ಸಾಗರ್ ಕುಮಚಹಳ್ಳಿ, ವಿಸ್ತಾರ ನ್ಯೂಸ್, ಚಾಮರಾಜನಗರ
ಗಡಿ ಜಿಲ್ಲೆ ಹಾಗೂ ಹಿಂದುಳಿದ ಜಿಲ್ಲೆಯಾಗಿರುವ ಚಾಮರಾಜನಗರ ಜಿಲ್ಲೆ ಈ ಬಾರಿ ಚುನಾವಣೆಯಲ್ಲಿ ಮಹತ್ವದ ತಿರುವು ಪಡೆಯಲಿದೆ. ಒಂದು ಕಾಲದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಕಳೆದ 2018ರ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ತನ್ನ ಖಾತೆ ತೆರೆದಿದ್ದು , ಈ ಸಲ ನಾಲ್ಕು ಕ್ಷೇತ್ರಗಳನ್ನು ಗೆಲ್ಲಬೇಕು ಎನ್ನುವ ಪ್ರಯತ್ನದಲ್ಲಿದೆ. ಆದ್ದರಿಂದಲೇ ಕಾಂಗ್ರೆಸ್‌ನ ಭದ್ರಕೋಟೆ ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿದೆ. ವಿ. ಸೋಮಣ್ಣ ತಾವು ಗೆಲ್ಲುವುದರ ಜತೆಗೆ ಜಿಲ್ಲೆಯ ಬೇರೆ ಕ್ಷೇತ್ರಗಳನ್ನು ಗೆಲ್ಲಿಸುವುದರಲ್ಲಿ ಪಾತ್ರ ವಹಿಸಲಿದ್ದಾರೆ ಎಂಬುದು ಬಿಜೆಪಿಯ ನಂಬಿಕೆ. ಇನ್ನು ಕೊಳ್ಳೇಗಾಲದ ಶಾಸಕ ಬಿಎಸ್‌ಪಿ ತೊರೆದು ಬಿಜೆಪಿ ಸೇರಿದ್ದು ಬಿಜೆಪಿಗೆ ಲಾಭವಾಗಲಿದೆ. ಆದರೆ, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಬಿಜೆಪಿಗೆ ಬಂಡಾಯದ ಬಾವುಟ ಎದುರಾಗಿದೆ.
ಕಳೆದ ಬಾರಿಯ ಬಲಾಬಲ
ಒಟ್ಟು ಕ್ಷೇತ್ರಗಳು: 4
ಬಿಜೆಪಿ : 1 ಗುಂಡ್ಲುಪೇಟೆ
ಕಾಂಗ್ರೆಸ್ : 2 ಚಾಮರಾಜನಗರ ಹಾಗೂ ಹನೂರು
ಬಿಎಸ್‌ಪಿ: 1 ಕೊಳ್ಳೇಗಾಲ ( ಶಾಸಕರು ಬಿಎಸ್‌ಪಿ ತೊರೆದು ಬಿಜೆಪಿ ಸೇರಿದ್ದಾರೆ)
ಚಾಮರಾಜನಗರ: ಬಿಜೆಪಿ ಕಾಂಗ್ರೆಸ್ ನಡುವೆ ನೇರ ಜಿದ್ದಾಜಿದ್ದಿ
ಈ ಕ್ಷೇತ್ರದಲ್ಲಿ ಕಳೆದ ಮೂರು ಅವಧಿಯಿಂದಲೂ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಗೆಲುವು ಸಾಧಿಸುತ್ತಿದ್ದು ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿದ್ದಾರೆ. ಇನ್ನೂ ಕಾಂಗ್ರೆಸ್ ನ ಭದ್ರಕೋಟೆಯಾಗಿರುವ ಇಲ್ಲಿ ಬಿಜೆಪಿಯ ಅಭ್ಯರ್ಥಿ ಅತ್ಯಲ್ಪ ಮತಗಳಿಂದ ಪರಾಜಿತರಾಗುತ್ತಿದ್ದಾರೆ. ಕಾಂಗ್ರೆಸ್ ಗೆ ಬಿಜೆಪಿ ಸಂಪದಾಯಿಕ ಎದುರಾಳಿಯಾಗಿದ್ದು ಪ್ರೊ. ಮಲ್ಲಿಕಾರ್ಜುನಪ್ಪ ಕಾಂಗ್ರೆಸ್‌ನ ಶಾಸಕ ಪುಟ್ಟರಂಗಶೆಟ್ಟಿಗೆ ಪೈಪೋಟಿ ನೀಡುತ್ತಾ ಬಂದಿದ್ದರು. ಇದೀಗ ಚಾಮರಾಜನಗರಕ್ಕೆ ಸಚಿವ ವಿ. ಸೋಮಣ್ಣ ಎಂಟ್ರಿ ಕೊಟ್ಟಿದ್ದು ಕಾಂಗ್ರೆಸ್‌ಗೆ ಮತ್ತಷ್ಟು ತಲೆನೋವಾಗಿದೆ. ಇನ್ನು ಚಾಮರಾಜನಗರ ಉಸ್ತುವಾರಿಗಳಾಗಿದ್ದ ಸಚಿವ ವಿ. ಸೋಮಣ್ಣ ಚಾಮರಾಜನಗರದಿಂದ ಸ್ಪರ್ಧೆ ಮಾಡುತ್ತಿದ್ದು ಕ್ಷೇತ್ರ ಸಾಕಷ್ಟು ಜಿದ್ದಾ ಜಿದ್ದಿಯಾಗಿದ್ದು ಕಾಂಗ್ರೆಸ್ ಗೆ ವಿ. ಸೋಮಣ್ಣ ನಿದ್ದೆಗೆಡಿಸಿದ್ದಾರೆ. ಇನ್ನೂ ಜೆಡಿಎಸ್ ಹಾಗೂ ಬಿಎಸ್‌ಪಿ ಪಕ್ಷಗಳು ನಾವು ಕೂಡ ಪ್ರಬಲ ಪೈಪೋಟಿ ನೀಡಬಲ್ಲವು ಎಂದು ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ.
ಕಳೆದ ಬಾರಿ ಫಲಿತಾಂಶ ಏನು?
ಸಿ. ಪುಟ್ಟರಂಗಶೆಟ್ಟಿ (ಕಾಂಗ್ರೆಸ್): 75,404
ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ (ಬಿಜೆಪಿ): 70,503
ಗೆಲುವಿನ ಅಂತರ: 4,901
ಗುಂಡ್ಲುಪೇಟೆ: ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ, ಬಿಜೆಪಿಗೆ ಬಂಡಾಯದ ಬಿಸಿ
ಗುಂಡ್ಲುಪೇಟೆ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮಾಜಿ ಸಚಿವ ದಿ. ಎಚ್ಎಸ್. ಮಹದೇವಪ್ರಸಾದ್ ಸತತವಾಗಿ ಕೆಲವು ಸಾಧಿಸುತ್ತಿದ್ದು ಅವರ ನಿಧನದ ನಂತರ ನಡೆದ 2017 ಬೈ ಎಲೆಕ್ಷನ್ ನಲ್ಲಿಯೂ ಅವರ ಪತ್ನಿ ಗೆಲುವು ಸಾಧಿಸಿದ್ದರು. ಬಳಿಕ 2018ರ ಚುನಾವಣೆಯಲ್ಲಿ ಬಿಜೆಪಿಯ ಸಿ.ಎಸ್. ನಿರಂಜನ್ ಕುಮಾರ್ ಗೆಲುವು ಸಾಧಿಸಿ ಮೊದಲಬಾರಿಗೆ ಗುಂಡ್ಲುಪೇಟೆಯಲ್ಲಿ ಕಮಲ ಅರಳಿಸಿದರು. ಇದೀಗ ಮತ್ತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರಬಲ ಪೈಪೋಟಿ ಇದ್ದು , ಬಿಜೆಪಿಗೆ ಬಂಡಾಯದ ಬಿಸಿ ತಟ್ಟಲಿದೆ. ಬಿಜೆಪಿಯಲ್ಲಿದ್ದ ಹಾಲಿ ಚಾಮುಲ್ ಸದಸ್ಯ ಎಂ.ಪಿ. ಸುನೀಲ್ ಬಂಡಾಯವಾಗಿ ಸ್ಪರ್ಧೆ ಮಾಡುತ್ತಿದ್ದು ಇದು ಸ್ವಲ್ಪ ಮಟ್ಟದಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದೆ. ಇದರ ಜತೆಗೆ ಬಿಜೆಪಿ ಮತ್ತೊಬ್ಬ ರೈತ ಮುಖಂಡ ಕಡಬೂರು ಮಂಜುನಾಥ ಪಕ್ಷ ತೊರೆದು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಇದರಿಂದ ಬಿಜೆಪಿ ಶಾಸಕ ನಿರಂಜನ್‌ಗೆ ಇಬ್ಬರು ಸ್ವಪಕ್ಷೀಯರೇ ಮುಳುವಾಗಲಿದ್ದಾರೆ. ಇನ್ನು ಬಿಜೆಪಿ ಈ ಒಡಕಿನಿಂದ ಕಾಂಗ್ರೆಸ್ ನ ಅಭ್ಯರ್ಥಿ ದಿ. ಎಚ್. ಎಸ್. ಮಹದೇವಪ್ರಾದ್ ಅವರ ಪುತ್ರ ಗಣೇಶ್ ಪ್ರಸಾದ್‌ಗೆ ಲಾಭವಾಗಲಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಸಿ.ಎಸ್.ನಿರಂಜನ್ ಕುಮಾರ್ (ಬಿಜೆಪಿ): 94,151
ಮೋಹನ್ ಕುಮಾರಿ (ಕಾಂಗ್ರೆಸ್): 77,467
ಗೆಲುವಿನ ಅಂತರ. 16,684
ಕೊಳ್ಳೇಗಾಲ: ಬಿಜೆಪಿ ಕಾಂಗ್ರೆಸ್ ನಡುವೆ ಪೈಪೋಟಿ
ಇದು ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದು ಕಳೆದ ಬಾರಿ ಬಿಎಸ್‌ಪಿಯಿಂದ ಗೆದ್ದಿದ್ದ ಶಾಸಕ ಎನ್. ಮಹೇಶ್ ಬಿಜೆಪಿ ಸೇರಿದ್ದು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪರ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಸ್ಪರ್ಧಿಸಿದ್ದು ಪ್ರಬಲ ಪೈಪೋಟಿ ನಡೆಸಲಿದ್ದಾರೆ. ಇನ್ನು ಬಿಎಸ್ಪಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದು ಇದು ಅಲ್ಪ ಮಟ್ಟದಲ್ಲಿ ಎನ್. ಮಹೇಶ್‌ಗೆ ಹಿನ್ನೆಡೆಯಾದರೂ ಆಗಬಹುದು. ಜತೆಗೆ ಜೆಡಿಎಸ್ ಅಭ್ಯರ್ಥಿ ಬಿ. ಪುಟ್ಟಸ್ವಾಮಿ ಕೂಡ ಪ್ರಬಲ ಪೈಪೋಟಿ ನೀಡಲಿದ್ದು ಪೊಲೀಸ್ ಹುದ್ದೆಯನ್ನೇ ತೊರೆದು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಇವೆಲ್ಲದರ ನಡುವೆ ಬಿಜೆಪಿಗೆ ಬಂಡಾಯದ ಬಿಸಿ ಎದುರಾಗಿದ್ದು ಬಂಡಾಯ ಅಭ್ಯರ್ಥಿಯಾಗಿ ಕಿನಕನಹಳ್ಳಿ ಬಿ. ರಾಚಯ್ಯ ಕಣದಲ್ಲಿದ್ದಾರೆ. ಇನ್ನು ಎನ್. ಮಹೇಶ್‌ಗೆ ಕಾಂಗ್ರೆಸ್ ನ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಬಾಲರಾಜ್ ಬೆಂಬಲ ನೀಡಿದ್ದು ಮಹೇಶ್‌ಗೆ ಒಂದಷ್ಟು ಬಲ ತಂದಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಎನ್. ಮಹೇಶ್ (ಬಿಎಸ್‌ಪಿ): 71,792
ಎ.ಆರ್.ಕೃಷ್ಣಮೂರ್ತಿ (ಕಾಂಗ್ರೆಸ್): 52338
ಗೆಲುವಿನ ಅಂತರ: 19,454.
ಹನೂರು: ಕಾಂಗ್ರೆಸ್ ಜೆಡಿಎಸ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ
ಹನೂರು ಅಂದ್ರೆ ಕಾಂಗ್ರೆಸ್, ಎಂಬಂತಾಗಿದೆ. ಕಳೆದ 15 ವರ್ಷಗಳಿಂದ ಕಾಂಗ್ರೆಸ್‌ನ ಆರ್. ನರೇಂದ್ರ ಶಾಸಕರಾಗಿದ್ದಾರೆ. ಈ ಬಾರಿ ಕಾಂಗ್ರೆಸ್‌ಗೆ ಬಿಜೆಪಿ ಹಾಗೂ ಜೆಡಿಎಸ್ ಟಕ್ಕರ್ ಕೊಡಲು ಸಿದ್ಧರಾಗಿದ್ದು ,ಅಬ್ಬರದ ಪ್ರಚಾರ ಮಾಡುತ್ತಿವೆ. ಜೆಡಿಎಸ್ ಅಭ್ಯರ್ಥಿ ಎಂ.ಆರ್ ಮಂಜುನಾಥ್ ಈ ಬಾರಿ ಜೆಡಿಎಸ್ ಖಾತೆ ತೆರೆಯವ ತವಕದಲ್ಲಿದ್ದು, ನಿರಂತರ ಸುತ್ತಾಟ ನಡೆಸುತ್ತಿದ್ದಾರೆ. ಆದರೆ, ಮಾಜಿ ಶಾಸಕ ದಿ. ರಾಜು ಗೌಡ ಹಾಗೂ ದಿ. ನಾಗಪ್ಪ ಕುಟುಂಬದ ಅಭ್ಯರ್ಥಿಗಳೇ ಇಲ್ಲಿನ ಸಾಂಪ್ರದಾಯಿಕ ಎದುರಾಳಿಗಳಾಗಿದ್ದು, ಇಬ್ಬರ ನಡುವೆ ನೇರ ಜಿದ್ದಾಜಿದ್ದಿ ಏರ್ಪಡಲಿದೆ. ಇದರ ನಡುವೆ ಹನೂರು ಭಾಗದ ಜನ ಜೆಡಿಎಸ್‌ಗೆ ಒಲವು ತೊರಲಿದ್ದಾರಾ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಕರಾವಳಿಯಲ್ಲಿ ಬಿಜೆಪಿಗೆ ಕಾಂಗ್ರೆಸ್, ಜೆಡಿಎಸ್ ಪ್ರಬಲ ಪೈಪೋಟಿ
ಕಳೆದ ಬಾರಿಯ ಚುನಾವಣಾ ಫಲಿತಾಂಶ ಏನು?
ಆರ್. ನರೇಂದ್ರ (ಬಿಜೆಪಿ ): 60,444
ಪ್ರೀತನ್ ನಾಗಪ್ಪ (ಕಾಂಗ್ರೆಸ್): 56,931
ಗೆಲುವಿನ ಅಂತರ: 3,513