ಬೆಂಗಳೂರು: ನನಗೆ ಸಚಿವನಾಗಬೇಕೆಂದೇನೂ ಆಸೆ ಇಲ್ಲ. ಆದರೆ, ಆಪಾದನೆ ಬಂದಾಗ ರಾಜೀನಾಮೆ ನೀಡಿದ್ದೆ. ಈಗ ಆರೋಪ ಮುಕ್ತನಾಗಿದ್ದೇನೆ. ಕ್ಲೀನ್ ಚಿಟ್ ಸಿಕ್ಕರೆ ಪುನಃ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಹೀಗಾಗಿ ನಾನು ಸಚಿವ ಸ್ಥಾನ ಕೊಡಲೇಬೇಕು ಎಂದು ಕೇಳುತ್ತಿದ್ದೇನೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ರಮೇಶ್ ಜಾರಕಿಹೊಳಿ ಅವರೂ ಆರೋಪ ಮುಕ್ತರಾಗಿದ್ದಾರೆ. ಈ ನಿಟ್ಟಿನಲ್ಲಿ ನನ್ನನ್ನು ಹಾಗೂ ರಮೇಶ್ ಅವರನ್ನು ಸಂಪುಟಕ್ಕೆ ಶೀಘ್ರವೇ ಮುಖ್ಯಮಂತ್ರಿಯವರು ಸೇರ್ಪಡೆಗೊಳಿಸಲಿ ಎಂದು ಮಾಜಿ ಸಚಿವ, ಶಾಸಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು. ರಾಜ್ಯದಲ್ಲಿ ಚುನಾವಣೆಗೆ (Karnataka Election) ಇನ್ನು ಬೆರಳೆಣಿಕೆಯಷ್ಟು ತಿಂಗಳು ಇರುವುದರಿಂದ ಈಶ್ವರಪ್ಪ ನಡೆ ಕುತೂಹಲ ಮೂಡಿಸಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಮಗೆ ಇನ್ನೂ ಸಚಿವ ಸ್ಥಾನವನ್ನು ಕೊಡದಿರುವ ಬಗ್ಗೆ ಅಸಮಾಧಾನ ಹೊರಹಾಕಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರೀಯ ವಾಹಿನಿಯೊಂದರಲ್ಲಿ ನೀಡಿರುವ ಸಂದರ್ಶನವೊಂದರಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಸಿಕ್ಕಿರುವುದರಿಂದ ಅವರಿಗೆ ಸಚಿವ ಸ್ಥಾನವನ್ನು ನೀಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹ ಭರವಸೆ ನೀಡಿದ್ದರು. ಈಗ ನಾನು ಆರೋಪ ಮುಕ್ತನಾಗಿ ೪ ತಿಂಗಳು ಕಳೆದರೂ ಸಚಿವ ಸ್ಥಾನ ನೀಡದೇ ಇರುವುದರಿಂದ ಈಗ ಕೇಳುತ್ತಿದ್ದೇನೆ ಎಂದು ಹೇಳಿದರು.
ನಾನು ಯಾವುದೇ ರಾಷ್ಟ್ರೀಯ ನಾಯಕರನ್ನು ಸಂಪರ್ಕ ಮಾಡಿಲ್ಲ. ಮುಖ್ಯಮಂತ್ರಿಯವರು ಭರವಸೆ ನೀಡಿದ್ದರು. ಆದರೂ ಈಡೇರದ ಕಾರಣ ಬೆಳಗಾವಿಗೆ ಹೋಗಿ ಸೌಮ್ಯ ಸ್ವಭಾವದ ಪ್ರತಿಭಟನೆ ಮಾಡುವುದಾಗಿ ಹೇಳಿದ್ದೆ. ವಿಧಾನಸಭಾಧ್ಯಕ್ಷರಿಗೂ ಪತ್ರ ನೀಡಿದ್ದೇನೆ. ಇನ್ನು ಸದನದಲ್ಲಿ ಪಾಲ್ಗೊಳ್ಳುವ ಬಗ್ಗೆ ಇಂದು (ಮಂಗಳವಾರ) ರಾತ್ರಿ ನಿರ್ಧರಿಸುತ್ತೇನೆ. ಮುಖ್ಯಮಂತ್ರಿ ಅವರನ್ನು ನಂಬುತ್ತೇನೆ. ಅವರ ಬಳಿ ಮಾತನಾಡಿ ತೀರ್ಮಾನ ಮಾಡುತ್ತೇನೆ ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ | 2024 Election | ಬಿಜೆಪಿಗೆ ಗೆಲ್ಲಲು ಕಷ್ಟವಾಗಿರುವ ಲೋಕಸಭಾ ಕ್ಷೇತ್ರಗಳ ಸಂಖ್ಯೆ 144ರಿಂದ 160ಕ್ಕೆ ಏರಿಕೆ! ಏನು ಕಾರಣ?
ನಾನು ಸಚಿವನಾಗದೇ ಇರುವುದಕ್ಕೆ ನಡೆದ ಪಿತೂರಿ ಬಗ್ಗೆ ಪ್ರಸ್ತಾಪ ಮಾಡಲ್ಲ. ಪಕ್ಷವನ್ನು ೨-೩ ಭಾಗ ಮಾಡಲು ನನಗೆ ಇಷ್ಟವಿಲ್ಲ. ರಾಜ್ಯದ ನಾಯಕರನ್ನು ಹೈಕಮಾಂಡ್ ನಿರ್ಲಕ್ಷ್ಯ ಮಾಡಿಲ್ಲ. ಈಗಾಗಲೇ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೇಂದ್ರದಲ್ಲಿ ಸ್ಥಾನ ಕೊಟ್ಟಿದ್ದಾರೆ.
ರಾಜೀನಾಮೆ ಕೊಟ್ಟಿದ್ದಕ್ಕೆ ಕಾರಣ ನೀಡಿದ ಕೆಎಸ್‌ಇ
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೇಸ್‌ನಲ್ಲಿ ನನ್ನ ಮೇಲೆ ಆರೋಪ ಕೇಳಿಬಂದಾಗ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಬಗ್ಗೆ ಕೇಂದ್ರ ನಾಯಕರಿಗೆ ತಿಳಿಸಿದಾಗ ಅವರು ಬೇಡ ಎಂದೇ ಹೇಳಿದ್ದರು. ಆದರೆ, ಹಿಂದಿನ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಮೇಲೆ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಕೇಸ್ ಆರೋಪ ಬಂದಿದ್ದಾಗ ರಾಜೀನಾಮೆ ನೀಡುವಂತೆ ಒತ್ತಾಯಿಸಿದವರಲ್ಲಿ ನಾನೂ ಒಬ್ಬನಾಗಿದ್ದೆ. ಈ ಹಿನ್ನೆಲೆಯಲ್ಲಿ ನಾನಾಗಿಯೇ ರಾಜೀನಾಮೆ ಕೊಟ್ಟಿದ್ದೆ. ಈಗ ಆರೋಪ ಮುಕ್ತನಾಗಿದ್ದರಿಂದ ಬೇಡಿಕೆ ಇಟ್ಟಿದ್ದೇನೆ ಎಂದು ಈಶ್ವರಪ್ಪ ತಿಳಿಸಿದರು.
ರಾಜ್ಯದಲ್ಲಿ ಇಂದು ಬಿಜೆಪಿ ಅಧಿಕಾರಕ್ಕೆ ಬರಲು, ಲೋಕಸಭೆಯಲ್ಲಿ ೨೫ ಸೀಟ್ ಗೆಲ್ಲಲು ರಾಜ್ಯದ ಜನರ ಕೊಡುಗೆ ಸಾಕಷ್ಟು ಇದೆ. ನಾವೆಲ್ಲ ೩೦-೪೦ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಶೇಷಾದ್ರಿಪುರಂ ಸಣ್ಣ ಕಚೇರಿಯಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ ಎಂದು ಪಕ್ಷದಲ್ಲಿ ತಮ್ಮ ಸಂಘಟನೆ ಬಗ್ಗೆ ಹೇಳಿಕೊಂಡರು.
ಇದನ್ನೂ ಓದಿ | Karnataka Election | ರಸ್ತೆ ಮಾಡಿಲ್ಲವೆಂದು ಚುನಾವಣೆ ಬಹಿಷ್ಕರಿಸಿದ ಹಾಡುಗಾರ ಗ್ರಾಮಸ್ಥರು; ಕಾಂಗ್ರೆಸ್, ಬಿಜೆಪಿಗೂ ಗುಡ್‌ಬೈ