ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮತದಾರರ ಮನವೊಲಿಸಲು ಹಾಗೂ ಸಂಘಟನೆಯನ್ನು ಚುರುಕುಗೊಳಿಸಲು ಈಗಾಗಲೆ ಬಿಜೆಪಿ ಜನಸಂಕಲ್ಪ ಯಾತ್ರೆ, ಜೆಡಿಎಸ್ ಪಂಚರತ್ನ ಯಾತ್ರೆ ನಡೆಸುತ್ತಿದ್ದು, ಇತ್ತ ಕಾಂಗ್ರೆಸ್‌ನಿಂದಲೂ ಎರಡು ಯಾತ್ರೆಗಳನ್ನು ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಂದು ಬಸ್‌ನಲ್ಲಿ ಯಾತ್ರೆ ಕೈಗೊಂಡರೆ ಮತ್ತೊಂದು ಬಸ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರವಾಸ ಮಾಡಲಿದ್ದಾರೆ.
ಬಿಜೆಪಿ ಯಾತ್ರೆಯನ್ನು ಎರಡು ತಂಡಗಳಲ್ಲಿ ನಡೆಸಲಾಗುತ್ತಿದೆ. ಒಂದು ತಂಡದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಇದ್ದರೆ ಮತ್ತೊಂದು ತಂಡದ ನೇತೃತ್ವವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಹಿಸಿಕೊಂಡಿದ್ದಾರೆ.
ಎರಡೂ ತಂಡಗಳು ಜನಸಂಕಲ್ಪ ಯಾತ್ರೆಯನ್ನು ಆರಂಭಿಸಿವೆಯಾದರೂ ಈ ನಡುವೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಅವರ ಅನಾರೋಗ್ಯದ ಕಾರಣದಿಂದ ಒಂದು ಯಾತ್ರೆ ಸ್ಥಗಿತವಾಗಿದೆ. ಸಿಎಂ ಹಾಗೂ ಬಿಎಸ್‌ವೈ ಅನೇಕ ಕ್ಷೇತ್ರಗಳಲ್ಲಿ ಒಟ್ಟಿಗೆ ಯಾತ್ರೆ ಮುಗಿಸಿದ್ದಾರೆ. ಇತ್ತೀಚೆಗೆ ತುಮಕೂರು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಯಾತ್ರೆಗೆ ಬಿಎಸ್‌ವೈ ಗೈರಾಗಿದ್ದು ಕೆಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದೇ ವೇಳೆ ಭಾನುವಾರ ಬೆಂಗಳೂರಿನ ಹೆಬ್ಬಾಳ ಹಾಗೂ ಗಾಂಧಿನಗರದಲ್ಲಿ ನಡೆಯಬೇಕಿದ್ದ ಜನಸಂಕಲ್ಪ ಸಮಾವೇಶಗಳನ್ನು ಮಳೆಯ ಕಾರಣ ನೀಡಿ ಮುಂದೂಡಲಾಗಿದೆ.
ಪಂಚರತ್ನ ಯೋಜನೆಗಳನ್ನು ಮುಂದಿಟ್ಟುಕೊಂಡು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಯಾತ್ರೆ ನಡೆಸುತ್ತಿದ್ದು, ಈಗಾಗಲೆ ಅನೇಕ ಜಿಲ್ಲೆಗಳನ್ನು ಪೂರೈಸಿದ್ದಾರೆ.
ಇದೀಗ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪ್ರತ್ಯೇಕ ರಥಯಾತ್ರೆ ನಡೆಸಲು ಸಿದ್ಧವಾಗಿದ್ದಾರೆ. ಈ ಕುರಿತು ಪ್ರಸ್ತಾವನೆಯನ್ನೂ ದೆಹಲಿ ನಾಯಕರ ಮುಂದೆ ಮಂಡಿಸಲು ಮುಂದಾಗಿದ್ದಾರೆ. ಬಸ್ ಯಾತ್ರೆ ಎಲ್ಲಿಂದ ಆರಂಭವಾಗಿ ಹೇಗೆ ಸಾಗಬೇಕು ಎಂಬ ಎರಡು ಪ್ರತ್ಯೇಕ ಮಾರ್ಗಗಳನ್ನೂ ಸಿದ್ಧಪಡಿಸಿಕೊಳ್ಳಲಾಗಿದೆ.
ಜನವರಿ 3 ನೇ ತಾರೀಕು ಉತ್ತರ ಕರ್ನಾಟಕ ಭಾಗದಿಂದ ಸಿದ್ದರಾಮಯ್ಯ ನೇತೃತ್ವದ ತಂಡದಿಂದ ಬಸ್ ಯಾತ್ರೆ ಪ್ರಾರಂಭವಾಗಬೇಕು ಎಂದು ಚಿಂತನೆ ನಡೆದಿದೆ. ಬೀದರ್‌ನ ಬಸವಕಲ್ಯಾಣದಿಂದ ಸಿದ್ದರಾಮಯ್ಯ ಬಸ್ ಯಾತ್ರೆ ಆರಂಭವಾಗಬಹುದು ಎನ್ನಲಾಗಿದೆ.
ಡಿ.ಕೆ. ಶಿವಕುಮಾರ್ ಬಸ್ ಯಾತ್ರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಬಸ್‌ಗಳನ್ನು ಸಿದ್ಧವಾಗಿರಿಕೊಳ್ಳಲಾಗಿದೆ. ಹೈಕಮಾಂಡ್‌ನಿಂದ ಹಸಿರುನಿಶಾನೆ ದೊರೆತ ಕೂಡಲೆ ಆರಂಭವಾಗುತ್ತದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಹಾಗೂ ಈಗಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿಚಾರಗಳನ್ನು ಮುಂದಿಟ್ಟುಕೊಂಡು ಯಾತ್ರೆಯಲ್ಲಿ ಜನಾಭಿಪ್ರಾಯ ಮೂಡಿಸುವ ಪ್ರಯತ್ನವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಸದಾಶಿವ ಆಯೋಗ ಕುರಿತು ಟ್ವೀಟ್ ಮಾಡಿ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ: ದಲಿತರಿಗೆ ವಂಚಿಸಿದ್ದು ನೀವೇ ಎಂದ ಬಿಜೆಪಿ