ಚಿಕ್ಕೋಡಿ: ಸದ್ಯ ನಾವು ಭಾರತೀಯ ಜನತಾ ಪಕ್ಷದಲ್ಲಿಯೇ ಇದ್ದೇವೆ. ಮುಂದೆಯೂ ಇಲ್ಲಿಯೇ ಇರಬೇಕು ಎಂಬ ಯೋಚನೆಯೂ ಇದೆ. ಈ ಬಗ್ಗೆ ದಿನ ಕಳೆದ ಹಾಗೆ ಯೋಚನೆ ಮಾಡೋಣ ಎಂದು ದಿ. ಉಮೇಶ್ ಕತ್ತಿ ಅವರ ಪುತ್ರ ನಿಖಿಲ್ ಕತ್ತಿ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ವಿಧಾನಸಭಾ ಚುನಾವಣೆಗೆ (Karnataka Election) ಸ್ಪರ್ಧೆ ಮಾಡುವ ವಿಚಾರವಾಗಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.
ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಉಮೇಶ್ ಕತ್ತಿ ಅವರ ಸಹೋದರ ರಮೇಶ ಕತ್ತಿ ಸ್ಪರ್ಧೆ ಮಾಡುತ್ತಾರೆಯೇ ಅಥವಾ ನೀವು ಸ್ಪರ್ಧೆ ಮಾಡುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ಕತ್ತಿ, ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಯಾರು ನಿಲ್ಲಬೇಕು ಎನ್ನುವ ಚರ್ಚೆ ಕುಟುಂಬದಲ್ಲಿ ಇನ್ನೂ ನಡೆದಿಲ್ಲ. ನಮ್ಮ ಕುಟುಂಬ ದುಃಖದಲ್ಲಿದೆ. ಹೀಗಾಗಿ ಯಾರು ಸ್ಪರ್ಧೆ ಮಾಡಬೇಕು ಎನ್ನುವ ವಿಚಾರ ಪ್ರಸ್ತಾಪ ಆಗಿಲ್ಲ ಎಂದು ಹೇಳಿದರು.
ನಮ್ಮ ಕುಟುಂಬ ದುಃಖದಲ್ಲಿದೆ. ನಾವು ಯಾರೂ ಅಪ್ಲಿಕೇಶನ್ ಹಾಕಿಲ್ಲ. ಜನರೇ ಈ ಬಗ್ಗೆ ಮಾತನಾಡುತ್ತಿದ್ದಾರೆ. ಪಕ್ಷದಿಂದ ಚುನಾವಣೆ ಕುರಿತು ಯಾವುದೇ ಸೂಚನೆ ಬಂದಿಲ್ಲ, ಪಕ್ಷ ನಿರ್ಧಾರ ಮಾಡಬೇಕು. ಪಕ್ಷ ಯಾರಿಗೆ ಟಿಕೆಟ್ ಕೊಡಲಿದೆಯೋ ನೋಡೋಣ, ಕೆಲಸ ಮಾಡೋಣ ಎಂದು ನಿಖಿಲ್ ಕತ್ತಿ ತಿಳಿಸಿದರು.
ಇದನ್ನೂ ಓದಿ | CT Ravi v/s Siddaramaiah | ಸಿದ್ರಾಮುಲ್ಲಾ ಖಾನ್ ಹೇಳಿಕೆ ಸರಿ: ಸಿ.ಟಿ. ರವಿ ಬೆಂಬಲಕ್ಕೆ ನಿಂತ ಅಶ್ವತ್ಥನಾರಾಯಣ