Site icon Vistara News

Karnataka Election : ಹೌದು ನಾನು ಸಿಎಂ ಸ್ಥಾನದ ಆಕಾಂಕ್ಷಿ, ಇದರಲ್ಲೇನಾದರೂ ತಪ್ಪಿದೆಯಾ ಎಂದು ಕೇಳಿದ ಸಿದ್ದರಾಮಯ್ಯ

siddaramaiah

ಬೆಳಗಾವಿ: ʻʻಹೌದು ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ, ಈಸ್ ಇಟ್ ಆ್ಯನಿ ರಾಂಗ್?ʼʼ-ಹೀಗೆಂದು ನೇರವಾಗಿ ಪ್ರಶ್ನೆ ಮಾಡಿದರು ಕಾಂಗ್ರೆಸ್‌ ನಾಯಕ (Karnataka Election) ಸಿದ್ದರಾಮಯ್ಯ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಈ ಮಾತು ಹೇಳಿದರು. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕೆಲವು ಕಡೆ ʻʻನಾನು ಮುಖ್ಯಮಂತ್ರಿಯಾಗಲು ಅವಕಾಶ ಕೊಡಿʼ ಎಂದು ಮನವಿ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆ ಮಹತ್ವ ಪಡೆದಿದೆ.

ಆದರೆ, ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಲ್ಲ. ಬದಲಾಗಿ, ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ಇದೆ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.

ʻʻಹೌದು ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ, ಇದರಲ್ಲಿ ಏನಾದರೂ ತಪ್ಪಿದೆಯಾʼʼ ಎಂದು ಕೇಳಿದ ಸಿದ್ದರಾಮಯ್ಯ, ʻʻಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗ್ತೀನಿ ಅಂತಾರೆ, ಈಸ್ ಇಟ್ ಆ್ಯನಿ ರಾಂಗ್? ಕೊನೆಗೆ ಎಂಎಲ್‌ಗಳು ಲೀಡರ್ ಆಯ್ಕೆ ಮಾಡಿ ಹೈಕಮಾಂಡ್‌ಗೆ ಕೊಡಬೇಕು. ನೀವು ಆಕಾಂಕ್ಷಿಗಳೇ ಆಗಬೇಡಿ ಅಂಥಾ ಹೇಳಿದ್ರೆ, ಇದೇನು ಡಿಕ್ಟೇಟರ್‌ಷಿಪಾ?ʼʼ ಎಂದು ಪ್ರಶ್ನಿಸಿದರು.

ʻʻಇದು ಪ್ರಜಾಪ್ರಭುತ್ವ. ಎಲ್ಲರಿಗೂ ಆಕಾಂಕ್ಷಿ ಆಗೋ ಅವಕಾಶ ಇದೆ. ನಿಮಗೂ ಅವಕಾಶ ಇದೆ. ಪ್ರಹ್ಲಾದ್ ಜೋಶಿಗೆ ಪಾಪ ಪ್ರಜಾಪ್ರಭುತ್ವ ಗೊತ್ತಿಲ್ಲ. ನಾವು ಹೊಡೆದಾಡುತ್ತಿಲ್ಲ. ಆಕಾಂಕ್ಷಿಗಳಿದ್ದೀವಿ. ಎಂಎಲ್‌ಎ ಗಳು ಯಾರು ನಾಯಕ ಆಗಬೇಕು ಅಂತಾ ತೀರ್ಮಾನ ಮಾಡ್ತಾರೆ. ಶಾಸಕರು, ಹೈಕಮಾಂಡ್ ಮುಖ್ಯಮಂತ್ರಿ ಯಾರಬೇಕು ಎಂದು ತೀರ್ಮಾನ ಮಾಡುತ್ತಾರೆʼʼ ಎಂದ ಸಿದ್ದರಾಮಯ್ಯ ಅವರು, ʻʻಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಇಲ್ಲ. ಹೀಗಾಗಿ ಯಡಿಯೂರಪ್ಪ ಅವರನ್ನು ಕಿತ್ತಿ ಹಾಕಿ, ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಿದ್ರು. ಆಗ ಎಂಎಲ್‌ಎಗಳ ಅಭಿಪ್ರಾಯ ಪಡೆದ್ರಾ? ಎಂಎಲ್‌ಎಗಳು ಎಲೆಕ್ಟ್ ಮಾಡಿದ್ರಾ? ಬಿಜೆಪಿ ಅಂದ್ರೆ ಪ್ರಜಾಪ್ರಭುತ್ವ ಇಲ್ಲ, ಕಾಂಗ್ರೆಸ್ ಅಂದ್ರೆ ಪ್ರಜಾಪ್ರಭುತ್ವ ಇದೆʼʼ ಎಂದರು.

ಇದನ್ನೂ ಓದಿ : Lokayukta Raid : ಬಿಜೆಪಿಯ ಭ್ರಷ್ಟಾಚಾರಕ್ಕೆ ಲೋಕಾಯುಕ್ತರೇ ಸಾಕ್ಷಿ ಕೊಟ್ಟಿದ್ದಾರೆ; ಡಿಕೆ ಶಿವಕುಮಾರ್​ ಲೇವಡಿ

Exit mobile version