Site icon Vistara News

Karnataka Election : ಕರಾವಳಿ, ಮಲೆನಾಡಲ್ಲಿ ಯೋಗಿ ಹವಾ; ಪುತ್ತೂರಲ್ಲಿ ಪುತ್ತಿಲ ಎಫೆಕ್ಟ್‌ ತಗ್ಗಿಸಲು ಯತ್ನ

Yogi Adityanath campaigns in coastal and Malenadu

Yogi Adityanath campaigns in coastal and Malenadu

ಬೆಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರು ಶನಿವಾರ ಕರಾವಳಿ ಮತ್ತು ಮಲೆನಾಡಿನಲ್ಲಿ ಚುನಾವಣಾ ಪ್ರಚಾರದ (Karnataka Election 2023) ಮೂಲಕ ಧೂಳೆಬ್ಬಿಸಿದರು. ಹಿಂದುತ್ವ ಮತ್ತು ಬಿಜೆಪಿಯ ಭದ್ರಕೋಟೆಯಾಗಿರುವ ಎರಡೂ ಭಾಗಗಳಲ್ಲಿ ಹಿಂದುತ್ವದ ಫೈರ್‌ ಬ್ರಾಂಡ್‌ನ ನಾಯಕನನ್ನು ಕರೆತಂದು ಬಿಜೆಪಿ ಪ್ರಚಾರ ನಡೆಸಿದೆ. ಬೆಳಗ್ಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಉಡುಪಿ ಜಿಲ್ಲೆಯ ಕಾರ್ಕಳ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅವರು ಬೃಹತ್‌ ಸಮಾವೇಶ ಮತ್ತು ರೋಡ್‌ ಶೋಗಳಲ್ಲಿ ಭಾಗವಹಿಸಿದರು.

ಬಜರಂಗ ದಳ ಬ್ಯಾನ್‌ ಮಾಡುವುದು ಸಾಧ್ಯವೇ ಇಲ್ಲ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಶೃಂಗೇರಿ ಬಿಜೆಪಿ ಅಭ್ಯರ್ಥಿ ಡಿ.ಎನ್‌. ದೇವರಾಜ್‌ ಪರ ಮತ ಯಾಚಿಸಿ ಮಾತನಾಡಿದ ಅವರು, ಬಜರಂಗ ದಳವನ್ನು ಬ್ಯಾನ್‌ ಮಾಡುವುದು ಸಾಧ್ಯವೇ ಇಲ್ಲ ಎಂದರು

ʻʻಒಂದೇ ಭಾರತ ಶ್ರೇಷ್ಠ ಭಾರತ ನಮ್ಮ ಕಲ್ಪನೆ. ಕಾಂಗ್ರೆಸ್ ನವರಿಗೆ ಶ್ರೇಷ್ಠ ಭಾರತ ಇಷ್ಟ ಇಲ್ಲ. ಅದು ಈಗ ಹನುಮಾನ್‌ನನ್ನು ಪೂಜಿಸುವ ಬಜರಂಗ ದಳವನ್ನು ಬ್ಯಾನ್ ಮಾಡುವ ಮಾತು ಆಡುತ್ತಿದೆ. ಆದರೆ ಈ ಮಾತುಗಳನ್ನು ಇಂದು ಸಮಾಜ ಸ್ವೀಕಾರ ಮಾಡುವುದಿಲ್ಲ. ಬ್ಯಾನ್‌ ಮಾಡುವುದು ಸಾಧ್ಯವೂ ಇಲ್ಲ ಎಂದರು.

ಪುತ್ತೂರಿನಲ್ಲಿ ಯೋಗಿ ರೋಡ್‌ ಶೋ

ಜೆಪಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರ ವಿರುದ್ಧ ಹಿಂದು ಸಂಘಟನೆಗಳ ನಾಯಕ ಅರುಣ್‌ ಪುತ್ತಿಲ ಜಿದ್ದಿಗೆ ಬಿದ್ದು ಸ್ಪರ್ಧಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಯೋಗಿ ಆದಿತ್ಯನಾಥ್‌ ಅವರ ಮೂಲಕ ಹಿಂದು ಮತ ಕ್ರೋಡೀಕರಣದ ಮಂತ್ರವನ್ನು ಬಿಜೆಪಿ ಜಪಿಸಿತು. ಆದಿತ್ಯನಾಥ್‌ ಅವರು ಪುತ್ತೂರು ಮಹಾಲಿಂಗೇಶ್ವರ ದೇವಾಲಯದಿಂದ ಕಿಲ್ಲೆ ಮೈದಾನದ ವರೆಗೆ ಯೋಗಿ ರೋಡ್ ಶೋ ನಡೆಸಿ ಬಿಜೆಪಿ ಪರ ಮತ ಯಾಚಿಸಿದರು.

ಬಜರಂಗ ದಳ ನಿಷೇಧ ಪ್ರಸ್ತಾಪವನ್ನು ಉಲ್ಲೇಖಿಸಿದ ಅವರು, ʻʻನಾನು ಶ್ರೀ ರಾಮ ಪಾವನ ಭೂಮಿ ಅಯೋಧ್ಯೆಯಿಂದ. ಶ್ರೀ ಹನುಮಾನ್ ಹುಟ್ಡಿದ ವೀರ ಭೂಮಿ ಕರ್ನಾಟಕಕ್ಕೆ ಬಂದಿದ್ದೇನೆ. ಉತ್ತರ‌ ಪ್ರದೇಶ ಮತ್ತು ಕರ್ನಾಟಕದ ಸಂಬಂಧ ಬಹಳ ಪ್ರಾಚೀನವಾದದ್ದು. ಪ್ರಭು ಶ್ರೀರಾಮನ ವನವಾಸದ ಹೊತ್ತಲ್ಲಿ ಭಜರಂಗ ಬಲಿ ಹನುಮ ಸಿಕ್ಕಿದ್ದು ಈ ಪಾವನ ಭೂಮಿಯಲ್ಲಿ. ರಾಜ್ಯದ ಡಬಲ್ ಎಂಜಿನ್ ಸರ್ಕಾರ ಭಜರಂಗ ಬಲಿಯ ಪಾವನ ಭೂಮಿಯಲ್ಲಿ ಹನುಮಾನನ ಭವ್ಯ ಮಂದಿರ ನಿರ್ಮಿಸುತ್ತಿದೆ. ಇದೇ ಹೊತ್ತಲ್ಲಿ ಕಾಂಗ್ರೆಸ್‌ ಹಿಂದುಗಳ ನಂಬಿಕೆ, ಅಸ್ಮಿತೆಯನ್ನು ಅಪಮಾನಿಸುತ್ತಿದೆʼʼ ಎಂದರು. ಅರುಣ್‌ ಪುತ್ತಿಲ ಅವರು ಇಲ್ಲಿ ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡುತ್ತಿದ್ದು, ಅವರ ಕಡೆಗೆ ಸರಿದಿರುವ ಯುವಕರನ್ನು ಸೆಳೆಯುವ ರೀತಿಯಲ್ಲಿ ಬಿಜೆಪಿ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಅದರ ಭಾಗವಾಗಿಯೇ ಯೋಗಿ ಆದಿತ್ಯನಾಥ್‌ ಅವರನ್ನು ಕರೆಸಲಾಗಿದೆ ಎನ್ನಲಾಗುತ್ತಿದೆ.

ಕಾರ್ಕಳದಲ್ಲೂ ಯೋಗಿ ಅಬ್ಬರ, ಅಯೋಧ್ಯೆಗೆ ಬನ್ನಿ ಎಂದು ಆಹ್ವಾನ

ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ ವಿ. ಸುನಿಲ್‌ ಕುಮಾರ್‌ ಅವರ ಪರವಾಗಿ ಮತ ಯಾಚಿಸಲು ಯೋಗಿ ಆದಿತ್ಯನಾಥ್‌ ಆಗಮಿಸಿ, ಬೃಹತ್‌ ರೋಡ್‌ ಶೋ ನಡೆಸಿದರು. ಇಲ್ಲಿ ಸುನಿಲ್‌ ಕುಮಾರ್‌ ಅವರಿಗೆ ವಿರುದ್ಧವಾಗಿ ಶ್ರೀರಾಮ ಸೇನೆಯ ಸಂಚಾಲಕ ಪ್ರಮೋದ್‌ ಮುತಾಲಿಕ್‌ ಕಣಕ್ಕ ಇಳಿದಿದ್ದಾರೆ. ಹಿಂದುಗಳ ಮತ ಒಡೆಯದಂತೆ ಯೋಗಿ ಆದಿತ್ಯನಾಥ್‌ ಮೂಲಕ ಇಲ್ಲಿ ಪ್ರಯತ್ನ ಸಾಗಿದೆ.

ʻʻಟೀಂ ಇಂಡಿಯಾಗೆ ಮೋದಿ ಕ್ಯಾಪ್ಟನ್ ಆಗಿದ್ದಾರೆ. ಪ್ರಧಾನಿ ಮೋದಿ ತಂಡದಲ್ಲಿ ಕರ್ನಾಟಕ ಯಾವತ್ತೂ ಇರಬೇಕು. ನೀವು ಯಾವತ್ತೂ ರಾಷ್ಟ್ರವಾದಕ್ಕೆ ಸಹಕಾರ ನೀಡಿದ್ದೀರಿ. ರಾಷ್ಟವಾದದ ಕಿಡಿ‌ ಮನೆ ಮನೆ ತಲುಪಬೇಕುʼʼ ಎಂದು ಹೇಳಿದರು.

ʻʻಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಪೂರ್ಣವಾಗುತ್ತದೆ. ರಾಮಮಂದಿರದಲ್ಲಿ‌ ಕರ್ನಾಟಕ ಕರಸೇವಕರ ಕೊಡುಗೆ ದೊಡ್ಡದು. ಭವ್ಯ ಮಂದಿರದ ಉದ್ಘಾಟನೆ ವೇಳೆ ಕರ್ನಾಟಕ ವಾಸಿಗಳನ್ನು ಆಹ್ವಾನಿಸಲು ಬಂದಿದ್ದೇನೆʼʼ ಎಂದು ಹೇಳಿದರು.

ಹೊನ್ನಾವರದಲ್ಲಿ ಭಟ್ಕಳ, ಕುಮಟಾ ಅಭ್ಯರ್ಥಿಗಳ ಪರ ಪ್ರಚಾರ

ಹೊನ್ನಾವರದ ಸೇಂಟ್ ಅಂಥೋನಿ ಶಾಲಾ ಮೈದಾನದಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ ಅವರು, ಕುಮಟಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ, ಭಟ್ಕಳ ಕ್ಷೇತ್ರ ಅಭ್ಯರ್ಥಿ ಸುನೀಲ್ ನಾಯ್ಕ ಪರ ಮತ ಯಾಚಿಸಿದರು.

ಇದನ್ನೂ ಓದಿ : Modi in Karnataka : ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ; ಜನರ ಸಂಭ್ರಮದ ಕಲರ್‌ಫುಲ್‌ ಚಿತ್ರಗಳು ಇಲ್ಲಿವೆ

Exit mobile version