Site icon Vistara News

Karnataka Election: ಬಜರಂಗದಳಕ್ಕೂ, ಆಂಜನೇಯನಿಗೂ ಏನು ಸಂಬಂಧ; ಪ್ರಣಾಳಿಕೆ ಬದಲಿಸಲ್ಲ; ಡಿಕೆಶಿ ಸ್ಪಷ್ಟನೆ

Karnataka Election: What is the relationship between Bajarang Dal and Anjaneya; questions DK Shivakumar

ಡಿ ಕೆ ಶಿವಕುಮಾರ್

ಬೆಂಗಳೂರು: ಬಜರಂಗದಳವನ್ನು ನಿಷೇಧಿಸಲಾಗುತ್ತದೆ ಎಂದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ (Karnataka Election) ಘೋಷಣೆ ಮಾಡಿದ ಬಳಿಕ ವಿವಾದ ಭುಗಿಲೆದ್ದಿದೆ. ಕಾಂಗ್ರೆಸ್‌ಗೆ ತಿರುಗೇಟು ನೀಡಲು ಮೇ 4ರಂದು ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ ಪಠಿಸಲು ತೀರ್ಮಾನಿಸಲಾಗಿದೆ. ಇದರ ಬೆನ್ನಲ್ಲೇ, ವಿವಾದದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದು, “ಆಂಜನೇಯನಿಗೂ, ಬಜರಂಗದಳಕ್ಕೂ ಏನು ಸಂಬಂಧ” ಎಂದು ಪ್ರಶ್ನಿಸಿದ್ದಾರೆ.

“ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದರೆ ಅವರು ಏಕೆ ಗಾಬರಿ ಬೀಳುತ್ತಾರೆ? ನಾವು ಕೂಡ ಆಂಜನೇಯನ ಭಕ್ತರು. ಅವರು ಮಾತ್ರ ಭಕ್ತರಾ? ಬಿಜೆಪಿಯವರು ವಿನಾಕಾರಣ ಪ್ರಚೋದನೆ ನೀಡುತ್ತಿದ್ದಾರೆ. ಕರ್ನಾಟಕದ ಶಾಂತಿಯ ತೋಟ ಕದಲಬಾರದು, ಸೌಹಾರ್ದತೆ ಕಾಪಾಡಬೇಕು. ನಾವೂ ಹನುಮಂತನ ಭಕ್ತರು, ನಮ್ಮದು ಕೂಡ ಆಂಜನೇಯ ಪ್ರವೃತ್ತಿ. ಅಷ್ಟಕ್ಕೂ, ಆಂಜನೇಯ ಬೇರೆ, ಬಜರಂಗದಳ ಬೇರೆ” ಎಂದು ಹೇಳಿದರು.

ಬಿಜೆಪಿಯವರು ಬಜರಂಗಿ ಅಂತ ಚುನಾವಣೆ ಪ್ರಚಾರ ಮಾಡುವುದಕ್ಕಿಂತಲೂ ಜನರ ಹೊಟ್ಟೆಗೆ ಏನು ಕೊಟ್ಟಿರಿ? ಎಷ್ಟು ಉದ್ಯೋಗ ಕೊಟ್ಟಿದ್ದೀರಿ? ನಾನು ಕೂಡ ಹಿಂದು, ನಾನು ಕೂಡ ಆಂಜನೇಯನ ಭಕ್ತ, ನಾನೂ ನಿತ್ಯ ಹನುಮಾನ್‌ ಚಾಲೀಸಾ ಪಠಿಸುತ್ತೇನೆ. ಬಿಜೆಪಿಯವರು ಅಭಿವೃದ್ಧಿಯ ವಿಷಯ ಇಟ್ಟುಕೊಂಡು ರಾಜಕೀಯ ಮಾಡುವುದಿಲ್ಲ. ಬರೀ ಪ್ರಚೋದನೆ ನೀಡುವ ಕೆಲಸ ಮಾಡುತ್ತಾರೆ” ಎಂದು ಟೀಕಿಸಿದರು.

ನಾವೂ ಹನುಮಾನ್‌ ಚಾಲೀಸಾ ಪಠಿಸುತ್ತೇವೆ

ಮೇ 4ರಂದು ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ ಪಠಣದ ಕುರಿತು ಪ್ರತಿಕ್ರಿಯಿಸಿದ ಅವರು, “ನಾವು ನಿತ್ಯವೂ ಹನುಮಾನ್‌ ಚಾಲೀಸಾ ಪಠಿಸುತ್ತೇವೆ. ಅವರೊಬ್ಬರೇನಾ ಚಾಲೀಸಾ ಪಠಿಸುವುದು? ಇದಕ್ಕೂ ಮೊದಲಿನ ಆರ್‌ಎಸ್‌ಎಸ್‌ ಬೇರೆ, ಈಗಿನ ಆರ್‌ಎಸ್‌ಎಸ್‌ ಬೇರೆ. ನಮ್ಮ ಪ್ರಣಾಳಿಕೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ಏಕೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳುತ್ತಾರೆ? ಮೊದಲು ಬಿಜೆಪಿಯವರು ದೇಶವನ್ನು ಉಳಿಸಲಿ” ಎಂದು ಕುಟುಕಿದರು.

ಇದನ್ನೂ ಓದಿ: Congress Manifesto : ಬಜರಂಗದಳ ನಿಷೇಧ ಪ್ರಸ್ತಾಪ ವಿರುದ್ಧ ಮೇ 4ರಂದು ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ ಪಠಣ

ಗ್ಯಾರಂಟಿ ಕಾರ್ಡ್‌ ಐತಿಹಾಸಿಕ

“ನಾವು ನೀಡಿರುವ ಗ್ಯಾರಂಟಿ ಕಾರ್ಡ್‌ ಐತಿಹಾಸಿಕವಾಗಿದೆ. ನಮ್ಮ ಗ್ಯಾರಂಟಿಯನ್ನು ನಾವು ಕೊಟ್ಟೇ ಕೊಡುತ್ತೇವೆ. ಬಿಜೆಪಿಯವರು ಒಂದೊಂದು ವಿಷಯವನ್ನು ತೆಗೆದುಕೊಂಡು ವಿವಾದ ಸೃಷ್ಟಿಸುತ್ತಿದ್ದಾರೆ. ಆದರೆ, ಇದೆಲ್ಲ ವರ್ಕ್‌ ಆಗುವುದಿಲ್ಲ. ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ, ನಾವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ. ನಾವು 141 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಮೇ 13ರಂದು ಎಲ್ಲವೂ ಗೊತ್ತಾಗಲಿದೆ” ಎಂದು ತಿಳಿಸಿದರು.

Exit mobile version