Site icon Vistara News

Karnataka Election: ಯಾರಿಗೂ ಹಣ ಕೊಡದೇ 6 ಬಾರಿ ಎಂಎಲ್‌ಎ ಆಗಿದ್ದೆ: ಎಂ.ವೀರಪ್ಪ ಮೊಯ್ಲಿ

Veerappa Moily says I have been an MLA six times without giving money to anyone

#image_title

ಮೈಸೂರು: ನಾನು ಯಾವುದೇ ಚುನಾವಣೆಯನ್ನು ಭ್ರಷ್ಟಾಚಾರ ಇಲ್ಲದೇ ಗೆದ್ದಿದ್ದು, ಹಣ ಕೊಡದೇ 6 ಬಾರಿ ಎಂಎಲ್‌ಎ ಆಗಿದ್ದೆ. ಹಣದ ಪ್ರಭಾವ ಬಿಟ್ಟು ವರ್ಚಸ್ಸಿನ ಮೇಲೆ‌ ಚುನಾವಣೆ ಗೆಲ್ಲಬೇಕು. ಹಣ ಕೊಟ್ಟು ಗೆದ್ದವರು, ಹಣದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ತಿಳಿಸಿದರು.

ಅಭ್ಯರ್ಥಿಗಳು ಕೈ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವಾಗ 2 ಲಕ್ಷ ರೂಪಾಯಿ ನೀಡಿರುವ ವಿಚಾರಕ್ಕೆ ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮದು ಸೈದ್ಧಾಂತಿಕವಾದ ಪಕ್ಷವಾಗಿದೆ. ನಮ್ಮ‌ ಕಾಲದಲ್ಲಿ ನಾವೆಂದೂ ಯಾರಿಂದಲೂ ಹಣ ಪಡೆದುಕೊಂಡಿಲ್ಲ. ಆದರೆ, ಇಂದು ಕಾಲ ಬದಲಾಗಿದೆ. ಕೆಲವರು ಪಡೆದುಕೊಂಡಿದ್ದಾರೆ. ಆದರೆ, ನಮ್ಮ ಕಾಲದಲ್ಲಿ ಈ ಪದ್ಧತಿ ಇರಲಿಲ್ಲ ಎಂದು ಹೇಳಿದರು.

ನಾನೇ ಮುಂದಿನ ಮುಖ್ಯಮಂತ್ರಿ ಎಂಬ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅದು ಅವರವರ ವೈಯುಕ್ತಿಕ ಆಸೆ, ಇದರಲ್ಲಿ ಯಾವುದೇ ತಪ್ಪಿಲ್ಲ. ಇದರಿಂದ ನಮ್ಮ ಪಕ್ಷಕ್ಕೆ ಸಮಸ್ಯೆ ಇಲ್ಲ. ಎಲ್ಲರಿಗೂ ಅವರವರ ಅಭಿಪ್ರಾಯವನ್ನು ಹೇಳುವ ಹಕ್ಕು ಇದೆ. ಆ ಹಕ್ಕನ್ನು ನಾವು ಹತ್ತಿಕ್ಕಲು ಸಾಧ್ಯವಿಲ್ಲ. ಇದರಿಂದ ನಮ್ಮ ಪಕ್ಷದಲ್ಲಿ ಗೊಂದಲ ಆಗುವುದಿಲ್ಲ ಎಂದು ಹೇಳಿದರು.

ನಾವು ಅನೇಕ ಯಾತ್ರೆ ಮಾಡಿದ್ದೇವೆ. ನಮ್ಮ ಪರವಾಗಿ ಜನರು ಇದ್ದಾರೆ. ಪ್ರಜಾಧ್ವನಿ ಯಾತ್ರೆಯಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಎಂಬುದು ಗೊತ್ತಾಗಿದೆ ಎಂದ ಅವರು, ಮೋದಿ ರಾಜ್ಯಕ್ಕೆ ಬಂದು ಸಿದ್ದರಾಮಯ್ಯ ಅವರ ಸರ್ಕಾರ ಶೇ.10 ಸರ್ಕಾರ ಎಂದರು. ಅಂದು ಜನರಿಗೆ ಇದು ಮನಸ್ಸಿಗೆ ತಟ್ಟಲಿಲ್ಲ. ಆದರೆ, ಈಗ ಬಿಜೆಪಿ 40 ಪರ್ಸೆಂಟ್ ಸರ್ಕಾರ ಎಂದು ನಾವು ಆರೋಪ ಮಾಡುತ್ತಿದ್ದೇಬೆ. ಈ ವಿಚಾರ ಜನರ ಮನಸ್ಸಿಗೆ ತಟ್ಟಿದೆ. ಇದರಲ್ಲೇ ಯಾರು ತಪ್ಪು ಮಾಡಿದ್ದಾರೆಂದು ಗೊತ್ತಾಗುತ್ತದೆ ತಿಳಿಸಿದರು.

ಇದನ್ನೂ ಓದಿ | Karnataka Election: ಟಿಪ್ಪುನನ್ನು ಹೊಡೆದು ಹಾಕಿದಂತೆಯೇ ಸಿದ್ದರಾಮಯ್ಯರನ್ನೂ ಹೊಡೆದು ಹಾಕಬೇಕು: ಅಶ್ವತ್ಥನಾರಾಯಣ

ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಇಡೀ ಲೋಕಾಯುಕ್ತವೇ ಭ್ರಷ್ಟಾಚಾರದ ಕೂಪವಾಗಿತ್ತು.
ಹಾಗಾಗಿಯೇ ಎಸಿಬಿಯನ್ನು ಜಾರಿಗೆ ತರಲಾಗಿತ್ತು ಎಂದ ಅವರು, ಬಿಜೆಪಿ ಸರ್ಕಾರ ಹಣದ ಜಾಹೀರಾತುಗಳ ಸರ್ಕಾರ. ಜಾಹೀರಾತುಗಳ ಮೂಲಕವೇ ಉಸಿರಾಡುತ್ತಿದೆ. ಆದರೆ, ಅಭಿವೃದ್ಧಿ, ಶುದ್ಧ ಆಡಳಿತವೇ ನಮ್ಮ ಮುಖ್ಯ ವಿಷಯವಾಗಿದೆ ಎಂದು ಹೇಳಿದರು.

ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ

ನಾನು ಅಥವಾ ನನ್ನ ಮಗ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಈ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರೂ ಸಹ ಸ್ಪರ್ಧಿಸುವುದಿಲ್ಲ. ಯಾರಿಗೇ ಆದರೂ ಗೆಲ್ಲುವ ಸಾಮರ್ಥ್ಯ ಇದ್ದರಷ್ಟೇ ಟಿಕೆಟ್ ಕೊಡುತ್ತೇವೆ. ವಿಶೇಷ ವ್ಯಕ್ತಿಗಳಿಗೆ ಅನ್ವಯಿಸುವ ವಿಚಾರದಲ್ಲಿ ಇದನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ಯುವ ಜನತೆಯಲ್ಲಿ ಗೆಲ್ಲುವ ಅಭ್ಯರ್ಥಿ ಇದ್ದರೆ ಮಾತ್ರ ಟಿಕೆಟ್ ಕೊಡುತ್ತೇವೆ. ಹಾಗಂತ ಯೂತ್ಸ್‌ ನಮಗೇ ಟಿಕೆಟ್ ಕೊಡಿ ಎಂದರೆ ಆಗುವುದಿಲ್ಲ. ಮೊದಲು ಅವರು ಗೆಲ್ಲುವ ಅಭ್ಯರ್ಥಿ ಆಗಿರಬೇಕು ಎಂದು ವೀರಪ್ಪ ಮೊಯ್ಲಿ ತಿಳಿಸಿದರು.

Exit mobile version