ವಿಜಯಪುರ: ವಿಧಾನಸಭೆ ಚುನಾವಣೆ (Karnataka Election) ಕಣದ ಕಾವು ಬೇಸಿಗೆ ಬಿಸಿಲಿನ ಝಳಕ್ಕಿಂತ ಜಾಸ್ತಿಯಾಗಿದೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ಕಾರಣ ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ನೂರಾರು ಭರವಸೆಗಳ ಮೂಲಕ ಜನರ ಮತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ವಿಜಯಪುರ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಂದೇನವಾಜ್ ಮಹಾಬರಿ ಅವರು ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ.
“ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಹಾಗಾಗಿ ಸೈಲೆಂಟ್ ಆಗಿರುವೆ” ಎಂದು ಮಹಾಬರಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. “ನಗರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಸಂಘಟನೆ ಇಲ್ಲ, ಕಾರ್ಯಕರ್ತರ ಪಡೆ ಇಲ್ಲ. ಎರಡು ದಿನ ಪ್ರಚಾರ ನಡೆಸಿದಾಗ ಯಾವುದೇ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ ಕಣದಿಂದ ಹಿಂದಕ್ಕೆ ಸರಿದಿದ್ದೇನೆ” ಎಂದು ಬಂದೇನವಾಜ್ ಮಹಾಬರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Karnataka Election: ಸೋನಿಯಾ ಗಾಂಧಿ ವಿಷ ಕನ್ಯೆ ಹೇಳಿಕೆ; ಯತ್ನಾಳ್ ವಿರುದ್ಧ ಮೈಸೂರಿನಲ್ಲಿ ದೂರು
ಯತ್ನಾಳ್ ವಿರುದ್ಧ ಆರೋಪ
“ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ಸ್ವಯಂ ಪ್ರೇರಣೆಯಿಂದ ಕಣದಿಂದ ಹಿಂದಕ್ಕೆ ಸರಿದಿದ್ದೇನೆ. ಈ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಜೆಡಿಎಸ್ ಪಕ್ಷ ಸೇರಿ ಸಂಘಟನೆಯನ್ನು ಹಾಳು ಮಾಡಿದ್ದಾರೆ. ಈಗ ವಿಜಯಪುರದಲ್ಲಿ ಪಕ್ಷದ ಸಂಘಟನೆಯೇ ಇಲ್ಲ. ಚುನಾವಣೆ ಪ್ರಚಾರಕ್ಕೆ ಹೋದರೆ ಜನರ ಬೆಂಬಲವಿಲ್ಲ. ಹಾಗಾಗಿ, ನಾನು ಸ್ಪರ್ಧಿಸುತ್ತಿಲ್ಲ. ಚುನಾವಣೆ ಪ್ರಚಾರವನ್ನೇ ಕೈಗೊಳ್ಳುತ್ತಿಲ್ಲ” ಎಂದು ತಿಳಿಸಿದರು. ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಸ್ಪರ್ಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಅಬ್ದುಲ್ ಹಮೀದ್ ಕಣದಲ್ಲಿದ್ದಾರೆ.