ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ (Karnataka Election) ಯಾವ ಸಾಮಾನ್ಯ ಕಾರ್ಯಕರ್ತ ನಿಂತರೂ ಗೆಲ್ಲಿಸುವಷ್ಟೂ ಶಕ್ತಿ ಜೆಡಿಎಸ್‌ಗಿದೆ. ನಾನು ಈಗಲೂ ಪ್ರಬಲ ಟಿಕೆಟ್ ಆಕಾಂಕ್ಷಿಯೇ. ಹಾಗಂತ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಟ್ಟರೆ ಅವರನ್ನು ಗೆಲ್ಲಿಸುವ ಪ್ರಯತ್ನವನ್ನು ಮಾಡುತ್ತೇನೆ: ಇದು ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಚ್.ಪಿ. ಸ್ವರೂಪ್ ಅವರ ಸ್ವಷ್ಟ ಮಾತು.
ಹಾಸನ ಟಿಕೆಟ್ ವಿಷಯದಲ್ಲಿ ಭವಾನಿ ರೇವಣ್ಣ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಆಡಿದ ಮಾತುಗಳಿಗೆ ಸಂಬಂಧಸಿ ಪ್ರತಿಕ್ರಿಯೆ ನೀಡಿರುವ ಎಚ್.ಪಿ. ಸ್ವರೂಪ್ ಅವರು, ʻʻಕುಮಾರಣ್ಣ ಅವರ ಜೊತೆ ನಾನು ಚರ್ಚೆ ಮಾಡಿಲ್ಲ. ಅವರ ಹೇಳಿಕೆಯನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ವರಿಷ್ಠರಾದ ದೇವೇಗೌಡರು, ಸಿ.ಎಂ.ಇಬ್ರಾಹಿಂ, ರೇವಣ್ಣ, ಕುಮಾರಣ್ಣ ಅವರು ಅಂತಿಮವಾಗಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಕಾರ್ಯಕರ್ತರೆಲ್ಲ ಸೇರಿ ಕೆಲಸ ಮಾಡುತ್ತೇವೆʼʼ ಎಂದರು.
ʻʻಸದ್ಯದ ಪರಿಸ್ಥಿತಿಯಲ್ಲಿ ನಾನು ಕೂಡಾ ಯಾರ ಬಳಿಯೂ ಚರ್ಚೆ ಮಾಡಿಲ್ಲ, ನನ್ನ ಬಳಿಯೂ ಯಾರೂ ಚರ್ಚೆ ಮಾಡಿಲ್ಲ. ಕುಮಾರಣ್ಣ ಅವರು ವೈಯುಕ್ತಿಕವಾಗಿ ಹೇಳಿಕೆ ಕೊಟ್ಟಿದ್ದಾರೆ. ಪಕ್ಷದಿಂದ ಯಾರಿಗೆ ಎಂದು ತೀರ್ಮಾನ ಮಾಡುತ್ತಾರೋ ಅವರಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡ್ತಾರೆʼʼ ಎಂದರು ಸ್ವರೂಪ್.
ʻʻದೇವೇಗೌಡರು, ರೇವಣ್ಣ, ಕುಮಾರಣ್ಣ ಅವರನ್ನು ಭೇಟಿ ಮಾಡಬೇಕು. ಭವಾನಿ ಅಕ್ಕವರಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸುವ ಕೆಲಸ ಮಾಡ್ತೀನಿ. ನನಗೆ ಟಿಕೆಟ್ ಕೊಟ್ಟರೆ ಭವಾನಿ ಅಕ್ಕ ನನ್ನನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತಾರೆ. ಒಟ್ಟಿನಲ್ಲಿ ಹಾಸನ ವಿಧಾನಸಭಾ ಕ್ಷೇತ್ರ ಜೆಡಿಎಸ್ ತೆಕ್ಕೆಗೆ ಬರಬೇಕುʼʼ ಎನ್ನುವುದು ಸ್ವರೂಪ್ ಮಾತು.
ʻʻಕುಮಾರಸ್ವಾಮಿ ಹೇಳಿಕೆಯಿಂದ ಭವಾನಿ ರೇವಣ್ಣ ಅವರಿಗೆ ಹಿನ್ನಡೆಯಾಗಿದೆ ಎಂಬ ಪ್ರಶ್ನೆ ಇಲ್ಲ. ನಾನು ಕೂಡ ಆಕಾಂಕ್ಷಿ ಹೌದು. ಆದರೆ, ಅಂತಿಮವಾಗಿ ವರಿಷ್ಠರು ಏನ್ ಹೇಳ್ತಾರೆ ಅದಕ್ಕೆ ನಾನು ಬದ್ಧ. ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಟ್ಟರೆ ನನ್ನದು ಯಾವುದೇ ಡಿಮ್ಯಾಂಡ್ ಪ್ರಶ್ನೆಯೇ ಇಲ್ಲ. ದೇವೇಗೌಡರು, ರೇವಣ್ಣ ಅವರ ಋಣ ನಮ್ಮ ಕುಟುಂಬದ ಮೇಲೆ ಇದೆ. ಆರು ಬಾರಿ ಟಿಕೆಟ್ ಕೊಟ್ಟಿದ್ದಾರೆ, ನಾಲ್ಕು ಭಾರಿ ಶಾಸಕರಾಗಿ ನಮ್ಮ ತಂದೆ ಆಯ್ಕೆಯಾಗಿದ್ದಾರೆʼʼ ಎಂದು ನೆನಪಿಸಿಕೊಂಡರು.
ಕುಮಾರಸ್ವಾಮಿ ಹೇಳಿದ್ದೇನು?
ಹಾಸನದಲ್ಲಿ ಭವಾನಿ ರೇವಣ್ಣ ಅವರು ತಾನೇ ಅಭ್ಯರ್ಥಿ ಎಂದು ಹೇಳಿಕೊಂಡಾಗ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ ಅವರು, ʻʻಹಾಸನದಲ್ಲಿ ಭವಾನಿ ರೇವಣ್ಣ ಅವರು ಕಣಕ್ಕಿಳಿಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಅಲ್ಲಿ ಗೆಲ್ಲಬಲ್ಲ ಸಮರ್ಥ ಅಭ್ಯರ್ಥಿ ಇದ್ದಾರೆ. ಒಂದು ವೇಳೆ ಇಲ್ಲದೆ ಇದ್ದರೆ ನಾನೇ ಭವಾನಿ ರೇವಣ್ಣ ಅವರನ್ನು ನೀವೇ ನಿಲ್ಲಿ ಎಂದು ಹೇಳುತ್ತಿದ್ದೆʼʼ ಎಂದಿದ್ದರು.
ಇದನ್ನೂ ಓದಿ | Karnataka Election: ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ; ಭವಾನಿ ಅಗತ್ಯವಿದ್ದರೆ ನಾನೇ ಹೇಳುತ್ತಿದ್ದೆ: ಎಚ್.ಡಿ. ಕುಮಾರಸ್ವಾಮಿ