ರಾಯಚೂರು: ಒಂದು ಕಡೆ ಹಾಸನದಲ್ಲಿ ಜೆಡಿಎಸ್ ನಾಯಕರು ದೊಡ್ಡ ಮಟ್ಟದ ಸಮಾವೇಶ ಏರ್ಪಡಿಸಿ ಅಭ್ಯರ್ಥಿ ಘೋಷಣೆಯ ರಣತಂತ್ರ ರೂಪಿಸಿರುವ ಮಧ್ಯೆಯೇ ಅಲ್ಲಿ ಜೆಡಿಎಸ್ ಶಾಸಕರಾಗಿರುವ ಕೆ.ಎಂ. ಶಿವಲಿಂಗೇಗೌಡ ಅವರು ಕಾಂಗ್ರೆಸ್ ಸೇರಲಿದ್ದಾರೆ (Karnataka Election) ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ರಾಯಚೂರಿನ ಸಿಂಧನೂರು ಪಟ್ಟಣದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ʻʻಶಿವಲಿಂಗೇಗೌಡ್ರು 100% ಕಾಂಗ್ರೆಸ್ ಗೆ ಬರ್ತಾರೆ. ವಿಧಾನಮಂಡಲ ಅಧಿವೇಶನ ಮುಗಿದ ಮೇಲೆ ಯಾವಾಗ ಬೇಕಾದರೂ ಸೇರಲಿದ್ದಾರೆʼʼ ಎಂದು ಹೇಳಿದ್ದಾರೆ.
ದುಡ್ಡು ಇದೆ ಅಂತ ಪಕ್ಷ ಕಟ್ಟಿದ್ದಾರೆ ಪಾಪ!
ಜನಾರ್ಧನ ರೆಡ್ಡಿ ಅವರು ಹೊಸ ಪಕ್ಷ ಕಟ್ಟಿ ಮುಸ್ಲಿಂ ಸಮುದಾಯವನ್ನು ಓಲೈಸುತ್ತಿದ್ದು, ಇದರಿಂದ ಕಾಂಗ್ರೆಸ್ ಆಗಬಹುದಾದ ಪರಿಣಾಮಗಳೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʻʻಹೊಸ ಪಕ್ಷ ಕಟ್ಟಿದೋರ್ಯಾರು ಉಳಿದಿಲ್ಲ. ಪಾಪ ಜನಾರ್ಧನ ರೆಡ್ಡಿ ದುಡ್ಡು ಇದೆ ಅಂತ ಪಕ್ಷ ಕಟ್ಟಿದ್ದಾರೆ. ರಾಮುಲು, ಬಂಗಾರಪ್ಪ, ಯಡಿಯೂರಪ್ಪ ಪಕ್ಷ ಕಟ್ಟಿದ್ರು. ಎಲ್ಲಿ ಹೋದವು ಪಕ್ಷಗಳುʼʼ ಎಂದು ಪ್ರಶ್ನಿಸಿದರು.
೧೫ ದಿನದಲ್ಲಿ ಮೊದಲ ಪಟ್ಟಿ ರಿಲೀಸ್
ʻʻಕಾಂಗ್ರೆಸ್‌ನ ಮೊದಲ ಪಟ್ಟಿ ೧೫ ದಿನದಲ್ಲಿ ರಿಲೀಸ್ ಆಗಲಿದೆ. ನಾವು ಕನಿಷ್ಠ ೧೩೦, ಗರಿಷ್ಠ ೧೫೦ ಸೀಟು ಗೆಲ್ತೇವೆ. ನಾನು ಬಾದಾಮಿ, ವರುಣಾ, ಕೋಲಾರದಲ್ಲಿ ಎಲ್ಲಿ ನಿಂತರೂ ಗೆಲ್ತೀನಿ. ಬಾದಾಮಿ ದೂರ ಆಗ್ತಿತ್ತು. ಕೋಲಾರ ಹತ್ರ ಅಂತ ಅಲ್ಲಿರೋ ಕಾರ್ಯಕರ್ತರು ಕರೆದ್ರು, ಅಲ್ಲಿ ನಿಲ್ಲೋಕೆ ತೀರ್ಮಾನಿಸಿದ್ದೀನಿ, ಹೈಕಮಾಂಡ್ ತೀರ್ಮಾನ ಕೊಟ್ರೆ ಕೋಲಾರದಲ್ಲೇ ಸ್ಪರ್ಧೆʼʼ ಎಂದರು ಸಿದ್ದರಾಮಯ್ಯ.
ಸಂಸದ ಡಿಕೆ ಸುರೇಶ್ ರಾಜ್ಯ ರಾಜಕೀಯಕ್ಕೆ ಎಂಟ್ರಿ ವಿಚಾರ ನನಗೆ ಗೊತ್ತಿಲ್ಲ. ನಾನು ಅವರ ಜತೆ ಮಾತನಾಡಿಲ್ಲ ಎಂದ ಸಿದ್ದರಾಮಯ್ಯ, ನಳಿನ್ ಕುಮಾರ್ ಒಬ್ಬ ವಿದೂಷಕ ಎಂದು ವ್ಯಂಗ್ಯ ಮಾಡಿದರು.
ಬಿಜೆಪಿ ಜತೆ ಅಧಿಕಾರ ಮಾಡಿದ್ಯಾರು? ಮೋಸ ಮಾಡಿದ್ಯಾರು?
ಕಾಂಗ್ರೆಸ್ ಪಕ್ಷ ಬಿಜೆಪಿಯ ಬಿ ಟೀಮ್ ಎಂಬ ಎಚ್.ಡಿ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿದ ಸಿದ್ದರಾಮಯ್ಯ, ʻʻ2006ರಲ್ಲಿ 20 ತಿಂಗಳು ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದ್ಯಾರು? ಬಿಜೆಪಿಗೆ ಮೋಸ ಮಾಡಿದ್ಯಾರು..? ಯಡಿಯೂರಪ್ಪನಿಗೆ ಮೋಸ ಮಾಡಿದ್ದು ಇದೇ ಕುಮಾರಸ್ವಾಮಿ. ನಿಜ ಅಂದ್ರೆ ಕುಮಾರಸ್ವಾಮಿ ಆವತ್ತು ಬಿಜೆಪಿ ಜೊತೆ ಸರ್ಕಾರ ಮಾಡದೇ ಇದ್ದರೇ ಬಿಜೆಪಿ ಅಧಿಕಾರಕ್ಕೆ ಬರ್ತಿರ್ಲಿಲ್ಲ.. ರಾಜ್ಯದಲ್ಲಿ ಮನುವಾದಿಗಳ ಸರ್ಕಾರ ಬರಲು ಕುಮಾರಸ್ವಾಮಿ ಅವರೇ ಕಾರಣʼʼ ಎಂದರು ಸಿದ್ದರಾಮಯ್ಯ. ʻʻನೀನು ಬಿಜೆಪಿ ಜೊತೆ ಸರ್ಕಾರ ಮಾಡಿ, ಈಗ ಕಾಂಗ್ರೆಸ್, ಬಿಜೆಪಿ ಬಿ ಟೀಂ ಅಂತೀಯಲ್ಲಪ್ಪ ನಾಚಿಕೆಯಾಗಲ್ವ ಅಂತ ಹೋಗಿ ಕುಮಾರಸ್ವಾಮಿಗೆ ಕೇಳಿʼʼ ಎಂದು ಪತ್ರಕರ್ತರಿಗೇ ಸಲಹೆ ಕೊಟ್ಟರು ಸಿದ್ದರಾಮಯ್ಯ.
ಶಿವಲಿಂಗೇ ಗೌಡರು ಪಕ್ಷದಲ್ಲೇ ಇದ್ದರೆ ಒಳ್ಳೆಯದಿತ್ತು ಎಂದ ನಿಖಿಲ್
ಕೋಲಾರದಲ್ಲಿ ಮಾತನಾಡಿದ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ, ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಹಾಸನ ಮತ್ತು ಅರಸೀಕೆರೆ ಕ್ಷೇತ್ರಕ್ಕೆ ಸಂಬಂಧಿಸಿದ ಗೊಂದಲ ಬಗೆಹರಿಯಲಿದೆ ಎಂದರು. ಶಿವಲಿಂಗೇಗೌಡರು ಪಕ್ಷದಲ್ಲಿ ಉಳಿದುಕೊಂಡರೆ ಬಹಳ ಸಂತೋಷ, ಅದು ಅವರ ವೈಯಕ್ತಿಕ ವಿಚಾರ ಎಂದರು.
ಇದನ್ನೂ ಓದಿ : JDS Politics: ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ ಜೆಡಿಎಸ್‌ನಿಂದ ಔಟ್; ಎ.ಮಂಜು ಇನ್