ರಮೇಶ ದೊಡ್ಡಪುರ, ಬೆಂಗಳೂರು
ವಿಧಾನಸಭೆ ಚುನಾವಣೆ (Karnataka Election) ಹತ್ತಿರವಾದಂತೆಲ್ಲ ಟಿಕೆಟ್ ಆಕಾಂಕ್ಷಿಗಳ ಚಟುವಟಿಕೆಯೂ ತೀವ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕರಿಗೆ ರಾಜಕೀಯ ಪಕ್ಷಗಳು ಹೆಚ್ಚೆಚ್ಚು ಮಣೆ ಹಾಕುತ್ತಿರುವುದು ಯುವ ರಾಜಕಾರಣಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ಮೂರೂ ಪಕ್ಷಗಳಲ್ಲಿ ಮುಂದಿನ ಪೀಳಿಗೆಯ ಟಿಕೆಟ್ ಆಕಾಂಕ್ಷಿಗಳಿದ್ದು, ಇವರಲ್ಲಿ ಬಹಳಷ್ಟು ಜನರು ರಾಜಕೀಯ ಕುಟುಂಬದ ಹಿನ್ನೆಲೆ ಉಳ್ಳವರು. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಕೆಲವರೂ ಹೇಗಾದರೂ ಮಾಡಿ ಟಿಕೆಟ್ ಗಿಟ್ಟಿಸಿ ವಿಧಾನಸೌಧ ಪ್ರವೇಶಿಸುವ ಉಮೇದಿನಲ್ಲಿದ್ದಾರೆ.
ಕುಟುಂಬದ ಹಿನ್ನೆಲೆ ಹೊಂದಿರುವವರು, ಹೊಂದಿಲ್ಲದೆ ಇರುವವರೂ ಟಿಕೆಟ್ ಪಡೆಯಲು ಮೊದಲಿಗೆ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದಾರೆ ಎನ್ನುವುದು ಮುಖ್ಯ ಅಂಶ. ಯುವಕರಾದ್ಧರಿಂದ ಬಹುತೇಕರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಇರುವಿಕೆ ಹಾಗೂ ಕೆಲಸಗಳನ್ನು ಜನರಿಗೆ ಮತ್ತು ಪಕ್ಷದ ವರಿಷ್ಠರಿಗೆ ಮುಟ್ಟಿಸುತ್ತಿದ್ದಾರೆ. ಮೂರೂ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿರುವ ಕೆಲ ಪ್ರಮುಖರ ಪಟ್ಟಿ ಹಾಗೂ ಕಿರುಪರಿಚಯ ಕೆಳಗಿನಂತಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಗಳು
ಡಾ. ಸಂದೀಪ್ ಕುಮಾರ್, ಆನೇಕಲ್
ರಾಜ್ಯ ಯುವಮೋರ್ಚಾ ಅಧ್ಯಕ್ಷರಾಗಿರುವ ಡಾ. ಸಂದೀಪ್ ಕುಮಾರ್, ಎಸ್‌ಸಿ ಮೀಸಲು ಕ್ಷೇತ್ರ ಆನೇಕಲ್‌ನಿಂದ ಟಿಕೆಟ್ ಆಕಾಂಕ್ಷಿ. ಯುವ ಮೋರ್ಚಾ ವತಿಯಿಂದ ಸಂಘಟನಾತ್ಮಕವಾಗಿ ಅನೇಕ ಕಾರ್ಯಗಳನ್ನು ನಡೆಸಿದ್ದು, ಪ್ರತಿ ಮಂಡಲದವರೆಗೆ ಪದಾಧಿಕಾರಿಗಳನ್ನು ನೇಮಿಸಿ ಕ್ರಿಯಾಶೀಲವಾಗಿಸಿದ್ದಕ್ಕೆ ವರಿಷ್ಠರಿಂದ ಮೆಚ್ಚುಗೆ ಗಳಿಸಿದ್ದಾರೆ. ಮಾಜಿ ಐಎಎಸ್ ಅಧಿಕಾರಿ ಕೆ. ಶಿವರಾಮ್‌ಗಿಂತ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಸಮುದಾಯ ಲೆಕ್ಕಾಚಾರದಲ್ಲೂ ಮೇಲುಗೈ ಹೊಂದಿದ್ದಾರೆ. ಸಂಘ ಪರಿವಾರದ ಬೆಂಬಲವಿದೆ.
ಅನಿಲ್ ಶೆಟ್ಟಿ, ಬಿಟಿಎಂ ಲೇಔಟ್
ಬಿಜೆಪಿ ಯುವಮೋರ್ಚಾ ಪದಾಧಿಕಾರಿಯಾಗಿರುವ ಅನಿಲ್ ಶೆಟ್ಟಿ ಅನೇಕ ಘಟಾನುಘಟಿ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ಕ್ಷೇತ್ರದಲ್ಲಿ ಈಗಾಗಲೆ ಎರಡು ಮೂರು ವರ್ಷದಿಂದ ಕ್ರಿಯಾಶೀಲರಾಗಿದ್ದಾರೆ. ಅನೇಕ ಬಾರಿ ರಾಮಲಿಂಗಾರೆಡ್ಡಿ ಅವರ ಬೆಂಬಲಿಗರ ಜತೆಗೆ ವಾಗ್ವಾದ, ಹಗ್ಗಜಗ್ಗಾಟ ನಡೆದಿದೆ. ಬಿಜೆಪಿಯಿಂದ ಬೇರೆ ಆಕಾಂಕ್ಷಿಗಳು ಕಡಿಮೆ ಇರುವುದರಿಂದ ಟಿಕೆಟ್ ಲಭಿಸುವುದು ಸುಲಭ ಎನ್ನಲಾಗುತ್ತಿದೆ.
ಎಚ್.ಸಿ. ತಮ್ಮೇಶ್ ಗೌಡ, ಬ್ಯಾಟರಾಯನಪುರ
ಎಬಿವಿಪಿ ಹಿನ್ನೆಲೆಯ ತಮ್ಮೇಶ್‌ಗೌಡ, ಈ ಹಿಂದೆ ರಾಜ್ಯ ಬಿಜೆಪಿ ಪ್ರಧಾನಕಾರ್ಯದರ್ಶಿಯಾಗಿದ್ದವರು. ಇತ್ತೀಚಿನವರೆಗೂ ಕರ್ನಾಟಕ ವಿದ್ಯುತ್ ಕಂಪನಿ ಅಧ್ಯಕ್ಷರಾಗಿದ್ದರು. ಬಿ.ವೈ. ವಿಜಯೇಂದ್ರ ತಂಡದಲ್ಲಿದ್ದು, ಪಕ್ಷದ ಅಸ್ತಿತ್ವವೇ ಇಲ್ಲದ ಕೆ.ಆರ್. ಪೇಟೆ ಹಾಗೂ ಶಿರಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದ ಕ್ರೆಡಿಟ್ ಇದೆ. ಬ್ಯಾಟರಾಯನಪುರದಲ್ಲಿ ಈಗಾಗಲೆ ಕೇಸರಿ ಫೌಂಡೇಶನ್ ಮೂಲಕ ವಿವಿಧ ಸೇವಾ ಕಾರ್ಯಗಳು, ಜನಸಂಪರ್ಕ ಯಾತ್ರೆಗಳನ್ನು ನಡೆಸುತ್ತ ಸಕ್ರಿಯರಾಗಿದ್ದಾರೆ.
ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಕುಂದಗೋಳ
ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಟಿಕೆಟ್ ಆಕಾಂಕ್ಷಿ. ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಬಾಳಿಕಾಯಿ, ಸಂಘಟನೆಯಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕ ಸಿ.ಎಸ್. ಶಿವಳ್ಳಿ ಅವರ ನಿಧನದ ನಂತರ ತೆರವಾಗಿದ್ದ ಕ್ಷೇತ್ರದಲ್ಲಿ ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಶಾಸಕಿಯಾಗಿದ್ದಾರೆ.
ಅಮರೇಶ್ ರೈತನಗರ್, ಕನಕಗಿರಿ
ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಅಮರೇಶ್ ರೈತನಗರ್, ಕನಕಗಿರಿಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ. ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಜತೆಗೆ ಸ್ಥಳೀಯವಾಗಿಯೂ ತಮ್ಮದೇ ತಂಡದ ಮೂಲಕ ಗುರುತಿಸಿಕೊಂಡಿದ್ದಾರೆ.
ಸಪ್ತಗಿರಿ ಗೌಡ, ಗಾಂಧಿನಗರ
ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರ ಗೌಡ ಅವರ ಪುತ್ರ ಸಪ್ತಗಿರಿ ಗೌಡ ಗಾಂಧಿನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ. ಕಳೆದ ಬಾರಿ ಅಂತಿಮ ಹಂತದಲ್ಲಿ ಟಿಕೆಟ್ ದಕ್ಕಿಸಿಕೊಂಡು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಸಾಕಷ್ಟು ಪೈಪೋಟಿ ನೀಡಿದ್ದರು. ಈ ಬಾರಿ ಸಿದ್ಧತೆ ನಡೆಸಿ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು, ಟಿಕೆಟ್ ಸಿಕ್ಕರೆ ಫಲಿತಾಂಶವನ್ನು ತಮ್ಮ ಕಡೆ ಮಾಡಿಕೊಳ್ಳುವ ವಿಶ್ವಾಸ ಹೊಂದಿದ್ದಾರೆ.
ಬಿ.ವೈ. ವಿಜಯೇಂದ್ರ, ಶಿಕಾರಿಪುರ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಈ ಬಾರಿ, ಶಿಕಾರಿಪುರದಿಂದ ಸ್ಪರ್ಧಿಸುವುದು ಬಹುತೇಕ ಖಚಿತ. ಸ್ವತಃ ಬಿ.ಎಸ್. ಯಡಿಯೂರಪ್ಪ ಅವರೇ ಈ ಘೋಷಣೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ವರುಣ ಕ್ಷೇತ್ರದ ಕುರಿತೂ ಆಸಕ್ತಿಯ ಮಾತನ್ನು ವಿಜಯೇಂದ್ರ ಆಡಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಬಲ ಸಿಗುತ್ತದೆ ಎನ್ನುವುದು ಅನೇಕರ ಲೆಕ್ಕಾಚಾರ. ಆದರೆ ಈಗಿನ ಬಿಜೆಪಿ ಹೈಕಮಾಂಡ್ ನಿರ್ಧಾರವನ್ನು ಊಹೆ ಮಾಡುವುದು ಕಷ್ಟವಾದ್ಧರಿಂದ ಟಿಕೆಟ್ ಸಿಕ್ಕರೆ ಎಲ್ಲಿ ಸಿಗುತ್ತದೆ ಎನ್ನುವ ಪ್ರಶ್ನೆ ಉಳಿದಿದೆ. ಟಿಕೆಟ್ ಲಭಿಸಿದರೆ ಗೆದ್ದುಕೊಂಡು ಬರುತ್ತಾರೆ ಎನ್ನುವುದರಲ್ಲಿ ಬಿಜೆಪಿಗರಿಗೆ ಅನುಮಾನವಿಲ್ಲ.
ಶರಣು ತಳ್ಳಿಕೇರಿ, ಕುಷ್ಟಗಿ
ವಿದ್ಯಾರ್ಥಿಪರ ಹಾಗೂ ರೈತಪರ ಹೋರಾಟಗಳಲ್ಲಿ ಗುರುತಿಸಿಕೊಂಡ ಶರಣು ತಳ್ಳಿಕೇರಿ ಈ ಹಿಂದೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿದ್ದವರು. ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ಶರಣು ತಳ್ಳಿಕೇರಿ ಇದೀಗ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರಾಗಿದ್ದಾರೆ. ಕರ್ನಾಟಕ ಕುರಿಗಾರರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳ ಅಧ್ಯಕ್ಷರೂ ಆಗಿ ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ವಿವಿಧ ಉಪಚುನಾವಣೆಗಳಲ್ಲಿ ಜಯಗಳಿಸಿದ್ದ ಬಿ.ವೈ. ವಿಜಯೇಂದ್ರ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ.
ಸಂತೋಷ್ ಕೆಂಚಾಂಬ, ಬೇಲೂರು
ಹಾಸನ ಜಿಲ್ಲೆಯ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಸರುವಾಸಿಯಾಗಿದ್ದ , ವೀರಶೈವ ಲಿಂಗಾಯತ ಸಮುದಾಯದ ಕೆಂಚಾಂಬ ಕುಟುಂಬದ ಸಂತೋಷ್ ಕೆಂಚಾಂಬ ಕ್ಷೇತ್ರದಲ್ಲಿ ಸಕ್ರಿಯವಾಗಿ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೆ ಸುಮಾರು ಎರಡು ವರ್ಷದಿಂದ ಬೇಲೂರಿನಲ್ಲೇ ನೆಲೆಸಿ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಜಿ.ಎಸ್. ಶ್ಯಾಮ್, ಮಾಯಕೊಂಡ
ಉದ್ಯಮಿ ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ. ಸಂಘ ಪರಿವಾರದ ಜತೆ ಉತ್ತಮ ಬಾಂಧವ್ಯ ಹೊಂದಿದ್ದು, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಯುವ ಆಕಾಂಕ್ಷಿ, ಈಗಾಗಲೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ.
ಉಳಿದಂತೆ ದೊಡ್ಡಬಳ್ಳಾಪುರದಿಂದ ರಾಜ್ಯ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ವಸಂತ ಗೌಡ, ಕಾಪು ಕ್ಷೇತ್ರದಿಂದ ಶೇಷಾ ನಾಯಕ್, ಮಧುಗಿರಿ ಕ್ಷೇತ್ರದಿಂದ ಚಿತ್ರದುರ್ಗ ಯುವಮೋರ್ಚಾ ಅಧ್ಯಕ್ಷ ಹನುಮಂತೇಗೌಡ, ಬೀಳಗಿಯಿಂದ ಆನಂದ ಇಂಗಳಗೋವಿ ಸೇರಿ ಅನೇಕ ಯುವಕರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
ಐಶ್ವರ್ಯ ಮಹದೇವ್, ಕೆ.ಆರ್. ನಗರ
ಸಿದ್ದರಾಮಯ್ಯ ಆಪ್ತರಾಗಿದ್ದ ಮಂಚನಹಳ್ಳಿ ಮಹದೇವ್ ಅವರ ಪುತ್ರಿ ಐಶ್ವರ್ಯ ಮಹದೇವ್, ಇದೀಗ ಎಐಸಿಸಿ ಮಾಧ್ಯಮ ಸಂವಹನಕಾರರ ತಂಡದಲ್ಲಿದ್ದಾರೆ. ಕೆ.ಆರ್. ನಗರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲೂ ಐಶ್ವರ್ಯ ಟಿಕೆಟ್ ಕೇಳಿದ್ದರು. ಆದರೆ ಸಭೆಯೊಂದರಲ್ಲಿ ರವಿಶಂಕರ್ ಅವರ ಹೆಸರನ್ನು ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ನಂತರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಸಾ.ರಾ. ಮಹೇಶ್ ವಿರುದ್ಧ ರವಿಶಂಕರ್ ಸೋಲುಂಡಿದ್ದರು. ಈ ಬಾರಿಯೂ ಐಶ್ವರ್ಯ ಟಿಕೆಟ್ ಅಕಾಂಕ್ಷಿ. ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.
ಸಂಯುಕ್ತ ಪಾಟೀಲ್, ವಿಜಯಪುರ ನಗರ
ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್, ವಿಜಯಪುರ ನಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿ. ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕಿಯಾಗುವ ಮೂಲಕ ಈಗಾಗಲೆ ರಾಜಕೀಯ ಪಟ್ಟುಗಳನ್ನು ಅರಿತಿರುವ ಸಂಯುಕ್ತ, ಇದೀಗ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಹೌದು. ಕಾಂಗ್ರೆಸ್‌ನಿಂದ ಟಿಕೆಟ್ ಲಭಿಸಿದರೆ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಸೆಣಸಲು ಸಿದ್ಧರಾಗಿದ್ದಾರೆ.
ನಿಖಿಲ್ ಕೊಂಡಜ್ಜಿ, ಹರಿಹರ
ಕೇಂದ್ರದ ಮಾಜಿ ಸಚಿವ ಕೊಂಡಜ್ಜಿ ಬಸಪ್ಪ ಅವರ ಮೊಮ್ಮಗ ನಿಖಿಲ್ ಕೊಂಡಜ್ಜಿ ಅವರ ಹೆಸರು ಈ ಹಿಂದೆ ದಾವಣಗೆರೆ ಕ್ಷೇತ್ರಕ್ಕೆ ಕೇಳಿಬಂದಿತ್ತು. ಇದೀಗ ಹರಿಹರ ಕ್ಷೇತ್ರದಲ್ಲಿ ಟಿಕೆಟ್ ಕೇಳುತ್ತಿದ್ದಾರೆ. ಕೆಪಿಸಿಸಿ ಮಾಧ್ಯಮ ತಂಡದ ಸದಸ್ಯರಾಗಿರುವ ಆಗಿರುವ ನಿಖಿಲ್ ಕೊಂಡಜ್ಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.
ರಘುವೀರಗೌಡ, ರಾಜಾಜಿನಗರ
ಸದ್ಯ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಪ್ರತಿನಿಧಿಸುವ ರಾಜಾಜಿನಗರ ಕ್ಷೇತ್ರದಿಂದ ಕಣಕ್ಕಿಳಿಯಲು ಬೆಂಗಳೂರು ನಗರ ಯುವ ಮೋರ್ಚಾ ಮಾಜಿ ಅಧ್ಯಕ್ಷ ರಘುವೀರ ಗೌಡ ಉತ್ಸುಕರಾಗಿದ್ದಾರೆ. ಈಗಾಗಲೆ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳು ಹಾಗೂ ಮನೆ ಭೇಟಿ ಮೂಲಕ ಜನರ ನಡುವೆ ಇದ್ದಾರೆ.
ಭವ್ಯ ನರಸಿಂಹಮೂರ್ತಿ, ರಾಜಾಜಿನಗರ
ವಿವಿಧ ಕಾರ್ಪೊರೇಟ್, ಎನ್‌ಜಿಒ, ಕೊಲಂಬಿಯಾ ವಿವಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ ಅನುಭವವಿರುವ ಭವ್ಯ ನರಸಿಂಹಮೂರ್ತಿ ರಾಜಾಜಿನಗರದಿಂದ ಟಿಕೆಟ್ ಕೇಳುತ್ತಿದ್ದಾರೆ. ಕೆಪಿಎಂಜಿ ಸಂಸ್ಥೆಯಲ್ಲಿದ್ದಾಗ ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸುವಿಕೆಯಿಂದ ಕಾಂಗ್ರೆಸ್ ಸಂಪರ್ಕಕ್ಕೆ ಬಂದ ಭವ್ಯ, ನಂತರದಲ್ಲಿ ರಾಹುಲ್ ಗಾಂಧಿ ಕಚೇರಿ ಮೂಲಕ ಕಾಂಗ್ರೆಸ್ ಸೇರ್ಪಡೆಯಾದರು. ಕೆಪಿಸಿಸಿ ವಕ್ತಾರೆಯಾಗಿರುವ ಭವ್ಯಾ, ಈಗಾಗಲೆ ರಾಜಾಜಿನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚಟುವಟಿಕೆ ನಡೆಸುತ್ತಿದ್ದಾರೆ.
ಸುನೀಲ್ ಬೋಸ್, ತಿ. ನರಸೀಪುರ
ಮಾಜಿ ಸಚಿವ ಹಾಗೂ ಸಿದ್ದರಾಮಯ್ಯ ಅತ್ಯಾಪ್ತರಲ್ಲಿ ಒಬ್ಬರಾದ ಡಾ. ಎಚ್.ಸಿ. ಮಹದೇವಪ್ಪ ಪುತ್ರ ಸುನೀಲ್ ಬೋಸ್, ತಿ. ನರಸೀಪುರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಈಗಾಗಲೆ ರಾಜಕೀಯ ಕಣದಲ್ಲಿ ಸಾಕಷ್ಟು ತೊಡಗಿಸಿಕೊಂಡಿರುವ ಸುನೀಲ್ ಬೋಸ್, ತಮಗೇ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಈ ಹಿಂದೆ ಮರಳು ಗಣಿಗಾರಿಕೆ ಕುರಿತಂತೆ ಆರೋಪವೊಂದು ಕೇಳಿಬಂದಿತ್ತು, ಆ ನಂತರ ಅದರಿಂದ ಹೊರಬಂದಿದ್ದಾರೆ ಎನ್ನಲಾಗಿದೆ.
ಮಿಥುನ್ ರೈ, ಮೂಡಬಿದ್ರೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಪ್ತರಲ್ಲಿ ಗುರುತಿಸಿಕೊಂಡಿರುವ ಮಿಥುನ್ ರೈ ಟಿಕೆಟ್ ಕೇಳುತ್ತಿದ್ದಾರೆ. ಕಾಂಗ್ರೆಸ್ ನಾಯಕ ಅಭಯಚಂದ್ರ ಜೈನ್‌ಗೆ ಕ್ಷೇತ್ರದಲ್ಲಿ ಪರ್ಯಾಯ ನಾಯಕರು ಇಲ್ಲವಾದರೂ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜೈನ್ ಹೇಳಿರುವುದು ಮಿಥುನ್ ರೈಗೆ ಅವಕಾಶವನ್ನು ತಂದಿಟ್ಟಿದೆ. ಬಂಟ ಸಮುದಾಯದವರಾಗಿರುವುದು ಟಿಕೆಟ್ ಲಭಿಸಲು ಮತ್ತಷ್ಟು ಅನುಕೂಲವಾಗುತ್ತದೆ ಎನ್ನಲಾಗುತ್ತಿದೆ.
ನಿವೇದಿತ್ ಆಳ್ವ, ಶಿರಸಿ
ಕಾಂಗ್ರೆಸ್‌ನ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ, ಶಿರಸಿಯಿಂದ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲೂ ನಿವೇದಿತ್ ಹೆಸರು ಕೇಳಿಬಂದಿತ್ತು. ಆದರೆ ಆಗ ಟಿಕೆಟ್ ಸಿಕ್ಕಿರಲಿಲ್ಲ. ಜಿಲ್ಲೆಯಲ್ಲಿ ಪುತ್ರನ ನೆಲೆಯನ್ನು ಭದ್ರಪಡಿಸಲು ಮಾರ್ಗರೇಟ್ ಆಳ್ವಾ ಪ್ರಯತ್ನಿಸುತ್ತಿದ್ದಾರೆ.
ನಯನ, ಮೋಟಮ್ಮ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೀಸಲು ಕ್ಷೇತ್ರಕ್ಕೆ ಮಾಜಿ ಸಚಿವೆ ಮೋಟಮ್ಮ ಪುತ್ರಿ ನಯನ ಟಿಕೆಟ್ ಆಕಾಂಕ್ಷಿ. ಮೋಟಮ್ಮ ಪುತ್ರಿಗೆ ಟಿಕೆಟ್ ನೀಡಬಾರದು ಎಂದು ಕಾಂಗ್ರೆಸ್‌ನ ಒಂದು ಗುಂಪು ಇತ್ತೀಚೆಗೆ ಸಭೆ ನಡೆಸಿದರೂ ವಿವಿಧ ಕಾರ್ಯಕ್ರಮಗಳು, ಮನೆ ಭೇಟಿ, ಸಾರ್ವಜನಿಕರ ಸಮಸ್ಯೆ ಆಲಿಸುವ ಮೂಲಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.
ಕೀರ್ತಿ ಮೋರೆ, ಹುಬ್ಬಳ್ಳಿ-ಧಾರವಾಡ ಪಶ್ಚಿಮ
ಮಾಜಿ ಸಚಿವ ಎಸ್.ಆರ್. ಮೋರೆ ಪುತ್ರಿ ಕೀರ್ತಿ ಮೋರೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಸೆಪ್ಟೆಂಬರ್‌ನಲ್ಲಿ ಮೂರು ಸಾವಿರ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಈ ಘೋಷಣೆ ಮಾಡಿದ್ದ ಕೀರ್ತಿ ಮೋರೆ, ಟಿಕೆಟ್ ನೀಡಲು ಹೈಕಮಾಂಡ್ ಒಪ್ಪುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳು, ಉದ್ಘಾಟನಾ ಸಮಾರಂಭಗಳು, ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ ಮೂಲಕ ಕ್ರಿಯಾಶೀಲರಾಗಿದ್ದಾರೆ.
ಪ್ರಿಯಾಂಕಾ ಜಾರಕಿಹೊಳಿ, ಯಮಕನಮರಡಿ
ಬೆಳಗಾವಿ ರಾಜಕಾರಣದಲ್ಲಿ ತನ್ನದೇ ಛಾಪು, ಹಿಡಿತ ಹೊಂದಿರುವ ಜಾರಕಿಹೊಳಿ ಕುಟುಂಬದಿಂದ ಎರಡನೇ ತಲೆಮಾರು ರಾಜಕಾರಣ ಪ್ರವೇಶಿಸುವ ಸಾಧ್ಯತೆಯಿದೆ. ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಈ ಬಾರಿ ಟಿಕೆಟ್ ಪಡೆಯುವ ಸಾಧ್ಯತೆಯಿದೆ. ಈಗಾಗಲೆ ಕ್ಷೇತ್ರದಲ್ಲಿ ಚಟುವಟಿಕೆ ನಡೆಸುತ್ತಿದ್ದು, ರಾಜಕೀಯಕ್ಕೆ ಆಗಮಿಸುವುದಾಗಿ ಸ್ಪಷ್ಟಪಡಿಸಿದ್ದರು. ಪುತ್ರಿಗೆ ಯಮಕನಮರಡಿ ಕ್ಷೇತ್ರವನ್ನು ಬಿಟ್ಟುಕೊಟ್ಟು ತಾವು ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಸ್ಪರ್ಧಿಸಲು ಸತೀಶ್ ಜಾರಕಿಹೊಳಿ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ರಕ್ಷಿತ್ ಶಿವರಾಂ, ಬೆಳ್ತಂಗಡಿ
ಕಳೆದ ಐದು ವರ್ಷಗಳಿಂದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಜೊತೆ ಸಕ್ರೀಯವಾಗಿರುವ ರಕ್ಷಿತ್ ಶಿವರಾಂ ಅವರಿಗೆ ಮುಂದಿನ ಚುನಾವಣೆಯಿಂದ ಕಾಂಗ್ರೆಸ್ ಟಿಕೇಟ್ ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವರ ಸೋದರ ಅಳಿಯ ಹಾಗೂ ನಿವೃತ್ತ ಎಸ್ಪಿ ಬಿ.ಕೆ.ಶಿವರಾಂ ಪುತ್ರ ರಕ್ಷಿತ್ ಶಿವರಾಂ. ಬೆಳ್ತಂಗಡಿ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಸದ್ದಿಲ್ಲದೇ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಗೆಲುವಿಗಾಗಿ ರಕ್ಷಿತ್ ಶಿವರಾಂ ಪ್ರಯತ್ನ ನಡೆಸಿದ್ದಾರೆ.
ಇನಾಯತ್ ಅಲಿ, ಮಂಗಳೂರು ಉತ್ತರ
ಉದ್ಯಮಿಯಾಗಿ, ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿರುವ ಇನಾಯತ್ ಅಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಡಿ.ಕೆ.ಶಿವಕುಮಾರ್ ಅವರಿಗೂ ಆಪ್ತರಾಗಿದ್ದಾರೆ. ಸಣ್ಣ ವಯಸ್ಸಿನಲ್ಲೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಗುತ್ತಿಗೆಯನ್ನು ವಹಿಸಿಕೊಂಡವರು. ತಮ್ಮ ಸಮುದಾಯದ ಜತೆಗೆ ಎಲ್ಲರ ಜತೆಗೂ ವಿಶ್ವಾಸ ಇರಿಸಿಕೊಂಡಿದ್ದಾರೆ.
ಎಸ್.ಎ. ಹುಸೇನ್, ಶಿವಾಜಿನಗರ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಎಸ್.ಎ. ಹುಸೇನ್, ಶಿವಾಜಿನಗರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. 2019ರಲ್ಲಿ ಉಪಚುನಾವಣೆ ನಡೆದಾಗಲೂ ತಮಗೆ ಟಿಕೆಟ್ ನೀಡುವಂತೆ ಹುಸೇನ್ ಒತ್ತಾಯಿಸಿದ್ದರು. ಈ ಹಿಂದೆ ಸೋಲುಂಡಿರುವ ರಿಜ್ವಾನ್ ಅರ್ಷ್ ಅವರಿಗೆ ಟಿಕೆಟ್ ನೀಡುವುದು ಬೇಡ ಎಂದು ಕೇಳಿದ್ದರು. ಈಗ ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹಾಲಿ ಶಾಸಕರು ಇರುವುದರಿಂದ ಹುಸೇನ್ ಮನವಿಗೆ ಎಷ್ಟು ಸ್ಪಂದನೆ ದೊರಕುತ್ತದೆ ಎನ್ನುವುದು ಕಾದುನೋಡಬೇಕಿದೆ.
ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು
ನಾಲ್ವರಿಗೆ ಟಿಕೆಟ್ ಘೋಷಣೆ
ಜೆಡಿಎಸ್‌ನಲ್ಲಿಯೂ ಯುವ ನಾಯಕರ ಸಂಖ್ಯೆ ಕಡಿಮೆಯಿಲ್ಲ. ಈಗಾಗಲೆ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜೆಡಿಎಸ್ ಘೋಷಣೆ ಮಾಡಿದೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ, ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಮನಗರದಿಂದ, ಮಾಜಿ ಸಚಿವ ಜಿ.ಟಿ. ದೇವೇಗೌಡ ಪುತ್ರ ಜಿ.ಡಿ. ಹರೀಶ್ ಗೌಡ ಅವರಿಗೆ ಹುಣಸೂರಿನಿಂದ, ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಪುತ್ರ ಸಿ.ಎಂ. ಫಯಾಜ್ ಅವರಿಗೆ ಹುಮನಾಬಾದ್‌ನಿಂದ ಟಿಕೆಟ್ ನೀಡಲಾಗಿದೆ. ಗುರುಮಿಟ್ಕಲ್ ಕ್ಷೇತ್ರಕ್ಕೆ ಹಾಲಿ ಶಾಸಕ ನಾಗನಗೌಡ ಕಂದಕೂರು ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತಾದರೂ, ಚುನಾವಣೆಯಿಂದ ಹಿಂದೆ ಸರಿದಿದ್ದರಿಂದ, ಅವರ ಪುತ್ರ ಶರಣಗೌಡ ಕಂದಕೂರು ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಘೋಷಿಸಲಾಗಿದೆ.
ಎಚ್.ಪಿ. ಸ್ವರೂಪ್, ಹಾಸನ
ಹಾಸನದಲ್ಲಿ ನಾಲ್ಕು ಅವಧಿಗೆ ಜೆಡಿಎಸ್ ಶಾಸಕರಾಗಿದ್ದ ಎಚ್.ಎಸ್. ಪ್ರಕಾಶ್ ಪುತ್ರ ಎಚ್.ಪಿ. ಸ್ವರೂಪ್ ಹೆಸರು ಈ ಬಾರಿ ಟಿಕೆಟ್ ಲಭಿಸುವವರ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಕಳೆದ ಚುನಾವಣೆಯಲ್ಲಿ ಎಚ್.ಎಸ್. ಪ್ರಕಾಶ್ ಸೋತಿದ್ದರು. ನಂತರ ನಿಧನರಾದರು. ಪುತ್ರ ಎಚ್.ಪಿ. ಸ್ವರೂಪ್ ಈಗಾಗಲೆ ರಾಜಕೀಯ ಕಣಕ್ಕೆ ಧುಮುಕಿದ್ದಾರೆ. ಹಾಸನ ಕ್ಷೇತ್ರವನ್ನು ಶತಾಯ ಗತಾಯ ಮರಳಿ ಪಡೆಯಬೇಕು ಎಂದು ಮುಂದಾಗಿರುವ ಜೆಡಿಎಸ್, ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಎಚ್.ಡಿ. ರೇವಣ್ಣ ಪತ್ನಿ ಭವಾನಿ ಅವರೇ ಕಣಕ್ಕಿಳಿದರೆ ಹೇಗೆ ಎಂದೂ ಸಮೀಕ್ಷೆ ಮಾಡುತ್ತಿದೆ. ಈಗಾಗಲೆ ಘೋಷಣೆಯಾಗಿರುವ 93 ಕ್ಷೇತ್ರಗಳಲ್ಲಿ ಹಾಸನದ ಯಾವುದೇ ಕ್ಷೇತ್ರ ಸೇರಿಲ್ಲ. ಮೃದು ಸ್ವಭಾವದ ಸ್ವರೂಪ್‌ಗೆ ಟಿಕೆಟ್ ನೀಡಬೇಕು, ಅದೇ ಸ್ವಭಾವವು ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಾಯಕವಾಗುತ್ತದೆ ಎಂದು ಜೆಡಿಎಸ್ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ.