ಬಳ್ಳಾರಿ: ಮುಂಬರುವ ಚುನಾವಣೆಯಲ್ಲಿ (Karnataka Election) ರಾಜ್ಯದಲ್ಲಿ ಜೆಡಿಎಸ್ ಸೇರಿದಂತೆ ಯಾವುದೇ ಪ್ರಾದೇಶಿಕ ಪಕ್ಷ ಪರಿಣಾಮ ಬೀರದು. ಜನರು ರಾಮುಲು ಮುಖ ನೋಡಿ ಅಥವಾ ಮತ್ತೊಬ್ಬರ ಮುಖ ನೋಡಿ ಮತ ಹಾಕಬೇಡಿ ಎಂದು ಸಚಿವ ಶ್ರೀರಾಮುಲು ಹೇಳುವ ಮೂಲಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿ) ಸಂಸ್ಥಾಪಕ, ಮಾಜಿ ಸಚಿವ ಜನಾರ್ದನ ರೆಡ್ಡಿ ಮೇಲೆ ಪರೋಕ್ಷ ಚಾಟಿ ಬೀಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಭಾಗ ಅಷ್ಟೇ ಅಲ್ಲ, ಕಲ್ಯಾಣ ಕರ್ನಾಟಕದ ಎಲ್ಲ ಭಾಗದಲ್ಲಿಯೂ ಬಿಜೆಪಿ ಗೆಲ್ಲಲಿದೆ. ಯಾವುದೇ ಪ್ರಾದೇಶಿಕ ಪಕ್ಷ ಪರಿಣಾಮ ಬೀರುವ ಮಾತೇ ಇಲ್ಲ. ಸ್ವಂತ ಬಲದಿಂದ ನಾವು 150 ಸ್ಥಾನವನ್ನು ಗೆಲ್ಲುತ್ತೇವೆ ಎಂದು ಶೀರಾಮುಲು ಹೇಳಿದರು.
ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಪ್ರಭಾವ ಬೀರುವುದಿಲ್ಲ. ಬಳ್ಳಾರಿ ವಿಜಯನಗರ ಅವಳಿ ಜಿಲ್ಲೆಯ ಮೂರು ಸಾಮಾನ್ಯ ಕ್ಷೇತ್ರದಲ್ಲಿ ಆನಂದ್ ಸಿಂಗ್, ಕರುಣಾಕರ ರೆಡ್ಡಿ, ಸೋಮಶೇಖರ್ ರೆಡ್ಡಿ ಗೆಲ್ಲುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ಪಕ್ಷ ಕಟ್ಟಬಹುದು, ಚುನಾವಣೆಯಲ್ಲಿ ಸ್ಪರ್ಧಿಸಬಹುದು.ಆದರೆ ಜನರ ಒಲವು ಬಿಜೆಪಿ ಪಕ್ಷದ ಮೇಲೆ ಇದೆ ಎಂದು ಹೇಳಿದರು.
ದೇಶದ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಚುನಾವಣೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಲಿದೆ. ಈಗ ಸ್ಥಾಪನೆಯಾಗಿರುವ ಪ್ರಾದೇಶಿಕ ಪಕ್ಷದಿಂದ ಕಾರ್ಯಕರ್ತರಲ್ಲಿ ಗೊಂದಲ ಇಲ್ಲ, ನಮ್ಮ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮೀಸಲಾತಿ ವಿಚಾರದಲ್ಲಿ ಯಾರಿಗೂ ನ್ಯಾಯ ಕೊಟ್ಟಿಲ್ಲ. ಮೀಸಲಾತಿ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮಾತನಾಡುವ ನೈತಿಕತೆ ಇಲ್ಲ. ಐವತ್ತು ವರ್ಷಗಳಿಂದ ಜನರಿಗೆ ಕಾಂಗ್ರೆಸ್ ಟೋಪಿ ಹಾಕುತ್ತಾ ಬಂದಿದೆ ಎಂದು ಶ್ರೀರಾಮುಲು ಟೀಕಿಸಿದರು.
ಇದನ್ನೂ ಓದಿ | Finance Horoscope 2023 | ಜನವರಿಯಲ್ಲಿ ಯಾವೆಲ್ಲಾ ರಾಶಿಯವರಿಗೆ ಆರ್ಥಿಕವಾಗಿ ಶುಭ ಫಲಗಳಿವೆ?