Site icon Vistara News

Karnataka Election Results: ವಿಧಾನಸಭೆಯಲ್ಲಿ ಅಪ್ಪ ಮಕ್ಕಳ ಜೋಡಿ, ಸಹೋದರರ ಸಂಭ್ರಮ

Karnataka Election Results: father and Son pair can see in assembly of Karnataka

ಬೆಂಗಳೂರು, ಕರ್ನಾಟಕ: ಭಾರತೀಯ ರಾಜಕಾರಣದಲ್ಲಿ ಕುಟುಂಬ ರಾಜಕಾರಣಕ್ಕೆ ಎಷ್ಟೇ ವಿರೋಧ ವ್ಯಕ್ತವಾದರೂ, ಅದುವೇ ಪ್ರಚಲಿತದಲ್ಲಿರುವುದು ಸತ್ಯ. ಇದಕ್ಕೆ ಕರ್ನಾಟಕ ಚುನಾವಣೆ ಕೂಡ ಹೊರತಲ್ಲ. ಈ ಬಾರಿ ಚುನಾವಣೆಯಲ್ಲಿ ಒಂದೇ ಕುಟುಂಬದ ಸದಸ್ಯರು, ಸಂಬಂಧಿಕರು ಸ್ಪರ್ಧಿಸಿದ್ದರು. ಆದರೆ, ಗೆದ್ದವರ ಸಂಖ್ಯೆ ಕಡಿಮೆ. ಈ ಪೈಕಿ ಅಪ್ಪ-ಮಕ್ಕಳ ಜೋಡಿಯನ್ನು ವಿಧಾನಸಭೆಯಲ್ಲಿ ಕಾಣಬಹುದಾಗಿದೆ. ಅತ್ಯಂತ ಹಿರಿಯ ಸದಸ್ಯರೆನಿಸಿಕೊಂಡಿರುವ ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ ಪ್ರಮುಖರು(Karnataka Election Results).

ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪ ಗೆದ್ದರೆ, ಅವರು ಪುತ್ರ ದಾವಣಗೆರೆ ಉತ್ತರ ಕ್ಷೇತ್ರದಿಂದ ಎಸ್ ಎಸ್ ಮಲ್ಲಿಕಾರ್ಜುನ ಅವರು ಜಯ ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಎಸ್ ಎಸ್ ಮಲ್ಲಿಕಾರ್ಜುನ ಸೋತಿದ್ದರು. ಈ ಬಾರಿ ಅವರಿಬ್ಬರನ್ನು ವಿಧಾಸಭೆಯಲ್ಲಿ ಕಾಣಬಹುದಾಗಿದೆ. ಇನ್ನು ಮೈಸೂರು ಜಿಲ್ಲೆಯ ಪ್ರಮುಖ ನಾಯಕ ಜಿ ಟಿ ದೇವೇಗೌಡ ಅವರು ಇದೇ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಯಾಕೆಂದರೆ, ಅವರ ಪುತ್ರ ಹರೀಶ್ ಗೌಡ ಅವರು ಹಣಸೂರು ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಜಿ ಟಿ ದೇವೇಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಬಹುಶಃ ಅಪ್ಪ ಮಕ್ಕಳ ಜೋಡಿ ಸಾಲಿಗೆ ಇದು ಹೊಸ ಎಂಟ್ರಿಯಾಗಿದೆ.

ಕೊಡಗಿನಲ್ಲಿ ಮ್ಯಾಜಿಕ್ ಮಾಡಿರುವ ಕಾಂಗ್ರೆಸ್‌ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಿತ್ತು. ಜೆಡಿಎಸ್‍‌ ಪಕ್ಷದಿಂದ ಅರಕಲಗೂಡು ಕ್ಷೇತ್ರದಿಂದ ಗೆದ್ದಿರುವ ಎ ಮಂಜು ಅವರ ಪುತ್ರ ಡಾ.ಮಂತರ್ ಗೌಡ ಅವರು ಕಾಂಗ್ರೆಸ್ ಪಕ್ಷದಿಂದ ಮಡಿಕೇರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಅಪ್ಪ ಮಕ್ಕಳಿಬ್ಬರೂ ಬೇರೆ ಬೇರೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬಂದಿದ್ದಾರೆ. ಅಪ್ಪ ಮಕ್ಕಳ ಪಟ್ಟಿಗೆ ಈ ಜೋಡಿ ಕೂಡ ಹೊಸ ಎಂಟ್ರಿಯಾಗಿದೆ.

ಇನ್ನು ಬೆಂಗಳೂರು ಮಹಾನಗರದ ಎರಡು ಕ್ಷೇತ್ರಗಳಿಂದ ಎಂ ಕೃಷ್ಣಪ್ಪ ಮತ್ತು ಪ್ರಿಯಕೃಷ್ಣ ಅವರು ಆಯ್ಕೆಯಾಗಿದ್ದಾರೆ. ವಿಜಯನಗರ ಕ್ಷೇತ್ರದಿಂದ ಎಂ ಕೃಷ್ಣಪ್ಪ ಗೆದ್ದರೆ, ಗೋವಿಂದರಾಜನಗರದಿಂದ ಪುತ್ರ ಪ್ರಿಯಕೃಷ್ಣ ಅವರು ಗೆಲುವು ಸಾಧಿಸಿದ್ದಾರೆ. ಇವರಿಬ್ಬರು ಕಾಂಗ್ರೆಸ್ ಪಕ್ಷದಿಂದಲೇ ಸ್ಫರ್ಧಿಸಿದ್ದರು. ವಿ ಸೋಮಣ್ಣ ಅವರು ಗೋವಿಂದರಾಜ ನಗರವನ್ನು ಪ್ರತಿನಿಧಿಸಿದ್ದರು.

ಸೋತ ಜೋಡಿ: ಸ್ವಲ್ಪದರಲ್ಲೇ ಇನ್ನೊಂದು ಜೋಡಿ ಮಿಸ್ ಆಗಿದೆ. ಅದು ತಂದೆ ಮಗಳ ಜೋಡಿ. ಬೆಂಗಳೂರು ಬಿಟಿಎಂ ಲೇ ಔಟ್‌ ಕ್ಷೇತ್ರದಿಂದ ರಾಮಲಿಂಗಾ ರೆಡ್ಡಿ ಅವರು ಆಯ್ಕೆಯಾಗಿದ್ದಾರೆ. ಆದರೆ, ಅವರ ಮಗಳು ಸೌಮ್ಯ ರೆಡ್ಡಿ ಅವರು ಬೆರಳೆಣಿಕೆ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. ಇವರು ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಳೆದ ಬಾರಿ ಸೌಮ್ಯ ರೆಡ್ಡಿ ಗೆದ್ದಿದ್ದರು.

ಇದನ್ನೂ ಓದಿ: Gehlot VS Pilot: ಕರ್ನಾಟಕ ಚುನಾವಣೆ ಫಲಿತಾಂಶ ಉದಾಹರಣೆ ನೀಡಿ ಗೆಹ್ಲೋಟ್‌ಗೆ ಟಾಂಗ್‌ ಕೊಟ್ಟ ಪೈಲಟ್‌

ವಿಧಾನಸಭೆಯಲ್ಲಿ ಜಾರಕಿಹೊಳಿ ಸಹೋದರರ ಸಂಭ್ರಮ

ರಾಜ್ಯಕಾರಣದಲ್ಲಿ ಸದಾ ಸುದ್ದಿಗೆ ಗ್ರಾಸವಾಗುವ ಜಾರಕಿಹೊಳಿ ಕುಟುಂಬದ ಮೂವರು ಸಹೋದರರು ಮತ್ತೆ ವಿಧಾನಸಭೆ ಪ್ರವೇಶಿಸಿದ್ದಾರೆ. ಮೂವರ ಪೈಕಿ ಇಬ್ಬರು ಬಿಜೆಪಿ ಮತ್ತು ಒಬ್ಬರ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದರು. ಬಿಜೆಪಿಯ ರಮೇಶ್ ಜಾರಕಿಹೊಳಿ ಅವರು ಗೋಕಾಕ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರೆ, ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಕ್ಷೇತ್ರದಲ್ಲ ಜಯ ಸಾಧಿಸಿದ್ದಾರೆ. ಅವರ ಮತ್ತೊಬ್ಬ ಸಹೋದರ ಸತೀಶ್ ಜಾರಕಿಹೊಳಿ ಅವರು ಯಮನಕಮರಡಿ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಈ ಮೂವರನ್ನು ವಿಧಾನಸಭೆಯಲ್ಲಿ ಕಾಣಬಹುದು.

ಕರ್ನಾಟಕ ಚುನಾವಣೆ ಫಲಿತಾಂಶ ಮತ್ತು ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version