ಮೈಸೂರು: ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಕಾರಣ ರಾಜ್ಯದ ಪ್ರಮುಖ ನಾಯಕರು (Karnataka Election) ಟೆಂಪಲ್ ರನ್ ಶುರು ಮಾಡಿದ್ದಾರೆ. ದೇವಾಲಯಗಳಿಗೆ ತೆರಳಿ ಗೆಲುವಿಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಮಾಡುತ್ತಿದ್ದಾರೆ. ಇದೇ ರೀತಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಒಟ್ಟಿಗೆ ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಹಾಗೆಯೇ, ಕಾಂಗ್ರೆಸ್ ಗ್ಯಾರಂಟಿ ಇಟ್ಟು ಅರ್ಚನೆ ಮಾಡಿದ್ದಾರೆ.
ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ಒಂದೇ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿದರು. ಇನ್ನು ಮೊದಲು ದೇವಸ್ಥಾನ ಪ್ರವೇಶಿಸಿದ ಸಿದ್ದರಾಮಯ್ಯ ಅವರು, ಡಿ.ಕೆ. ಶಿವಕುಮಾರ್ ಅವರು ಬರುವತನಕ ಕಾದು, ನಂತರ ಅರ್ಚನೆ ಮಾಡಿದರು. ಇಬ್ಬರೂ ಕಾಂಗ್ರೆಸ್ ಗ್ಯಾರಂಟಿ ಪ್ರತಿಯನ್ನು ಅರ್ಚನೆ ತಟ್ಟೆಯಲ್ಲಿಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಮಾಜಿ ಸಚಿವ ಕೆ.ಜೆ.ಜಾರ್ಜ್ ಸೇರಿ ಹಲವು ನಾಯಕರು ಇದ್ದರು.
ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಎಂದ ಸಿದ್ದರಾಮಯ್ಯ
ದೇವಿಯ ದರ್ಶನ ಬಳಿಕ ಮಾತನಾಡಿದ ಸಿದ್ದರಾಮಯ್ಯ, “ಸೋಮವಾರ ಸಂಜೆವರೆಗೆ ಪ್ರಚಾರ ಮಾಡಿದ್ದೇವೆ. ಈಗ ನಾನು ಹಾಗೂ ಶಿವಕುಮಾರ್ ಅವರು ಚಾಮುಂಡಿ ತಾಯಿ ಆಶೀರ್ವಾದ ಪಡೆದಿದ್ದೇವೆ. ಜನರು ಕೂಡ ನಮಗೆ ಆಶೀರ್ವಾದ ಮಾಡುವ ಆಶಯ ಹೊಂದಿದ್ದೇವೆ. ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲುವ ಆಶಯವಿದೆ. ನಮಗೆ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸುವ ಶಕ್ತಿ ಕೊಡು ತಾಯಿ ಎಂದು ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿ: Karnataka Elections : ಹೆಲಿಕಾಪ್ಟರ್‌ನಲ್ಲೇ ಡಿಕೆಶಿ ಟೆಂಪಲ್ ರನ್; ದೇವರ ದರ್ಶನದ ಜತೆ ಪ್ರಚಾರದ ಅಬ್ಬರ
ಭಕ್ತಿಪೂರ್ವಕ ಪ್ರಾರ್ಥನೆ: ಡಿಕೆಶಿ
“ನಾಡಿನ ಒಳಿತಿಗಾಗಿ ಚಾಮುಂಡಿ ತಾಯಿ ಬಳಿ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದರು. “ಜನರ ದುಃಖವನ್ನು ದೂರ ಮಾಡಿ ಎಂಬುದಾಗಿ ಬೇಡಿಕೊಂಡಿದ್ದೇವೆ. ಜನರಿಗೆ ದುಃಖ ನೀಡುವ ಸರ್ಕಾರ ರಾಜ್ಯದಲ್ಲಿದೆ. ಜನರ ದುಃಖ ದೂರ ಆಗಬೇಕು. ಜನರು ಕೂಡ ಬದಲಾವಣೆ ಬಯಸುತ್ತಿದ್ದಾರೆ. ನಾಡನ್ನು ಸುಭೀಕ್ಷವಾಗಿ ಇಡು ತಾಯಿ ಎಂದು ಪ್ರಾರ್ಥನೆ ಮಾಡಿದ್ದೇವೆ. ದೇವಿಯ ಸನ್ನಿಧಾನಲ್ಲಿ ನಿಂತು ಹೇಳುತ್ತಿದ್ದೇನೆ. ನಾವು ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ” ಎಂದು ತಿಳಿಸಿದರು.