ ಶೋನಲ್ಲಿ ಮಹದೇವಪುರ, ಕೆ.ಆರ್‌ ಪುರಂ, ಸಿ.ವಿ ರಾಮನ್ ನಗರ, ಶಿವಾಜಿ ನಗರ ಹಾಗು ಶಾಂತಿ ನಗರ ಕ್ಷೇತ್ರಗಳು ಕವರ್‌ ಆಗಲಿವೆ. ಮೋದಿ ನಡೆಸುವ 2ನೇ ರೋಡ್‌ ಶೋನಲ್ಲಿ ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಪದ್ಮನಾಭನಗರ, ಬಸವನಗುಡಿ, ಚಿಕ್ಕಪೇಟೆ, ಚಾಮರಾಜ ಪೇಟೆ, ಗಾಂಧಿ ನಗರ, ಮಹಾಲಕ್ಷ್ಮೀ ಲೇಔಟ್, ವಿಜಯನಗರ, ಗೋವಿಂದರಾಜ ನಗರ, ರಾಜಾಜಿ ನಗರ, ಮಲ್ಲೇಶ್ವರಂ ಕ್ಷೇತ್ರಗಳು ಕವರ್‌ ಆಗಲಿದೆ.

ಇದನ್ನೂ ಓದಿ: Modi in Karnataka : ಮೋದಿ ಬೆಂಗಳೂರು ರೌಂಡ್ಸ್‌ಗೆ ಭರ್ಜರಿ ಸಿದ್ಧತೆ; ಮೇ 6ರಂದು ಇಡೀ ದಿನ ರೋಡ್‌ ಶೋ

ಮೇ 6ರ ಬೆಳಗ್ಗೆ ಬೆಂಗಳೂರು ಈಶಾನ್ಯ ಮತ್ತು ಬೆಂಗಳೂರು ಪೂರ್ವ ವಲಯಗಳಲ್ಲಿ ಹಾಗೂ ಮಧ್ಯಾಹ್ನದಿಂದ ರಾತ್ರಿವರೆಗೂ ಬೆಂಗಳೂರು ದಕ್ಷಿಣ ಭಾಗದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರು ಉತ್ತರ ಭಾಗದಲ್ಲಿನ 5 ಕ್ಷೇತ್ರಗಳಾದ ಮಹದೇವಪುರ, ಕೆಆರ್‌ಪುರಂ, ಸಿವಿ ರಾಮನ್ ನಗರ, ಶಿವಾಜಿನಗರ ಹಾಗು ಶಾಂತಿನಗರ 3 ಗಂಟೆಗಳ ಕಾಲ ರೋಡ್‌ ಶೋ ನಡೆಸಲಿದ್ದಾರೆ. 1 ಗಂಟೆಗೆ ರೋಡ್ ಶೋ ಮುಕ್ತಾಯವಾದ ನಂತರ ರಾಜಭವನದಲ್ಲಿ ಕೆಲ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ನಂತರ 2ನೇ ಸುತ್ತಿನ ರೋಡ್ ಶೋವನ್ನು ಮಧ್ಯಾಹ್ನ ಗಂಟೆಯ ನಂತರ ಆರಂಭಿಸಲಿದ್ದಾರೆ. 3 ಗಂಟೆಗೆ ಬ್ರಿಗೇಡ್ ಮಿಲೇನಿಯಂನಿಂದ ಆರಂಭವಾಗೋ ರ‍್ಯಾಲಿ ಸುಮಾರು 8.30ಕ್ಕೆ ಸ್ಯಾಂಕಿ ಕೆರೆ ಬಳಿ ಅಂತ್ಯವಾಗಲಿದೆ.

Exit mobile version