Site icon Vistara News

Karnataka Election | ವೈಎಸ್‌ವಿ ದತ್ತ ಜೆಡಿಎಸ್‌ಗೆ ಗುಡ್‌ಬೈ, ಡಿ. 17ರಂದು ಕಾಂಗ್ರೆಸ್‌ಗೆ ಸೇರ್ಪಡೆ ಫಿಕ್ಸ್‌

YSV datta

ಬೆಂಗಳೂರು/ಚಿಕ್ಕಮಗಳೂರು: ಜಾತ್ಯತೀತ ಜನತಾದಳ ನಾಯಕ, ಪಕ್ಷದ ಬೌದ್ಧಿಕ ಶಕ್ತಿ ಎಂದೇ ಪರಿಗಣಿತವಾಗಿರುವ ಗಣಿತ ಮೇಸ್ಟ್ರು ವೈ.ಎಸ್‌.ವಿ. ದತ್ತ ಅವರು ಕಾಂಗ್ರೆಸ್‌ ಪಕ್ಷ (Karnataka Election) ಸೇರುವುದು ಖಚಿತವಾಗಿದೆ. ಕಡೂರು ಕ್ಷೇತ್ರದ ಮಾಜಿ ಶಾಸಕರಾಗಿರುವ ಅವರು ಡಿಸೆಂಬರ್‌ ೧೭ರಂದು ಬೆಳ್ತಂಗಡಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕೈ ಪಾಳಯವನ್ನು ಸೇರಿಕೊಳ್ಳಲಿದ್ದಾರೆ.

ಕಾಂಗ್ರೆಸ್‌ ಸೇರ್ಪಡೆ ವಿಚಾರವನ್ನು ಸ್ವತಃ ವೈಎಸ್‌ವಿ ದತ್ತ ಅವರೇ ವಿಸ್ತಾರ ನ್ಯೂಸ್‌ಗೆ ದೃಢೀಕರಿಸಿದ್ದಾರೆ. ʻʻನಾನು ಕೋಮುವಾದದ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇನೆ. ಕ್ಷೇತ್ರದ ಕಾರ್ಯಕರ್ತರ ಭವಿಷ್ಯಕ್ಕಾಗಿ ನಾನು ಕಾಂಗ್ರೆಸ್ ಸೇರುವ ತೀರ್ಮಾನ ಮಾಡಿದ್ದೇನೆ. ಎಚ್.ಡಿ. ದೇವೇಗೌಡರು ನಮಗೆ ತಂದೆ ಸಮಾನವಾಗಿದ್ದಾರೆ, ಅವರ ಬಳಿ ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದು ಹೇಳಲು ಆಗಿಲ್ಲʼʼ ಎಂದು ಅವರು ಹೇಳಿದ್ದಾರೆ.

ʻʻನನಗೆ ಈಗ ವಯಸ್ಸು 70 ಆಗಿದೆ. ಇದು ನನ್ನ ಕೊನೆಯ ಚುನಾವಣೆ. ನಾನು ಏನಾದರೂ ನಿವೃತ್ತಿ ಆದರೆ ನನ್ನ ನಂಬಿಕೊಂಡ ಬೆಂಬಲಿಗರು, ಕಾರ್ಯಕರ್ತರ ಭವಿಷ್ಯದ ವಿಚಾರ ಮಾಡಬೇಕು. ಹೀಗಾಗಿ ಕ್ಷೇತ್ರಕ್ಕೆ ಸೀಮಿತವಾಗಿ ನಿರ್ಧಾರ ಮಾಡಿದ್ದೇನೆʼʼ ಎಂದು ದತ್ತ ಹೇಳಿದ್ದಾರೆ.

ʻʻಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ‌ ಅವರು ಸ್ಪರ್ಧೆ ಮಾಡಿದಾಗ ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ನವರೂ ಕೂಡಾ ಬೆಂಬಲ ನೀಡಿದ್ದರು. ಇಷ್ಟಾದರೂ ಕೂಡಾ ನನ್ನ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್‌ ಬಂದಿತ್ತುʼʼ ಎಂದು ನೆನಪಿಸಿಕೊಂಡಿರುವ ಅವರು, ಕ್ಷೇತ್ರದಲ್ಲಿ ಜೆಡಿಎಸ್‌ ಭವಿಷ್ಯ ಕಮರುತ್ತಿದೆ. ಹಾಗಾಗಿ ಕಾರ್ಯಕರ್ತರಿಗೆ ಬೇರೆ ಕಡೆ ವ್ಯವಸ್ಥೆ ಆಗಬೇಕು ಎನ್ನುವ ಆಶಯ ವ್ಯಕ್ತಪಡಿಸಿದ್ದಾರೆ.

ಯಾವಾಗ ಸೇರ್ಪಡೆ?
ʻʻಕಾಂಗ್ರೆಸ್ ಸೇರುವುದಕ್ಕೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ನಾನು ಯಾವುದೇ ಷರತ್ತುಗಳು ಇಲ್ಲದೆ ಕಾಂಗ್ರೆಸ್‌ ಸೇರುತ್ತಿದ್ದೇನೆʼʼ ಎಂದು ದತ್ತ ಅವರು ಹೇಳಿಕೊಂಡಿದ್ದಾರೆ. ಆದರೆ, ಅವರ ಆಪ್ತರ ಪ್ರಕಾರ ಅವರು ಡಿಸೆಂಬರ್‌ ೧೫ರಂದು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಡಿಸೆಂಬರ್‌ ೧೭ರಂದು ಬೆಳ್ತಂಗಡಿಯಲ್ಲಿರುವ ಸಮಾವೇಶದಲ್ಲಿ ಕಾಂಗ್ರೆಸ್‌ನ್ನು ಸೇರಲಿದ್ದಾರೆ.

ವೈಎಸ್‌ವಿ ದತ್ತ ಅವರು ಕಾಂಗ್ರೆಸ್‌ ಸೇರ್ಪಡೆಯನ್ನು ಅಧಿಕೃತಗೊಳಿಸುವ ಮೊದಲೇ ಅವರ ಆಪ್ತರಾಗಿರುವ ಎಪಿಎಂಸಿ ಅಧ್ಯಕ್ಷ ರಾಜಣ್ಣ ಎಂಬವರು ಒಂದು ಆಡಿಯೊ ಬಿಡುಗಡೆ ಮಾಡಿದ್ದರು. ಅದರಲ್ಲಿ ದತ್ತ ಅವರು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರುವುದನ್ನು ಸ್ಪಷ್ಟಪಡಿಸಿದ್ದರು.

ದೇವೇಗೌಡರ ಅತ್ಯಾಪ್ತ ಮೇಸ್ಟ್ರು
ಜೆಡಿಎಸ್‌ನ ಬೌದ್ಧಿಕ ಶಕ್ತಿ ಎಂದು ಗುರುತಿಸಲಾದ ವೈಎಸ್‌ವಿ ದತ್ತ ಅವರು ಅತ್ಯಂತ ಸರಳ ಶಾಸಕ ಎಂದೇ ಹೆಸರಾದವರು. ಹೆಚ್ಚು ಹಣ ಖರ್ಚು ಮಾಡದೆ, ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸಿ ಚುನಾವಣೆ ಎದುರಿಸಿದ ದಾಖಲೆ ಹೊಂದಿರುವ ಅವರು ವಿಧಾನಸೌಧಕ್ಕೆ ಆಟೊ ರಿಕ್ಷಾದಲ್ಲಿ ಬಂದು ಹೋಗುತ್ತಿದ್ದುದು ಸುದ್ದಿಯಾಗುತ್ತಿತ್ತು.
ಮಾಜಿ ಪ್ರಧಾನಿ ದೇವೇಗೌಡರ ಮನೆಮಗನಂತೆ ಇದ್ದ ಅವರು ಇತ್ತೀಚಿನ ದಿನಗಳಲಿ ಪಕ್ಷದ ಚಟುವಟಿಕೆಗಳಿಂದ ಸ್ವಲ್ಪ ದೂರ ಇದ್ದರು. ಕಾಂಗ್ರೆಸ್‌ಗೆ ಹತ್ತಿರವಾಗಿದ್ದರು.

ಕೆಲವು ತಿಂಗಳ ಹಿಂದೆ ವಿಧಾನಸೌಧದ ಮುಂದೆ ಸರಕಾರದ ವಿರುದ್ಧ ನಡೆದ ಒಂದು ಪ್ರತಿಭಟನೆಯ ವೇಳೆ ವೈಎಸ್‌ವಿ ದತ್ತ ಕಾಣಿಸಿಕೊಂಡಿದ್ದರು. ಆಗಲೇ ಅವರು ಕಾಂಗ್ರೆಸ್‌ ಸೇರುವ ಸುದ್ದಿ ಹರಿದಾಡಿತ್ತು. ಈಗ ಅದು ನಿಜವಾಗಿದೆ. ಈ ಮೂಲಕ ಕಾಂಗ್ರೆಸ್‌ಗೆ ಒಬ್ಬ ವಾಕ್ಪಟು ಸಿಕ್ಕಿದಂತಾಗಿದೆ. ಆದರೆ, ಕಡೂರು ಕ್ಷೇತ್ರದ ಹಾಲಿ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ದತ್ತ ಅವರನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ | Karnataka Election | ಭಿನ್ನಮತ ಎಲ್ಲ ಪಕ್ಷದಲ್ಲೂ ಇದೆ, ಬಿಜೆಪಿಯಲ್ಲೂ ಇದೆ ಎಂದು ಒಪ್ಪಿಕೊಂಡ ಕೆ.ಎಸ್‌. ಈಶ್ವರಪ್ಪ, ಸಿದ್ದುಗೂ ಸಲಹೆ

Exit mobile version