Site icon Vistara News

Karnataka Elections 2023: ಜಗದೀಶ್‌ ಶೆಟ್ಟರ್‌ ಫೋಟೊಗೆ ಕಪ್ಪು ಮಸಿ ಬಳಿದ ಬಿಜೆಪಿ ಕಾರ್ಯಕರ್ತರು

#image_title

ಧಾರವಾಡ: ನವಲಗುಂದದಲ್ಲಿ ಬಿಜೆಪಿ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ (Jagadish shettar) ವಿರುದ್ಧ ತಿರುಗಿ ಬಿದ್ದಿದ್ದಾರೆ. ಶೆಟ್ಟರ್‌ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್‌ ಪಕ್ಷ ಸೇರಿದ್ದಕ್ಕೆ ಕಿರಿಕಾರಿದ್ದಾರೆ. ಜಗದೀಶ್‌ ಶೆಟ್ಟರ್‌ ಅವರ ಭಾವಚಿತ್ರ ಇರುವ ಟೀ ಶರ್ಟ್‌ಗೆ ಕಪ್ಪು ಮಸಿ ಬಳಿದು ಆಕ್ರೋಶ ಹೊರಹಾಕಿದ್ದಾರೆ.

Karnataka Elections 2023

ನವಲಗುಂದದಲ್ಲಿ ಬಿಜೆಪಿ ಅಭ್ಯರ್ಥಿ ಶಂಕರಪಾಟೀಲ್ ಮುನೇನಕೊಪ್ಪ ಅವರು ನಾಮಪತ್ರ ಸಲ್ಲಿಸಲು ಬೃಹತ್‌ ಮೆರವಣಿಗೆ ಮೂಲಕ ಆಗಮಿಸಿದ್ದರು. ಈ ವೇಳೆ ಪಕ್ಷದ ಕಾರ್ಯಕರ್ತರು ಬಿಜೆಪಿ ನಾಯಕರ ಭಾವಚಿತ್ರ ಮುದ್ರಣವಾಗಿರುವ ಟೀ ಶರ್ಟ್‌ ಧರಿಸಿದ್ದರು.

Karnataka Elections 2023

ಟೀ ಶರ್ಟ್‌ನಲ್ಲಿ ಜಗದೀಶ್‌ ಶೆಟ್ಟರ್‌ ಫೋಟೊ ಇದ್ದ ಕಾರಣಕ್ಕೆ ಮಾರ್ಕರ್‌ನಿಂದ ಅವರ ಫೋಟೊಕ್ಕೆ ಮಸಿ ಬಳಿಯಲಾಯಿತು. ಇದೇ ವೇಳೆ ಶೆಟ್ಟರ್‌ ವಿರುದ್ಧ ಧಿಕ್ಕಾರ ಕೂಗಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು.

ಜಗದೀಶ್‌ ಶೆಟ್ಟರ್‌ ಪಕ್ಷ ಬಿಟ್ಟಿದ್ದೇಕೆ?

ಜಗದೀಶ್‌ ಶೆಟ್ಟರ್‌ ಅವರು ಸುಮಾರು 40 ವರ್ಷಗಳ ಕಾಲ ಬಿಜೆಪಿಯಲ್ಲಿದ್ದು, ಇದೀಗ ಈ ಬಾರಿ ವಿಧಾನಸಭಾ ಟಿಕೆಟ್‌ ನೀಡಲಾಗುವುದಿಲ್ಲ ಎಂಬ ಹೈಕಮಾಂಡ್‌ ಸೂಚನೆಯಿಂದ ಬೇಸತ್ತು ಶಾಸಕತ್ವ ಮತ್ತು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಂ ಬೊಮ್ಮಾಯಿ, ಬಿಜೆಪಿಯ ರಾಜ್ಯ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಅವರು ಶನಿವಾರ ರಾತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಭೇಟಿ ಮಾಡಿ ಪಕ್ಷ ಬಿಡದಂತೆ ಮನವೊಲಿಸಿದ್ದರು. ಬಿಜೆಪಿ ಟಿಕೆಟ್‌ ಒಂದು ಬಿಟ್ಟು ಬೇರೆ ಯಾವುದೇ ಸ್ಥಾನಮಾನಕ್ಕೂ ಸಿದ್ಧ ಎಂಬ ಸಂದೇಶ ರವಾನಿಸಿದ್ದರು. ಆದರೆ, ಜಗದೀಶ್‌ ಶೆಟ್ಟರ್‌ ಮಾತ್ರ, ಶಾಸಕ ಸ್ಥಾನದ ಟಿಕೆಟ್‌ ಒಂದು ಬಿಟ್ಟು ಬೇರೆ ಯಾವ ಸ್ಥಾನಮಾನವೂ ಬೇಡ ಎಂದು ಹಠ ಮಾಡಿದ್ದರು. ಇದರಿಂದಾಗಿ ಮಾತುಕತೆ ಫಲ ನೀಡದೆ ಶೆಟ್ಟರ್‌ ಅವರು ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದರು.

ಪಕ್ಷದ್ರೋಹ ಮಾಡಿಲ್ಲ, 10 ಬಾರಿ ಯೋಚಿಸಿ ಕಾಂಗ್ರೆಸ್‌ ಸೇರಿದ್ದೇನೆ; ಬಿ ಫಾರಂ ಸ್ವೀಕರಿಸಿದ ಜಗದೀಶ್‌ ಶೆಟ್ಟರ್‌

ಬೆಂಗಳೂರು: ನಾನು ಪಕ್ಷವನ್ನು ಕಟ್ಟಿದ ವ್ಯಕ್ತಿ. ಯಾವತ್ತೂ ಪಕ್ಷ ದ್ರೋಹ ಮಾಡುವವನಲ್ಲ. ಹತ್ತು ಬಾರಿ ಯೋಚನೆ ಮಾಡಿಯೇ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದಿದ್ದೇನೆ ಎಂದು ಸೋಮವಾರವಷ್ಟೇ ಕಾಂಗ್ರೆಸ್‌ ಸೇರಿದ (Karnataka Elections) ಮಾಜಿ ಬಿಜೆಪಿ ನಾಯಕ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಕಾಂಗ್ರೆಸ್‌ ಸೇರಿದ ಬಳಿಕ ಕೆಪಿಸಿಸಿ ಕಚೇರಿಯಲ್ಲೇ ಧಾರವಾಡ ಸೆಂಟ್ರಲ್‌ ಕ್ಷೇತ್ರದ ಸ್ಪರ್ಧೆಗಾಗಿ ಅವರು ಬಿ ಫಾರಂ ಅನ್ನು ಸ್ವೀಕರಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಬಿ ಫಾರಂ ನೀಡಿದರು. ಈ ವೇಳೆ ಶೆಟ್ಟರ್‌ ಪಕ್ಷ ದ್ರೋಹ ಮಾಡಿದ್ದಾರೆ ಎಂಬ ಕೆಲವರ ಆರೋಪಗಳಿಗೆ ಅವರು ಉತ್ತರ ನೀಡಿದರು. ʻʻಇಷ್ಟು ದಿನ ಪಕ್ಷ ದ್ರೋಹ ಅನ್ನುವ ಆರೋಪ ಇರಲಿಲ್ಲ. ಈಗ ಎಲ್ಲರೂ ಮಾತನಾಡುತ್ತಿದ್ದಾರೆ. ಈಗ ಮಾತಾಡ್ತಿರೋರು ಪಕ್ಷಕ್ಕೆ ಬಂದ ಹೊಸಬರು. ಪಾರ್ಟಿಗೆ ಹೊಸದಾಗಿ ಬಂದವರು ಮಾತನಾಡುತ್ತಿದ್ದಾರೆ, ಮಾತನಾಡಲಿ. ಅವರ ವಿಷಯಗಳು ನನಗೆ ಗೊತ್ತಿದೆ. ನಾನಂತೂ 10 ಬಾರಿ ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದೇನೆʼʼ ಎಂದು ಹೇಳಿದರು.

ಸಾವಿರಾರು ಕಾರ್ಯಕರ್ತರು ನನ್ನ ಜತೆ ಇದ್ದಾರೆ. ಉತ್ತಮ ನಿರ್ಧಾರ ಮಾಡಿದ್ದೀರಾ ಅಂತ ಹೇಳಿದ್ದಾರೆ ಎಂದು ಶೆಟ್ಟರ್‌ ನುಡಿದರು. ʻʻಕೆಲವೇ ಕೆಲವು ವ್ಯಕ್ತಿಗಳು ಪಾರ್ಟಿಯನ್ನು ಕಂಟ್ರೋಲ್ ತೆಗೆದುಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾವೆಲ್ಲ ಹಿರಿಯ ನಾಯಕರು ಅಡ್ಡಿಯಾಗಿದ್ದೇವೆ. ಅದಕ್ಕಾಗಿ ನಮ್ಮನ್ನು ಬದಿಗೆ ಸರಿಸುವ ಪ್ರಯತ್ನ ನಡೆಯುತ್ತಿದೆʼʼ ಎಂದು ಶೆಟ್ಟರ್‌ ಆರೋಪಿಸಿದರು.

ಇದನ್ನೂ ಓದಿ: ರಾಜಕೀಯವಾಗಿ ಡಿ‌.ಕೆ.ಶಿವಕುಮಾರ್‌ ಮುಗಿಸಲು 500 ಕೋಟಿ ರೂಪಾಯಿ ಸುಪಾರಿ: ಸಚಿವ ಆರ್.ಅಶೋಕ್ ಆರೋಪ

ʻʻಇಷ್ಟು ದಿನ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಿ ಈಗ ಬಿಜೆಪಿ ವಿರುದ್ಧ ಪ್ರಚಾರ ಮಾಡುವುದು ಕಷ್ಟವಾಗುವುದಿಲ್ಲವೇ?ʼ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ‌ಕೂಡ ರಾಷ್ಟ್ರೀಯ ಪಕ್ಷ. ವ್ಯವಸ್ಥೆಯಲ್ಲಿ ಇದೆಲ್ಲ ಇರುತ್ತದೆ. ಯಾರಿಂದ ನನಗೆ ಅನ್ಯಾಯ ಆಗಿದೆ ಅಂತ ಈಗಾಗಲೇ ಹೇಳಿದ್ದೇನೆʼʼ ಎಂದು ಸ್ಪಷ್ಟಪಡಿಸಿದರು.

Exit mobile version