ಹುಬ್ಬಳ್ಳಿ: ನನಗೆ ಪಕ್ಷ ಎಲ್ಲ ಕೊಟ್ಟಿದೆ, ಎಲ್ಲ ಹುದ್ದೆ ಸಿಕ್ಕಿದೆ.. ಇನ್ನು ನಿವೃತ್ತರಾಗಿ ಅಂತ ಹೇಳ್ತಾರಲ್ವಾ? ನರೇಂದ್ರ ಮೋದಿ ಅವರು ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದಾರೆ, ಎರಡು ಬಾರಿ ಪ್ರಧಾನಿಯಾಗಿದ್ದಾರೆ. ಈ ಹಂತದಲ್ಲಿ ಅವರು ತಮ್ಮ ಹುದ್ದೆ ಬಿಟ್ಕೊಡ್ತಾರಾ?- ಇಂಥಹುದೊಂದು ನೇರ ಪ್ರಶ್ನೆಯನ್ನು ಕೇಳಿದ್ದಾರೆ ಹಾಲಿ ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ (Jagadish Shettar).
ವಿಧಾನಸಭಾ ಚುನಾವಣೆಗೆ (Karnataka Election 2023)ಮೊದಲು ಬಿಜೆಪಿ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಮತದಾನದ ಮರುದಿನ ಮಾಧ್ಯಮಗಳ ಜತೆ ಮಾತನಾಡಿ ಹಲವಾರು ವಿಚಾರಗಳನ್ನು, ಪ್ರಶ್ನೆಗಳನ್ನು ತೆರೆದಿಟ್ಟರು. ತಮ್ಮ ಮತ್ತು ಪಕ್ಷದ ಸಂಬಂಧ, ಮುಖ್ಯಮಂತ್ರಿಯಾಗಿದ್ದು, ಪ್ರಹ್ಲಾದ್ ಜೋಶಿಯವರ ಈಗಿನ ನಡೆ, ಬಿ.ಎಲ್. ಸಂತೋಷ್ ಅವರೇನು ಮಾಡಿದರು ಎನ್ನುವ ಎಲ್ಲ ವಿಚಾರಗಳನ್ನು ಚರ್ಚಿಸಿದ್ದಾರೆ. ಅವರು ಹೇಳುವ ಪ್ರಕಾರ, ಬಿಜೆಪಿ ತನಗೆ ಮೋಸ ಮಾಡಿದ್ದರ ಫಲವಾಗಿ 15 ಸೀಟುಗಳನ್ನು ಕಳೆದುಕೊಳ್ಳಲಿದೆ!
ನನ್ನನ್ನು ಸಿಎಂ ಮಾಡಿದ್ದು ಪ್ರಲ್ಹಾದ್ ಜೋಶಿ ಅಲ್ಲ
ಪ್ರಲ್ಹಾದ್ ಜೋಶಿ ಅವರು ನಾನೇ ಶೆಟ್ಟರ್ ಅವರನ್ನು ಸಿಎಂ ಮಾಡಿದೆ ಎಂದು ಹೇಳುತ್ತಿದ್ದಾರಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಜಗದೀಶ್ ಶೆಟ್ಟರ್, ʻʻಏಣಿ ಹತ್ತಿ ನಿಚ್ಚಣಿಕೆ ತೆಗೆದು ಹಾಕಿದ್ರು ಅಂತಾರಲ್ಲಾ ಹಾಗೆ ಆಗಿದೆ ನನ್ನ ಪರಿಸ್ಥಿತಿ. ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ಸೀನಿಯಾರಿಟಿ ಮೇಲೆ. ನನ್ನನ್ನು ಪ್ರಲ್ಹಾದ್ ಜೋಶಿ ಮಂತ್ರಿ ಮಾಡಿದ್ರು ಅಂತಾ ನಾನೂ ಹೇಳಿಲ್ಲ, ಅವರೂ ಹೇಳಿಲ್ಲ. ಈಗ ಈಗ ಚುನಾವಣೆಗಾಗಿ ಹೇಳ್ತಿದ್ದಾರೆ. ಪ್ರಲ್ಹಾದ್ ಜೋಶಿ ಸುಳ್ಳು ಹೇಳೋದು ಕಲ್ತಿದ್ದಾರೆʼʼ ಎಂದು ಹೇಳಿದರು.
ನನಗೆ ಟಿಕೆಟ್ ತಪ್ಪಿಸಿದ್ದರಿಂದ 15-20 ಕ್ಷೇತ್ರಗಳಲ್ಲಿ ಎಫೆಕ್ಟ್
ʻʻಬಿಜೆಪಿ ನನಗೆ ಟಿಕೆಟ್ ಕೊಡದೆ ಮೋಸ ಮಾಡಿದ್ದರಿಂದ ದೊಡ್ಡ ಪರಿಣಾಮ ಆಗುವುದು ಖಚಿತ. ನನಗೆ ಟಿಕೆಟ್ ಕೊಟ್ಟಿದ್ದರೆ ಎಲ್ಲವೂ ಸರಿ ಇರುತ್ತಿತ್ತು. ಈಗ ನನಗೆ ಟಿಕೆಟ್ ತಪ್ಪಿದ್ದು ಹದಿನೈದು, ಇಪ್ಪತ್ತು ಕ್ಷೇತ್ರಗಳಲ್ಲಿ ಎಫೆಕ್ಟ್ ಆಗಿದೆʼʼ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದ ಶೆಟ್ಟರ್
ʻʻಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಸಂಘಟಿತ ಪ್ರಯತ್ನದಿಂದ ಪಕ್ಷ ಅಧಿಕಾರಕ್ಕೆ ಬರಲಿದೆ. ಅವರು ಸರ್ಕಾರದ ವೈಫಲ್ಯವನ್ನು ಜನರಿಗೆ ಸ್ಪಷ್ಟವಾಗಿ ಹೇಳುವ ಕೆಲಸ ಮಾಡಿದರು. ಇದು ಯಶಸ್ವಿಯಾಗಿದೆʼʼ ಎಂದು ಶೆಟ್ಟರ್ ಹೇಳಿದರು.
ಲಿಂಗಾಯತರಿಗೆ ಬಿಜೆಪಿ ಅನ್ಯಾಯವಾಗಿದೆ ಅನ್ನುವ ವಿಚಾರ, ರಾಜ್ಯ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ವಿರುದ್ಧ ನಡೆಸಿರುವ ಹೋರಾಟಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದೆ ಎನ್ನುವುದು ಅವರ ಅಭಿಪ್ರಾಯ.
ನಾನು ಟೀಕಿಸಿದ್ದು ಸಂತೋಷ್, ಜೋಶಿಯನ್ನು ಬ್ರಾಹ್ಮಣರನ್ನು ಅಲ್ಲ
ನಾನು ಶಂಕರ್ ಪಾಟೀಲ್ ಮುನೇನಕೊಪ್ಪ ಅವರನ್ನು ಸಚಿವರಾಗಿ ಮಾಡಲು ಲಾಬಿ ಮಾಡಿದ್ದು ನಿಜ. ಪ್ರಲ್ಹಾದ್ ಜೋಶಿಯವರು ಅರವಿಂದ ಬೆಲ್ಲದ್ ಪರ ಲಾಬಿ ಮಾಡಿದರು ಎಂದು ಹೇಳಿದ ಶೆಟ್ಟರ್, ನಾನು ಟೀಕಿಸಿದ್ದು ಬಿ.ಎಲ್. ಸಂತೋಷ್ ಮತ್ತು ಪ್ರಲ್ಹಾದ್ ಜೋಶಿ ವಿರುದ್ಧ ಮಾತ್ರ. ಇಡೀ ಬ್ರಾಹ್ಮಣ ಸಮಾಜವನ್ನು ನಾನು ಟೀಕೆ ಮಾಡಿಲ್ಲ. ಬ್ರಾಹ್ಮಣರು ನನಗೆ ಅತೀ ಹೆಚ್ಚು ಮತ ಹಾಕಿದ್ದಾರೆ. ಈ ಒಳ ಹೊಡೆತದ ಬಗ್ಗೆ ತಿಳಿದುಕೊಳ್ಳಿʼʼ ಎಂದು ಹೇಳಿದರು.
ಬಿಜೆಪಿ ಈಗ ಕೆಲವರ ಹಿಡಿತದಲ್ಲಿದೆ, ಹೀಗಾಗಿ ಈ ಪರಿಸ್ಥಿತಿ ಬಂದಿದೆ. ಬಿಜೆಪಿಯವರಿಗೆ ಅಹಂಕಾರ ಬಂದಿದೆʼʼ ಎಂದು ಆಕ್ರೋಶದಿಂದ ಹೇಳಿದರು ಶೆಟ್ಟರ್.
ಕಾಂಗ್ರೆಸ್‌ನಿಂದ ನನಗೇನೂ ಆಗಬೇಕಾಗಿದ್ದು ಇಲ್ಲ
ನಾನು ಯಾವುದೇ ಆಸೆ ಇಟ್ಟುಕೊಂಡು ಕಾಂಗ್ರೆಸ್ ಸೇರಿಲ್ಲ. ನನಗೆ ಏನೂ ಬೇಕಾಗಿಲ್ಲ. ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಬಿಜೆಪಿಯವರು ಮಾಡಿದ ಮೋಸಕ್ಕಾಗಿ ಅಂಗ್ರೆಸ್ ಸೇರಿದೆ, ಶಾಸಕನಾದ್ರೆ ಮನಸ್ಸಿಗೆ ಸಮಾಧಾನ ಆಗುತ್ತದೆ. ನನಗೆ ನ್ಯಾಯ ಸಿಕ್ಕಿತು ಅಂದುಕೊಳ್ಳುತ್ತೇನೆ.
ನರೇಂದ್ರ ಮೋದಿ, ಜೋಶಿ ಅಧಿಕಾರ ಬಿಡಲಿ ಹಾಗಿದ್ರೆ..
ʻʻ ಪ್ರಲ್ಹಾದ್ ಜೋಶಿಯವರು ನಾಲ್ಕು ಬಾರಿ ಸಂಸದ, ಮಂತ್ರಿಯಾಗಿದ್ದಾರೆ. ಇನ್ನೇನು ಬೇಕು ಅವರಿಗೆ.. ರಾಜಕಾರಣ ಬಿಡಲಿ ಹಾಗಿದ್ದರೆ. ನನಗೆ ತೋರಿಸಿದ ಮಾನದಂಡವನ್ನೇ ಅವರಿಗೂ ಅನ್ವಯಿಸುತ್ತಾರಾ? ನರೇಂದ್ರ ಮೋದಿಯವರು ಮೋದಿಯವರು ನಾಲ್ಕು ಬಾರಿ ಮುಖ್ಯಮಂತ್ರಿ ಆದರೆ, ಎರಡು ಬಾರಿ ಪ್ರಧಾನಿ ಆದರು. ಹಾಗಿದ್ದರೆ ಮೋದಿಯವರು ರಾಜಕೀಯ ಬಿಡ್ತಾರಾ? ಅದು ಸಾಧ್ಯವಿಲ್ಲ. ಅವರು ಇನ್ನೊಮ್ಮೆ ಪಿಎಮ್ ಆಗಲು ಪ್ರಯತ್ನ ಮಾಡ್ತಿದ್ದಾರೆ. ಅವರು ರಾಜಕೀಯದಲ್ಲಿರಬೇಕು, ಪ್ರಧಾನಿ ಆಗಿರಬೇಕು ಅಂತ ನಾನೂ ಹೇಳ್ತೀನಿ. ಎಲ್ಲಿವರೆಗೆ ಜನಾಶೀರ್ವಾದ ಇರುತ್ತದೋ ಅಲ್ಲಿಯವರೆಗೂ ರಾಜಕೀಯದಲ್ಲಿ ಇರಬೇಕು ಅನ್ನೋದು ನನ್ನ ನಿಲುವುʼʼ-ಹೀಗೆಂದು ಹೇಳಿದರು ಜಗದೀಶ್ ಶೆಟ್ಟರ್.
ಇದನ್ನೂ ಓದಿ : Karnataka Election: ಕೇಂದ್ರದಲ್ಲಿ ದಲಿತ, ಒಕ್ಕಲಿಗ, ಲಿಂಗಾಯತರಿಗೆ ರಾಜ್ಯ ಖಾತೆ; ಜೋಶಿಗೆ ಮಾತ್ರ ಏಕೆ ಸಂಪುಟ ಖಾತೆ?; ಜಗದೀಶ್ ಶೆಟ್ಟರ್