ಬೆಳಗಾವಿ: ಬಿಜೆಪಿ ಟಿಕೆಟ್ ಆಕಾಂಕ್ಷಿಯ ಕಚೇರಿ ಉದ್ಘಾಟನೆ ಮಾಡುವ ಮೂಲಕ ರಾಜಕೀಯ ಬದ್ಧ ವೈರಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ (Karnataka Election) ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಹಿಂಡಲಗಾದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ, ಆಪ್ತ ನಾಗೇಶ್ ಮನ್ನೋಳಕರ್ ಜನಸಂಪರ್ಕ ಕಚೇರಿಯನ್ನು ಉದ್ಘಾಟನೆ ಮಾಡುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಈ ವೇಳೆ ರಮೇಶ್ ಜಾರಕಿಹೊಳಿ ಮಾತನಾಡಿ, ನಾನು ಕಳೆದ ಒಂದೂವರೆ ವರ್ಷದ ಬಳಿಕ ಭಾಷಣ ಮಾಡುತ್ತಿದ್ದೇನೆ. ಮಾತನಾಡಬಾರದು ಎಂದು ಒಂದು ಸಂಕಲ್ಪ ಇತ್ತು. ಆದರೆ ಅನಿವಾರ್ಯವಾಗಿ ಮಾತನಾಡುತ್ತಿದ್ದೇನೆ. ನಾಗೇಶ್ ಮನ್ನೋಳಕರ್ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅದೇ ರೀತಿ ಮಾಜಿ ಶಾಸಕ ಸಂಜಯ್ ಪಾಟೀಲ್, ಧನಂಜಯ್ ಜಾಧವ್ ಸೇರಿ ಹಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ನಾಗೇಶ್ ಮನ್ನೋಳಕರ್ ಅವರಿಗೆ ಟಿಕೆಟ್ ನೀಡಲು ಸಿಎಂ ಸೇರಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿ ಕಥೆ ಪೂರ್ಣವಾಗಿ ಮುಗಿದು ಬಿಟ್ಟಿತ್ತು. ಹೀಗಾಗಿ ಪಕ್ಷ ಸಂಘಟನೆ ಮಾಡಲು ನಾಗೇಶ್ ಮನ್ನೋಳಕರ್‌ರನ್ನು ಅಭ್ಯರ್ಥಿಯಾಗಿ ನಿಲ್ಲಿಸುತ್ತೇವೆ ಎಂದು ಬಿಜೆಪಿ ನಾಯಕರಿಗೆ ತಿಳಿಸಿದ್ದೇನೆ. ಅಕಸ್ಮಾತ್ ಅವರಿಗಿಂತ ಪ್ರಬಲ ಅಭ್ಯರ್ಥಿ ಇದ್ದರೆ ಅವರಿಗೆ ಬೆಂಬಲ ನೀಡಲು ತಯಾರಿದ್ದೇವೆ ಎಂದರು.
ಇದನ್ನೂ ಓದಿ | Karnataka Election | ಜೆಡಿಎಸ್ ಹೈಕಮಾಂಡ್‌ಗೆ ಬಗ್ಗದ ಹಾಸನ ಹೈಕಮಾಂಡ್: ರೇವಣ್ಣ ಹಠಕ್ಕೆ ಕುಮಾರಸ್ವಾಮಿ ಸುಸ್ತು !
ಕಾಂಗ್ರೆಸ್‌ನ ಹಲವು ನಾಯಕರು ಜಾರಕಿಹೊಳಿ ಕಡೆ
ಶಂಕರಗೌಡ ಪಾಟೀಲ್ ಸೇರಿ ಕಾಂಗ್ರೆಸ್‌ನ ಹಲವರು ಇಲ್ಲಿದ್ದಾರೆ. ಹಾಲಿ ಶಾಸಕರಿಗೆ ಕಳೆದ ಚುನಾವಣೆಯಲ್ಲಿ ಎಷ್ಟು ಬೆಂಬಲ ನೀಡಿದ್ದೇವೆ ಎಂಬುವುದು ನಿಮಗೆ ಗೊತ್ತು. ಆದರೆ ಎಲೆಕ್ಷನ್‌ನಲ್ಲಿ ಆಯ್ಕೆಯಾದ ಮೇಲೆ ಎಲ್ಲರ ತಲೆ ಮೇಲೆ ಕುಳಿತರು. ಕುಳಿತುಕೊಳ್ಳಲಿ ಪಾಪ ಪರವಾಗಿಲ್ಲ, ಇನ್ನೂ ಏನೋ ದೊಡ್ಡವರಾಗುವ ಆಕಾಂಕ್ಷೆ ಹೊಂದಿದ್ದಾರೆ. ಆಗುವುದಾದರೆ ಆಗಲಿ, ಯಾರಿಗೂ ಕೆಟ್ಟದ್ದನ್ನು ಬಯಸುವುದು ಬೇಡ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ದೃಢಸಂಕಲ್ಪ ಮಾಡಬೇಕು. ಇವತ್ತು ಇದು ಸಣ್ಣ ಕಾರ್ಯಕ್ರಮವಾಗಿದೆ. ಮುಂದೆ ಹಂತ ಹಂತವಾಗಿ ಪ್ರತಿಯೊಂದು ಬೂತ್‌ನಲ್ಲಿ 25 ಜನರ ತಂಡ ಮಾಡುತ್ತೇವೆ. ಕಳೆದ ಬಾರಿ ಕಾಂಗ್ರೆಸ್ 23 ಸಾವಿರ ಮತ ಮುನ್ನಡೆ ಇತ್ತು. ಈಗ ಬಿಜೆಪಿ ಕಾರ್ಯಕರ್ತರು ಬೂತ್‌ಮಟ್ಟದಿಂದ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ. ನಾವು ನಾಗೇಶ್ ಮನ್ನೋಳಕರ್‌ಗೆ ಬಿಜೆಪಿ ಟಿಕೆಟ್ ಪಡೆಯಲು ಪ್ರಯತ್ನ ಮಾಡುತ್ತೇವೆ. ಆದರೆ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅವರನ್ನು ಗೆಲ್ಲಿಸುತ್ತೇವೆ ಎಂದರು.
ಸೋಮವಾರ ಸಿಎಂ ದೆಹಲಿಗೆ ತೆರಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಏನೂ ನಿರೀಕ್ಷೆ ಇಟ್ಟುಕೊಂಡಿಲ್ಲ, ಸಿಎಂ ಅವರು ಮಾತಾಡಿರುವ ಕೆಲವು ವಿಷಯ ಬಹಿರಂಗ ಮಾಡಲು ಆಗಲ್ಲ. ಸಿಎಂ ಅವರ ಮೇಲೆ ನಮಗೆ ಗೌರವ, ವಿಶ್ವಾಸ ಇದೆ. ಸಿಎಂ ಬೊಮ್ಮಾಯಿ ಹೇಳಿದ ಪ್ರಕಾರ ಅಧಿವೇಶನಕ್ಕೆ ಹಾಜರಾಗಿದ್ದೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಮಂತ್ರಿ ಆಗುವುದು ಬಿಡುವುದು ಬೇರೆ ವಿಷಯ, ಬಿಜೆಪಿಯನ್ನು ಗೆಲ್ಲಿಸಲು ಇಡೀ ಜಿಲ್ಲೆಯಲ್ಲಿ ಶಕ್ತಿ ಮೀರಿ ಕೆಲಸ ಮಾಡುತ್ತೇವೆ. ವಿಶೇಷವಾಗಿ ಗ್ರಾಮೀಣ ಕ್ಷೇತ್ರದಲ್ಲಿ ಶ್ರಮಿಸುತ್ತೇವೆ ಎಂದು ಹೇಳಿದರು.
ಪದೇಪದೆ ದುಡ್ಡಿನಿಂದ ಚುನಾವಣೆ ಗೆಲ್ಲಲಾಗದು
ರೊಕ್ಕಾ ಕೊಟ್ಟು ಒಂದು ಸಾರಿ ಗೆದ್ದು ಬರುತ್ತಾರೆ, ಪದೇಪದೆ ದುಡ್ಡಿನ ಮೇಲೆ ನಡೆಯುವುದಿಲ್ಲ. ಜಾತಿ ವಿಚಾರದಲ್ಲಿ ಇಲ್ಲಿ ಬಂದು ಮನುಷ್ಯತ್ವದ ಭಾಷಣ ಮಾಡುವುದು, ಬೇರೆ ಕಡೆ ಎದೆ ತಟ್ಟಿ ಬೇರೆ ಜಾತಿ ಹೇಳುವುದು. ಇವರ ಎಲ್ಲ ನಾಟಕವನ್ನು ಗ್ರಾಮೀಣ ಕ್ಷೇತ್ರದ ಜನ ನೋಡುತ್ತಿದ್ದಾರೆ ಎಂದು ಶಾಸಕಿ ಲಕ್ಷೀ ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದರು.
ಶಾಸಕರಾದ ಮೇಲೆ ಮಂತ್ರಿಯಾಗುವುದು ಮುಖ್ಯಮಂತ್ರಿ ಆಗುವುದು ಹಕ್ಕು. ಅದನ್ನು ನೋಡಿ ಅಸೂಯೆ ಪಡಬಾರದು. ಆದರೆ ಯಾರು ಉಪಕಾರ ಮಾಡಿದ್ದಾರೆ ಎಂಬುವುನ್ನು ಮರೆಯಬಾರದು. ಜೀವಂತ ಉದಾಹರಣೆ ಮಹೇಶ್ ಕುಮಟಳ್ಳಿ ಇಲ್ಲೇ ಇದ್ದಾರೆ. ಪ್ರಜಾಪ್ರಭುತ್ವ ನೀತಿಯಲ್ಲಿ ಮತದಾರರೇ ಕಿಂಗ್. ಮತದಾರರ ನಿರ್ಧಾರವೇ ಫೈನಲ್ ಎಂದು ಹೇಳಿದರು.
ಇದನ್ನೂ ಓದಿ | ಎಲೆಕ್ಷನ್ ಹವಾ | ದಾವಣಗೆರೆ ಉತ್ತರ | ಗಳಿಸಿಕೊಂಡ ಕ್ಷೇತ್ರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಬಿಜೆಪಿ