Site icon Vistara News

Karnataka Election Results: ಕಾಂಗ್ರೆಸ್ ‌ಬೆನ್ನಿಗೆ ನಿಂತು, ಜೆಡಿಎಸ್‌ಗೆ ಕೈಕೊಟ್ಟ ಮುಸ್ಲಿಂ ಮತದಾರರು!

Karnataka Election Results, Muslim community totally supported to congress

ಬೆಂಗಳೂರು, ಕರ್ನಾಟಕ: ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಜಯದೊಂದಿಗೆ ಇತಿಹಾಸವನ್ನು ಸೃಷ್ಟಿಸಿದೆ. ದಶಕಗಳ ಬಳಿಕ ಭಾರೀ ಗೆಲುವು ದೊರೆತಿದೆ. ಈ ವಿಜಯಕ್ಕೆ ಹಲವಾರು ಕಾರಣಗಳಿವೆ. ಈ ಪೈಕಿ ಮುಸ್ಲಿಮ್ ಮತದಾರರು (Muslim Community) ಕಂಪ್ಲೀಟ್ ಆಗಿ ಕಾಂಗ್ರೆಸ್‌ ಕಡೆಗೆ ವಾಲಿದ್ದಾರೆ. ವಿಶೇಷವಾಗಿ ಜೆಡಿಎಸ್‌ ಪಕ್ಷವನ್ನು ಮುಸ್ಲಿಮ್ ಮತದಾರರು ಸಂಪೂರ್ಣವಾಗಿ ತೊರೆದಿರುವಂತೆ ಕಾಣುತ್ತಿದೆ. ಜೆಡಿಎಸ್ ಪ್ರಾಬಲ್ಯದ ಹಳೇ ಮೈಸೂರು ಭಾಗದಲ್ಲೇ ಮುಸ್ಲಿಮ್ ಸಮುದಾಯದ ಸಂಪೂರ್ಣ ಕೈಕೊಟ್ಟಿದೆ. ಈ ಭಾಗದಲ್ಲಿ ಶೇ.11ರಷ್ಟು ಮುಸ್ಲಿಮ್ ಜನಸಂಖ್ಯೆ ಇದ್ದು, ಕಾಂಗ್ರೆಸ್ ಪರವಾಗಿ ವಾಲಿದ್ದರಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಗೆದ್ದುಕೊಳ್ಳಲು ಕೈಗೆ ಸಾಧ್ಯವಾಗಿದೆ(Karnataka Election Results).

ಜೆಡಿಎಸ್‌ ಹಳೇ ಮೈಸೂರು ಭಾಗದಲ್ಲಿ ಸಾಮಾನ್ಯವಾಗಿ ಒಕ್ಕಲಿಗ ಪ್ಲಸ್ ಮುಸ್ಲಿಮ್ ಸಮೀಕರಣದ ರಾಜಕಾರಣ ಮಾಡುತ್ತ ಬಂದು, ಕನಿಷ್ಠ 30 ಸೀಟುಗಳನ್ನುಪಡೆದುಕೊಳ್ಳುತ್ತಿತ್ತು. ಆದರೆ, ಬಾರಿ ಚಿತ್ರಣ ಉಲ್ಟಾ ಆಗಿದೆ. ಕಾಂಗ್ರೆಸ್ ಪಕ್ಷವು ಒಟ್ಟು 15 ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಈ ಪೈಕಿ 9 ಜನರು ಆಯ್ಕೆಯಾಗಿದ್ದಾರೆ. ಇದೇ ವೇಳೆ, 22 ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಜೆಡಿಎಸ್ ಒಬ್ಬರೂ ಗೆಲುವು ತಂದುಕೊಟ್ಟಿಲ್ಲ. 2018ರಲ್ಲಿ ಒಟ್ಟು ಏಳು ಮುಸ್ಲಿಮ್ ಅಭ್ಯರ್ಥಿಗಳು ಗೆದ್ದಿದ್ದರು. ಈ ಪೈಕಿ ಐವರು ಕಾಂಗ್ರೆಸ್ ಹಾಗೂ ಇಬ್ಬರು ಜೆಡಿಎಸ್‌ನಿಂದ ಗೆಲವು ಸಾಧಿಸಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 17 ಮತ್ತು ಜೆಡಿಎಸ್ 8 ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದವು. 2018 ಆಗಲೀ ಪ್ರಸಕ್ತ ಚುನಾವಣೆಯಾಗಲೀ ಬಿಜೆಪಿ ಒಬ್ಬರಿಗೂ ಟಿಕೆಟ್ ನೀಡಿರಲಿಲ್ಲ!

2011ರ ಜನಗಣತಿಯ ಪ್ರಕಾರ, ಕರ್ನಾಟಕದಲ್ಲಿ ಸುಮಾರು ಶೇ.13ರಷ್ಟು ಮುಸ್ಲಿಮ್ ಜನರಿದ್ದಾರೆ. ರಾಜ್ಯದ ಸುಮಾರು 65 ಕ್ಷೇತ್ರಗಳಲ್ಲಿ ಮುಸ್ಲಿಮ್ ಮತದಾರರು ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಈ ಬಾರಿ ಕಾಂಗ್ರೆಸ್ ಈ ಕ್ಷೇತ್ರಗಳ ಪೈಕಿ ಅರ್ಧದಷ್ಟು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಕರಾವಳಿಯಲ್ಲೂ ಮುಸ್ಲಿಮ್ ಮತದಾರರು ಸಂಖ್ಯೆ ಗಣನೀಯವಾಗಿದ್ದರೂ, ಅಭ್ಯರ್ಥಿಯ ಹಣೆಬರಹವನ್ನು ರೂಪಿಸಲು ಅದು ಸಾಕಾಗವುದಿಲ್ಲ. 2018ರಲ್ಲಿ ಒಟ್ಟು 19 ಸೀಟುಗಳ ಪೈಕಿ 16ರಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಕಣಕ್ಕಿಳಿಸಿದ್ದ 15 ಮುಸ್ಲಿಮ್ ಅಭ್ಯರ್ಥಿಗಳ ಪೈಕಿ ಮೂವರು ಕರಾವಳಿಯಲ್ಲೇ ಸ್ಪರ್ಧಿಸಿದ್ದರು!

ಇದನ್ನೂ ಓದಿ: Athani Election Results: 75673 ಮತಗಳ ಭಾರೀ ಅಂತರದಲ್ಲಿ ಅಥಣಿ ಕ್ಷೇತ್ರದಲ್ಲಿ ಗೆದ್ದ ಬೀಗಿದ ಲಕ್ಷ್ಮಣ್ ಸವದಿ!

ಹಿಜಾಬ್, ಹಲಾಲ್, ಮೀಸಲಾತಿ ರದ್ದು ಮ್ಯಾಟರ್ ಆಯ್ತಾ?

ಬಿಜೆಪಿ ಸರ್ಕಾರವು ಮೊದಲಿನಿಂದಲೂ ನೈಜ ವಿಷಯಗಳನ್ನು ಮೆರ ಮಾಚಿ ಹಿಜಾಬ್, ಹಲಾಲ್ ಮತ್ತು ಮುಸ್ಲಿಮ್ ಮೀಸಲಾತಿ ವಿಷಯದಲ್ಲಿ ಹೆಚ್ಚು ಕಾಲ ಕಳೆಯಿತು. ಆ ಮೂಲಕ ಹಿಂದೂ ಮತಗಳನ್ನು ಸಂಪೂರ್ಣವಾಗಿ ಒಂದು ಕಡೆ ಮಾಡುವ ಅವರ ಪ್ರಯತ್ನ ಕೈಗೂಡಲಿಲ್ಲ. ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಬ್ಯಾನ್ ಮಾಡಲಾಯಿತು. ಈ ಪ್ರಕರಣವೀಗ ಸುಪ್ರೀಂ ಕೋರ್ಟ್‌ನಲ್ಲಿದೆ. ಮತ್ತೊಂದೆಡೆ, ಬಿಜೆಪಿ ಬೆಂಬಲಿತ ಹಿಂದೂ ಸಂಘಟನೆಗಳು ನಿತ್ಯ ಹಲಾಲ್ ವಿಷಯವನ್ನು ಚರ್ಚೆಯಲ್ಲಿಟ್ಟಿದ್ದವು. ಯುಗಾದಿ, ದೀಪಾವಳಿ ಹಬ್ಬ ಬಂದಾಗಲೆಲ್ಲ ಹಲಾಲ್ ವಿಷಯವೇ ಪ್ರಧಾನ್ಯತೆಯನ್ನು ಪಡೆದುಕೊಳ್ಳುತ್ತಿತ್ತು. ಇನ್ನು ಬೊಮ್ಮಾಯಿ ಸರ್ಕಾರವೇ, ಮುಸ್ಲಿಮರಿಗೆ ನೀಡಲಾಗಿದ್ದ ಶೇ. 4 ಮೀಸಲು ರದ್ದು ಮಾಡಿ, ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿದ್ದರು. ಸರ್ಕಾರ ಈ ನಿರ್ಧಾರ ಕೈಗೊಂಡಾಗ ಮುಸ್ಲಿಮ್ ಸಮುದಾಯದಿಂದ ಯಾವುದೇ ಪ್ರತಿರೋಧವೇ ಕಂಡು ಬಂದಿರಲಿಲ್ಲ. ಆದರೆ, ಅವರು ಮತಪೆಟ್ಟಿಗೆಯ ಮೂಲಕ ತಮ್ಮ ನಿರ್ಧಾರವನ್ನು ತಿಳಿಸಿರುವಂತೆ ಕಾಣುತ್ತಿದೆ!

ಕರ್ನಾಟಕ ಚುನಾವಣಾ ಫಲಿತಾಂಶ ಹಾಗೂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version