ಶಿವಮೊಗ್ಗ: ʻʻನಂಗೆ ಸೋಮಣ್ಣ ತುಂಬಾ ಆಪ್ತರು. ಪ್ರತಾಪಸಿಂಹ ಸ್ನೇಹಿತರು. ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ನನಗೆ ಯಾರೂ ಶತ್ರುಗಳಿಲ್ಲ. ನನ್ನನ್ನು ಕಾಂಗ್ರೆಸ್‌ನವರು ಪ್ರಚಾರಕ್ಕೆ ಬನ್ನಿ ಎಂದು ಕರೆದರು, ಹೋಗಿದ್ದೇನೆ. ಬಿಜೆಪಿಯವರು ಕರೆದರೂ ಹೋಗುತ್ತಿದ್ದೆʼʼ- ಇದು ಚಿತ್ರ ನಟ ಶಿವರಾಜ್ ಕುಮಾರ್ (Actor Shivaraj Kumar) ಅವರ ಮಾತು.
ಗುರುವಾರ ಅವರು ಮೈಸೂರಿನ ವರುಣಾ ಕ್ಷೇತ್ರದಲ್ಲಿ (Karnataka Election 2023) ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ರೋಡ್ ಶೋ ನಡೆಸಿ ಮತ ಯಾಚನೆ ಮಾಡಿದ್ದರು. ಇದು ಅಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ, ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ಬೇಸರ ಉಂಟು ಮಾಡಿತ್ತು. ಶಿವಣ್ಣ ಅವರು ನನಗೆ ತುಂಬ ಆಪ್ತರು. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಹೇಳುತ್ತಿದ್ದರು. ಆದರೆ ಈಗ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಅದೇ ರೀತಿ ಸಂಸದ ಪ್ರತಾಪ್ ಸಿಂಹ ಅವರು ಕೂಡಾ, ಶಿವಣ್ಣ ಅವರಿಗೆ ಯಾವ ಒತ್ತಡವಿತ್ತೋ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಶುಕ್ರವಾರ ಬೆಳಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಶಿವಣ್ಣ, ನನಗೆ ಎಲ್ಲರೂ ಆಪ್ತರೇ, ಯಾರೂ ನನಗೆ ಶತ್ರುಗಳಿಲ್ಲ. ಪ್ರಚಾರಕ್ಕೆ ಕರೆದರೆ ಬಿಜೆಪಿ ನಾಯಕರ ಪ್ರಚಾರಕ್ಕೂ ಹೋಗುತ್ತೇನೆ ಎಂದರು.
ʻʻವರುಣದಲ್ಲಿ ಪ್ರಚಾರ ಚೆನ್ನಾಗಿ ಆಯ್ತು, ಇವತ್ತು ಮುಂಡಗೋಡು, ಶಿರಸಿಯಲ್ಲಿ ಪ್ರಚಾರ ಮಾಡ್ತೀನಿʼʼ ಎಂದು ಹೇಳಿದ ಅವರು, ʻʻಸೋಮಣ್ಣ ನಮಗೆ ಒಳ್ಳೆಯ ಆಪ್ತರು. ಪ್ರತಾಪ್ ಸಿಂಹ ಸ್ನೇಹಿತರು. ಅವರ ಬಗ್ಗೆ ಒಳ್ಳೆಯ ಗೌರವ ಇದೆ. ನಾನು ಏನು ಚಿಕ್ಕ ಹುಡುಗನಾ? ನನಗೂ 61 ವರ್ಷ ಆಯ್ತು. ನನಗೆ ಯಾರೂ ಎನಿಮಿ ಇಲ್ಲ. ಎಲ್ಲರೂ ಸ್ನೇಹಿತರೇ. ಪ್ರಚಾರಕ್ಕೆ ಕರೆದರು ಅಂತ ಹೋಗಿದ್ದೇನೆ ಅಷ್ಟೆʼʼ ಎಂದು ಶಿವರಾಜ್ ಕುಮಾರ್ ಹೇಳಿದರು.
ʻʻಕಾಂಗ್ರೆಸ್ ಬಿಟ್ಟು ಬೇರೆ ಪಕ್ಷದವರು ಯಾರೂ ಪ್ರಚಾರಕ್ಕೆ ಕರೆದಿರಲಿಲ್ಲ. ಕರೆದಿದ್ದರೆ ಅವರ ಪರ ಪ್ರಚಾರಕ್ಕೂ ಹೋಗ್ತಿದ್ದೆʼʼ ಎಂದು ಶಿವಣ್ಣ ಹೇಳಿದರು.
ʻʻರಾಹುಲ್ ಗಾಂಧಿ ಅವರನ್ನು ಮೀಟ್ ಮಾಡಬೇಕು ಅಂತ ಮೊದಲಿನಿಂದ ಆಸೆ ಇತ್ತುʼʼ ಎಂದು ಹೇಳಿದ ಅವರು, ರಾಹುಲ್ ಗಾಂಧಿ ಫಿಟ್‌ನೆಸ್ ಇಷ್ಟ ಆಯ್ತು. ಹೀಗಾಗಿ ಅವರ ಬಗ್ಗೆ ಇಂಪ್ರೆಸ್ ಆಯ್ತು. ರಾಹುಲ್ ಗಾಂಧಿ ಸ್ಮಾರ್ಟ್ ಆಗಿ ಇದ್ದಾರೆʼʼ ಎಂದು ಹೇಳಿದರು. ʻʻಮೊದಲು ಸಿನಿಮಾದಲ್ಲಿ ಬ್ಯುಸಿ ಇದ್ದೆ. ಈಗ ಪ್ರಚಾರದಲ್ಲಿ ಬ್ಯುಸಿ ಆಗಿದ್ದೇನೆʼʼ ಎಂದರು ಶಿವಣ್ಣ.
ಹಾಗೆಲ್ಲ ಹೇಳುವ ಹಾಗಿಲ್ಲ, ಸುದೀಪ್ ಪ್ರಚಾರ ಮಾಡ್ತಿಲ್ವ?
ನಾವು ಚಿತ್ರ ನಟರು. ಯಾರಾದರೂ ಕೇಳಿದರೆ ಪ್ರಚಾರ ಮಾಡುತ್ತೇವೆ. ಈಗ ಸುದೀಪ್ ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿಲ್ಲವಾ? ಹಾಗಂತ ನಾವಿಬ್ರು ಜಗಳ ಮಾಡೋಕ್ಕಾಗುತ್ತಾ? ನಾವಿಬ್ಬರೂ ಗುಡ್ ಫ್ರೆಂಡ್ಸ್. ಯಾವತ್ತೂ ಹಾಗೇ ಇರ್ತೇವೆ. ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿದ್ದರಿಂದ ಹೋಗಿದ್ದೇನೆ ಅಷ್ಟೆ ಎಂದು ಹೇಳಿದರು ಶಿವರಾಜ್ ಕುಮಾರ್.
ಇದನ್ನೂ ಓದಿ : Karnataka Election: ಸಿದ್ದರಾಮಯ್ಯ ಪರ ಶಿವಣ್ಣ ಪ್ರಚಾರ, ಪ್ರತಾಪ್ ಸಿಂಹ, ಸೋಮಣ್ಣ ಅಸಮಾಧಾನ