Site icon Vistara News

karnataka Election : ಉಡುಪಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಎಸ್‌ಡಿಪಿಐ

SDPI supports Congress in Udupi constituency

SDPI supports Congress in Udupi constituency

ಉಡುಪಿ: ಮಹತ್ವದ ಬೆಳವಣಿಗೆಯಲ್ಲಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ)ವು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ (Karnataka Election 2023) ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದೆ. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿರುವ ಪ್ರಸಾದ್‌ ಕಾಂಚನ್‌ ಅವರಿಗೆ ಬೆಂಬಲ ನೀಡಿದೆ.

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ (Congress Manifesto) ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಭರವಸೆ ನೀಡಿದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ಎಸ್‌ಡಿಪಿಐ ಈ ಬಾರಿ ಉಡುಪಿಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಆದರೆ, ಅಧಿಕೃತವಾಗಿ ಯಾರನ್ನೂ ಬೆಂಬಲಿಸಿರಲಿಲ್ಲ. ಇದೀಗ ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ಕೇಳಿಕೊಂಡಿದೆ.

ಮೇ 5ರಂದು ಮಸೀದಿಯಲ್ಲಿ ಮೌಲ್ವಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದ್ದು, ಉಡುಪಿ ನಗರಸಭೆ ಮತ್ತು ಕ್ಷೇತ್ರ ವ್ಯಾಪ್ತಿಯ ಎಲ್ಲ‌ ಮಸೀದಿಯಲ್ಲಿ ಎಲ್ಲ ಮುಸ್ಲಿಮರು ಕಾಂಗ್ರೆಸ್‌ಗೆ ಬೆಂಬಲ ನೀಡಲು ಸೂಚಿಸಲಾಗಿದೆ. ಶುಕ್ರವಾರದ ಪ್ರಾರ್ಥನೆ ನಂತರ ಈ ಮನವಿಯನ್ನು ಮಾಡಲಾಗಿದೆ. ಕಾಂಗ್ರೆಸ್‌ ಮುಸ್ಲಿಂ ಮತಗಳು ವಿಭಜನೆಯಾಗದಂತೆ ತಡೆಯಲು ಸಾಕಷ್ಟು ಪ್ರಯತ್ನ ನಡೆಸಿತ್ತು. ಅದೀಗ ಫಲಿಸಿದಂತಾಗಿದೆ.

ಯಶಪಾಲ್‌ ಸುವರ್ಣ ಸೋಲಿಸಲು ಈ ತಂತ್ರ?

ದೇಶಾದ್ಯಂತ ಭಾರಿ ಸುದ್ದಿಯಾದ ಹಿಜಾಬ್‌ ಪ್ರಕರಣದ ಮೂಲ ಉಡುಪಿಯಲ್ಲಿತ್ತು. ಇಲ್ಲಿನ ಸರ್ಕಾರಿ ಕಾಲೇಜಿನ ಆರು ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಬರಲು ಅವಕಾಶ ಕೋರಿದಲ್ಲಿಂದ ಆರಂಭವಾದ ಗದ್ದಲ ಸುಪ್ರೀಂಕೋರ್ಟ್‌ವರೆಗೂ ಹೋಗಿತ್ತು. ಆಗ ಸಿಎಫ್‌ಐ ಮತ್ತು ಎಸ್‌ಡಿಪಿಐಗಳು ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಂತಿದ್ದರೆ, ಈಗ ಬಿಜೆಪಿ ಅಭ್ಯರ್ಥಿಯಾಗಿರುವ ಯಶಪಾಲ್‌ ಸುವರ್ಣ ಅವರು ವಿರುದ್ಧವಾಗಿ ಹೋರಾಟ ಮಾಡಿದ್ದರು. ಈಗ ಅದಕ್ಕೆ ಪ್ರತಿಯಾಗಿ ಎಸ್‌ಡಿಪಿಐ ಯಶಪಾಲ್‌ ಸುವರ್ಣ ಅವರನ್ನು ಸೋಲಿಸಲು ಕಾಂಗ್ರೆಸ್‌ನ ಪ್ರಸಾದ್‌ ಸುವರ್ಣ ಬೆಂಬಲಕ್ಕೆ ನಿಲ್ಲಲು ಮುಂದಾಗಿದೆ.

ಕಾಂಗ್ರೆಸ್‌ನ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧಿಸುವ ಪ್ರಸ್ತಾವನೆ ಮಂಡಿಸಿರುವುದು ಭಾರಿ ವಿರೋಧಕ್ಕೆ ಕಾರಣವಾಗಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಮತಗಳ ಕ್ರೋಡೀಕರಣಕ್ಕೂ ದಾರಿ ಮಾಡಿಕೊಟ್ಟಿದೆ ಎನ್ನುವುದು ಇಲ್ಲಿನ ವಿದ್ಯಮಾನದಿಂದ ಸ್ಪಷ್ಟವಾಗಿದೆ.

ಇದನ್ನೂ ಓದಿ : Karnataka Election 2023: ಪಕ್ಷಗಳ ಬಾವುಟಕ್ಕಿಂತ ಬಜರಂಗಿ ಬಾವುಟಕ್ಕೆ ಹೆಚ್ಚಿದ ಡಿಮ್ಯಾಂಡ್; ರೋಡ್‌ ಶೋಗಳಲ್ಲಿ ಮಿಂಚಿದ ಆಂಜನೇಯ

Exit mobile version