Site icon Vistara News

Karnataka Elections 2023: ಶೆಟ್ಟರ್‌ ಕೈ ಸೇರ್ಪಡೆ ಪ್ರತಿಯಾಗಿ ಬಿಜೆಪಿಯಿಂದ ರಿವರ್ಸ್‌ ಆಪರೇಷನ್‌; ಎಸ್‌.ಆರ್‌ ಪಾಟೀಲ್‌ಗೆ ಗಾಳ

SR Patil

#image_title

ಬಾಗಲಕೋಟೆ: ಹಿರಿಯ ಬಿಜೆಪಿ ನಾಯಕ ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ ಸೇರಿರುವುದರಿಂದ ಲಿಂಗಾಯತ ಸಮುದಾಯದಲ್ಲಿ ಉಂಟಾಗಿರಬಹುದಾದ ನಕಾರಾತ್ಮಕ ಭಾವನೆಗಳನ್ನು ಹೊಡೆದೋಡಿಸಲು ಬಿಜೆಪಿ ರಿವರ್ಸ್‌ ಆಪರೇಷನ್‌ ಪ್ಲ್ಯಾನ್‌ ಮಾಡುವ ಚಿಂತನೆಯಲ್ಲಿದೆ. ಕಾಂಗ್ರೆಸ್‌ ಟಿಕೆಟ್‌ ಸಿಗದೆ (Karnataka Elections 2023) ಸಿಟ್ಟಿಗೆದ್ದಿರುವ ಹಿರಿಯ ನಾಯಕ ಎಸ್‌.ಆರ್‌. ಪಾಟೀಲ್‌ ಅವರನ್ನು ಸೆಳೆಯಲು ಅದು ತಂತ್ರ ರೂಪಿಸಿದೆ.

ರಾಜ್ಯ ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಎಸ್‌.ಆರ್‌ ಪಾಟೀಲ್‌ ಅವರು ಈ ಬಾರಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್‌ ಬಸವರಾಜ ಶಿವಣ್ಣ ಅವರಿಗೆ ಟಿಕೆಟ್‌ ನೀಡಿದೆ. ಇದರಿಂದ ಸಿಟ್ಟಿಗೆದ್ದ ಎಸ್‌.ಆರ್‌. ಪಾಟೀಲ್‌ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧಿರಿಸಿದ್ದರು. ಅದರೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮೊದಲಾದವ ಸಂಧಾನದಿಂದ ಅವರು ಕಣದಿಂದ ಹಿಂದೆ ಸರಿದಿದ್ದಾರೆ. ಆದರೆ, ಸಿಟ್ಟು ಇನ್ನೂ ಹಾಗೇ ಇದೆ ಎನ್ನಲಾಗುತ್ತಿದೆ.

ಈ ಆಕ್ರೋಶವನ್ನೇ ಬಂಡವಾಳ ಮಾಡಿಕೊಂಡು ಅವರನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಮುರುಗೇಶ್ ನಿರಾಣಿ ಮೂಲಕ ಕಾಂಗ್ರೆಸ್ ನಾಯಕನಿಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ.

ಪ್ರಬಲ ಲಿಂಗಾಯತ ನಾಯಕರಾಗಿರುವ ಎಸ್‌ಆರ್‌ ಪಾಟೀಲ್ ಅವರಿಗೆ ಕಾಂಗ್ರೆಸ್‌ನಲ್ಲಿ ಪದೇಪದೆ ಅಪಮಾನ ಆಗುತ್ತಿದೆ ಎನ್ನುವ ಅಂಶವನ್ನು ಮುಂದಿಟ್ಟುಕೊಂಡು ಎಸ್‌.ಆರ್‌. ಪಾಟೀಲ್‌ ಮನವೊಲಿಸಲು ಬಿಜೆಪಿ ಸಜ್ಜಾಗಿದೆ. ಒಂದೊಮ್ಮೆ ಅವರು ಬಿಜೆಪಿ ಸೇರಿದರೆ ಕಾಂಗ್ರೆಸ್‌ ಪಾಲಾದ ಜಗದೀಶ್‌ ಶೆಟ್ಟರ್‌ ಅವರಿಗೆ ಕೌಂಟರ್‌ ನೀಡಬಹುದು ಎನ್ನುವುದು ಬಿಜೆಪಿ ಪ್ಲ್ಯಾನ್‌.

ಕೆಲವು ದಿನಗಳಿಂದ ಸ್ವಲ್ಪ ಸಮಾಧಾನಿತರಂತೆ ಕಾಣುತ್ತಿರುವ ಎಸ್‌ ಆರ್‌. ಪಾಟೀಲ್‌ ಅವರು ಸೋಮವಾರ ಭಾಲ್ಕಿ ಮತ್ತು ಹುಮನಾಬಾದ್‌ಗೆ ಭೇಟಿ ನೀಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಜತೆಗೂ ಮಾತನಾಡಿದ್ದಾರೆ. ಅದರೆ, ಮಾತುಕತೆಯ ಬಳಿಕವೂ ಅವರ ನೋವು ಕಡಿಮೆಯಾಗಿಲ್ಲ ಎನ್ನಲಾಗಿದೆ.

ಇದನ್ನು ನಗದೀಕರಣ ಮಾಡುವುದಕ್ಕಾಗಿ ಬಿಜೆಪಿ ಪ್ರಯತ್ನಿಸುತ್ತಿದೆ. ಸಚಿವ ಮುರುಗೇಶ್‌ ನಿರಾಣಿ ಅವರು ಈಗಾಗಲೇ ಎಸ್‌.ಆರ್‌. ಪಾಟೀಲ್‌ ಅವರ ಜತೆ ಮಾತುಕತೆ ನಡೆಸಿದ್ದಾರೆ. ಎರಡು ದಿನಗಳಲ್ಲಿ ನಿರ್ಧಾರ ತಿಳಿಸುವುದಾಗಿ ಎಸ್ ಆರ್ ಪಾಟೀಲ್ ಹೇಳಿದ್ದಾರೆನ್ನಲಾಗಿದೆ.

ಎಸ್‌.ಆರ್‌. ಪಾಟೀಲ್‌ ಜತೆ ಮಾತುಕತೆ ನಡೆದಿರುವುದನ್ನು ಸ್ವತಃ ಮುರುಗೇಶ್‌ ನಿರಾಣಿ ಅವರು ಖಚಿತಪಡಿಸಿದ್ದಾರೆ. ಮುಧೋಳ ನಗರದಲ್ಲಿ ಮಾತನಾಡಿದ ಅವರು, ʻʻಎಸ್ ಆರ್ ಪಾಟೀಲ್ ಅವರನ್ನ ಸಂಪರ್ಕ ಮಾಡಿದ್ದು ನಿಜ. ಎರಡು ದಿನ ಸಮಯ ಕೊಡಿ ತಿಳಿಸುತ್ತೇನೆ ಎಂದಿದ್ದಾರೆ. ನೋಡೋಣ ನಮಗೆ ಸಪೋರ್ಟ್ ಮಾಡಬಹುದು ಎನ್ನುವ ವಿಶ್ವಾಸ ಇದೆʼʼ ಎಂದಿದ್ದಾರೆ.

ಎಸ್‌.ಆರ್‌. ಪಾಟೀಲ್‌ ಅವರು ಕಾಂಗ್ರೆಸ್‌ನಲ್ಲಿ ಹಲವು ಉನ್ನತ ಹುದ್ದೆಗಳನ್ನು, ಮಂತ್ರಿಗಿರಿಯನ್ನು ನಿಭಾಯಿಸಿದವರು. ಒಂದು ಹಂತದಲ್ಲಿ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು, ಎಸ್‌.ಆರ್‌. ಪಾಟೀಲ್‌ ಕೂಡಾ ಸಿಎಂ ಆಗಬಲ್ಲರು ಎಂದು ಹೇಳಿದ್ದರು. ಆದರೆ, ಕಾಂಗ್ರೆಸ್‌ ನಾಯಕರು ಮಾತ್ರ ಅವರಿಗೆ ಈ ಬಾರಿ ಟಿಕೆಟ್‌ ಕೊಡುವುದಕ್ಕೂ ಹಿಂದೇಟು ಹಾಕಿದ್ದಾರೆ. ಅವರಿಗೆ ಮತ್ತೆ ಎಂಎಲ್‌ಸಿ ಸ್ಥಾನದ ಭರವಸೆಯನ್ನು ನೀಡಿದ್ದಾರೆ. ಈಗ ಎಸ್.ಆರ್‌. ಪಾಟೀಲ್‌ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋಗುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : Karnataka Elections 2023: ನನಗೆ ಟಿಕೆಟ್‌ ತಪ್ಪಿಸಿದ್ದು ಬಿ.ಎಲ್‌ ಸಂತೋಷ್‌, ಇವರಿಂದ್ಲೇ ಬಿಜೆಪಿ ಮುಳುಗೋದು; ಶೆಟ್ಟರ್‌ ಚಾರ್ಜ್‌ಶೀಟ್‌

Exit mobile version