ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ (Karnataka Elections 2023) ಟಿಕೆಟ್‌ಗೆ ಸಂಬಂಧಿಸಿ ಕಳೆದ ಕೆಲವು ತಿಂಗಳುಗಳಿಂದ ಮಡುಗಟ್ಟಿದ್ದ ಆಕ್ರೋಶ, ದ್ವೇಷದ ಕಾರ್ಮೋಡಗಳೆಲ್ಲ ಕಳೆದು ನಿರಾಳವಾದಂತೆ ಕಂಡಿದೆ. ಈ ಅಭಿಪ್ರಾಯಕ್ಕೆ ಬರಲು ಕಾರಣವಾಗಿದ್ದು ಹಾಸನದಲ್ಲಿ ಬುಧವಾರ ನಡೆದ ವಿದ್ಯಮಾನ.
ಹಾಸನದ ಟಿಕಟ್ ತನಗೇ ಬೇಕೆಂದು ಭವಾನಿ ರೇವಣ್ಣ ಅವರು ಹಠ ಹಿಡಿದಿದ್ದರು. ಎಚ್.ಡಿ. ಕುಮಾರಸ್ವಾಮಿ ಅವರು ಮಾತ್ರ ಈ ಟಿಕೆಟ್ ಎಚ್.ಪಿ. ಸ್ವರೂಪ್ ಅವರಿಗೇ ಟಿಕೆಟ್ ಎಂದು ಸ್ಪಷ್ಟಪಡಿಸಿದ್ದರು. ದೇವೇಗೌಡರ ಕುಟುಂಬವೇ ಒಡೆದು ಹೋಗಬಹುದೇ ಎನ್ನುವಷ್ಟು ಗಂಭೀರ ತಿರುವುಗಳನ್ನು ಪಡೆದ ಪ್ರಕರಣದಲ್ಲಿ ಅಂತಿಮವಾಗಿ ಎಚ್.ಡಿ ಕುಮಾರಸ್ವಾಮಿ ನಿಲುವಿಗೆ ಜಯವಾಗಿತ್ತು. ಎಚ್.ಪಿ. ಸ್ವರೂಪ್ ಅವರಿಗೆ ಟಿಕೆಟ್ ಘೋಷಣೆಯಾಗಿತ್ತು. ಎಚ್.ಡಿ. ರೇವಣ್ಣ ಅವರು ಸ್ವಲ್ಪ ಬೇಸರದಿಂದಲೇ ಈ ನಿರ್ಧಾರವನ್ನು ಸ್ವೀಕರಿಸಿದ್ದರು.
ಆದರೆ, ಬುಧವಾರ ನಡೆದ ವಿದ್ಯಮಾನ ಈ ಎಲ್ಲ ಸಿಟ್ಟು, ಬೇಸರಗಳನ್ನು ಕರಗಿಸಿದಂತೆ ಕಂಡಿತು. ಹಾಸನದಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸ್ವರೂಪ್ ಮತ್ತು ರೇವಣ್ಣರ ಅವರ ಕುಟುಂಬಿಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.
ಹಾಸನ ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಗೆ ಎಚ್.ಡಿ. ರೇವಣ್ಣ ಹಾಗೂ ಭವಾನಿ ರೇವಣ್ಣ ಅವರು ವೇದಿಕೆಗೆ ಬರುತ್ತಿದ್ದಂತೆಯೇ ಸ್ವರೂಪ್ ಅವರು ಇಬ್ಬರ ಕಾಲಿಗೆ ಬಿದ್ದು ಆಶೀರ್ವಾದ ಪಡೆದದ್ದು ಎದ್ದು ಕಂಡಿತು. ರೇವಣ್ಣ ಮತ್ತು ಭವಾನಿ ಅವರು ಕೂಡಾ ಯಾವುದೇ ಬಿಮ್ಮು ತೋರದೆ ಆಶೀರ್ವಾದ ಮಾಡಿದರು.
ಜೆಡಿಎಸ್‌ನ ಈ ಸಭೆ ಹೆಚ್.ಡಿ.ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದಾರೆ.
ರೇವಣ್ಣ ಫ್ಯಾಮಿಲಿ ಮನವೊಲಿಸುವಲ್ಲಿ ಸ್ವರೂಪ್ ಯಶಸ್ವಿ
ನಿಜವೆಂದರೆ, ಈ ಕಾರ್ಯಕ್ರಮಕ್ಕೆ ಮುನ್ನ ಸ್ವರೂಪ್ ಅವರು ಎಚ್.ಡಿ. ರೇವಣ್ಣ ಅವರ ಕುಟುಂಬದ ಜತೆ ಮಾತನಾಡಿದ್ದರು. ಯಾವ ಬೇಸರವನ್ನೂ ಇಟ್ಟುಕೊಳ್ಳದೆ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿದರು. ನಾನು ಯಾವ ತಪ್ಪನ್ನೂ ಮಾಡಿಲ್ಲ, ನಿಮ್ಮ ವಿಚಾರದಲ್ಲಿ ಒಂದು ತಪ್ಪು ಮಾತನಾಡಿಲ್ಲ. ನಿಮ್ಮ ಬಗ್ಗೆ ತುಂಬ ಗೌರವವಿದೆ ಎನ್ನುವುದನ್ನು ಸ್ಪಷ್ಟಪಡಿಸಿದರು. ಒಟ್ಟಾರೆ ಪ್ರಕರಣದಲ್ಲಿ ಸ್ವರೂಪ್ ಅವರ ನಡೆ ನುಡಿಗಳು ಕೂಡಾ ಅದೇ ರೀತಿಯಲ್ಲಿದ್ದವು. ಯಾರು ಎಷ್ಟೇ ಕೆದಕಿದರೂ ರೇವಣ್ಣ ಕುಟುಂಬದ ವಿರುದ್ಧ ಒಂದೇ ಒಂದು ಮಾತು ಆಡಿರಲಿಲ್ಲ. ಯಾರಿಗೆ ಟಿಕೆಟ್ ಕೊಟ್ಟರೂ ನಾನು ಬೆಂಬಲಿಸುತ್ತೇನೆ ಎಂದಷ್ಟೇ ಹೇಳುತ್ತಿದ್ದರು.
ಇದೆಲ್ಲವನ್ನು ಗಮನಿಸಿದ ರೇವಣ್ಣ ಕುಟುಂಬ ಟಿಕೆಟ್ ಕೊಟ್ಟಾದ ಮೇಲೆ ದ್ವೇಷ ಸಾಧಿಸುವುದು ಒಳ್ಳೆಯದಲ್ಲ ಎಂಬ ನಿಲುವು ಮತ್ತು ಸ್ವರೂಪ್ ಅವರ ನಡೆಗಳಿಂದ ವಿಶ್ವಾಸವನ್ನು ಹೊಂದಿ ಕಾರ್ಯಕ್ರಮಕ್ಕೆ ಬರಲು ಒಪ್ಪಿತು ಎನ್ನಲಾಗಿದೆ.
ಗುರುವಾರ ರೋಡ್ ಶೋ
ಸ್ವರೂಪ್ ಅವರು ಗುರುವಾರ ಹಾಸನದಲ್ಲಿ ಬೃಹತ್ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸುವ ಕಾರ್ಯಕ್ರಮವಿದೆ. ರ‍್ಯಾಲಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಭಾಗಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : Karnataka Elections : ನಿಖಿಲ್ ಕುಮಾರಸ್ವಾಮಿಯ ಎರಡು ಕಾರಿನ ಮೌಲ್ಯವೇ 5 ಕೋಟಿ ರೂ., ಹಾಗಿದ್ದರೆ ಅವರ ಒಟ್ಟು ಆಸ್ತಿ ಎಷ್ಟಿರಬಹುದು?