ಬೆಂಗಳೂರು: ರಾಜ್ಯದಲ್ಲಿ ಪ್ರತಿಯೊಂದು ವಿಷಯಕ್ಕೂ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ವಾಗ್ವಾದ, ವಾಕ್ಸಮರ ನಡೆಯುತ್ತಲೇ ಇರುತ್ತವೆ. ಅದರಲ್ಲೂ, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Karnataka Election) ಇರುವ ಕಾರಣ ಪ್ರತಿಯೊಂದು ವಿಷಯಕ್ಕೂ ಉಭಯ ಪಕ್ಷಗಳ ನಾಯಕರು ವಾಗ್ಝರಿ ಹರಿಸುತ್ತಿದ್ದಾರೆ. ಸದ್ಯ, ಬಜರಂಗದಳ ನಿಷೇಧ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮಧ್ಯೆ ವಾಕ್ಸಮರ ಶುರುವಾಗಿದೆ.
ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ರಣದೀಪ್ ಸುರ್ಜೇವಾಲಾ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು. “ಕರ್ನಾಟಕವನ್ನು ಹನುಮನುದಿಸಿದ ನಾಡು ಎಂದು ಕರೆಯುತ್ತೇವೆ. ಆದರೆ, ಹನುಮ ಗಂಗಾವತಿಯಲ್ಲಿ ಹುಟ್ಟಿದ್ದಾರೋ, ಇಲ್ಲವೋ ಎಂದು ಕೇಳುವ ಮೂಲಕ, ನನ್ನೂರಿಗೆ ಕಪಿಗಳ ನಾಡು ಎಂದು ಕರೆಯುವ ಮೂಲಕ ರಣದೀಪ್ ಸುರ್ಜೇವಾಲಾ ಅವರು ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು” ಎಂದು ಹೇಳಿದ್ದಾರೆ.
“ಪುರಾಣಗಳಲ್ಲಿ ಕಥೆ ಕೇಳುತ್ತೇವೆ. ಹಂಪಿಯಲ್ಲಿ ಓಡಾಡುವಾಗ ಹನುಮ ಇಲ್ಲಿಂದ ಸೂರ್ಯನನ್ನು ಹಿಡಿಯಲು ನೆಗೆದ ಬಗ್ಗೆ ಕೇಳುತ್ತೇವೆ. ಸುರ್ಜೇವಾಲಾ ಅವರು, ಬಿಜೆಪಿಯವರಿಗೆ, ಬಜರಂಗದಳದವರಿಗೆ ಹನುಮಾನ್ ಚಾಲೀಸಾ ಪಠಿಸಲು ಬರುವುದಿಲ್ಲ ಎಂದು ಹೇಳಿದ್ದಾರೆ. ಗುರುವಾರ ಸಂಜೆ 7 ಗಂಟೆಗೆ ಹನುಮಾನ್ ಚಾಲೀಸಾ ಪಠಿಸುತ್ತೇವೆ. ನೀವೂ ಬನ್ನಿ” ಎಂದು ಆಹ್ವಾನ ನೀಡಿದರು.
ಕನ್ನಡಿಗರು, ಬಿಜೆಪಿಯವರಿಗೆ ಸಂಸ್ಕೃತಿ, ಪುರಾಣದ ಪಾಠ ಹೇಳುತ್ತಾರೆ. ಸುರ್ಜೇವಾಲಾ ಅವರೇ, ನೀವು ಈ ರಾಜಕೀಯವನ್ನು ಎಲ್ಲಿವರೆಗೆ ಒಯ್ಯುತ್ತೀರಿ ಎಂದು ಪ್ರಶ್ನಿಸಿದರು. ಬಜರಂಗದಳ ನಿಷೇಧಿಸುವ ಬಗ್ಗೆ ತಿಳಿಸಿದ ನೀವು ಹನುಮನುದಿಸಿದ ಕರುನಾಡಿಗೆ ಅವಮಾನ ಮಾಡಲು ಹೊರಟಿದ್ದೀರಿ ಎಂದು ಆಕ್ಷೇಪಿಸಿದರು. “ಹನುಮನ ಜನನ ಕಿಷ್ಕಿಂಧೆಯಲ್ಲಿ ಎಂದು ಸಾಬೀತಾಗಿದೆ. ಕಿಷ್ಕಿಂಧೆ ಮತ್ತು ಅಯೋಧ್ಯೆಗೆ ದೊಡ್ಡ ಸಂಬಂಧ ಇದೆ ಎಂದು ಸಾಬೀತಾಗಿದೆ. ಇವತ್ತಿಗೆ ಕೂಡ ಕಿಷ್ಕಿಂಧೆಯಲ್ಲಿ, ಅಂಜನಾದ್ರಿ ಬೆಟ್ಟದಲ್ಲಿ ಪೂಜೆ ಮಾಡುವ ಭಕ್ತರು, ಪೂಜೆ ಮಾಡುವ ಪೂಜಾರಿಗಳು ಅಯೋಧ್ಯೆ ಜತೆ ಸಂಪರ್ಕ ಇಟ್ಟುಕೊಂಡವರಿದ್ದಾರೆ. ಅದಕ್ಕಾಗಿ, ಇವತ್ತು ಅಂಜನಾದ್ರಿ ಬೆಟ್ಟದ ಬಗ್ಗೆ ನಿಮ್ಮ ಸಂಶಯ, ಆಂಜನೇಯನ ತಂದೆ ಬಗ್ಗೆ ನಿಮ್ಮ ಮಾತು ನಿಮ್ಮ ಕೆಳಮಟ್ಟದ ಪ್ರತೀಕ ಎಂದು ಟೀಕಿಸಿದರು.
ಸುರ್ಜೇವಾಲಾ ಟ್ವೀಟ್
ಸುರ್ಜೇವಾಲಾ ಟ್ವೀಟ್ ಮೂಲಕ ಆಕ್ರೋಶ
ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮೂಲಕ ಸುರ್ಜೇವಾಲಾ ಅವರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಭಗವಾನ್ ಹನುಮಂತನು ಧರ್ಮನಿಷ್ಠೆಯನ್ನು ಚಿತ್ರಿಸುತ್ತಾನೆ, ಭಗವಾನ್ ಹನುಮಾನ್ ಗೌರವ ಮತ್ತು ಕರ್ತವ್ಯಕ್ಕೆ ಬದ್ಧತೆಯನ್ನು ಚಿತ್ರಿಸುತ್ತಾನೆ, ಭಗವಾನ್ ಹನುಮಂತನು ಸೇವೆ ಮತ್ತು ತ್ಯಾಗವನ್ನು ಸಂಕೇತಿಸುತ್ತಾನೆ. ಹಾಗಾಗಿ, ಭಗವಾನ್ ಹನುಮಂತನನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಸಮಾನಾರ್ಥಕವಾಗಿ ಹೋಲಿಸುವುದು ಅವಮಾನವಾಗಿದೆ. ಹನುಮಾನ್ ಜಿಯ ಲಕ್ಷಾಂತರ ಭಕ್ತರ ಭಾವನೆಗಳು ಮತ್ತು ಭಾವನೆಗಳಿಗೆ ಪ್ರಧಾನಿ ನೋವುಂಟು ಮಾಡುತ್ತಿದ್ದಾರೆ. ಸಹಜವಾಗಿ, ಈ ಕ್ಯಾನಾರ್ಡ್‌ಗಳನ್ನು ಸ್ವಯಂ ಘೋಷಿತ ಚಾಣಕ್ಯ ಬಿ.ಎಲ್.ಸಂತೋಷ್ ಅವರ ಕಾರ್ಖಾನೆಯಲ್ಲಿ ತಯಾರಿಸಲಾಗಿದೆ. ಭಗವಾನ್ ಹನುಮಂತನನ್ನು ಬಜರಂಗದಳದೊಂದಿಗೆ ಸಮೀಕರಿಸಿದ್ದಕ್ಕಾಗಿ ಪ್ರಧಾನಿ ಕ್ಷಮೆ ಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Karnataka Election: ಕಾಂಗ್ರೆಸ್ ಸರ್ಕಾರ ಇದ್ದಾಗ ಯಾಕೆ ಪಿಎಫ್ಐ, ಬಜರಂಗದಳ ಬ್ಯಾನ್ ಮಾಡಲಿಲ್ಲ: ಎಚ್.ಡಿ. ಕುಮಾರಸ್ವಾಮಿ