ಬಾಗಲಕೋಟೆ: ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಹೈಕಮಾಂಡ್ ಸೂಚಿಸುವ ಮೊದಲು ಕಾಂಗ್ರೆಸ್‌ನಲ್ಲಿ ಯಾರೂ ಅಭ್ಯರ್ಥಿಯನ್ನು ಮುಂಚಿತವಾಗಿ ಘೋಷಣೆ ಮಾಡುವಂತಿಲ್ಲ ಎಂಬ ನಿಯಮವಿದ್ದರೂ ಹೈಕಮಾಂಡ್ ನಿರ್ದೇಶನ ಮೀರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ಅವರಿಗೆ ಈ ಅಧಿಕಾರವನ್ನು ಯಾರು ಕೊಟ್ಟರು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಗುರುವಾರ (ಡಿ. ೧೫) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಒಂದಿಷ್ಟು ಎಂಎಲ್‌ಎಗಳನ್ನು ತನ್ನ ಜತೆಗೆ ಇಟ್ಟುಕೊಳ್ಳಬೇಕು. ಹೀಗಾಗಿ ಅವರಿಗೆ ವಿಜಯಾನಂದ ಕಾಶಪ್ಪ ಅವರನ್ನು ಬಿಟ್ಟರೆ ಇವರಿಗೆ ಗತಿ ಇಲ್ಲ. ಅವರು ಹೇಗಾದರೂ ಮಾಡಿ ಗೆದ್ದರೆ ತನ್ನ ಹಿಂದಿರಲಿ ಎಂಬುದು ಇವರ ಹಿಂದಿನ ಉದ್ದೇಶವಾಗಿದೆ ಎಂದು ಹೇಳಿದರು.
ಕ್ಯಾಂಡಿಡೇಟ್ ಹೆಸರು ಹೇಳಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಕೊಪ್ಪಳದಲ್ಲಿ ೫ ಕ್ಯಾಂಡಿಡೇಟ್ ಹೆಸರನ್ನು ಅನೌನ್ಸ್ ಮಾಡಿ ಬಿಟ್ಟರು. ಸಿದ್ದರಾಮಯ್ಯ ಅವರಿಗೆ ಯಾರು ಅಧಿಕಾರ ಕೊಟ್ಟರು? ಎಂದು ಈಶ್ವರಪ್ಪ ಪ್ರಶ್ನಿಸಿದರು.
ಇದನ್ನೂ ಓದಿ | Karnataka Election |ಯಾವುದೇ ಭಿನ್ನಾಭಿಪ್ರಾಯ ಇಲ್ಲ, ನನ್ನನ್ನು ಮುಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ: ಬಿಎಸ್‌ವೈ
ರಾಜ್ಯದ ದಕ್ಷಿಣ ಕರ್ನಾಟಕ ಭಾಗದಲ್ಲಿ ತನಗೆ ಕಷ್ಟವೆಂದು ಆ ಭಾಗಕ್ಕೆ ಡಿ.ಕೆ. ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಕಳುಹಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಒಂದಿಷ್ಟು ಜನ ಎಂಎಲ್‌ಎಗಳು ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿರುವ ಸಿದ್ದರಾಮಯ್ಯ ಅವರಿಗೆಲ್ಲ ನನ್ನ ಹಿಂದೆ ಬರ‍್ರೀ ಎಂದು ಹೆಸರು ಘೋಷಣೆ ಮಾಡುತ್ತಾ ಹೋಗಿಬಿಡುತ್ತಿದ್ದಾರೆ ಎಂದು ಈಶ್ವರಪ್ಪ ಟೀಕಿಸಿದರು.
ಸಿದ್ದರಾಮಯ್ಯ ಅವರದ್ದು ಕುತಂತ್ರ ರಾಜಕಾರಣ. ಡಿ.ಕೆ. ಶಿವಕುಮಾರ್ ಮೇಲೆ ಪಕ್ಷದಲ್ಲೇ ಕುತಂತ್ರ ಮಾಡುತ್ತಿದ್ದಾರೆ. ಇನ್ನು ಆ ಪಕ್ಷದಲ್ಲಿ ಯಾರೂ ಮುಂದಿನ ಸಿಎಂ ಅಭ್ಯರ್ಥಿ ಬಗ್ಗೆ ಹೇಳಬಾರದು ಎಂದು ಮೊದಲು ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದರು. ಆದರೆ, ಪುನಃ ಅವರೇ ಒಕ್ಕಲಿಗರೆಲ್ಲ ನನ್ನ ಹಿಂದೆ ಬನ್ನಿ, ನಾನು ಮುಂದೆ ಲೀಡರ್ ಆಗ್ತೀನಿ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಹೇಳಿದರೆ ಆಗಲ್ಲ. ಆ ದಿಕ್ಕಿನಲ್ಲಿ ಡಿಕೆಶಿ ಸಹ ನಡೆಯಬೇಕು. ಕೆಪಿಸಿಸಿ ಅಧ್ಯಕ್ಷನಾಗಿ ಬೇರೆಯವರಿಗೆ ಮಾರ್ಗದರ್ಶನ ಮಾಡಬೇಕು. ಆದರೆ, ಆ ಕೆಲಸವನ್ನು ಅವರೂ ಮಾಡುತ್ತಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ವೀಕ್ ಲೀಡರ್ ಆಗಿದ್ದಕ್ಕೆ ಸೋತಿದ್ದಾರೆ. ಸ್ಟ್ರಾಂಗ್ ಸಿಎಂ ಆಗಿದ್ದರೆ ಯಾಕೆ ಸೋಲುತ್ತಿದ್ದರು? ಕಾಂಗ್ರೆಸ್ ಯಾಕೆ ಸೋಲುತ್ತಿತ್ತು? ಯಾವಾಗಲೂ ಯಾರು ವೀಕ್ ಅಂತಿರ್ತಾರೋ ಅವರೇ ವೀಕು ಎಂದು ಈಶ್ವರಪ್ಪ ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀಕ್ ಲೀಡರ್ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಇದನ್ನೂ ಓದಿ | JDS Pancharatna Yatre | ಇಂದಿನಿಂದ ಮಾಗಡಿಯಿಂದ ಎಚ್‌ಡಿಕೆ ಯಾತ್ರೆ ಪುನರಾರಂಭ
ಸಿದ್ದರಾಮಯ್ಯ ಅವರು ಅಪ್ಪ-ಅಮ್ಮ ಯಾರೂ ಎಂದೇ ಹೇಳುತ್ತಿಲ್ಲ. ಒಂದು ಸಾರಿ ಬಾದಾಮಿ, ಮತ್ತೊಂದು ಸಾರಿ ಕೋಲಾರ, ಮಗದೊಮ್ಮೆ ವರುಣ ಎಂದು ಹೇಳುತ್ತಾರೆ. ಅವರಿಗೆ ಕ್ಷೇತ್ರವೇ ಗೊತ್ತಿಲ್ಲ. ಇನ್ನು ಬಿಜೆಪಿಯಲ್ಲಿ ಅಭಿವೃದ್ಧಿ ನೋಡಿ ನೀವೇ ನಿಲ್ಲಿ ಎಂದು ಹೇಳುವ ಪರಿಸ್ಥಿತಿ ಇದೆ. ಆದರೆ, ಕಾಂಗ್ರೆಸ್‌ನಲ್ಲಿ ಕ್ಯಾಪ್ಟನ್‌ಗೆ ಫೇಸ್ ಇಲ್ಲ, ಪಾಪ ಫಾಲೋವರ್ಸ್ ಗತಿಯೇನು ಎಂದು ಈಶ್ವರಪ್ಪ ಪ್ರಶ್ನಿಸಿದರು.
ಸಿದ್ದರಾಮಯ್ಯ ಜಾತಿ ಹೆಸರಲ್ಲಿ ವೋಟ್ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕುರುಬರ, ಹಿಂದುಳಿದವರ, ಅಲ್ಪಸಂಖ್ಯಾತರ ನಾಯಕ ನಾನು ಎಂದು ಹೇಳಿಕೊಳ್ಳುತ್ತಿದ್ದಾರೆ. ನಾನು ಎಲ್ಲ ಜನಾಂಗದ ನಾಯಕ ಅಂತ ಬಾಯಲ್ಲಿ ಹೇಳಿದರೂ, ಅವರು ಸರ್ವ ಜನಾಂಗದ ನಾಯಕನಾಗಲು ಆಗದು. ಅದು ಹೋಗಲಿ ಕುರುಬರ ನಾಯಕನೂ ಆಗಲಾರರು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಇದನ್ನೂ ಓದಿ | Blackmail case | ಬ್ಲ್ಯಾಕ್‌ಮೇಲ್ ಆರೋಪದಡಿ ಹಿಂದು ಮಹಾಸಭಾ ಮುಖಂಡನ ಬಂಧನ