ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election result 2023) ಭಾರಿ ಕುತೂಹಲ ಕೆರಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಮುನ್ನಡೆಯನ್ನು ಸಾಧಿಸಿದ್ದಾರೆ. ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದೆ.
87,128 ಮತಗಳ ಎಣಿಕೆ ಮುಗಿದಾಗ ಅರುಣ್ ಕುಮಾರ್ ಪುತ್ತಿಲ ಅವರಿಗೆ 32,226 ಮತಗಳು ಬಿದ್ದಿದ್ದರೆ, ಕಾಂಗ್ರೆಸ್‌ನ ಅಶೋಕ್ ಕುಮಾರ್ ರೈ ಅವರು 31,670 ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪ ಗೌಡ ಅವರು ಅವರು ಕೇವಲ 20, 126 ಮತಗಳನ್ನು ಪಡೆದಿದ್ದಾರೆ.
2018ರಲ್ಲಿ ಪುತ್ತೂರಿನಲ್ಲಿ ಬಿಜೆಪಿ ದೊಡ್ಡ ಮತಗಳಿಂದ ಗೆದ್ದಿತ್ತು. ಈ ಬಾರಿ ಹಿಂದೂ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಟಿಕೆಟ್ ಬಯಸಿದ್ದರು. ಆದರೆ, ಬಿಜೆಪಿಯ ಹಿರಿಯ ನಾಯಕರು, ಸಂಘ ಪರಿವಾರದ ಮುಖಂಡರು ಅವರ ಬೇಡಿಕೆಯನ್ನು ನಿರ್ಲಕ್ಷಿಸಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ ಅವರನ್ನು ಕಣಕ್ಕೆ ಇಳಿಸಿತ್ತು.
ಇದು ಹಿಂದುಗಳ ಸ್ವಾಭಿಮಾನಕ್ಕೆ ಬಿದ್ದ ಹೊಡೆತ, ಹಿಂದುತ್ವಕ್ಕಾಗಿ ಬೀದಿಯಲ್ಲಿ ನಿಂತು ಬಡಿದಾಡಿ, ಬಿಜೆಪಿಯ ಗೆಲುವಿನಲ್ಲಿ ಬೆವರು ಹರಿಸಿದ ಕಾರ್ಯಕರ್ತರಿಗೆ ಮಾಡಿರುವ ಅನ್ಯಾಯ ಎಂಬಂತೆ ಬಿಂಬಿಸಿದ ಅರುಣ್ ಕುಮಾರ್ ಪುತ್ತಿಲ ಅವರು ಬ್ಯಾಟ್ ಚಿಹ್ನೆಯೊಂದಿಗೆ ಕಣಕ್ಕಿಳಿದಿದ್ದರು. ಆರೆಸ್ಸೆಸ್‌ನ ಬಹು ದೊಡ್ಡ ನಾಯಕರು, ಬಿಜೆಪಿಯ ಹಿರಿಯ ನಾಯಕರೆಲ್ಲ ಅವರ ವಿರುದ್ಧ ತಿರುಗಿಬಿದ್ದು ದೊಡ್ಡ ಮಟ್ಟದ ಪ್ರಚಾರ ನಡೆದಿದ್ದರು.
ಆದರೆ, ಅದೆಲ್ಲವನ್ನೂ ಮೆಟ್ಟಿನಿಂತು ಅರುಣ್ ಕುಮಾರ್ ಪುತ್ತಿಲ ದೊಡ್ಡ ಪ್ರಮಾಣದ ಮತಗಳನ್ನು ಪಡೆದಿದ್ದಾರೆ. ಅಂತಿಮವಾಗಿ ಫಲಿತಾಂಶ ಅವರ ವಿಜಯ ಅಥವಾ ಕಾಂಗ್ರೆಸ್‌ನ ವಿಜಯ ಆಗಬಹುದಾದರೂ ಬಿಜೆಪಿ ಇಲ್ಲಿ ದೊಡ್ಡ ಮಟ್ಟದ ಹಿನ್ನಡೆ ಅನುಭವಿಸಿದ್ದು ಮಾತ್ರ ನಿಜ.
ಇದನ್ನೂ ಓದಿ : Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ