Site icon Vistara News

Karnataka Election: ಸಿದ್ದರಾಮಯ್ಯ ಮಾಡಿದ ಎರಡು ಟ್ವೀಟ್‌ಗೆ ಬಿಜೆಪಿ ಬೆಂಬಲಿಗರಲ್ಲಿ ಶಾಕ್‌!: ಏನು ಕಾರಣ?

Siddaramaiah in a press conference in Bengaluru.

ಬೆಂಗಳೂರು: ಕೇಂದ್ರ ಸರ್ಕಾರವನ್ನು, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಮಾಜಿ ಸಿದ್ದರಾಮಯ್ಯ ಮಾಡಿರುವ ಎರಡು ಟ್ವೀಟ್‌ ಬಿಜೆಪಿ ವಲಯಕ್ಕೆ ಶಾಕ್‌ ನೀಡಿರುವುದಷ್ಟೆ ಅಲ್ಲದೆ ಗೊಂದಲಕ್ಕೆ ಈಡುಮಾಡಿದೆ.

ಸುಡಾನ್‌ನಲ್ಲಿ ಅಲ್ಲಿನ ಸೇನೆ ಹಾಗೂ ಅರೆ ಸೇನೆ ನಡುವೆ ಕಾಳಗ ನಡೆಯುತ್ತಿದೆ. ಈಗಾಗಲೆ ಒಬ್ಬ ಭಾರತೀಯ ಈ ಕಾಳಗದಲ್ಲಿ ನಿಧನರಾಗಿದ್ದಾರೆ. ಕರ್ನಾಟಕದ ಹಕ್ಕಿಪಿಕ್ಕಿ ಸುಮುದಾಯದ ಅನೇಕರು ಅಲ್ಲಿ ಅನ್ನ ನೀರು ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಏಪ್ರಿಲ್‌ 22ರಂದು ಟ್ವೀಟ್‌ ಮಾಡಿದ್ದ ಸಿದ್ದರಾಮಯ್ಯ, “ನಮಗೆ ತಿನ್ನುವುದಕ್ಕೆ ಏನೂ ಇಲ್ಲ ನಿಮಗೆ ಏನು ಮಾಡಲಿಕ್ಕೆ ಸಾಧ್ಯ? ನೀವು ಇರುವ ಸ್ಥಳದಲ್ಲಿಯೇ ಬಾಗಿಲು ಹಾಕಿಕೊಂಡು ಇರಿ” -ಇದು ಕಷ್ಟದಲ್ಲಿರುವ ನಮ್ಮ ಕನ್ನಡಿಗರ ಗೋಳಿಗೆ ಸುಡಾನ್‌ನ ರಾಯಭಾರ ಕಚೇರಿಯ ಪ್ರತಿಕ್ರಿಯೆ. ವಿದೇಶಾಂಗ ಸಚಿವೆ ಡಾ. ಎಸ್‌. ಜೈಶಂಕರ್‌ ಇದನ್ನು ಕೇಳಿ ಗಾಬರಿಯಾಗಲಿಲ್ಲವೇ?”

“ಸುಡಾನ್‌ನಲ್ಲಿ‌ ಕಳೆದ 8-10 ದಿನಗಳಿಂದ ನಮ್ಮ ಕನ್ನಡಿಗ ಹಕ್ಕಿಪಿಕ್ಕಿ ಜನಾಂಗದವರು ತಿನ್ನಲು ಅನ್ನ ಇಲ್ಲದೆ, ಕುಡಿಯಲು ನೀರಿಲ್ಲದೆ ನರಳಾಡುತ್ತಿದ್ದಾರೆ. ನಮ್ಮ ‘ವಿಶ್ವಗುರು’ ಪ್ರಧಾನಿ ನರೇಂದ್ರ ಮೋದಿಯವರು ಸೂಚನೆ -ಭರವಸೆಗಳಲ್ಲಿ ಕಾಲಕಳೆಯುತ್ತಿದ್ದಾರೆ. ಕನ್ನಡಿಗರ ರಕ್ಷಣೆಗೆ ಯಾರಿದ್ದಾರೆ?”

“ಸಿಎಂ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಚುನಾವಣೆಯ ಬುರುಡೆ ಭಾಷಣಗಳ ಮಧ್ಯೆ ಬಿಡುವಾದರೆ ಸುಡಾನ್‌ನಲ್ಲಿ‌ ಕಷ್ಟದಲ್ಲಿರುವ ಕನ್ನಡಿಗರ ಕಡೆ ಗಮನ ಕೊಡಿ. ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಈಶ್ವರಪ್ಪನವರಿಗೆ ಪೋನ್ ಮಾಡಲು ಇರುವಷ್ಟು ಪುರುಸೊತ್ತು ಕನ್ನಡಿಗರ ರಕ್ಷಣೆಗೆ ಇಲ್ಲವೇ? ಎಂದು ಕೇಳಿ” ಎಂದು ಮೂರು ಟ್ವೀಟ್‌ ಮಾಡಿದ್ದರು. ಇದರಲ್ಲಿ ಏನೂ ಆಶ್ಚರ್ಯ ಇರಲಿಲ್ಲ. ಎಂದಿನಂತೆ, ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಬೆಂಬಲಿಗರೂ ತುಸು ಟ್ರೋಲ್‌ ಮಾಡಿದ್ದರು. ಆದರೆ ಈಗ ಸಿದ್ದರಾಮಯ್ಯ ಸೋಮವಾರ ಹೊಸ ಟ್ವೀಟ್‌ ಮಾಡಿದ್ದಾರೆ.

ಜೈಶಂಕರ್‌ಗೆ ಧನ್ಯವಾದ
ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ʼಆಪರೇಷನ್‌ ಕಾವೇರಿʼ ಎಂಬ ಹೆಸರಿಟ್ಟಿದೆ. ಸೋಮವಾರ ಟ್ವೀಟ್‌ ಮಾಡಿದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಷನ್‌ ಕಾವೇರಿ ಜಾರಿಯಲ್ಲಿದೆ. ಈಗಾಗಲೆ 500 ಭಾರತೀಯರು ಸುಡಾನ್‌ ಬಂದರು ತಲುಪಿದ್ದಾರೆ. ಇನ್ನೂ ಅನೇಕರು ಆಗಮಿಸುತ್ತಿದ್ದಾರೆ. ಅವರನ್ನು ದೇಶಕ್ಕೆ ಕರೆತರಲು ನಮ್ಮ ಹಡಗುಗಳು ಹಾಗೂ ವಿಮಾನಗಳು ಸಿದ್ಧವಾಗಿವೆ. ನಮ್ಮೆಲ್ಲ ಸಹೋದರರಿಗೆ ಸಹಾಯ ಮಾಡಲು ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ.

ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಜನರನ್ನು ಮರಳಿ ಕರೆತರುತ್ತಿರುವುದಕ್ಕೆ ಧನ್ಯವಾದ. ಎಲ್ಲರೂ ಸುರಕ್ಷಿತವಾಗಿ ಮರಳುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. ಇಷ್ಟಕ್ಕೇ ಸುಮ್ಮನಾಗದೆ ಇನ್ನೊಂದು ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, “ಯುದ್ಧಗ್ರಸ್ತ ಸುಡಾನ್ ನಲ್ಲಿ ಕಷ್ಟದಲ್ಲಿ ಸಿಲುಕಿರುವ ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯದ ಬಂಧುಗಳನ್ನು ಭಾರತಕ್ಕೆ ಕರೆತರಲು ಕೇಂದ್ರದ ಬಿಜೆಪಿ ಸರ್ಕಾರ ನಡೆಸುತ್ತಿರುವ ಪ್ರಯತ್ನಕ್ಕೆ ಧನ್ಯವಾದಗಳು. ‘ಆಪರೇಷನ್ ಕಾವೇರಿ’ ಯಶಸ್ಸು ಕಾಣಲಿ, ನೊಂದ ಕುಟುಂಬಗಳು ಸುಖವಾಗಿ ಕರ್ನಾಟಕಕ್ಕೆ ಬರಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ. ಇದು ಅನೇಕರ ಅಚ್ಚರಿಗೆ ಕಾರಣವಾಗಿದೆ. ಅಲ್ಲಿನ ರಿಪ್ಲೈಗಳಲ್ಲೇ ಇದನ್ನು ಕಾಣಬಹುದು.

ನಿರಂತರವಾಗಿ ಈ ವಿಷಯದಲ್ಲಿ ಗಮನಹರಿಸುತ್ತಿರುವುದಕ್ಕೆ ಅನೇಕರು ಸಿದ್ದರಾಮಯ್ಯ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕೆಲವರು, “ರೀ ಸ್ವಾಮಿ, ಕೆಲಸ ಮಾಡೋಕೆ ಅವರಿಗೆ ಗೊತ್ತಿದೆ. ನಿಮ್ಮ ಅಧಿಕಪ್ರಸಂಗತನ ಬೇಡ” ಎಂದಿದ್ದಾರೆ. “ಅದಕ್ಕೆ ಹೇಳೋದು ಆಕಾಶ ನೋಡಿ ಉಗಿಬಾರ್ದು ಅಂತಾ, ಉಗುಳು ಉಗಿದೊರ ಮುಖದ ಮೇಲೆ ಬೀಳೋದು” ಎಂದು ಒಬ್ಬರು ಹೇಳಿದರೆ, “ಅಂಧಭಕ್ತರ ಹೊಟ್ಟೆ ಯಾಕೆ ಉರಿಸ್ತೀರಿ ಸಾರ್” ಎಂದು ಮತ್ತೊಬ್ಬರು ತಿಳಿಸಿದ್ದಾರೆ.

“ಅಲ್ಲಾ ತಾವು ಕೇಂದ್ರ ಸರ್ಕಾರವನ್ನ ಹೊಗಳಿದ್ದೀರಲ್ಲಾ ಇನ್ನು ನಿಮಗೆ ಈ ಕಾಂಗ್ರೆಸ್ಸಿಗರಿಂದ ಉಳಿಗಾಲವಿಲ್ಲಾ”, “ನಿಮ್ಮ ಅಭಿನಂದನೆಗೆ ಧನ್ಯವಾದಗಳು, ದಯವಿಟ್ಟು ಬಿಜೆಪಿ! ಗೆ ನಿಮ್ಮ ಮತ! ನೀಡಿ ಸಾರ್” ಎಂಬಂತಹ ಕಮೆಂಟ್‌ಗಳು ಕಾಣಿಸುತ್ತಿವೆ.

ಇದನ್ನೂ ಓದಿ: Operation Kaveri: ಸುಡಾನ್‌ನಲ್ಲಿನ ಭಾರತೀಯರ ಸ್ಥಳಾಂತರಕ್ಕೆ ‘ಆಪರೇಷನ್ ಕಾವೇರಿ’ ಶುರು, ಸಿದ್ದರಾಮಯ್ಯ ಧನ್ಯವಾದ

Exit mobile version