Site icon Vistara News

Karnataka Election : ಕಾಂಗ್ರೆಸ್‌ನಲ್ಲಿ 10 ಜನ ಸಿಎಂ ಆಸೆ ಇಟ್ಕೊಂಡಿದ್ದಾರೆ, ಅವರಲ್ಲಿ ನಾನೂ ಒಬ್ಬ ಎಂದ ಪರಮೇಶ್ವರ್‌

karnataka congress leader parameshwar asking two tickets

ತುಮಕೂರು: ʻʻಕಾಂಗ್ರೆಸ್‌ನಲ್ಲಿ ಹತ್ತು ಜನರು ಸಿಎಂ ಆಗುವ ಆಸೆ ಇಟ್ಟುಕೊಂಡಿದ್ದಾರೆ. ಅದರಲ್ಲಿ ನಾನೂ ಒಬ್ಬʼʼ ಎಂದು ನೇರವಾಗಿ ಹೇಳುವ ಮೂಲಕ ತಾನೂ ಸಿಎಂ ಆಗುವ ಮಹತ್ವಾಕಾಂಕ್ಷೆಯನ್ನು ಬಿಚ್ಚಿಟ್ಟಿದ್ದಾರೆ ಮಾಜಿ ಡಿಸಿಎಂ ಜಿ. ಪರಮೇಶ್ವರ್‌. ಜಿ. ಪರಮೇಶ್ವರ್‌ ಅವರು ಈಗ ಕಾಂಗ್ರೆಸ್‌ನ ಪ್ರಣಾಳಿಕೆ ಸಮಿತಿ (Karnataka Election) ಅಧ್ಯಕ್ಷರಾಗಿದ್ದಾರೆ.

ತುಮಕೂರು ‌ಜಿಲ್ಲೆಯ ಮಧುಗಿರಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜಿ.ಪರಮೇಶ್ವರ್, ʻʻಕಾಂಗ್ರೆಸ್‌ ಪಕ್ಷದಲ್ಲಿ ಜಾತಿ ಆಧಾರದ ಮೇಲೆ ಯಾರನ್ನೂ ಮುಖ್ಯಮಂತ್ರಿ ಮಾಡಲ್ಲ. ದಲಿತ ಮುಖ್ಯಮಂತ್ರಿ ಅನ್ನೋ ಪ್ರಶ್ನೆ ನಮ್ಮಲ್ಲಿ ಬರುವುದಿಲ್ಲ. ಆಯಾ ಸಂದರ್ಭದಲ್ಲಿ ಯಾರು ಸಮರ್ಥರಿದ್ದಾರೆ ಅಂತವರನ್ನು ಮುಖ್ಯಮಂತ್ರಿ ಮಾಡುತ್ತಾರೆ. ಆಕಸ್ಮಿಕವಾಗಿ ಆ ಸಂದರ್ಭದಲ್ಲಿ ಆ ಜಾತಿಯವರು ಆದರೆ ಅದು ಆಕಸ್ಮಿಕ ಅಷ್ಟೆ, ಉದ್ದೇಶಪೂರ್ವಕವಲ್ಲʼʼ ಎಂದು ಹೇಳಿದರು.

ʻʻನಿಮಗೆ ಸಿಎಂ ಆಗುವ ಆಸೆ ಇದೆಯಾʼʼ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್‌, ʻʻರಾಜಕೀಯ ಯಾಕೆ ಮಾಡ್ತಾ ಇದ್ದೀನಿ ಹೇಳಿ, ಅಧಿಕಾರಕ್ಕೆ ಬರಬೇಕು ಅಂತ ತಾನೇ? ಮುಖ್ಯಮಂತ್ರಿ ಆಗಬೇಕು ಅನ್ನೋದು ಎಲ್ಲರಿಗೂ ಆಸೆ ಇರುತ್ತದೆ. ಒಂದು ಹತ್ತು ಜನರಿಗೆ ಆಸೆ ಇದೆ ನಮ್ಮ ಪಕ್ಷದಲ್ಲಿ, ಅದರಲ್ಲಿ ನಾನೂ ಒಬ್ಬʼʼ ಎಂದು ಸ್ಪಷ್ಟವಾಗಿ ಹೇಳಿದರು.

೨೦೧೩ರ ಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಜಿ. ಪರಮೇಶ್ವರ್‌ ಅವರು ಕಾಂಗ್ರೆಸ್‌ನ್ನು ಗೆಲುವಿನ ದಡ ಸೇರಿಸಿದ್ದರು. ಆಗ ಅವರೂ ಒಬ್ಬ ಪ್ರಮುಖ ಮುಖ್ಯಮಂತ್ರಿ ಅಭ್ಯರ್ಥಿ ಆಗಿದ್ದರೂ ಕೊರಟಗೆರೆ ಕ್ಷೇತ್ರದಲ್ಲಿ ಅವರು ಸೋತಿದ್ದರಿಂದ ಮುಖ್ಯಮಂತ್ರಿ ಅಭ್ಯರ್ಥಿಯ ಚರ್ಚೆಗೂ ಅವರ ಹೆಸರು ಬರಲಿಲ್ಲ. ಸಿದ್ದರಾಮಯ್ಯ ಅವರು ಅನಾಯಾಸವಾಗಿ ಮುಖ್ಯಮಂತ್ರಿಯಾದರು. ಈ ನಡುವೆ, ಅವರು ಸಿಎಂ ಆಗಬಾರದು ಎಂಬ ಕಾರಣಕ್ಕಾಗಿಯೇ ಕೊರಟಗೆರೆಯಲ್ಲಿ ಅವರನ್ನು ಸೋಲಿಸಲಾಯಿತು ಎನ್ನುವ ವಾದವೂ ಕೇಳಿಬಂತು. ಈ ವಾದ ಇನ್ನೂ ಜೀವಂತವಾಗಿದೆ.

ಇದನ್ನೂ ಓದಿ : Political warfare : ಸಚಿವ ಅಶ್ವತ್ಥನಾರಾಯಣಗೆ ತಿರುಗೇಟು ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

Exit mobile version