ಬೆಂಗಳೂರು: ಭಾರತೀಯ ಜನತಾ ಪಕ್ಷ (Karnataka Election 2023) ಗುರುವಾರ (ಮೇ 4ರಂದು) ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲೂ ಹನುಮಾನ್ ಚಾಲೀಸಾ (Hanuman chalisa) ಪಠಣ ಅಭಿಯಾನ ಆರಂಭಿಸಲು ಮುಖ್ಯ ಕಾರಣವೇ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ!
ಹೀಗೆಂದು ಹೇಳಿದ್ದಾರೆ ಕೇಂದ್ರ ಸಚಿವೆ ಹಾಗೂ ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ. ಮಲ್ಲೇಶ್ವರದ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ, ಬಜರಂಗ ದಳದವರಿಗೆ ಹನುಮಾನ್ ಚಾಲಿಸಾ ಪಠಿಸಲು ಬರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲ ಹುಡುಗಾಟದ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ. ಅವರ ಈ ಸವಾಲನ್ನು ಸ್ವೀಕರಿಸಿ ಬಿಜೆಪಿ ಕಾರ್ಯರ್ತರ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸ ಪಠಿಸುವ ಅಭಿಯಾನ ಹಮ್ಮಿಕೊಳ್ಳಲಾಯಿತು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ತಾವು ಸಹ ಮಲ್ಲೇಶ್ವರದ 8ನೇ ಕ್ರಾಸ್‍ನ ಶ್ರೀರಾಮ ಮಂದಿರಲ್ಲಿ ಹನುಮಾನ್ ಚಾಲಿಸಾ ಪಠಿಸಲಿದ್ದು,. ಸುರ್ಜೆವಾಲ ಮತ್ತು ಕಾಂಗ್ರೆಸ್‍ನವರು ದೇವಸ್ಥಾನಗಳಿಗೆ ಬಂದು ಕೇಳಲಿ ಎಂದು ಆಹ್ವಾನಿಸಿದ್ದಾರೆ.
ಚುನಾವಣೆಯಲ್ಲಿ ಗೆಲ್ಲಬೇಕೆಂದು ಹಿಂದೂಗಳ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್‍ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ʻʻನಾವು ಹನುಮನನ್ನು ನಂಬಿದವರು ಮತ್ತು ಹನುಮನ ಶಕ್ತಿ ಬಗ್ಗೆ ವಿಶ್ವಕ್ಕೇ ಗೊತ್ತು. ನಾವು ಹನುಮ ಹುಟ್ಟಿದ ಅಂಜನಾದ್ರಿ ಬೆಟ್ಟ, ಹಂಪಿ ಪ್ರದೇಶಗಳಲ್ಲಿ ಓಡಾಡಿದವರು. ಹನುಮಂತನ ಮೇಲೆ ಕನ್ನಡಿಗರಿಗಿರುವ ಭಕ್ತಿ, ಹೆಮ್ಮೆ, ಗೌರವವನ್ನು ಕದ್ದೊಯ್ಯುವ ಪ್ರಯತ್ನವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆʼʼ ಎಂದು ಟೀಕಿಸಿದರು.
ʻʻಸುರ್ಜೇವಾಲ ಅವರಿಗೆ ಆಂಜನೇಯನ ಬಗ್ಗೆ ಗೊತ್ತಿಲ್ಲ. ಆಂಜನೇಯನ ಅಪ್ಪ-ಅಮ್ಮ ಯಾರೆಂದು ಗೊತ್ತಿಲ್ಲ. ಆದರೂ ಆಂಜನೇಯನ ಶಕ್ತಿ ಬಗ್ಗೆ ಮಾತನಾಡಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಚುನಾವಣೆ, ಕುರ್ಚಿಗಾಗಿ ಏನು ಬೇಕಾದರೂ ಮಾಡಲು ಕಾಂಗ್ರೆಸ್ ಹೊರಟಿದೆ. ಹಿಂದೂಗಳು ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ ಎಂದು ತಿಳಿದಿದೆʼʼ ಎಂದು ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.
ʻʻಎಸ್‍ಡಿಪಿಐಯನ್ನು ಖುಷಿ ಪಡಿಸಲು ಕಾಂಗ್ರೆಸ್ ಇಂತಹ ಹೇಳಿಕೆಗಳನ್ನು ನೀಡುತ್ತಿದೆ. ನಿಷೇಧಿತ ಪಿಎಫ್‍ಐನವರೇ ಎಸ್‍ಡಿಪಿಐನಲ್ಲಿದ್ದಾರೆ. ಎಸ್‍ಡಿಪಿಐ ಪ್ರಣಾಳಿಕೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ. ಈ ಚುನಾವಣೆಯಲ್ಲಿ ಧರ್ಮವನ್ನು ಎಳೆದುತಂದು ಕಾಂಗ್ರೆಸ್ ಕೆಟ್ಟ ರಾಜಕೀಯ ಮಾಡುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆʼʼ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ʻʻಬಿಜೆಪಿ, ಆರೆಸ್ಸೆಸ್‍ನ ಒಂದು ಭಾಗವಿದ್ದಂತೆ. ಅದೇ ರೀತಿ ಬಜರಂಗ ದಳ, ಆರೆಸ್ಸೆಸ್‍ನ ಒಂದು ಭಾಗ. ಯುವಕರಲ್ಲಿ ಶಕ್ತಿ ತುಂಬುವ ಕೆಲಸವನ್ನು ಬಜರಂಗ ದಳ ಮಾಡುತ್ತಿದೆ. ಧರ್ಮ, ದೇವಸ್ಥಾನಗಳನ್ನು ರಕ್ಷಿಸುವ ಕೆಲಸದಲ್ಲಿ ನಿರತವಾಗಿದೆʼʼ ಎಂದು ಶೋಭಾ ವಿವರಿಸಿದರು.
ಕೋಮು ವಿಷ ಕಾರಿದ ಕಾಂಗ್ರೆಸ್ ಪ್ರಣಾಳಿಕೆ
ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಮಾತನಾಡಿ, ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಸಾಧನೆಗಳ ಪಟ್ಟಿಯನ್ನು ಜನರ ಮುಂದಿಟ್ಟು ಕರ್ನಾಟಕದ ಬಗ್ಗೆ ದೂರದೃಷ್ಟಿ ಹೊಂದಿದೆ. ಆದರೆ, ಕಾಂಗ್ರೆಸ್, ತನ್ನ ಪ್ರಣಾಳಿಕೆ ಮೂಲಕ ಕೋಮು ವಿಷ ಕಾರಿದೆ. ಹನುಮನನ್ನು ಅವಮಾನಿಸಲು ಕಾಂಗ್ರೆಸ್‌ಗೆ ಎಷ್ಟು ಧೈರ್ಯ? ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಜರಂಗ ದಳ ನಿಷೇಧಿಸಿಲ್ಲವೇಕೆ?
ʻʻಬಜರಂಗ ದಳವನ್ನು ಕಾಂಗ್ರೆಸ್ ಅಧಿಕಾರವಿರುವ ರಾಜ್ಯಗಳಲ್ಲಿ ಏಕೆ ನಿಷೇಧಿಸಿಲ್ಲʼʼ ಎಂದು ಪ್ರಶ್ನಿಸಿದ ಭಾಟಿಯಾ ಅವರು, ಕಾಂಗ್ರೆಸ್, ಜನರನ್ನು ಮೋಸಗೊಳಿಸಿ, ದಾರಿತಪ್ಪಿಸುತ್ತಿದೆ. ಚುನಾವಣೆಯಲ್ಲಿ ಕೋಮು ವಿಷ ಕಾರುತ್ತಿದೆ. ಪ್ರಗತಿಪರ ಕರ್ನಾಟಕವನ್ನು ನಾಶ ಮಾಡಲು ಬಿಜೆಪಿ ಬಿಡುವುದಿಲ್ಲ. ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ರಾಜ್ಯದ ನಿಜವಾದ ಧ್ವನಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ʻʻಮುಸ್ಲಿಮರು ಒಂದಾಗಿ ಲಿಂಗಾಯತ ಸಮುದಾಯಕ್ಕೆ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್‍ನ ಶಾಸಕ ರಹೀಮ್ ಖಾನ್ ಹೇಳಿದ್ದಾರೆ. ಜನಪ್ರತಿನಿಧಿಯೊಬ್ಬರು ಧರ್ಮದ ಹೆಸರಿನಲ್ಲಿ ಜನರಿಗೆ ಮನವಿ ಮಾಡಿದ್ದಾರೆ. ಖರ್ಗೆ, ರಾಹುಲ್ ಗಾಂಧಿ ಅನುಮತಿ ಇಲ್ಲದೆ ಅವರು ಈ ಹೇಳಿಕೆ ನೀಡಿರಲು ಸಾಧ್ಯವಿಲ್ಲ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಲು ಚುನಾವಣಾ ಈ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಠಿಣ ಕ್ರಮ ತೆಗೆದುಕೊಳ್ಳಬೇಕುʼʼ ಎಂದು ಹೇಳಿದರು.
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : Hanuman Chalisa: ಬಿಹಾರ ವಿಧಾನಸಭೆಯಲ್ಲಿ ಹನುಮಾನ್ ಚಾಲೀಸಾ ಪಠಿಸಿದ ಬಿಜೆಪಿ ಶಾಸಕರು, ಕಾರಣವೇನು?