Site icon Vistara News

Karnataka Election : ಸಿದ್ದು ಕೋಲಾರದಲ್ಲಿ ನಿಲ್ಲೋದು ಡೌಟು; ಕೊನೆಗೆ ಸಾಬಣ್ಣನ ಕ್ಷೇತ್ರಕ್ಕೆ ಹೋಗಿ ಅಲ್ಲಾಹು ಅಕ್ಬರ್ ಅನ್ನಬೇಕು: ಈಶ್ವರಪ್ಪ

kseshwarappa siddaramaih ಕೆ.ಎಸ್.‌ ಈಶ್ವರಪ್ಪ ಸಿದ್ದರಾಮಯ್ಯ

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ (Karnataka Election) ಕೋಲಾರದಿಂದ ಸ್ಪರ್ಧೆ ಮಾಡುವ ಬಗ್ಗೆ ನನಗೆ ಅನುಮಾನವಿದೆ. ಕೊನೆಗೆ ಅವರು ಸಾಬಣ್ಣನ ಕ್ಷೇತ್ರಕ್ಕೆ ಹೋಗಿ ಅಲ್ಲಾಹು ಅಕ್ಬರ್ ಅನ್ನಬೇಕು ಎಂದು ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ವ್ಯಂಗ್ಯವಾಡುವ ಮೂಲಕ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಅವರನ್ನು ಮಾಜಿ ಕೇಂದ್ರ ಸಚಿವ ಕೆ.ಎಚ್‌. ಮುನಿಯಪ್ಪ ಸೋಲಿಸುವುದಿಲ್ಲ ಎಂದು ಆಣೆ ಮಾಡಲಿ ನೋಡೋಣ ಎಂದು ಈಶ್ವರಪ್ಪ ಸವಾಲು ಹಾಕಿದರು.

ಸಿದ್ದರಾಮಯ್ಯ ಅವರದ್ದು ಬೊಗಳೆ ಭಾಷಣವಾಗಿದೆ. ಚಾಮುಂಡಿಯಲ್ಲಿ ಸೋತರೂ, ಬಾದಾಮಿ ಜನರು ಗೆಲ್ಲಿಸಿದ್ದರು. ಈಗ ಬಾದಾಮಿ ಜನರಿಗೆ ಮೋಸ ಮಾಡಿ ಕೋಲಾರಕ್ಕೆ ಹೋಗ್ತೀರಾ? ಸಿದ್ದರಾಮಯ್ಯ ಮತ್ತೆ ಬಾದಾಮಿಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ನಾನು ಈ ಮೊದಲೇ ಹೇಳಿದ್ದೆ. ಈಗ ಕೋಲಾರದಲ್ಲಿ ಸ್ಪರ್ಧೆ ಮಾಡಲು ಹೋಗುತ್ತಿದ್ದಾರೆ. ಆಗ ಕೋಲಾರದಲ್ಲಿ ಮುನಿಯಪ್ಪ ಅವರ ಸೋಲಿಗೆ ಕಾರಣರಾಗಿದ್ದು, ಸಿದ್ದರಾಮಯ್ಯ ಶಿಷ್ಯರು. ಈಗ ಅವರನ್ನು ಸೋಲಿಸಿಲ್ಲ ಎಂದು ಮಾಜಿ ಸಚಿವ ರಮೇಶ್‌ ಕುಮಾರ್‌ ದೇವರ ಮೇಲೆ ಆಣೆ ಮಾಡಲಿ ನೋಡೋಣ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದರು.

ಇದನ್ನೂ ಓದಿ | Young man drowned | ಶರಾವತಿ ಹಿನ್ನೀರಿನಲ್ಲಿ ಸ್ನೇಹಿತನ ಬರ್ತ್‌ಡೇ ಪಾರ್ಟಿಗೆ ಹೋದ ಯುವಕ ನೀರುಪಾಲು

ರಮೇಶ್‌ ಕುಮಾರ್, ಸಿದ್ದರಾಮಯ್ಯ ಅವಳಿ ಜವಳಿ ತಾನೆ?‌ ಈಗ ಸಿದ್ದರಾಮಯ್ಯ ಬೇಕು ಅಂತ ಹೋಗ್ತಿದ್ದಾರೆ. ಆದರೆ, ಅವರು ಹೋದ ಸಭೆಯಲ್ಲಿ ರಮೇಶ್‌ ಯಾಕೆ ಬರಲಿಲ್ಲ? ಮುನಿಯಪ್ಪ ಬೆಂಬಲಿಗರು ಗೆಟೌಟ್ ಎನ್ನುತ್ತಾರೆ ಎಂಬ ಕಾರಣಕ್ಕೆ ಬರಲಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಅಲೆದಾಡುವ ಅಲೆಮಾರಿಯಾಗಿದ್ದಾರೆ. ಚಾಮುಂಡೇಶ್ವರಿ ಬೇಡ ಬಾದಾಮಿ ಹೋಗು, ಬಾದಾಮಿ ಬೇಡ ಕೋಲಾರಕ್ಕೆ ಹೋಗು ಎಂದಾಗಿರುವ ಅವರು, ಕೋಲಾರ ಬೇಡ ಅಂದರೆ ನಾಳೆ ಅವರ ಗತಿ ಚಾಮರಾಜಪೇಟೆಯೇ ಆಗಿದೆ. ಆ ಸಾಬಣ್ಣ ಜಮೀರ್ ಅಹ್ಮದ್ ಹತ್ತಿರ ಕುಳಿತುಕೊಂಡು ಅಲ್ಲಾಹು ಅಕ್ಬರ್ ಅನ್ನೋದು ಬಿಟ್ಟರೆ ಸಿದ್ದರಾಮಯ್ಯಗೆ ಬೇರೆ ದಾರಿಯಿಲ್ಲ. ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಅಲ್ಲಿಯ ಜನ ಸೋಲಿಸುತ್ತಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಕ್ಷೇತ್ರ ಆಯ್ಕೆ ಚರ್ಚೆ ಮತ್ತೆ ಮುನ್ನೆಲೆಗೆ
ಈಗ ಸಿದ್ದರಾಮಯ್ಯ ಕ್ಷೇತ್ರ ಆಯ್ಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈಚೆಗಷ್ಟೇ ತಾವು ಕೋಲಾರದಲ್ಲಿ ಸ್ಪರ್ಧೆ ಮಾಡುವುದಾಗಿ ಸ್ವತಃ ಸಿದ್ದರಾಮಯ್ಯ ಅವರೇ ಘೋಷಣೆ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಪುತ್ರ, ಶಾಸಕ ಯತೀಂದ್ರ ಶುಕ್ರವಾರ (ಜ. ೧೩) ಮಾತನಾಡಿ, ಕೋಲಾರವೇ ಅಂತಿಮವಲ್ಲ. ಕೊನೇ ಕ್ಷಣದಲ್ಲಿ ಕ್ಷೇತ್ರ ಬದಲಾವಣೆಯಾಗಬಹುದು ಎಂದು ಹೇಳಿದ್ದರು. ಈ ಮೂಲಕ ಸಿದ್ದರಾಮಯ್ಯ ಅವರಿಂದ ಇನ್ನೂ ಕ್ಷೇತ್ರ ಆಯ್ಕೆ ಆಗಿಲ್ಲ ಎಂಬ ಸಂದೇಶವನ್ನು ಅವರು ರವಾನಿಸಿದ್ದರು.

ಇದನ್ನೂ ಓದಿ | ವಿಸ್ತಾರ Explainer | ಉಚಿತ ಕೊಡುಗೆಗಳು ಜನರಿಗೆ ಹಿತವೇ? ಅಭಿವೃದ್ಧಿಗೆ ಶಾಪವೇ? ಚುನಾವಣಾ ವರ್ಷದಲ್ಲಿ ಕಾವೇರಿದ ಚರ್ಚೆ

Exit mobile version