ಬೆಳಗಾವಿ: ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ (Karnataka Election) ಸೋಮವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರದೆ ಇರುವುದು ಸಮಾವೇಶದಲ್ಲೇ ಚರ್ಚೆಗೆ ಕಾರಣವಾಯಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತ್ತೀಚೆಗೆ ಕಾಂಗ್ರೆಸ್‌ಗೆ ಬಂದ ಲಕ್ಷ್ಮಣ ಸವದಿ (Laxmana Savadi) ಅವರಿಬ್ಬರೂ ಜನ ಕಡಿಮೆ ಆಯಿತು ಎನ್ನುವುದನ್ನು ಒಪ್ಪಿಕೊಂಡರು ಮತ್ತು ಅದಕ್ಕೆ ಕಾರಣಗಳನ್ನು ಕೂಡಾ ವಿಶ್ಲೇಷಿಸಿದರು. ಗೋಕಾಕನ ಚನ್ನಬಸವೇಶ್ವರ ಕಾಲೇಜು ಮೈದಾನದಲ್ಲಿ ಈ ಸಮಾವೇಶ ನಡೆದಿತ್ತು.
ಸಾಮಾನ್ಯವಾಗಿ ಸಿದ್ದರಾಮಯ್ಯ (Siddaramaiah) ಅವರು ಭಾಗವಹಿಸುವ ಸಮಾವೇಶಗಳಲ್ಲಿ 50 ಸಾವಿರದಿಂದ ಒಂದು ಲಕ್ಷದವರೆಗೆ ಜನ ಸೇರುತ್ತಾರೆ. ಆದರೆ, ಗೋಕಾಕದಲ್ಲಿ ಸೇರಿದ್ದು ಎರಡರಿಂದ ಮೂರು ಸಾವಿರ ಜನರು ಮಾತ್ರ ಸೇರಿದ್ದರು. ಇದಕ್ಕೆ ಕಾರಣ ಏನು ಎನ್ನುವುದನ್ನು ಲಕ್ಷ್ಮಣ ಸವದಿ ಅವರೇ ವಿಶ್ಲೇಷಿಸಿದರು. ಗೋಕಾಕದಲ್ಲಿ ಮಹಾಂತೇಶ ಕಡಾಡಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ, ಬಿಜೆಪಿಯಿಂದ ಸ್ಪರ್ಧಿಸಿರುವವರು ರಮೇಶ್ ಜಾರಕಿಹೊಳಿ. ರಮೇಶ್ ಜಾರಕಿಹೊಳಿ (Ramesh Jarakiholi) ಅವರ ಭಯದಿಂದ ಸಮಾವೇಶಕ್ಕೆ ಜನರು ಬಂದಿಲ್ಲ ಎನ್ನುವುದು ಕಾಂಗ್ರಸ್ ನಾಯಕರ ವಿವರಣೆ.
ಜನ ಯಾಕೆ ಬಂದಿಲ್ಲ ಅಂದರೆ, ಲಕ್ಷ್ಮಣ ಸವದಿ ಹೇಳಿದ್ದೇನು?
ʻʻಗೋಕಾಕದಲ್ಲಿ ಕಡಿಮೆ ಜನ ಸೇರಿದ್ದಾರೆ ಯಾಕೆ ಅಂತ ನಿಮಗೆ ಡೌಟ್ ಬಂದಿರಬಹುದು ಸಿದ್ದರಾಮಯ್ಯನವರೆ, ನೀವು ಹೋದಲ್ಲೆಲ್ಲ 50 ಸಾವಿರ ಲಕ್ಷ ಜನ ಸೇರ್ತಾರೆ, ಇಲ್ಯಾಕೆ ಇಷ್ಟು ಜನ ಕಡಿಮೆ ಇದಾರೆ ಅಂತ ನಿಮಗೆ ಪ್ರಶ್ನೆ ಬಂದಿರಬಹುದು. ಇಲ್ಲಿ ಸೇರಿರುವಂತವರು ನಾವೆಲ್ಲ ರೈತರು, ಜೋಳದ ರಾಶಿ ಮಾಡ್ತೀವಿ. ನಾವು ಜೋಳವನ್ನು ಮೂರು ಥರ ವಿಂಗಡಣೆ ಮಾಡುತ್ತೇವೆ. ಬೀಜದ ತೆನೆ ಒಂದೇ ಮಾಡ್ತೀವಿ, ಮಾರಾಟ ಮಾಡುವ ತೆನೆಗಳನ್ನು ಒಂದೆಡೆ ಮಾಡ್ತೀವಿ, ಕೆಲವು ಕೆಟ್ಟ ತೆನೆಗಳನ್ನು ಹೊರಗೆ ಇಡ್ತೀವಿ. ಅವು ರಾಶಿಯನ್ನೇ ಕೆಡಿಸುತ್ತವೆ. ಇಲ್ಲಿಗೆ ಬಂದ ಜನ ಬೀಜದ ತೆನೆ ಇದ್ದಹಾಗೆ. ಸಿದ್ದರಾಮಯ್ಯನವರೇ ಇವತ್ತು ನೀವು ಡೊಳ್ಳು ಬಾರಿಸುವ ಮೂಲಕ ಬೀಜ ಬಿತ್ತಿದ್ದೀರಿ. 10ನೇ ತಾರೀಕಿನಂದು ಒಂದೊಂದು ಕಾಳು ಒಂದೊಂದು ತೆನೆಯಾಗಿ ಲಕ್ಷಾಂತರ ಕಾಳುಗಳಾಗುತ್ತವೆ ನೋಡ್ತಾ ಇರಿʼʼ ಎಂದು ಸವದಿ ಹೇಳಿದರು.
ʻʻಲಕ್ಷ್ಮಣ ಸವದಿಯವರೇ ನೀವು ಗೋಕಾಕಕ್ಕೆ ಬರ್ತಿರೇನು ಅಂತ ಜನ ನನಗೂ ಕೇಳಿದ್ರು, ಯಾಕಪ್ಪಾ.. ಗೋಕಾಕಕ್ಕೆ ಬರಬೇಕಾದ್ರೆ ಪಾಸ್‌ಪೋರ್ಟ್ ತೆಗೀಬೇಕಾ ಅಂತ ಕೇಳಿದೆ. ಗೋಕಾಕ ನಮ್ಮ ಜಿಲ್ಲೆಯಲ್ಲಿಯೇ ಇದೆಯಲ್ವಾ? ಅಣ್ಣಾವ್ರು (ರಮೇಶ್ ಜಾರಕಿಹೊಳಿ) ಅವರು ಅಥಣಿಗೆ ಹೋಗಿ ಒಂದು ಮನೆ ಬಾಡಿಗೆಗೆ ತೆಗೆದುಕೊಂಡು ನಿನ್ನ ಸೋಲಿಸಿ ಬರ್ತೀನಿ ಎಂದು ಹೇಳಿದ್ದಾರೆ. ಅದಕ್ಕೆ ನಾನು ʻಅಣ್ಣ ನೀನು ಬಾಡಿಗೆ ಮನೆ ತೆಗೆದುಕೊಳ್ಳುವುದು ಬೇಡ. ನನ್ನ ಮನೆಯೇ ಅರ್ಧ ಖಾಲಿ ಇದೆ. ನಿನ್ನ ಊಟ, ತಿಂಡಿ, ಚಾ, ಪಾನಿ ಎಲ್ಲ ನಂದʼʼ ಎಂದು ಹೇಳಿದ್ದೇನೆ ಎಂದು ಲಕ್ಷ್ಮಣ ಸವದಿ ಹೇಳಿದರು.
ʻʻರಮೇಶ್ ಅಣ್ಣ ಅವರು ಅರ್ಧ ದಿವಸ ಅಥಣಿಯಲ್ಲಿರ್ತಾರಂತೆ, ಅರ್ಧ ದಿವಸ ಬೆಳಗಾವಿ ಗ್ರಾಮೀಣದಲ್ಲಿ ಇರ್ತಾರಂತೆ. ಅಲ್ಲಿ ಅರ್ಧ ಇಲ್ಲಿ ಅರ್ಧ ಆದರೆ ಚಲೋನೆ ಆಯ್ತಲ್ಲ. ಇಲ್ಲಿ ಯಾರೂ ನಿಮ್ಮನ್ನು (ಗೋಕಾಕ ಕ್ಷೇತ್ರಕ್ಕೆ) ಹೇಳೋರೂ ಇಲ್ಲ ಕೇಳೋರೂ ಇಲ್ಲʼʼ ಎಂದರು. ʻʻಇವತ್ತು ಬಂದಿರುವ ನೀವೆಲ್ಲ ಬೀಜದ ಕಾಳುಗಳು. ನೀವು ಇವತ್ತು ಬೀಜ ಬಿತ್ತಿ ೧೩ನೇ ತಾರೀಕಿಗೆ ಲಕ್ಷ ಲಕ್ಷ ಆಗಿ ಕಾಳು (ಮತ) ಹೊರಬರಬೇಕು. ಆ ಕೆಲಸ ಮಾಡಿʼʼ ಎಂದರು ಸವದಿ.
ಬಿಜೆಪಿಗೆ ವಿನಾಶ ಕಾಲೇ ವಿಪರೀತ ಬುದ್ಧಿ!
ʻʻಸಿದ್ದರಾಮಯ್ಯನವರೇ ಒಂದೊಂದು ಪಾರ್ಟಿಗೆ ಒಂದೊಂದು ಸಲ ಶನಿ ಕಾಟ ಶುರುವಾಗುತ್ತದೆ. ಅದಕ್ಕೆ ವಿನಾಶ ಕಾಲೇ ವಿಪರೀತ ಬುದ್ಧಿ ಅಂತಾರೆ. ಒಮ್ಮೊಮ್ಮೆ ಕೆಟ್ಟ ಕಾಲ ಬಂತು ಅಂದ್ರೆ ಅದು ಎಲ್ಲವನ್ನೂ ಮಾಡಿಸುತ್ತದೆ. ಈ ಬಾರಿ ಅವರೇ ನಿರ್ಣಯ ಮಾಡಿದ್ದಾರೆ ನಾವು 45ರಿಂದ 50 ಜನ ಆರಿಸಿ ಬರೋಣ ಅಂತ, ಕಾಂಗ್ರೆಸ್ ಪಕ್ಷದವರನ್ನು ಟೀಕೆ ಮಾಡಿಕೊಂಡು ಕೂರೋಣ ಅಂತ ತೀರ್ಮಾನ ಮಾಡಿದ್ದಾರೆ. ಆ ತೀರ್ಮಾನದಿಂದಲೇ ಅನೇಕ ಜನರನ್ನು ಹೊರಗೆ ದಬ್ಬುವ ಕೆಲಸ ಮಾಡಿದ್ರುʼʼ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು ಲಕ್ಷ್ಮಣ ಸವದಿ.
ʻʻಅವರಿಗೆ ತಲೇಲಿ ಏನ್ ಬಂತೋ ಗೊತ್ತಿಲ್ಲ. ಲಕ್ಷ್ಮಣ ಸವದಿಯವರನ್ನE ಹೊರಗೆ ದಬ್ಬಿದರು, ಗೋಕಾಕದ ಜನರ ಮುಂದೆ ಪ್ರಾರ್ಥನೆ ಮಾಡುತ್ತೇನೆ. ಮೇ 10ರಂದು ಇಲ್ಲಿಗೆ ಬಂದ ನೀವು ನ್ಯಾಯಾಧೀಶರಾಗಿ. ನಾನು, ಸಿದ್ದರಾಮಯ್ಯನವರು ನ್ಯಾಯದ ಪರವಾಗಿ ವಾದ ಮಂಡನೆ ಮಾಡ್ತೀವಿ. ನಮ್ಮ ಹಿರಿಯ ವಕೀಲರು ಸಿದ್ದರಾಮಯ್ಯನವರು, ನಾವೆಲ್ಲ ಜ್ಯೂನಿಯರ್ ವಕೀಲರು, ನಮ್ಮ ಕಕ್ಷಿದಾರರು ಮಹಾಂತೇಶ ಕಡಾಡಿʼʼ ಎಂದರು ಸವದಿ.
ಭಯ ಬಿಟ್ಟು ಆಶೀರ್ವಾದ ಮಾಡಿ ಎಂದ ಸಿದ್ದರಾಮಯ್ಯ
ʻʻಸವದಿಯವರು ಹೇಳಿದ್ರು ಸಿದ್ದರಾಮಯ್ಯ ಹೋದ ಕಡೆ ಎಲ್ಲಾ 25 ಸಾವಿರ ಜನ, 30 ಸಾವಿರ ಜನ ಸೇರ್ತಾರೆ ಅಂತ. ಗೋಕಾಕನಲ್ಲಿ ಕಡಿಮೆ ಜನ ಸೇರಿದ್ದಾರೆ, ಆದರೆ, ಸೇರಿದ್ದರೆ ಬೀಜದ ಕಾಳುಗಳು ಎಂದು ಹೇಳಿದರು. ಬೀಜದ ಕಾಳು ಬಿತ್ತನೆ ಮಾಡಿದ್ರೆ ಲಕ್ಷಾಂತರ ಕಾಳು ಹುಟ್ಟುತ್ತವೆ. ಗೋಕಾಕದ ಜನ ಬದಲಾವಣೆ ಮಾಡಬೇಕು ಅಂತ ತೀರ್ಮಾನ ಮಾಡಿದ್ದಾರೆ. ರಾಜ್ಯದ ಜನರೂ ಸಹ ಬದಲಾವಣೆ ಬಯಸಿದ್ದಾರೆʼʼ ಎಂದು ಹೇಳಿದರು.
ʻʻಈ ಸಲ ಮಹಾಂತೇಶ ಕಡಾಡಿ ಅವರನ್ನು ಗೆಲ್ಲಿಸಿ, ಭಯ ಬಿಟ್ಟು ಆಶೀರ್ವಾದ ಮಾಡಿ, ನಿಮಗೆ ನಾವು ರಕ್ಷಣೆ ಕೊಡ್ತೀವಿʼʼ ಎಂದರು ಸಿದ್ದರಾಮಯ್ಯ.
ಇದನ್ನೂ ಓದಿ Karnataka Election : ನಾನು ಬಸವ ಅನುಯಾಯಿ; ಲಿಂಗಾಯತ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಸಿದ್ದರಾಮಯ್ಯ