Site icon Vistara News

Karnataka Election | ಹಾಳೂರಿಗೆ ಉಳಿದವನೇ ಗೌಡ ಎನ್ನುವಂತೆ ಖರ್ಗೆಗೆ ಎಐಸಿಸಿ ಅಧ್ಯಕ್ಷ ಸ್ಥಾನ: ಶ್ರೀನಿವಾಸ ಪ್ರಸಾದ್

kharge and prasad

ಮೈಸೂರು: ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಮಲ್ಲಿಕಾರ್ಜುನ ಖರ್ಗೆಗೆ ಇಲ್ಲ. ಈಗ ಕಾಂಗ್ರೆಸ್ ಪಕ್ಷಕ್ಕೆ ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಖರ್ಗೆ ಸಿಕ್ಕಿದ್ದಾರೆ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಟೀಕಿಸಿದ್ದಾರೆ. ಚುನಾವಣೆ ಪರ್ವದಲ್ಲಿ (Karnataka Election) ಅವರು ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಗ್ಗೆ ಟೀಕೆ ಮಾಡಿರುವ ಸಂಸದರು, ಖರ್ಗೆಗೆ ರಾಜಕೀಯ ಹೋರಾಟವೇ ಇಲ್ಲ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆಗೆ ಯಾವ ಹೋರಾಟದ ಹಿನ್ನೆಲೆ ಇದೆ ಎಂದು ಪ್ರಶ್ನಿಸಿದರು. ಅಲ್ಲದೆ, ಅವರು ರಾಜಕೀಯವಾಗಿ ಯಾವುದೇ ರೀತಿಯ ಹೋರಾಟ ಮಾಡಿ ಬಂದವರಲ್ಲ. ಯಾವುದೇ ಮುಖ್ಯಮಂತ್ರಿ ಬಂದಾಗಲೂ ಅವರನ್ನು ಓಲೈಸಿ ಮಂತ್ರಿ ಸ್ಥಾನ ಪಡೆಯುತ್ತಿದ್ದರು. ಹಿ ಈಸ್ ಎ ಕ್ಲೆವರ್ ಮ್ಯಾನಿಪುಲೇಟರ್ ಎಂದು ಹೇಳಿದರು.

ಈಗ ಕಾಂಗ್ರೆಸ್ ಪಕ್ಷಕ್ಕೆ ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಖರ್ಗೆ ಸಿಕ್ಕಿದ್ದಾರೆ. ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎನ್ನುವ ಗಾದೆಯಂತಾಗಿದೆ ಕಾಂಗ್ರೆಸ್ ಸ್ಥಿತಿ. ಅಷ್ಟಕ್ಕೂ ಚುನಾವಣೆ ಸಂದರ್ಭದಲ್ಲಿ ಯುದ್ಧ ಮಾಡಲು ಅವರ ಕೈಗೆ ಏನು ಕೊಟ್ಟಿದೆ? ರಟ್ಟಿನ ಗುರಾಣಿ, ಮರದ ಕತ್ತಿಯನ್ನು ಕೊಡಲಾಗಿದೆ. ಇಂತಹವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದಿರುವುದು ಕಾಂಗ್ರೆಸ್‌ನ ದೌರ್ಭಾಗ್ಯವೇ ಸರಿ ಎಂದು ಶ್ರೀನಿವಾಸ ಪ್ರಸಾದ್‌ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ | Karnataka Election | ಕಟು ಶಬ್ದ ಬಳಸಿದ್ದ, ಚಪ್ಪಲಿ ತೋರಿಸಿದ್ದ ವಿಶ್ವನಾಥ್‌-ಸಿದ್ದು; ಶ್ರೀನಿವಾಸ್‌ ಪ್ರಸಾದ್‌ ಕಿಡಿ

Exit mobile version