ಬೆಂಗಳೂರು: ʻʻಕಾಂಗ್ರೆಸ್ ಪಕ್ಷದ ಗೌರವಾನ್ವಿತ ನಾಯಕಿ ಸೋನಿಯಾ ಗಾಂಧಿಯವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ತಕ್ಷಣ ಪಕ್ಷದಿಂದ ಉಚ್ಚಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಬೇಕು, ಇಲ್ಲದೆ ಇದ್ದರೆ ಅವರ ಬೆಂಬಲದಿಂದಲೇ ಯತ್ನಾಳ್ ಅವರು ಇಂತಹ ನೀಚತನದ ಪ್ರದರ್ಶನ ಮಾಡುತ್ತಿದ್ದಾರೆಂದು ತಿಳಿದುಕೊಳ್ಳಬೇಕಾಗುತ್ತದೆʼʼ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Karnataka Election) ಹೇಳಿದ್ದಾರೆ.
ಯತ್ನಾಳ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸರಣಿ ಟ್ವೀಟ್‌ಗಳನ್ನು ನಡೆಸಿರುವ ಸಿದ್ದರಾಮಯ್ಯ ಅವರು, ಮೋದಿಯವರು ಕೂಡಾ ಈ ಹಿಂದೆ ಸೋನಿಯಾ ಗಾಂಧಿ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಅವರ ಪ್ರಚೋದನೆಯಿಂದಲೇ ಯತ್ನಾಳ್ ಮಾತನಾಡುತ್ತಿರಬಹುದು ಎಂದು ಸಂಶಯಿಸಿದ್ದಾರೆ.
ʻʻಸೋನಿಯಾ ಗಾಂಧಿಯವರ ವಿರುದ್ಧ ಈ ರೀತಿ ಅವಹೇಳನಕಾರಿಯಾದ ನಿಂದನೆ, ಚಾರಿತ್ರ್ಯಹನನದ ಪ್ರಯತ್ನ ಇದು ಮೊದಲ ಬಾರಿ ಅಲ್ಲ. ಸಾಕ್ಷಾತ್ ನರೇಂದ್ರ ಮೋದಿ ಅವರೇ ಸೋನಿಯಾ ಗಾಂಧಿಯವರನ್ನು ಕಾಂಗ್ರೆಸಿನ ವಿಧವೆ, ಜರ್ಸಿಕೌ, ಬಾರ್ ಡಾನ್ಸರ್ ಎಂದೆಲ್ಲ ಅವಹೇಳನ ಮಾಡಿದ್ದಾರೆ. ಬಹುಷಃ ಇದರ ಪ್ರಚೋದನೆಯಿಂದಲೇ ಯತ್ನಾಳ್ ಅಂತಹವರು ಈ ರೀತಿಯ ನೀಚ ಬುದ್ದಿಯನ್ನು ನಿರ್ಭೀತಿಯಿಂದ ಪ್ರದರ್ಶಿಸುತ್ತಿರುವಂತಿದೆʼʼ ಎಂದಿದ್ದಾರೆ ಸಿದ್ದರಾಮಯ್ಯ.
ಬಿಜೆಪಯವರನ್ನೂ ಬಿಟ್ಟಿಲ್ಲ. ಆದರೂ ಕ್ರಮವಿಲ್ಲ
ʻʻಶಾಸಕ ಯತ್ನಾಳ್ ಅವರ ಕೊಳಕು ನಾಲಿಗೆ ವಿರೋಧ ಪಕ್ಷದ ನಾಯಕರ ಮೇಲೆ ಮಾತ್ರ ಹರಿದಾಡಿದ್ದಲ್ಲ, ಸ್ವಂತ ಪಕ್ಷದ ನಾಯಕರನ್ನೂ ಅವರು ಅವಾಚ್ಯವಾಗಿ ನಿಂದಿಸುತ್ತಾ ಬಂದಿದ್ದರೂ ಅವರ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಪಕ್ಷದ ಉನ್ನತ ಮಟ್ಟದ ನಾಯಕರ ಆಶೀರ್ವಾದ ಬಲದಿಂದಲೇ ಯತ್ನಾಳ್ ಅವರು ಈ ರೀತಿಯ ದುರ್ಬುದ್ಧಿಯನ್ನು ತೋರಿಸುತ್ತಿರುವಂತಿದೆʼʼ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಕೂಡಾ ಆಕ್ರೋಶ
ವಿಧಾನಸಭಾ ಚುನಾವಣೆಯ (Karnataka Election) ಸಿದ್ಧತೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲು ʻʻನನ್ನ ತಾಯಿಯನ್ನು ವಿಷ ಕನ್ಯೆ ಎಂದು ಕರೆದ ಮಿಸ್ಟರ್ ಯತ್ನಾಳ್ ನಿಮ್ಮ ನಾಲಗೆಯನ್ನು…ʼʼ ಎಂದು ಹೇಳಿ ಸಂಭಾಳಿಸಿಕೊಂಡರು. ಬಳಿಕ ಮುಂದುವರಿಸಿ, ʻʻನಿಮ್ಮ ನಾಲಗೆಯನ್ನು ಯಾರು ಏನು ಮಾಡುತ್ತಾರೋ ಗೊತ್ತಿಲ್ಲ. ಯಾವ ರೀತಿ ಕಾರ್ಯಕರ್ತರು, ಜನ, ರಾಜ್ಯದ ಸಂಸ್ಕೃತಿ ಇರುವ ಯುವಜನ ಏನು ಮಾಡ್ತಾರೋ ಗೊತ್ತಿಲ್ಲʼʼ ಎಂದರು.
ʻʻಸೋನಿಯಾ ಗಾಂಧಿ ಅವರು ಈ ದೇಶದ ಪ್ರಧಾನ ಮಂತ್ರಿ ಹುದ್ದೆಯನ್ನೇ ತ್ಯಾಗ ಮಾಡಿದವರು. ಒಬ್ಬ ಆರ್ಥಿಕ ತಜ್ಞನನ್ನು ಈ ದೇಶದ ಪ್ರಧಾನಿ ಮಾಡಿದವರು. ಬಿಜೆಪಿಯವರು ನನ್ನನ್ನು ಜೈಲಿಗೆ ಕಳುಹಿಸಿದಾಗ ತಿಹಾರ್ ಜೈಲಿಗೆ ಅಟ್ಟಿದಾಗ ಬಂದು ಧೈರ್ಯ ತುಂಬಿದ ತಾಯಿ ಅವರು. ಅಂಥ ಒಬ್ಬ ತಾಯಿಯನ್ನು ಒಬ್ಬ ಮಾಜಿ ಕೇಂದ್ರ ಸಚಿವ, ಹಾಲಿ ಶಾಸಕ ವಿಷ ಕನ್ಯೆ ಎಂದು ಕರೆದಿದ್ದಾರೆ. ಮಿಸ್ಟರ್ ಯತ್ನಾಳ್ ಯಾರು ಏನು ಮಾಡ್ತಾರೋ ಗೊತ್ತಿಲ್ಲ.. ರಾಜ್ಯದ ಸಂಸ್ಕೃತಿ ಇರುವ ಯುವ ಜನ ಏನು ಮಾಡ್ತಾರೋ ಗೊತ್ತಿಲ್ಲ.. ನನ್ನ ತಾಯಿಯನ್ನ, ಪ್ರಧಾನ ಮಂತ್ರಿ ಸ್ಥಾನವನ್ನೇ ತ್ಯಾಗ ಮಾಡಿದ ಒಬ್ಬ ಹೆಣ್ಮಗಳನ್ನು, ದೇಶದ ಶಾಂತಿಗಾಗಿ, ಸಮಗ್ರತೆಗಾಗಿ ತನ್ನ ಗಂಡನನ್ನೇ ಕಳೆದುಕೊಂಡ ಒಬ್ಬ ಹೆಣ್ಮಗಳನ್ನು ವಿಷ ಕನ್ಯೆ ಎಂದು ಕರೆಯುತ್ತೀಯಲ್ಲಾ.. ಕಾಂಗ್ರೆಸ್ ಯಾವ ಕಾರಣಕ್ಕೂ ಇದನ್ನು ಸಹಿಸಲ್ಲʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ : Karnataka Election 2023: ಸೋನಿಯಾ ಗಾಂಧಿ ವಿಷಕನ್ಯೆ, ರಾಹುಲ್ ಹುಚ್ಚ: ಬಿಜೆಪಿ ನಾಯಕ ಯತ್ನಾಳ್ ವಿವಾದಾತ್ಮಕ ಹೇಳಿಕೆ