ಬೆಂಗಳೂರು: ʻʻಬಸವರಾಜ ಬೊಮ್ಮಾಯಿ ಅವರು ಬುದ್ಧಿವಂತರು. ತುಂಬ ಒಳ್ಳೆಯ ಆಡಳಿತ ನೀಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಸರ್ವೋಚ್ಚ ನಾಯಕರುʼʼ ಎಂದು ಹೇಳಿದ್ದಾರೆ ವಸತಿ ಸಚಿವ ವಿ. ಸೋಮಣ್ಣ. ಚುನಾವಣೆ ಘೋಷಣೆಗೆ (Karnataka Elections 2023) ಕೆಲವೇ ಕ್ಷಣಗಳಿಗೆ ಮೊದಲು ತನ್ನ ಖಾತೆಯ ಸಾಧನೆ ಬಗ್ಗೆ ವಿವರಣೆ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻಸುಮಾರು 3 ವರ್ಷ 10 ತಿಂಗಳಾಯಿತು ನಮ್ಮ ಸರ್ಕಾರ ಬಂದು. ನಾನು ಅನೇಕ ಬಾರಿ ಕಠಿಣವಾದ ಭಾಷೆ ಬಳಕೆ ಮಾಡಿದ್ದೇನೆ. ಯಾರಿಗಾದರೂ ನನ್ನ ಭಾಷೆಯಿಂದ ನೋವಾಗಿದ್ದರೆ ಕ್ಷಮಿಸಬೇಕು. ರಾಜಕಾರಣ ಅನ್ನೊದು ಮುಳ್ಳಿನ ಹಾಸಿಗೆ ಇದ್ದ ಹಾಗೆʼʼ ಎಂದು ಕ್ಷಮಾಪಣೆ ಕೇಳಿದ್ದರು.
ವಸತಿ ಸಚಿವರಾಗಿರುವ ಸೋಮಣ್ಣ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಸಮೀಕರಣ ಚೆನ್ನಾಗಿಲ್ಲ ಎಂಬುದು ಎಲ್ಲ ಕಡೆ ಸುದ್ದಿಯಲ್ಲಿರುವ ಸಂಗತಿ. ಅದರ ಜತೆಗೆ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಅವರಂತೂ ಬಿಎಸ್‌ವೈ ಪುತ್ರ ಬಿವೈ ವಿಜಯೇಂದ್ರ ಅವರ ವಿರುದ್ಧ ತೀವ್ರ ವಾಗ್ದಾಳಿಯನ್ನೇ ನಡೆಸಿದ್ದರು. ಈಗ ಸೋಮಣ್ಣ ಅವರು ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಕ್ಷಮೆ ಯಾಚಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.
ಬಿಜೆಪಿಯಲ್ಲಿ ನಿಮಗೆ ತೃಪ್ತಿ ತಂದಿದೆಯಾ?
ʻʻನನ್ನ ಕ್ಷೇತ್ರದ ಮತದಾರರ ಒಂದೊಂದು ಮತವೂ ಸಾಕಷ್ಟು ಪ್ರಭಾವ ಬೀರಿದೆ. ಅವರ ಬೇಡಿಕೆಗಳಿಗೆ ಕಿವಿಗೊಟ್ಟಿದ್ದೇನೆ. ರಸ್ತೆಗಳು, ಕುಡಿಯುವ ನೀರಿನ ಸಮಸ್ಯೆ ಕ್ಷೇತ್ರದಲ್ಲಿ ಬಗಹರಿಸಿದ್ದೇನೆʼʼ ಎಂದು ಹೇಳಿದ ಅವರು, ಒಮ್ಮೆ ಬಿಜೆಪಿ ಸೇರಿದ ಮೇಲೆ ಅದು ನನ್ನ ಪಕ್ಷ. ಗೆದ್ದ ನಂತರ ಎಲ್ಲಾ ಮತದಾರರು ನಮ್ಮವರು ಎಂದು ಭಾವಿಸಿದ್ದೇನೆʼʼ ಎಂದರು.
ʻʻರಾಜಕೀಯವಾಗಿ ಬಿಜೆಪಿಯಲ್ಲಿ ತೃಪ್ತಿ ಇದೆಯಾʼʼ ಎಂಬ ಪ್ರಶ್ನೆಗೆ ಕುತೂಹಲಕಾರಿ ಉತ್ತರ ನೀಡಿದ ಸೋಮಣ್ಣ ಅವರು, ʻʻನನಗೆ ಸುಳ್ಳು ಹೇಳಿ ಅಭ್ಯಾಸ ಇಲ್ಲ. ರಾಜಕೀಯದಲ್ಲಿ ಕಲ್ಲು ಮುಳ್ಳು ಇರುತ್ತವೆ. ಕೆಲವೊಂದನ್ನು ಎಲ್ಲಿ ಬಿಡಬೇಕೋ ಅಲ್ಲೇ ಬಿಡಬೇಕು. ಚುನಾವಣೆಯಲ್ಲಿ ಗೆದ್ದು ಬಂದ ನಂತರ ನಿಮಗೆ ಉತ್ತರ ಕೊಡುತ್ತೇನೆʼʼ ಎಂದು ಹೇಳಿದರು.
ʻʻಲಿಂಗಾಯತ ಸಮುದಾಯದಲ್ಲಿ ಪ್ರಭಾವಿಯಾಗಿರುವ ವಿ. ಸೋಮಣ್ಣ ಅವರನ್ನು ಒಳಸಿಕೊಳ್ಳುವುದರಲ್ಲಿ ಬಿಜೆಪಿ ವಿಫಲವಾಯಿತಾʼʼ ಎಂದು ಕೇಳಿದಾಗ, ʻʻನಾನು ಚುನಾವಣೆಯ ಹೊಸ್ತಿಲಿನಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ಎಷ್ಟರ ಮಟ್ಟಿಗೆ ಉಪಯೋಗಿಸಿಕೊಂಡಿದ್ದಾರೆ ಎಂದು ಹೇಳಲು ಇಷ್ಟಪಡಲ್ಲ.. ಅದೆಲ್ಲಾ ದೇವರು ನೋಡಿಕೊಳ್ಳುತ್ತಾನೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ.ʼʼ ಎಂದರು ಸೋಮಣ್ಣ.
ವಸತಿ ಇಲಾಖೆಯಲ್ಲಿ ಸಾಕಷ್ಟು ಸಾಧನೆ
ʻʻನಾನು ವಸತಿ ಇಲಾಖೆಯಲ್ಲಿ ಅನೇಕ ಕೆಲಸ ಮಾಡಿದ್ದೇನೆ. ವಸತಿ ಇಲಾಖೆಯಲ್ಲಿ ನಾನು ಮಾಡಿದ ಕೆಲಸ ಹೊರ ಜಗತ್ತಿಗೆ ಗೊತ್ತಾಗಬೇಕು ಎಂಬ ಕಾರಣಕ್ಕಾಗಿ ಅದಕ್ಕೆ ಒಂದು ಕೈಪಿಡಿ ಬಿಡುಗಡೆ ಮಾಡ್ತಿದೇನೆ. ನನ್ನ ಇಲಾಖೆ ಸಾಧನೆಯ ಪುಸ್ತಕ ಬಿಡುಗಡೆ ಮಾಡುತ್ತಿದ್ದೇನೆ. ಇನ್ನು ನನ್ನ ಮತ ಕ್ಷೇತ್ರದಲ್ಲಿ ನಾನು ಮಾಡಿದ ಕ್ರಾಂತಿಕಾರಿ ಕೆಲಸದ ಬಗ್ಗೆ ಕೂಡ ಪುಸ್ತಕ ಬೀಡುಗಡೆ ಮಾಡುತ್ತಿದ್ದೇನೆ. 1 ಲಕ್ಷದ 14 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ನೀಡಿದ್ದೇನೆ. ರಾಜೀವ್ ಗಾಂಧಿ ಯೊಜನೆ ಅಡಿಯಲ್ಲಿ ಅನೇಕ ಮನೆಗಳು ನಿರ್ಮಾಣ ಮಾಡಿದ್ದೇವೆ. ರಾಜ್ಯ ಸರ್ಕಾರದ ಹಣದಲ್ಲಿ 5 ಲಕ್ಷ ಮನೆ ನಿರ್ಮಾಣ ಆಗುತ್ತಿದೆ. ಇದರಲ್ಲಿ 3 ಲಕ್ಷ ಮನೆ ಹಂಚಿಕೆ ಆಗಿದೆ. ಬೆಂಗಳೂರಿನಲ್ಲಿ ಬಹುಮಹಡಿ ಮನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಬೆಂಗಳೂರಿನಲ್ಲಿ 50 ಸಾವಿರ ಮನೆಗಳಲ್ಲಿ 8 ಸಾವಿರ ಮನೆಗಳು ಹಂಚಿಕೆ ಆಗಿದೆ. ಇನ್ನುಳಿದ ಮನೆಗಳು ನಿರ್ಮಾಣ ಹಂತದಲ್ಲಿ ಇದೆʼʼ ಎಂದು ಸೋಮಣ್ಣ ಹೇಳಿದರು.
ಧರ್ಮಸ್ಥಳ ಬಳಿ ವಿಮಾನ ನಿಲ್ದಾಣ
ʻʻಶಿವಮೊಗ್ಗದಲ್ಲಿ ನಿರ್ಮಾಣ ಮಾಡಿದ ವಿಮನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ್ದೇವೆ. ಧರ್ಮಸ್ಥಳದಿಂದ 7 ಕಿ.ಮೀ ದೂರದಲ್ಲಿ ಸಣ್ಣ ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತೇವೆ. ಧರ್ಮಸ್ಥಳ ಧರ್ಮಾಧಿಕಾರಿಗಳು ಬೆಂಗಳೂರಿಗೆ ಬರಲು ತೊಂದರೆ ಆಗುತ್ತಿದೆ ಎಂದು ಹೇಳಿದ್ದರು. ಇದರ ಜತೆಗೆ ಧರ್ಮಸ್ಥಳಕ್ಕೆ ಹೋಗಿ ಬರಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಅಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತಿದ್ದೇವೆʼʼ ಎಂದು ಹೇಳಿದರು ಸೋಮಣ್ಣ.
ʻʻಹಾಸನ ವಿಮಾನ ನಿಲ್ದಾಣವನ್ನು ಇನ್ನು 2-3 ತಿಂಗಳಲ್ಲಿ ಲೋಕಾರ್ಪಣೆ ಮಾಡುತ್ತೇವೆ. ಎಲ್ಲ ಕೆಲಸಗಳ ಮೂಲಕ ಡಬ್ಬಲ್ ಎಂಜಿನ್ ಸರ್ಕಾರ ಯಾವ ರೀತಿ ಕೆಲಸ ಮಾಡಬಹುದು ಎಂದು ತೋರಿಸಿದ್ದೇವೆ. ನಮ್ಮ ಸರ್ಕಾರ ಬಡವರಿಗೋಸ್ಕರ ಇದೆ ಎಂಬುದನ್ನು ತೋರಿಸಿದ್ದೇವೆʼʼ ಎಂದು ಹೇಳಿದ ಸೋಮಣ್ಣ, ನನ್ನ ಇಲಾಖೆ ಪಾರದರ್ಶಕವಾಗಿದೆ. ವಸತಿ ಇಲಾಖೆಯಲ್ಲಿ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ ಎಂದರು.
ಇದನ್ನೂ ಓದಿ : Karnataka Elections 2023 : ಬೊಮ್ಮಾಯಿ Vs ಡಿಕೆಶಿ; ನೀವು ಸಿಎಂ ಆಗಿದ್ದು ಹೇಗೆ ಎಂದು ಕೇಳಿದ DKS