ಮೈಸೂರು: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಮತ್ತೆ ಭೇಟಿಯಾಗಿ ಉಭಯ ಕುಶಲೋಪರಿ ಚರ್ಚೆ ಮಾಡಿರುವ ಬಗ್ಗೆ ಸಂಸದ ವಿ. ಶ್ರೀನಿವಾಸ ಪ್ರಸಾದ್ ಸಿಡಿಮಿಡಿಗೊಂಡಿದ್ದು, ಕಟು ಶಬ್ದ ಬಳಕೆ ಮಾಡಿದವರು, ಪಾದರಕ್ಷೆ ತೋರಿಸಿದವರು ಮತ್ತೆ ಒಂದಾಗುತ್ತಾರೆಂದರೆ ಏನು ಹೇಳುವುದು ಎಂದು ಪ್ರಶ್ನೆ ಮಾಡಿದ್ದಾರೆ. ರಾಜ್ಯದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ (Karnataka Election) ಬರುತ್ತಿರುವ ಹೊತ್ತಿನಲ್ಲಿ ಈ ಭೇಟಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತು.
ಅವರಿಬ್ಬರ ಬಗ್ಗೆ ನಾನು ಪ್ರತಿಕ್ರಿಯೆ ನೀಡದೇ ಇರುವುದೇ ಒಳ್ಳೆಯದು. ಸಿದ್ದರಾಮಯ್ಯ ಮತ್ತು ವಿಶ್ಚನಾಥ್ ಪರಸ್ಪರ ಏನೇನು ಮಾತನಾಡಿದ್ದಾರೆ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಲಿ. ಸಿದ್ದರಾಮಯ್ಯ ಬಗ್ಗೆ ವಿಶ್ವನಾಥ್ ಎಂತೆಂಥ ಕಟು ಶಬ್ದಗಳನ್ನು ಬಳಕೆ ಮಾಡಿದ್ದರು. ವಿಶ್ವನಾಥ್ ಬಗ್ಗೆ ಕೇಳಿದ್ದಕ್ಕೆ ಸಿದ್ದರಾಮಯ್ಯ ಪಾದರಕ್ಷೆ ಕಳಚಿ ತೋರಿಸಿದ್ದರು ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಅಶಾಂತಿಯಾದಂತೆ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿ
ಅಶಾಂತಿ ಸೃಷ್ಟಿಯಾಗದಂತೆ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಬೇಕು. ರಾಜ್ಯಸಭೆಯಲ್ಲಿ ಖಾಸಗಿ ಮಸೂದೆ ರೂಪದಲ್ಲಿ ಇದು ಮಂಡನೆಯಾಗಿದೆ. ಇದರ ಜಾರಿಗೆ ಸುದೀರ್ಘ ಪ್ರಕ್ರಿಯೆಗಳಿವೆ. ಕೇಂದ್ರ ಸರ್ಕಾರ ಇದಕ್ಕಾಗಿ ಸಮಿತಿ ರಚನೆ ಮಾಡಿದೆ. ಸಮಿತಿ ಏನು ವರದಿ ಕೊಡಲಿದೆ ಎಂಬುದನ್ನು ನೋಡಬೇಕು. ಎಲ್ಲ ರಾಜ್ಯಗಳೊಂದಿಗೆ ಚರ್ಚೆ ಮಾಡಿ, ಜನರ ಅಭಿಪ್ರಾಯವನ್ನು ಪಡೆದು ಇದನ್ನು ಜಾರಿ ಮಾಡಲಿ ಎಂಬುದು ನನ್ನ ಅಭಿಪ್ರಾಯ ಎಂದು ಶ್ರೀನಿವಾಸ ಪ್ರಸಾದ್ ಹೇಳಿದರು.
ಅಪ್ಪ-ಮಕ್ಕಳ ಪಕ್ಷದಲ್ಲಿ ದಲಿತರಿಗಿಲ್ಲ ಸ್ಥಾನ
ಜೆಡಿಎಸ್‌ನಲ್ಲಿ ದಲಿತ ಮುಖ್ಯಮಂತ್ರಿ ಬಗ್ಗೆ ಚರ್ಚೆಯಾಗುತ್ತಿರುವುದು ಕೇಳಿದ್ದೇನೆ. ಆದರೆ, ಅಪ್ಪ ಮಕ್ಕಳ ಪಕ್ಷದಲ್ಲಿ ದಲಿತರಿಗೆ ಎಲ್ಲಿ ಸ್ಥಾನಮಾನ ಸಿಗುತ್ತದೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ವ್ಯಂಗ್ಯವಾಡಿದ್ದಾರೆ. 92 ವರ್ಷಗಳಾಗಿದ್ದರೂ ಕೂಡ ದೇವೇಗೌಡ ಅವರೇ ರಾಜ್ಯಸಭೆಗೆ ಬರುತ್ತಾರೆ. ಅಪ್ಪ ಬಿಟ್ಟರೆ ಮಗ, ಮಗ ಬಿಟ್ಟರೆ ಆತನ ಮಗ, ಆತನ ಮಗ ಬಿಟ್ಟರೆ ಸೊಸೆ ಎಲ್ಲ ಸ್ಥಾನಮಾನಗಳು ಅವರ ಕುಟುಂಬಕ್ಕೆ ಬೇಕು. ದಲಿತರ ಮೂಗಿಗೆ ತುಪ್ಪ ಮೆತ್ತುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ಇದು ಚುನಾವಣೆ ಗಿಮಿಕ್ ಆಗಿದೆ. ರಾಜ್ಯದಲ್ಲಿ ಇವರು 100 ಸೀಟು ಗೆಲ್ಲಲು ಸಾಧ್ಯವಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.
ಇದನ್ನೂ ಓದಿ | ಸದಾಶಿವ ಆಯೋಗ ಕುರಿತು ಟ್ವೀಟ್ ಮಾಡಿ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ: ದಲಿತರಿಗೆ ವಂಚಿಸಿದ್ದು ನೀವೇ ಎಂದ ಬಿಜೆಪಿ