ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮುಗಿದಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದೆ. ಕಾಂಗ್ರೆಸ್ ನಾಯಕರು ಅತೀವ ಖುಷಿಯಲ್ಲಿದ್ದರೆ, ಬಿಜೆಪಿ ಹಾಗೂ ಜೆಡಿಎಸ್ ಆತ್ಮಾವಲೋಕನ ಮಾಡಿಕೊಳ್ಳುತ್ತಿವೆ. ಅದರಲ್ಲೂ, ಬಿಜೆಪಿ ಪರ ನರೇಂದ್ರ ಮೋದಿ ಅವರು ಚುನಾವಣೆಗೂ ಮುನ್ನ ಸಾಲು ಸಾಲು ರ‍್ಯಾಲಿ, ಸಮಾವೇಶ, ರೋಡ್ ಶೋಗಳನ್ನು ಕೈಗೊಂಡರೂ ಬಿಜೆಪಿ ಹಿನ್ನಡೆ ಅನುಭವಿಸಿದೆ. ಹಾಗಾಗಿ, ಬಿಜೆಪಿ ಹೆಚ್ಚು ಆತ್ಮಾವಲೋಕನ, ಪರಾಮರ್ಶೆ ಮಾಡಿಕೊಳ್ಳಬೇಕಿದೆ. ನರೇಂದ್ರ ಮೋದಿ ಅವರು ರ‍್ಯಾಲಿ, ರೋಡ್ ಶೋ ನಡೆಸಿದ ಕ್ಷೇತ್ರಗಳಲ್ಲಿ ಬಿಜೆಪಿ ಎಷ್ಟು ಗೆದ್ದಿದೆ ಎಂಬ ಕುತೂಹಲ ಇದೆ.
ರಾಜ್ಯದಲ್ಲಿ ನರೇಂದ್ರ ಮೋದಿ ಅವರು ರೋಡ್ ಶೋ, ರ‍್ಯಾಲಿ, ಸಮಾವೇಶಗಳ ಮೂಲಕ 49 ಕ್ಷೇತ್ರಗಳಲ್ಲಿ ಮೋದಿ ಅವರು ಪ್ರಚಾರ ಕೈಗೊಂಡಿದ್ದಾರೆ. ಮೋದಿ ಪ್ರಚಾರ ಕೈಗೊಂಡ 49 ಕ್ಷೇತ್ರಗಳಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲಿ ಸೋತಿದೆ. 26ರಲ್ಲಿ ಕಾಂಗ್ರೆಸ್ ಗೆದ್ದರೆ, 2 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿದೆ. ಬಿಜೆಪಿ 21 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಮೂವರು ಮಾಜಿ, ಒಬ್ಬ ಹಾಲಿ ಸ್ಪೀಕರ್‌ಗೆ ಸೋಲು
ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಮೂವರು ಮಾಜಿ ಹಾಗೂ ಒಬ್ಬ ಹಾಲಿ ಸ್ಪೀಕರ್ ಗೆಲುವು ಸಾಧಿಸಿದ್ದಾರೆ. ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿಯಲ್ಲಿ ಸೋಲುಂಡಿದ್ದಾರೆ. ಇನ್ನು ಬಿಜೆಪಿ ಬಿಟ್ಟು ಕೈಹಿಡಿದಿದ್ದ ಮಾಜಿ ಸ್ಪೀಕರ್ ಜಗದೀಶ್ ಶೆಟ್ಟರ್, ಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್, ವಿರಾಜಪೇಟೆಯಲ್ಲಿ ಕೆ.ಜಿ. ಬೋಪಯ್ಯ ಅವರು ಸೋಲನುಭವಿಸಿದ್ದಾರೆ.