ಬೆಂಗಳೂರು: ರಾಜ್ಯ ವಿಧಾನಸಭೆಗಾಗಿ ನಡೆದ ಚುನಾವಣೆಯಲ್ಲಿ (Karnataka Election results 2023) ಕಾಂಗ್ರೆಸ್ ಪ್ರಚಂಡ ಬಹುಮತವನ್ನು ಪಡೆದು ಕರುನಾಡಿನ ಅಧಿಕಾರ ಗದ್ದುಗೆಯನ್ನು ಏರಿದೆ. 136 ಸ್ಥಾನಗಳೊಂದಿಗೆ ಚಾರಿತ್ರಿಕ ಗೆಲುವು ಪಡೆದ ಹಸ್ತಪಕ್ಷದ ಅಬ್ಬರದ ಮುಂದೆ ಬಿಜೆಪಿ ಸೋತು ಸುಣ್ಣವಾಗಿದೆ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಬಿಜೆಪಿ ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗಿದೆ. ಕೇವಲ 65 ಸ್ಥಾನಗಳಿಗೆ ಸೀಮಿತವಾದ ಕಮಲ ಪಾಳಯ ಕಳೆಗುಂದಿದೆ. ಜೆಡಿಎಸ್ ಕೇವಲ 19 ಸ್ಥಾನಗಳಿಗೆ ಸೀಮಿತವಾದ ಜೆಡಿಎಸ್ ಕೂಡಾ ಕಾಂಗ್ರೆಸ್‌ನ ವೀರಾವೇಶದ ನಡುವೆ ಕಸುವು ಕಳೆದುಕೊಂಡಿದೆ. ಈ ಸೋಲಿನ ಮೂಲಕ ಬಿಜೆಪಿ ದಕ್ಷಿಣ ಕರ್ನಾಟಕದಲ್ಲಿನ ತನ್ನ ಏಕೈಕ ಸರ್ಕಾರವನ್ನೂ ಕಳೆದುಕೊಂಡಿದೆ.
ಕಾಂಗ್ರೆಸ್ ನಡೆಸಿದ ವ್ಯವಸ್ಥಿತ ಪ್ರಚಾರ, ಕಳೆದ ಕೆಲವು ತಿಂಗಳುಗಳಿಂದಲೇ ಮಾಡಿಕೊಂಡಿದ್ದ ಭಾರಿ ಸಿದ್ಧತೆಗಳು, ಸಂಘಟಿತ ಪ್ರಯತ್ನ ಮತ್ತು ಅದು ಹೆಣೆದ ಗೆಲುವಿಗಾಗಿನ ವ್ಯಾಖ್ಯಾನಗಳು ದೊಡ್ಡ ಫಲವನ್ನು ನೀಡಿ ಇತ್ತೀಚಿನ ಇತಿಹಾಸದಲ್ಲೇ (1999ರ ಬಳಿಕ) ಅತಿ ಗರಿಷ್ಠ ಸ್ಥಾನ 136 ಸ್ಥಾನ ಪಡೆಯುವಲ್ಲಿ ಸಹಾಯ ಮಾಡಿದೆ.
ರಾಜ್ಯದಲ್ಲಿ ಕಳೆದ ಮೂರುವರೆ ವರ್ಷದಲ್ಲಿ ಕಾಲ ಆಡಳಿತ ನಡೆಸಿದ ಬಿಜೆಪಿ ತನ್ನ ಸಾಧನೆಯ ಜತೆ ಕೇಂದ್ರದ್ದನ್ನೂ ಸೇರಿಸಿ ಮಂಡಿಸಿದ ಡಬಲ್ ಎಂಜಿನ್ ಮಂತ್ರವಾಗಲೀ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಾದ್ಯಂತ ನಡೆಸಿದ ಭರ್ಜರಿ ಪ್ರಚಾರ, ರೋಡ್ ಶೋಗಳಾಗಲೀ ಯಾವುದೇ ಪರಿಣಾಮ ಬೀರಲಿಲ್ಲ. ಅಂತಿಮವಾಗಿ ಬಿಜೆಪಿ ಸೋಲೊಪ್ಪಿಕೊಂಡಿದೆ. 120 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ 65 ಸ್ಥಾನಕ್ಕೆ ಇಳಿದಿದೆ.
ಮತದಾನೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಸೂಚನೆಯನ್ನು ನೀಡಿದ್ದವು. ಇದೇ ಪರಿಸ್ಥಿತಿಗಾಗಿ ಕಾಯುತ್ತಿದ್ದ ಜೆಡಿಎಸ್‌ಗೆ ಕಾಂಗ್ರೆಸ್‌ಗೆ ಬೃಹತ್ ಬಹುಮತ ಸಿಕ್ಕಿರುವುದು ದೊಡ್ಡ ಹಿನ್ನಡೆಯಾಗಿದೆ. ಅದರ ಜತೆಗೆ ಜೆಡಿಎಸ್ ತನ್ನ ಶಕ್ತಿ ಕೇಂದ್ರವಾದ ಹಳೆ ಮೈಸೂರಿನಲ್ಲೇ ಹೊಡೆತವನ್ನು ಅನುಭವಿಸಿದ್ದು, ಕೇವಲ 19 ಸ್ಥಾನಗಳಿಗೆ ಸೀಮಿತವಾಗಿದೆ. ಕಳೆದ ಬಾರಿ 37 ಸ್ಥಾನ ಗೆದ್ದಿದ್ದ ಜೆಡಿಎಸ್ ಅರ್ಧದಷ್ಟು ಸ್ಥಾನಗಳನ್ನು ಕಳೆದುಕೊಂಡಂತಾಗಿದೆ.
ರಾಜ್ಯದ ಎಲ್ಲ ಭಾಗಗಳಲ್ಲಿ ಕಾಂಗ್ರೆಸ್ ಅಬ್ಬರ
ಹಳೆ ಮೈಸೂರು, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೆ ಮೈಸೂರು ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲಿ ಭರ್ಜರಿಗೆ ಗೆಲುವು ಸಾಧಿಸಿದೆ. ಚುನಾವಣೆಗೆ ಹೋಗುವ ಸಂದರ್ಭದಲ್ಲಿ ಕಾಂಗ್ರೆಸ್ ಕೈಯಲ್ಲಿದ್ದ ಒಟ್ಟು ಶಾಸಕರ ಸಂಖ್ಯೆ ಕೇವಲ 65 ಮಾತ್ರ. ಅದು 135ಕ್ಕೇರುವಲ್ಲಿ ರಾಜ್ಯದ ಎಲ್ಲ ಭಾಗಗಳ ಕೊಡುಗೆ ದೊಡ್ಡದಿದೆ. ಸ್ಥಾನ ಸಂಖ್ಯೆ ಮಾತ್ರವಲ್ಲ ತನ್ನ ಮತ ಗಳಿಕೆಯನ್ನೂ ಅದು ಕಳೆದ ಬಾರಿಯ ಶೇ. 38ರಿಂದ ಶೇಕಡಾ 43ಕ್ಕೇರಿಸಿಕೊಂಡಿದೆ.
ಕಾಂಗ್ರೆಸ್‌ನ ಸಂಘಟಿತ ಹೋರಾಟಕ್ಕೆ ಸಿಕ್ಕ ಗೆಲುವು
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಂಘಟನಾ ಶಕ್ತಿ, ಸಿದ್ದರಾಮಯ್ಯ ಅವರ ಪ್ರಭಾವ ಹಾಗೂ ವರ್ಚಸ್ಸು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೇಲುಸ್ತುವಾರಿ ಮತ್ತು ಇವೆಲ್ಲರನ್ನೂ ಬೆಸೆವ ಕೊಂಡಿಯಂತೆ ಕೆಲಸ ಮಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರ ಚಾಣಕ್ಯ ತಂತ್ರಗಾರಿಕೆಗಳು ಕಾಂಗ್ರೆಸ್ ಗೆಲುವಿನಲ್ಲಿ ದೊಡ್ಡ ಕೆಲಸ ಮಾಡಿವೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರಯೋಗಿಸಿದ ಭ್ರಷ್ಟಾಚಾರ ಆರೋಪದ ಅಸ್ತ್ರಗಳು, ಬಿಜೆಪಿ ತನ್ನ ಲಿಂಗಾಯತ ನಾಯಕರನ್ನು ಕಡೆಗಣಿಸಿದೆ ಎಂಬ ಆರೋಪವನ್ನು ಪದೇಪದೆ ಮಂಡಿಸಿದ್ದು, ಬಿಜೆಪಿ ಪ್ರಯೋಗಿಸಿದ ಬಜರಂಗ ದಳ ನಿಷೇಧ ಅಸ್ತ್ರವನ್ನು ಅತ್ಯಂತ ಆತ್ಮವಿಶ್ವಾಸದಿಂದ ಎದುರಿಸಿದ್ದು ಕಾಂಗ್ರೆಸ್‌ನ್ನು ಗೆಲ್ಲಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿದ್ದ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ಗೆ ವರದಾನವಾಗಿದೆ.
ಬಿಜೆಪಿಯ 60ಕ್ಕೂ ಹೆಚ್ಚು ಶಾಸಕರ ಸೋಲು
ಬಿಜೆಪಿ ಚುನಾವಣೆಗೆ ಹೋಗುವ ಹೊತ್ತಿಗೆ 120 ಶಾಸಕರನ್ನು ಹೊಂದಿತ್ತು. 105 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿತ್ತು. ಅವರ ಪೈಕಿ 60 ಮಂದಿ ಶಾಸಕರು ಸೋಲನುಭವಿಸಿರುವುದು ಪಕ್ಷಕ್ಕೆ ಆಗಿರುವ ಅತಿ ದೊಡ್ಡ ಹೊಡೆತ. ಬಿಜೆಪಿ ಸುಮಾರು 75 ಮಂದಿಗೆ ಹೊಸಬರಿಗೆ ಟಿಕೆಟ್ ನೀಡಿದ್ದು, ಅವರ ಪೈಕಿ ಗೆಲುವು ಸಾಧಿಸಿದ್ದು ಕೇವಲ 19 ಮಂದಿ ಮಾತ್ರ. ಕಳೆದ ಬಾರಿ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಪಕ್ಷಾಂತರ ಮಾಡಿ ಸಚಿವರೂ ಆಗಿದ್ದ 17 ಮಂದಿಯಲ್ಲಿ 9 ಮಂದಿ ಸೋಲನುಭವಿಸಿದ್ದಾರೆ.
ಮುಂದಿನದು ಮುಖ್ಯಮಂತ್ರಿ ಸವಾಲು
ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ದೊಡ್ಡ ಯಶಸ್ಸನ್ನು ಪಡೆದಿರುವ ಕಾಂಗ್ರೆಸ್ ಇದೀಗ ಹೊಸ ಸರ್ಕಾರ ರಚನೆಗೆ ಸನ್ನದ್ಧವಾಗಿದೆ. ನಾಯಕರ ನಡುವೆ ಒಗ್ಗಟ್ಟನ್ನು ಕಾಯ್ದುಕೊಂಡು ಇಡೀ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಲಾಗಿದೆ.
ಆದರೆ, ಇದೇ ಶಿಸ್ತನ್ನು ಕಾಂಗ್ರೆಸ್ ತನ್ನ ಹೊಸ ಮುಖ್ಯಮಂತ್ರಿ ಆಯ್ಕೆಯಲ್ಲೂ ಕಾಯ್ದುಕೊಳ್ಳುತ್ತದೆಯೇ ಎನ್ನುವುದು ಇಡೀ ರಾಜ್ಯದ ಮುಂದಿರುವ ಕುತೂಹಲಕಾರಿ ಪ್ರಶ್ನೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಧ್ಯೆ ಈ ಹುದ್ದೆಗೆ ಪೈಪೋಟಿ ಇದೆ. ಈಗ ಆಯ್ಕೆಯಾಗಿರುವ ಶಾಸಕರ ಆಯ್ಕೆಯಂತೆ ಮುಖ್ಯಮಂತ್ರಿಯನ್ನು ಆರಿಸಲಾಗುತ್ತದೆ ಎಂದು ಇದುವರೆಗೆ ಹೇಳಲಾಗುತ್ತಿತ್ತು. ಇದೇ ರೀತಿ ನಡೆಯುತ್ತದೆಯೇ ಅಥವಾ ದೊಡ್ಡ ಗೆಲುವನ್ನು ಪಡೆದ ಕಾಂಗ್ರೆಸ್ ಈ ಹಂತವನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದು ಕುತೂಹಲಕಾರಿ ಪ್ರಶ್ನೆ.
ಮೇ 15ರಂದು ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ. ಅಧಿಕಾರ ಸ್ವೀಕರಿಸಿದ ಬಳಿಕ ನಡೆಯುವ ಮೊದಲ ಸಂಪುಟ ಸಭೆಯಲ್ಲೇ, ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಭರವಸೆಯನ್ನೂ ಕಾಂಗ್ರೆಸ್ ಈಡೇರಿಸಬೇಕಾಗಿದೆ.
ಇದನ್ನೂ ಓದಿ : Karnataka Election Results 2023: ಬಿಜೆಪಿಯ 61 ಹಾಲಿ ಶಾಸಕರಿಗೆ ಭಾರಿ ಸೋಲು