Site icon Vistara News

Karnataka Election results 2023: ರಾಜ್ಯದಲ್ಲಿ ಬಿಜೆಪಿಯ ಹೀನಾಯ ಸೋಲಿಗೆ 5 ಪ್ರಮುಖ ಕಾರಣಗಳಿವು

bjp leaders

bjp leaders

1. ಮುಖ್ಯಮಂತ್ರಿ ಹುದ್ದೆಯಿಂದ ಬಿ.ಎಸ್‌ ಯಡಿಯೂರಪ್ಪ ಪದಚ್ಯುತಿ

2018ರ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತದ ಸಾಧಿಸಲಾಗದೆ ಬಿ ಎಸ್‌ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು. ಆ ಬಳಿಕ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ ಒಂದು ವರ್ಷದ ಬಳಿಕ ಮೈತ್ರಿಕೂಟ ಸರ್ಕಾರ ಆಪರೇಷನ್‌ ಕಮಲಕ್ಕೆ ಬಲಿಯಾಯಿತು. ನಾಟಕೀಯ ಬೆಳವಣಿಗೆಯಲ್ಲಿ ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಹುದ್ದೆಗೇರಿದರು. ಆದರೆ ಎರಡು ವರ್ಷ ಕಳೆಯುವಷ್ಟರಲ್ಲಿ ಬಿಜೆಪಿ ಹೈಕಮಾಂಡ್‌ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಿತು. ದೇಶದ ರಾಜಕಾರಣದಲ್ಲಿ ನರೇಂದ್ರ ಮೋದಿ ಎಷ್ಟು ಪ್ರಭಾವಿಯೋ ರಾಜ್ಯ ರಾಜಕಾರಣದಲ್ಲಿ ಬಿ ಎಸ್‌ ಯಡಿಯೂರಪ್ಪ ಅವರು ಅಷ್ಟೇ ಪ್ರಭಾವಿ ನಾಯಕ. ಅದರಲ್ಲೂ ಲಿಂಗಾಯತ ಸಮುದಾಯದ ಮೇಲೆ ಬಲವಾದ ಹಿಡಿತ ಹೊಂದಿದವರು. ಹೀಗಿರುವಾಗ ಅವರನ್ನು ಬಿಜೆಪಿ ಹೈಕಮಾಂಡ್‌ ಅಧಿಕಾರದಿಂದ ಇಳಿಸಿದ್ದು ದೊಡ್ಡ ಪ್ರಮಾದ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಲೇ ಇತ್ತು. ಬಿಎಸ್‌ವೈಗೆ 75 ವರ್ಷ ದಾಟಿದೆ ಎಂಬ ಕಾರಣ ನೀಡಲಾಯಿತು. ಆದರೆ ಅವರು ಚುರುಕಾಗಿಯೇ ಇದ್ದರು. ಸಿಎಂ ಹುದ್ದೆಯಿಂದ ಇಳಿಸುವಾಗ ವಯಸ್ಸಿನ ಕಾರಣ ನೀಡುತ್ತಿದ್ದ ಹೈಕಮಾಂಡ್‌, ಚುನಾವಣೆ ಪ್ರಚಾರ ಕಾರ್ಯದಲ್ಲಿ ಮಾತ್ರ ಅವರನ್ನು ಸಕ್ರಿಯವಾಗಿ ಬಳಸಿಕೊಂಡಿತು! ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸಲು ಯಡಿಯೂರಪ್ಪ ಅವರಿಗೆ ಬಿಟ್ಟಿದ್ದರೆ ಬಿಜೆಪಿಗೆ ಇಂಥ ಹೀನಾಯ ಸ್ಥಿತಿ ಬರುತ್ತಿರಲಿಲ್ಲ.

2. ಲಿಂಗಾಯತರ ಮುನಿಸು ಮತ್ತು ಅದನ್ನು ಕಾಂಗ್ರೆಸ್‌ ನಗದೀಕರಿಸಿದ ರೀತಿ

ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಸಮುದಾಯದ ಪ್ರಭಾವ ನಿರ್ಣಾಯಕ. ಆದರೆ ಸಿಎಂ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದು; ಆ ಬಳಿಕ ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿಯಂಥ ಹಿರಿಯ ನಾಯಕರಿಗೆ ಟಿಕೆಟ್‌ ನಿರಾಕರಿಸಿದ್ದು, ಮೀಸಲು ಹೋರಾಟ ಇತ್ಯಾದಿ ಕಾರಣಗಳಿಂದ ರಾಜ್ಯದ ಲಿಂಗಾಯತ ಸಮುದಾಯದವರು ಬಿಜೆಪಿ ಬಗ್ಗೆ ಮುನಿಸಿಕೊಂಡು ಕಾಂಗ್ರೆಸ್‌ ಕಡೆ ದೃಷ್ಟಿ ಹರಿಸುವಂತಾಯಿತು. ಈ ಬಾರಿ ಕಾಂಗ್ರೆಸ್‌ನಿಂದ 30 ಲಿಂಗಾಯತರು ಗೆದ್ದಿರುವುದು ಇದಕ್ಕೆ ಸಾಕ್ಷಿ. ಬಿಜೆಪಿಯ 56 ಲಿಂಗಾಯತ ಅಭ್ಯರ್ಥಿಗಳಲ್ಲಿ 18 ಮಂದಿಯಷ್ಟೇ ಗೆಲುವು ಸಾಧಿಸಿರುವುದು ಇದಕ್ಕೆ ಸಾಕ್ಷಿ.

3. ಒಕ್ಕಲಿಗರಲ್ಲಿ ಸಿಟ್ಟು ತರಿಸಿದ ನಂದಿನಿ-ಅಮುಲ್‌ ವಿವಾದ

ದಕ್ಷಿಣ ಕರ್ನಾಟಕದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಒಕ್ಕಲಿಗರು ಮೊದಲಿನಿಂದಲೂ ಬಿಜೆಪಿಯಿಂದ ದೂರವೇ ಉಳಿದಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಕಡೆ ನಿಧಾನವಾಗಿ ಒಲವು ತೋರಿಸಲಾರಂಭಿಸಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ಉದ್ಭವವಾದ ನಂದಿನಿ-ಅಮೂಲ್‌ ವಿವಾದ, ಹಾಲು ಉತ್ಪಾದಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗರನ್ನು ಕೆರಳಿಸಿತ್ತು. ಇದೂ ಕೂಡ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಹಿನ್ನಡೆಗೆ ಕಾರಣವಾಗಿದೆ.
ಇನ್ನೊಂದೆಡೆ ಆರ್‌ ಅಶೋಕ್‌, ಸಿ ಟಿ ರವಿ, ಡಾ. ಅಶ್ವತ್ಥನಾರಾಯಣರಂಥವರು ಒಕ್ಕಲಿಗರ ಪ್ರಬಲ ನಾಯಕರಾಗಿ ಬೆಳೆಯಲು ವಿಫಲವಾಗಿರುವುದೂ ಬಿಜೆಪಿಯ ಅಪಜಯಕ್ಕೆ ಕಾರಣವಾಯಿತು.

4. 40 ಪರ್ಸೆಂಟ್‌ ಭ್ರಷ್ಟಾಚಾರ ಆರೋಪಗಳ ಸುರಿಮಳೆ

ಹಾಗೆ ನೋಡಿದರೆ ಯಡಿಯೂರಪ್ಪ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದ ಅಡಿಗಲ್ಲು ಭ್ರಷ್ಟಾಚಾರವೇ ಆಗಿತ್ತು! ಏಕೆಂದರೆ, ಬಿಜೆಪಿ ತೋರಿದ ಆಸೆ-ಆಮಿಷಗಳಿಗಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ತಮ್ಮ ಶಾಸಕತ್ವವನ್ನೇ ತ್ಯಾಗ ಮಾಡಿದ್ದರು. ಅಲ್ಲಿಂದ ಮುಂದೆ ಒಂದಲ್ಲ ಒಂದು ಭ್ರಷ್ಟಾಚಾರದ ಆರೋಪಗಳು ಬಿಜೆಪಿ ಸರ್ಕಾರವನ್ನು ಸುತ್ತುವರಿಯುತ್ತ ಹೋಯಿತು. ಇನ್ನೇನು ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ ಎನ್ನುವಷ್ಟರಲ್ಲಿ ಈ ಭ್ರಷ್ಟಾಚಾರದ ಆರೋಪ 40 ಪರ್ಸೆಂಟ್‌ವರೆಗೆ ತಲುಪಿತು! ನಾಡಿನ ಮತದಾರರಿಗೆ ಬಿಜೆಪಿ ಬಗ್ಗೆ ಬೇಸರ ಮೂಡಲು ಇದೂ ಒಂದು ಕಾರಣವಾಯಿತು.

5. ಟಿಕೆಟ್‌ ಹಂಚಿಕೆಯಲ್ಲಿ ಹೈಕಮಾಂಡ್‌ ಏಕಪಕ್ಷೀಯ ನಿರ್ಧಾರ

ಟಿಕೆಟ್‌ ಹಂಚಿಕೆಯಲ್ಲಿ ಬಿಜೆಪಿ ಹೈಕಮಾಂಡ್‌ನ ಏಕಪಕ್ಷೀಯ ನಿಲುವು ಕೂಡ ಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಹಳಬರಿಗೆ ಟಿಕೆಟ್‌ ನಿರಾಕರಿಸಿ ಹೊಸಬರಿಗೆ ಅವಕಾಶ ಕಲ್ಪಿಸುವ ಗುಜರಾತ್‌ ಮಾದರಿ ಇಲಿ ತಿರುಗುಬಾಣವಾಗಿ ನಾಟಿದೆ. ಟಿಕೆಟ್‌ ನೀಡಲಾಗಿದ್ದ 75 ಹೊಸಬರಲ್ಲಿ 19 ಮಂದಿ ಮಾತ್ರ ಗೆಲುವು ಸಾಧಿಸಿದ್ದಾರೆ.
ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿಗೆ ಟಿಕೆಟ್‌ ನಿರಾಕರಿಸಿದ ಪರಿ ಪಕ್ಷಕ್ಕೆ ಹೊಡೆತ ನೀಡಿದೆ. ಸೋಮಣ್ಣ ಅವರಂಥ ಹಿರಿಯ ನಾಯಕರನ್ನು ಎರಡು ಕಡೆ ನಿಲ್ಲಿಸಿ ಎರಡೂ ಕಡೆ ಸೋಲುವಂತೆ ಮಾಡಲಾಗಿದೆ. ಇವರಿಬ್ಬರಿಗೆ ಮನವರಿಕೆ ಮಾಡದೆ ಏಕಾಏಕಿ “ಆರ್ಡರ್‌ʼ ಹೊರಡಿಸಿದ ಧೋರಣೆ ದುಷ್ಪರಿಣಾಮ ಬೀರಿದೆ. ಇನ್ನು, ಪುತ್ತೂರಿನಂಥ ಬಿಜೆಪಿ ಭದ್ರಕೋಟೆಯಲ್ಲಿ ಕಾರ್ಯಕರ್ತರ ಮನದ ಇಂಗಿತ ಅರಿಯಲು ಬಿಜೆಪಿ ವರಿಷ್ಠರು ವಿಫಲವಾಗಿದ್ದೂ ಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಇಲ್ಲಿ ಕೇವಲ ಸಾವಿರ ಮತಗಳಿಂದ ಸೋತಿದ್ದಾರೆ. ಬಿಜೆಪಿ ಮೂರನೇ ಸ್ಥಾನಕ್ಕೆ ಜಾರಿದೆ.

ಇದನ್ನೂ ಓದಿ : Karnataka Election Results 2023: ಬಿಜೆಪಿಯ 61 ಹಾಲಿ ಶಾಸಕರಿಗೆ ಭಾರಿ ಸೋಲು

Exit mobile version