ವಿಜಯನಗರ: ವಿಧಾನಸಭಾ ಚುನಾವಣೆ (Karnataka Election) ಹತ್ತಿರ ಬರುತ್ತಿದ್ದಂತೆ ಹೊಸಪೇಟೆಯಲ್ಲಿ ಸಚಿವ ಆನಂದ್ ಸಿಂಗ್‌ಗೆ ಸಹೋದರಿ ರಾಣಿ ಸಂಯುಕ್ತ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಹೀಗಾಗಿ ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಹೋದರನಿಗೋ? ಸಹೋದರಿಗೋ? ಎಂಬ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಇದರಿಂದ ಮುಂಬರುವ ಚುನಾವಣೆಯಲ್ಲಿ ಆನಂದ್ ಸಿಂಗ್‌ಗೆ ಸಹೋದರಿಯೇ ಮಗ್ಗಲು ಮುಳ್ಳಗುತ್ತಾರೆ ಎನ್ನಲಾಗುತ್ತಿದೆ.
ಈಗಾಗಲೇ ಕ್ಷೇತ್ರದಲ್ಲಿ ಸುತ್ತಾಡುತ್ತಿರುವ ರಾಣಿ ಸಂಯುಕ್ತ, ಸಚಿವ ಆನಂದ್ ಸಿಂಗ್‌ಗೆ ಠಕ್ಕರ್ ಕೊಡಲು ಸಜ್ಜಾದಂತೆ ಕಾಣುತ್ತಿದೆ. ಇದೇ ವೇಳೆ ನಾನು ವಿಜಯನಗರ ಕ್ಷೇತ್ರದ ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿ. 25 ವರ್ಷದಿಂದ ಬಿಜೆಪಿಯಲ್ಲಿದ್ದೇನೆ, ಪಕ್ಷ ವಹಿಸಿದ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ಬೇರೆಯವರ ರೀತಿ ನಾನು ಪಕ್ಷ ಪರ್ಯಟನೆ ಮಾಡಿಲ್ಲ ಎಂದು ಮೈತ್ರಿ ಸರ್ಕಾರ ಪತನಕ್ಕೆ ಕಾರಣ ಆದ ಸಚಿವ ಸಿಂಗ್ ವಿರುದ್ಧ ಟೀಕಿಸಿದ್ದಾರೆ.
ಗುಜರಾತ್‌ನಲ್ಲಿ ಬಿಜೆಪಿ ಪಕ್ಷ ಯಶಸ್ಸು ಕಂಡಿದೆ. ಅಲ್ಲಿಯೇ ಹಾಲಿ ಸಚಿವರು, ಸಿಎಂಗೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಹಾಲಿ ಶಾಸಕ, ಮಂತ್ರಿಗಳಿಗೆ ಮರಳಿ ಟಿಕೆಟ್ ಕೊಡಬೇಕು ಅಂತ ರೂಲ್ಸ್ ಪಕ್ಷದಲ್ಲಿಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷ ಯಾವತ್ತು ಕೈಬಿಟ್ಟಿಲ್ಲ, ಕಾಲಕಾಲಕ್ಕೆ ಗುರುತಿಸಿದೆ. ಅದೇ ರೀತಿ ಪಕ್ಷ ನನ್ನನ್ನೂ ಕೈಬಿಡುವುದಿಲ್ಲ, ಈ ಬಾರಿ ನನಗೆ ಟಿಕೆಟ್ ಕೊಡುತ್ತದೆ ಎಂಬ ನಂಬಿಕೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿ ಸಮಿತಿ ಸದಸ್ಯೆ ರಾಣಿ ಸಂಯುಕ್ತ ಹೇಳಿದ್ದಾರೆ.
ವಿಜಯನಗರ ಕ್ಷೇತ್ರದಲ್ಲಿ ಮಹಿಳಾ ವೋಟರ್ಸ್ ಬಹಳ ಜನ ಇದ್ದಾರೆ. ಉತ್ತರ ಕರ್ನಾಟಕದಲ್ಲಿ ಮಹಿಳೆಯರಿಗೆ ಟಿಕೆಟ್ ಕೊಟ್ಟಿಲ್ಲ, ಮಹಿಳಾ ಕೋಟಾದಡಿ ನನಗೆ ಟಿಕೆಟ್ ಕೊಡಲೇಬೇಕು. ಬಿಜೆಪಿ ಪಕ್ಷ ಏನೇನ್ ಜವಾಬ್ದಾರಿ ಕೊಟ್ಟಿದೆ ಅದೆಲ್ಲವನ್ನೂ ನಿಷ್ಠೆಯಿಂದ ನಿರ್ವಹಿದ್ದೇನೆ. ಈಗಿನಿಂದಲೇ ಮನೆ, ಮನೆಗೆ ಹೋಗಿ ಇಡೀ ಕ್ಷೇತ್ರದ ಜನರನ್ನು ಭೇಟಿಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ.
ಸಹೋದರಿಗೆ ಟಿಕೆಟ್ ಕೊಟ್ಟರೆ ಅವರ ಪರ ಕೆಲಸ ಮಾಡುತ್ತೇನೆ: ಆನಂದ್ ಸಿಂಗ್
ವಿಜಯನಗರ ಕ್ಷೇತ್ರದಿಂದ ಸ್ಪರ್ಧೆ ಕುರಿತು ರಾಣಿ ಸಂಯುಕ್ತ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಆನಂದ್ ಸಿಂಗ್ ಅವರು, ಬಿಜೆಪಿ ಪಕ್ಷದಲ್ಲಿ ಎಲ್ಲ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾಳೆ. ಟಿಕೆಟ್ ಕೊಡುವುದು ಪಕ್ಷಕ್ಕೆ ಬಿಟ್ಟದ್ದು. ಅದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪಕ್ಷ ತೀರ್ಮಾನ ಮಾಡಿ ಸಹೋದರಿಗೆ ಟಿಕೆಟ್ ಕೊಟ್ಟರೆ ಸಂತೋಷ ಪಡುವವರಲ್ಲಿ ನಾನೂ ಒಬ್ಬ ಎಂದು ಹೇಳಿದ್ದಾರೆ.
ಪಕ್ಷ ತೀರ್ಮಾನ ಮಾಡಿ ನನಗೆ ಟಿಕೆಟ್ ಕೊಟ್ಟರೆ ಸಹೋದರಿ ನನ್ನ ಪರ ಕೆಲಸ ಮಾಡಲಿ. ಸಹೋದರಿ ರಾಣಿ ಸಂಯುಕ್ತಗೆ ಟಿಕೆಟ್ ಕೊಟ್ಟರೆ ಅವರ ಪರ ನಾನು ಕೆಲಸ ಮಾಡುತ್ತೇನೆ. ಇಬ್ಬರನ್ನು ಬಿಟ್ಟು ಮೂರನೇಯವರಿಗೆ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇವೆ. ನನಗೆ ಟಿಕೆಟ್ ಕೊಟ್ಟರೆ ಮುಕ್ತ ಮನಸ್ಸಿನಿಂದ ಆಕೆ ನನಗೆ ಸಹಕಾರ ಕೊಡುತ್ತಾಳೆ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.
ಕಂಪ್ಲಿಯ ಮುಂದಿನ ಶಾಸಕ ಸುರೇಶ್ ಬಾಬು: ಆನಂದ ಸಿಂಗ್
ಬಳ್ಳಾರಿ: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಈ ನಡುವೆ ಟಿಕೆಟ್ ಘೋಷಣೆಗೂ ಮುನ್ನವೇ ಮುಂದಿನ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರದಿಂದ ಸುರೇಶ್ ಬಾಬು ಶಾಸಕರಾಗಲಿದ್ದಾರೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಕಂಪ್ಲಿ ಬಿಜೆಪಿ ಪೇಜ್ ಪ್ರಮುಖ ಕಾರ್ಯಕ್ರಮದಲ್ಲಿ ಸಚಿವ ಆನಂದ್ ಸಿಂಗ್ ಅವರು ಮಾತನಾಡಿದ್ದಾರೆ. ಬಿಜೆಪಿ ಚುನಾವಣೆ ಬಂದಾಗ ಮತ ಕೇಳುವ ಪಕ್ಷವಲ್ಲ, ದೇಶಕ್ಕಾಗಿ ಮುಡಿಪಾಗಿಟ್ಟ ಪಕ್ಷ. ರಾಹುಲ್ ಗಾಂಧಿ ಯಾವುದಕ್ಕೆ ಯಾತ್ರೆ ಮಾಡಿದರೋ ಗೊತ್ತಾಗಲಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿ, ಏನು ಕಡಿದು ಗುಡ್ಡೆ ಹಾಕಿದರೋ ಗೊತ್ತಿಲ್ಲ. ರಾಹುಲ್ ಗಾಂಧಿ ಗಡ್ಡ ಹೆಚ್ಚಾಗಿದ್ದು ಬಿಟ್ಟರೆ ಬೇರೆ ಏನೂ ಬದಲಾವಣೆ ಕಾಣಲಿಲ್ಲ ಎಂದರು.
ಅಭಿವೃದ್ಧಿ ಬಗ್ಗೆ ಆಲೋಚನೆ ಇಲ್ಲದ ನಾಯಕರು ಕಾಂಗ್ರೆಸ್‌ನಲ್ಲಿದ್ದಾರೆ. ಅವರಿಂದ ದೇಶದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಗೆಲ್ಲಿಸಿ ಎಂದು ಸಿದ್ದರಾಮಯ್ಯ ಅವರೇ ಮೊನ್ನೆ ಹೇಳಿದ್ದರು. ಅವರು ಏನು ಮತನಾಡುತ್ತಾರೋ ಅವರಿಗೇ ಗೊತ್ತಿಲ್ಲ. ರಾಜಸ್ಥಾನದ ಸಿಎಂ ಹಳೇ ಬಜೆಟ್ ಓದುತ್ತಾರೆ.. ಇಂತಹ ನಾಯಕರು ದೇಶದ ರಕ್ಷಣೆ ಮಾಡುತ್ತಾರಾ ಎಂದು ಪ್ರಶ್ನಿಸಿದರು.
ಪರಮಾತ್ಮನ ಕೃಪೆಯಿಂದ ಮೋದಿ ದೇಶದ ಪ್ರಧಾನಿಯಾಗಿದ್ದಾರೆ. ಗೆಲ್ಲುವ ಮಾನದಂಡ ಇಟ್ಟುಕೊಂಡ ಕಾಂಗ್ರೆಸ್ ವ್ಯಕ್ತಿತ್ವ ಇಲ್ಲದ ಅಭ್ಯರ್ಥಿಗೂ ಟಿಕೆಟ್ ಕೊಡುತ್ತದೆ. ಶೇ. ನೂರಕ್ಕೆ ನೂರರಷ್ಟು ಕಾಂಗ್ರೆಸ್ ಮುಕ್ತ ಕರ್ನಾಟಕ ವಾಗುತ್ತದೆ. ಜೋಡೋ ಜೋಡೋ ಯಾತ್ರೆ ಅಲ್ಲ ತೋಡೋ ತೋಡೋ ಯಾತ್ರೆ ಎನಿಸುತ್ತಿದೆ. ಕಾಂಗ್ರೆಸ್ ತುಕಡೆ ತುಕಡೆ ಗ್ಯಾಂಗ್ ಕಟ್ಟಿಕೊಂಡಿರುವ ಪಕ್ಷ. ಗುಲಾಮ್‌ನಬೀ ಅಜಾದ್ ಪಕ್ಷ ಬಿಟ್ಟಿದ್ದಾರೆ. 370 ವಿಧಿ ರದ್ದಾದ ಬಳಿಕ ರಾಹುಲ್ ಕಾಶ್ಮೀರದಲ್ಲಿ ಸಭೆ ಮಾಡಿದ್ದಾರೆ. ಗುಂಡಿಗೆ ಇಲ್ಲದ ಗಂಡುಗಳು ಕಾಂಗ್ರೆಸ್‌ನಲ್ಲಿದ್ದಾರೆ. ನಮ್ಮಲ್ಲಿ ಗುಂಡಿಗೆ ಇರುವ ನಾಯಕರಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | Assembly Session: ಕಾಂಗ್ರೆಸ್ ಕಡೆ ಹೊರಟಿರುವ ಶಿವಲಿಂಗೇಗೌಡರಿಗೆ ಬಿಜೆಪಿ ಆಹ್ವಾನ !: ಸದನದಲ್ಲಿ ಸಿ.ಟಿ. ರವಿ ಸ್ವಾರಸ್ಯಕರ ಮಾತು