Site icon Vistara News

Karnataka Election: ಕಾಂಗ್ರೆಸ್‌ನ ಉಚಿತ ಘೋಷಣೆ ಸುಳ್ಳಲ್ಲ, ಛತ್ತೀಸ್‌ಗಢ, ರಾಜಸ್ಥಾನದಂತೆ ಜಾರಿ; ಪ್ರಿಯಾಂಕಾ ಗಾಂಧಿ

Karnataka Election: Vote For Congress For Your Childrens' Future, Says Priyanka Gandhi

ಪ್ರಿಯಾಂಕಾ ಗಾಂಧಿ

ಹುಬ್ಬಳ್ಳಿ: ವಿಧಾನಸಭೆ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ, ಕುಂದಗೋಳದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಪರವಾಗಿ ಮತಯಾಚನೆ ನಡೆಸಿದರು. ಕುಂದಗೋಳದಲ್ಲಿ ಬೃಹತ್‌ ರೋಡ್‌ ಶೋ ಕೂಡ ನಡೆಸಿ ಅಬ್ಬರದ ಪ್ರಚಾರ ಕೈಗೊಂಡರು. ಇದೇ ವೇಳೆ ಮಾತನಾಡಿದ ಅವರು, “ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್‌ಅನ್ನು ಗೆಲ್ಲಿಸಿ” ಎಂದು ಮನವಿ ಮಾಡಿದರು. ಹಾಗೆಯೇ, “ಕರ್ನಾಟಕದಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಸುಳ್ಳಲ್ಲ. ರಾಜಸ್ಥಾನ, ಛತ್ತೀಸ್‌ಗಢದಲ್ಲೂ ಉಚಿತ ಯೋಜನೆಗಳನ್ನು ಘೋಷಣೆ ಮಾಡಿ ಜಾರಿಗೆ ತಂದಿದ್ದೇವೆ. ಕರ್ನಾಟಕದಲ್ಲೂ ನಾವು ಮಾತು ಉಳಿಸಿಕೊಳ್ಳುತ್ತೇವೆ” ಎಂದು ಭರವಸೆ ನೀಡಿದರು.

ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಪ್ರಿಯಾಂಕಾ ಗಾಂಧಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. “ಚುನಾವಣೆ ಸಂದರ್ಭದಲ್ಲಿ ಎಲ್ಲ ಪಕ್ಷದವರು ನಿಮ್ಮ ಬಳಿ ಬರುತ್ತಾರೆ. ಆದರೆ, ನೀವು ಯೋಚಿಸಿ ಮತದಾನ ಮಾಡಿ. ನಿಮ್ಮ ಜೀವನದ ಅನುಭವದ ಪ್ರಕಾರ ಮತದಾನ ಮಾಡಿ. ಬಿಜೆಪಿ ಸರ್ಕಾರದಿಂದ ರಾಜ್ಯದ ಜನರ ಸಮಸ್ಯೆಗಳು ಹೆಚ್ಚಾಗಿವೆ. ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಹಾಗಾಗಿ, ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ. ಮಕ್ಕಳ ಭವಿಷ್ಯಕ್ಕಾಗಿ ಮತದಾನ ಮಾಡುತ್ತಿದ್ದೇನೆ ಎಂಬುದಾಗಿ ಭಾವಿಸಿ ಹಕ್ಕು ಚಲಾಯಿಸಿ” ಎಂದು ಕರೆ ನೀಡಿದರು.

ಕುಂದಗೋಳದಲ್ಲಿ ಪ್ರಿಯಾಂಕಾ ಗಾಂಧಿ ರೋಡ್‌ ಶೋ

“ಕಾಂಗ್ರೆಸ್ ಪಕ್ಷವು ಮನೆಮನೆಗೆ ಗ್ಯಾರಂಟಿ ಕಾರ್ಡ್ ಕೊಟ್ಟಿದೆ. ನನ್ನೆಲ್ಲ ಸಹೋದರಿಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಕೊಡುವ ಭರವಸೆ ನೀಡಿದ್ದೇವೆ. ನಿರುದ್ಯೋಗಿಗಳಿಗೆ ಭತ್ಯೆ ನೀಡುತ್ತೇವೆ. ಎರಡೂವರೆ ಲಕ್ಷ ಸರ್ಕಾರಿ ಹುದ್ದೆ ಭರ್ತಿ ಮಾಡುತ್ತೇವೆ. ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿ ಎಲ್ಲ ಯೋಜನೆಗಳನ್ನು ಮತ್ತೆ ಜಾರಿ ಮಾಡುತ್ತೇವೆ. ನಿಮ್ಮ ಜೀವನವನ್ನು ಸುಧಾರಿಸುವ ಆಡಳಿತ ನೀಡುತ್ತೇವೆ” ಎಂದು ಹೇಳಿದರು.

ಇದನ್ನೂ ಓದಿ: Karnataka Election 2023: ಕನ್ನಡದಲ್ಲಿ ಭಾಷಣ, ಕುರಿ ಉಡುಗೊರೆ; ಇದು ಪ್ರಿಯಾಂಕಾ ವಾದ್ರಾ ಮೇನಿಯಾ

ಭಾಷಣದ ಮಧ್ಯೆ ಕೈಕೊಟ್ಟ ಮೈಕ್‌

ಪ್ರಿಯಾಂಕಾ ಗಾಂಧಿ ಅವರು ಭಾಷಣ ಮಾಡುವ ಮಧ್ಯೆ ಮೈಕ್‌ ಕೈಕೊಟ್ಟಿತು. ಇದಕ್ಕಾಗಿ ಅವರು ಮೈಕ್‌ಅನ್ನು ಬಡಿದು ಬಡಿದು ಮಾತನಾಡಬೇಕಾಯಿತು. ಬಳಿಕ ಆಯೋಜಕರು ಬೇರೆ ಮೈಕ್‌ ತಂದುಕೊಟ್ಟರು. ಆಗ ಪ್ರಿಯಾಂಕಾ ಗಾಂಧಿ ಮಾತು ಮುಂದುವರಿಸಿದರು. ಕುಂದಗೋಳ ಪಟ್ಟಣದ ಜೆ.ಎಸ್.ಎಸ್ ವಿದ್ಯಾಪೀಠದಿಂದ ಆರಂಭವಾದ ರೋಡ್‌ಶೋ ಗಾಳಿ ಮಾರೆಮ್ಮ ದೇವಿ ವೃತ್ತದವರೆಗೂ ನಡೆಯಿತು. ಪ್ರಿಯಾಂಕಾ ಗಾಂಧಿ ಅವರಿಗೆ ಹೆಚ್ಚಿನ ಜನ ಬೆಂಬಲ ಸೂಚಿಸಿದರು. ರೋಡ್‌ ವೇಳೆ ಜೈಕಾರ ಹಾಕಲಾಯಿತು. ಕುಂದಗೋಳ ಬಳಿಕ ನವಲಗುಂದಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ ಕೈಗೊಂಡರು.

Exit mobile version