Site icon Vistara News

Karnataka Election : ಗೆಲ್ಲಬಲ್ಲ ಪಕ್ಷೇತರರಿಗೆ ಕಾಂಗ್ರೆಸ್‌ ಗಾಳ; ಫೀಲ್ಡಿಗೆ ಇಳಿದ ಸಿದ್ದರಾಮಯ್ಯ

karnataka election siddaramaiah tries to woo winnable independent candidates

karnataka election siddaramaiah tries to woo winnable independent candidates

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023) ಫಲಿತಾಂಶ ಶನಿವಾರ (ಮೇ 13) ಪ್ರಕಟವಾಗಲಿದೆ. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು (Exit poll) ಭವಿಷ್ಯ ನುಡಿದಿವೆ. ಅದರ ನಡುವೆಯೆ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ತಾವೇ ಬಹುಮತದ ಸರ್ಕಾರ ರಚಿಸುವುದಾಗಿ ಹೇಳಿಕೊಂಡಿವೆ. ಇದರ ನಡುವೆಯೇ ಎರಡೂ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಬಲ್ಲ ಪಕ್ಷೇತರ ಅಭ್ಯರ್ಥಿಗಳ ಜತೆ ಸಂಪರ್ಕ ಸಾಧಿಸುತ್ತಿವೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಸ್ವಲ್ಪ ಮುಂದಿದ್ದಂತೆ ಕಾಣುತ್ತಿದೆ. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಪಕ್ಷೇತರರ ಜತೆಗೆ ಮಾತನಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜವಾಬ್ದಾರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Former CM Siddaramaiah) ಅವರಿಗೆ ವಹಿಸಿದ್ದಾರೆ. ಅವರು ಈ ಜವಾಬ್ದಾರಿಯನ್ನು ಹಲವು ಹಿರಿಯ ಕೈ ನಾಯಕರಿಗೆ ಹಂಚಿದ್ದು ಕೆಲವರ ಜತೆ ತಾವೇ ಖುದ್ದಾಗಿ ಮಾತನಾಡಿದ್ದಾರೆ. ಎಲ್ಲರನ್ನೂ ಸಂಪರ್ಕಿಸಿ ತಮ್ಮ ಕಡೆಗೆ ಸೆಳೆಯುವ ಪ್ರಯತ್ನ ಜೋರಾಗಿ ನಡೆಯುತ್ತಿದೆ.

ಲತಾ ಮಲ್ಲಿಕಾರ್ಜನ ಜತೆ ಸಿದ್ದರಾಮಯ್ಯ ಕರೆ

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಲತಾ ಮಲ್ಲಿಕಾರ್ಜುನ ಅವರು ಗೆಲುವಿನ ಸಾಧ್ಯತೆಯನ್ನು ಹೊಂದಿದ್ದಾರೆ ಎಂಬ ಅಭಿಪ್ರಾಯವಿದೆ. ಇಲ್ಲಿ ಬಿಜೆಪಿಯಿಂದ ಕರುಣಾಕರ ರೆಡ್ಡಿ, ಕಾಂಗ್ರೆಸ್‌ನಿಂದ ಕೊಟ್ರೇಶ್‌ ಸ್ಪರ್ಧೆಯಲ್ಲಿದ್ದಾರೆ. ಆದರೆ, ಮಾಜಿ ಸಚಿವರಾಗಿರುವ ದಿ. ಎಂ.ಪಿ. ಪ್ರಕಾಶ್‌ ಅವರ ಮಗಳಾಗಿದ್ದು, ಭಾರಿ ಹವಾ ಸೃಷ್ಟಿಯಾಗಿದ್ದಾರೆ. ಲತಾ ಮಲ್ಲಿಕಾರ್ಜುನಪ್ಪ ಅವರಿಗೆ ಸ್ವತಃ ಸಿದ್ದರಾಮಯ್ಯ ಅವರೇ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.

ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ರಾಮಕೃಷ್ಣ ದೊಡ್ಡಮನಿ ಅವರನ್ನೂ ಸಿದ್ದರಾಮಯ್ಯ ಸಂಪರ್ಕಿಸಿದ್ದಾರೆ. ಅರಕಲಗೂಡು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೃಷ್ಣೇ ಗೌಡ ಜತೆ ಸಿದ್ದರಾಮಯ್ಯ ಮಾತುಕತೆ ನಡೆದಿದದ್ದಾರೆ. ತಮ್ಮ ನಿವಾಸದಿಂದ ಕರೆ ಮಾಡಿರುವ ಸಿದ್ದರಾಮಯ್ಯ ಅವರು ಉಭಯ ಕುಶಲೋಪರಿ ವಿಚಾರಿಸಿದರು. ಹೆಚ್ಚಿನ ಮಾತೇನೂ ಹೇಳದೆ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದರು.

ಈ ನಡುವೆ, ಅರಕಲಗೂಡಿನ ಕೃಷ್ಣೆ ಗೌಡ ಅವರ ಜತೆ ನಿರಂತರ ಸಂಪರ್ಕದಲ್ಲಿರಲು ಎಚ್ಎಂ ರೇವಣ್ಣ ಅವರಿಗೆ ಸೂಚನೆ ನೀಡಿದ್ದಾರೆ.

ಈ ನಡುವೆ ಪುಲಿಕೇಶಿ ನಗರದಲ್ಲಿ ಕಾಂಗ್ರೆಸ್‌ ಟಿಕೆಟ್‌ ವಂಚಿತರಾಗಿ ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಮರಳಿ ಪಕ್ಷದ ಕಡೆಗೆ ಸೆಳೆಯುವ ಪ್ರಯತ್ನವನ್ನೂ ಕಾಂಗ್ರೆಸ್‌ ಪಕ್ಷ ನಡೆಸಿದೆ. ಅಖಂಡ ಅವರನ್ನು ಮನವೊಲಿಸುವ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರು ಜಮೀರ್‌ ಅಹಮದ್‌ ಖಾನ್‌ ಅವರಿಗೆ ವಹಿಸಿದ್ದಾರೆ.

ಕುಂದಗೋಳದ ಪಕ್ಷೇತರ ಚಿಕ್ಕನಗೌಡರ ಜತೆ ಮಾತುಕತೆ

ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರನ್ನು ಕೂಡಾ ಕಾಂಗ್ರೆಸ್‌ ಮುಖಂಡರು ಸಂಪರ್ಕಿಸಿದ್ದಾರೆ. ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಮ್.ಆರ್. ಪಾಟೀಲ್ ಮತ್ತು ಪಕ್ಷೇತರ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡ್ರ ನಡುವೆ ನೇರಾನೇರ ಫೈಟ್ ಇದೆ.

ಚಿಕ್ಕನಗೌಡರ ಗೆದ್ದರೆ ಕಾಂಗ್ರೆಸ್‌ ಬೆಂಬಲಿಸುವಂತೆ ಮನವೊಲಿಕೆಗೆ ಯತ್ನ ಆರಂಭಿಸಲಾಗಿದೆ. ಚಿಕ್ಕನಗೌಡ ಅವರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಆಪ್ತರಾಗಿದ್ದಾರೆ. ಅವರು ಮೂಲತಃ ಬಿಜೆಪಿ ನಾಯಕರಾಗಿದ್ದು, ಪಕ್ಷ ಟಿಕೆಟ್‌ ಕೊಡದ ಹಿನ್ನೆಲೆಯಲ್ಲಿ ಬಂಡುಕೋರನಾಗಿ ಕಣಕ್ಕೆ ಇಳಿದಿದ್ದಾರೆ.

ಈ ನಡುವೆ ಕುಂದಗೋಳ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಸ್ಪರ್ಧೆ ಅಷ್ಟು ಜೋರಾಗಿಲ್ಲ ಎಂದು ತಿಳಿಯುತ್ತಿದ್ದಂತೆಯೇ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಚಿಕ್ಕನ ಗೌಡರ ಪರವಾಗಿ ಆಂತರಿಕ ಪ್ರಚಾರ ಆರಂಭಿಸಿದ್ದರು.

ಇದನ್ನೂ ಓದಿ : Karnataka Election 2023 : ಮೈತ್ರಿ ನಿರ್ಧಾರ ಫೈನಲ್‌ ಆಗಿದೆ ಎಂದ ಜೆಡಿಎಸ್‌; ಆಯ್ಕೆ ಕಾಂಗ್ರೆಸ್ಸೋ, ಬಿಜೆಪಿಯೋ?

Exit mobile version