ಬೆಂಗಳೂರು: ರಾಜ್ಯದಲ್ಲಿ ನಾವು 15 ರಿಂದ 20 ಕಡೆ ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ಆದರೆ ನಮ್ಮ ನಿರೀಕ್ಷೆಯಂತೆ ಫಲಿತಾಂಶ (Karnataka Election Results 2024) ಬರಲಿಲ್ಲ. ಈ ಬಾರಿ ರಾಜ್ಯದಲ್ಲಿ 9 ಕಡೆ ಗೆಲುವು ಸಿಕ್ಕಿದೆ. ಕಳೆದ ಬಾರಿ ಕಾಂಗ್ರೆಸ್ ಒಂದು ಸೀಟ್ ಮಾತ್ರ ಗೆದ್ದಿತ್ತು. ಈ ಬಾರಿ 2019ಕ್ಕಿಂತ ನಮ್ಮ ಓಟಿಂಗ್ ಶೇರ್ ಜಾಸ್ತಿ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವೋಟಿಂಗ್ ಶೇರ್ ಶೇ. 5 ರಷ್ಟು ಕಡಿಮೆ ಆಗಿದೆ, ಆದರೆ, ಓಟಿಂಗ್ ಶೇರ್ ಜಾಸ್ತಿ ಆಗಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸೀಟ್ ಬಂದಿಲ್ಲ. ದೇಶದಲ್ಲಿ ಕಾಂಗ್ರೆಸ್‌ಗೆ ಶೇ. 3 ರಷ್ಟು ಓಟಿಂಗ್ ಜಾಸ್ತಿ ಆಗಿದೆ. ಬಿಜೆಪಿ 2019ರಲ್ಲಿ 303 ಗೆದ್ದಿತ್ತು. ಈಗ, 246 ಗೆದ್ದಿದೆ. ಬಿಜೆಪಿ ಅತಿ ದೊಡ್ಡ ಪಾರ್ಟಿ ಆಗಿ ಬಂದಿದೆ. ಆದರೆ, ಎಲ್ಲೂ ಮೋದಿ ಅಲೆ ಇರಲಿಲ್ಲ. ಮೋದಿಯವರ ಜನಪ್ರಿಯತೆ ಕಡಿಮೆ ಆಗಿದೆ ಎಂದು ಸಿಎಂ ಹೇಳಿದರು.
ಯಾರು ಸರ್ಕಾರ ರಚಿಸುತ್ತಾರೋ ಗೊತ್ತಿಲ್ಲ
ಯಾರು ಸರ್ಕಾರ ರಚಿಸುತ್ತಾರೋ ಅಂತ ನನಗೆ ಗೊತ್ತಿಲ್ಲ ಆದರೆ ಬಿಜೆಪಿಗೆ ಮೆಜಾರಿಟಿ ಸೀಟ್ ಅಂತೂ ಬಂದಿಲ್ಲ.
ಮೋದಿ ಸೋಲುತ್ತೇವೆ ಅಂತ ಗೊತ್ತಾಗಿ ಧರ್ಮದ ಆಧಾರದ ಮೇಲೆ ಮತ ಕೇಳಲು ಶುರು ಮಾಡಿದರು. ಕೋಮುವಾದದ ಮೇಲೆ ಮತ ಕೇಳಿದ್ದು ವರ್ಕ್‌ಔಟ್ ಆಗಿಲ್ಲ, ಎನ್‌ಡಿಎಗೆ 60 ಸ್ಥಾನ ಕಡಿಮೆ ಆಗಿವೆ
ನರೇಂದ್ರ ಮೋದಿ ಪ್ರಧಾನಿ ಆಗಲು ನೈತಿಕ ಹಕ್ಕಿಲ್ಲ. ಇ.ಡಿ. ದುರ್ಬಳಕೆ ಮಾಡಿಕೊಂಡು ದೆಹಲಿ ಮುಖ್ಯಮಂತ್ರಿಯನ್ನು ಜೈಲಿಗೆ ಕಳುಹಿಸಲಾಯಿತು. ಅಯೋಧ್ಯೆಯಲ್ಲಿ ಬಿಜೆಪಿ ಸೋತಿದೆ, ಅಲ್ಲಿ ಎಸ್‌ಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಒಟ್ಟಾರೆ ಬಿಜೆಪಿಗೆ ದೊಡ್ಡ ಹಿನ್ನಡೆ ಆಗಿದೆ.
ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ದೇಶದಲ್ಲಿ ಬೆಂಬಲ ಸಿಕ್ಕಿದೆ. ರಾಹುಲ್ ಗಾಂಧಿಯವರು ಮಾಡಿದ ಯಾತ್ರೆಯಿಂದ ಇಂಡಿ ಮೈತ್ರಿ ಕೂಟಕ್ಕೆ ಬೆಂಬಲ ಸಿಕ್ಕಿದೆ. ರಾಹುಲ್ ಗಾಂಧಿಯವರು ಎರಡೂ ಕಡೆ ಗೆಲುವು ಸಾಧಿಸಿದ್ದಾರೆ, ಹೀಗಾಗಿ ಅವರಿಗೆ ನಾನು ವೈಯಕ್ತಿಕವಾಗಿ ಅಭಿನಂದನೆ ತಿಳಿಸುವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸಿಕೊಳ್ಳಲು ಜನರು ಮತದಾನ ಮಾಡಿದ್ದಾರೆ. ನಮಗೆ ಗೆಲುವು ಆಗಿಲ್ಲ ನಿಜ, ಆದರೆ ಶೇಕಡಾವಾರು ಮತ ಪ್ರಮಾಣ ಜಾಸ್ತಿ ಆಗಿದೆ ಎಂದು ತಿಳಿಸಿದರು.
ಹಳೆ ಮೈಸೂರು ಹಿನ್ನಡೆಗೆ ಕಾರಣ ತಿಳಿಸಿದ ಸಿಎಂ, ಎರಡು ಪಾರ್ಟಿ ಒಂದಾಗಿ ಚುನಾವಣೆ ಮಾಡಿದರು. ಹೀಗಾಗಿ ನಮ್ಮ ನಿರೀಕ್ಷೆಯಂತೆ ಗೆಲುವು ಸಾಧಿಸಿಲ್ಲ. ನಾವು ಗೆದ್ದೇ ಬಿಟ್ಟಿದ್ದೀವಿ ಅಂತ ಹೇಳಿಲ್ಲ. ನಾವು ಗೆದ್ದಿಲ್ಲ ಎಂದು ಒಪ್ಪಿಕೊಂಡಿದ್ದೇವೆ. ಪ್ರಧಾನಿಯಾಗಿದ್ದವರು ಯಾರು ಯಾರ ಹೆಸರಲ್ಲಿ ಓಟು ಕೇಳಿದರು ಎಂದು ಪ್ರಶ್ನಿಸಿದರು.
ಗ್ಯಾರಂಟಿ ವರ್ಕೌಟ್ ಆಗಿದ್ಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ವರ್ಕ್ ಆಗಿದೆಯೋ, ಇಲ್ಲವೋ ಎನ್ನುವುದನ್ನು ವಿಶ್ಲೇಷಣೆ ಮಾಡಬೇಕು. ಮೇಲ್ನೋಟಕ್ಕೆ ವರ್ಕೌಟ್ ಆಗಿದೆ ಎಂಬುವುದು ತಿಳಿಯುತ್ತದೆ ಎಂದು ಹೇಳಿದರು.
ಮತದಾನ ಮತ್ತು ಎಣಿಕೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಮೊದಲಿಗೆ ಕರ್ನಾಟಕ ಮತ್ತು ದೇಶದ ಮತದಾರರಿಗೆ ಧನ್ಯವಾದ ಹೇಳಲು ಬಯಸುವೆ. ಹಾಗೆಯೇ ರಾಜ್ಯದಿಂದ ಗೆದ್ದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು ತಿಳಿಸುವೆ ಎಂದು ಹೇಳಿದರು.
ರಾಹುಲ್ ಗಾಂಧಿಯನ್ನು ದೇಶ ಒಪ್ಪಿಕೊಂಡಿದೆ
ರಾಹುಲ್ ಗಾಂಧಿಯವರ ಎರಡು ಯಾತ್ರೆಗಳು ಫಲ ನೀಡಿವೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ದೇಶದ ಜನತೆ ಬಹಳ ದೊಡ್ಡ ಮಟ್ಟದಲ್ಲಿ ಒಪ್ಪಿಕೊಂಡಿದ್ದಾರೆ. ಎರಡೂ ಕ್ಷೇತ್ರಗಳಲ್ಲೂ ರಾಹುಲ್ ಗಾಂಧಿ ಭರ್ಜರಿ ಮತಗಳಿಂದ ಗೆದ್ದಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ ಎಂದರು.
ಕೈಯಲ್ಲಿ ಸಂವಿಧಾನ ಹಿಡಿದೇ ರಾಹುಲ್ ಗಾಂಧಿಯವರು ಇಡೀ ದೇಶದಲ್ಲಿ ಚುನಾವಣಾ ಪ್ರಚಾರ ಮಾಡಿದರು. ದೇಶದ ಜನ ಸಂವಿಧಾನದ ಉಳಿವಿಗೆ, ಪ್ರಜಾಪ್ರಭುತ್ವ ಉಳಿವಿಗಾಗಿ ರಾಹುಲ್ ಗಾಂಧಿಯವರ ಕೈ ಹಿಡಿದಿದ್ದಾರೆ ಎಂದರು.
ಮೋದಿಯವರು ಚುನಾವಣೆಯ ಕೊನೆ ಕೊನೆಗೆ ಧರ್ಮ, ದೇವರ ಹೆಸರಲ್ಲಿ ಮತ ಕೇಳಿ ನೇರವಾಗಿ ಇತರೆ ಧರ್ಮೀಯರ ವಿರುದ್ಧ ಭಾಷಣ ಮಾಡಿದರು, ಹಿಂದುಳಿದವರ ಮೀಸಲಾತಿ ಕಾಂಗ್ರೆಸ್ ಕಿತ್ತುಕೊಳ್ಳುತ್ತದೆ ಎಂದು ಸುಳ್ಳು ಹೇಳಿಕೊಂಡು ತಿರುಗಿದರೂ ಮೋದಿಯವರಿಗೆ ಬಹುಮತ ಬರಲಿಲ್ಲ. ರಾಮನ ಹೆಸರಲ್ಲಿ, ರಾಮ ಮಂದಿರದ ಹೆಸರಲ್ಲಿ ಅಯೋಧ್ಯೆಯಲ್ಲೂ ಬಿಜೆಪಿ ಸೋತಿದೆ. ಇದು ಬಿಜೆಪಿಯ ಸೋಲು ಎಂದರು.
ಇದನ್ನೂ ಓದಿ | Odisha Assembly Result 2024: ಬಿಜೆಡಿ ಭದ್ರ ಕೋಟೆಗೆ ಬಿಜೆಪಿ ಗ್ರ್ಯಾಂಡ್ ಎಂಟ್ರಿ! ಹಳೇ ದೋಸ್ತಿಗೆ ಸಕತ್ ಠಕ್ಕರ್ ಕೊಟ್ಟ ಕೇಸರಿ ಬಣ
ಬಿಜೆಪಿ ಜನಪ್ರಿಯತೆ ಕುಸಿದಿದೆ
ಇಡೀ ದೇಶದಲ್ಲಿ ರಾಜ್ಯದಲ್ಲಿ 2019ಕ್ಕಿಂತ ಬಿಜೆಪಿ ಪ್ರಭಾವ ವಿಪರೀತ ಕುಸಿದಿದೆ ಎಂದು ಸಿಎಂ ವಿವರಿಸಿದರು. ಕೇಂದ್ರದಲ್ಲಿ ಯಾರು ಸರ್ಕಾರ ರಚಿಸುತ್ತಾರೆ ಎನ್ನುವುದು ಅನಿಶ್ಚಿತವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಚಿವ ಎಂ.ಸಿ. ಸುಧಾಕರ್, ಎಂಎಲ್‌ಸಿ ಸಲೀಂ ಅಹ್ಮದ್, ಗೋವಿಂದರಾಜು ಉಪಸ್ಥಿತರಿದ್ದರು.