Site icon Vistara News

Karnataka Elections 2023 : ಬೊಮ್ಮಾಯಿ Vs ಡಿಕೆಶಿ; ನೀವು ಸಿಎಂ ಆಗಿದ್ದು ಹೇಗೆ ಎಂದು ಕೇಳಿದ DKS

DKS Bommai

#image_title

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Elections 2023) ಘೋಷಣೆಗೆ ಕ್ಷಣಗಣನೆ ಶುರುವಾಗಿರುವಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನಡುವೆ ಮಾತಿನ ಸಂಘರ್ಷ ತೀವ್ರಗೊಂಡಿದೆ. ಕಾಂಗ್ರೆಸ್‌ಗೆ ಅಭ್ಯರ್ಥಿಗಳಿಲ್ಲ, ಅವರು ತಮ್ಮ ಎರಡನೇ ಪಟ್ಟಿಗಾಗಿ ಬಿಜೆಪಿ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರೆ, ನೀವು ಸಿಎಂ ಆಗಿದ್ದು ಹೇಗೆ ಎಂಬುದನ್ನು ನೆನಪು ಮಾಡಿಕೊಳ್ಳಿ ಎಂದು ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ಚುನಾವಣೆ ಘೋಷಣೆಗೆ ಪತ್ರಿಕಾಗೋಷ್ಠಿ ಆಯೋಜನೆಯಾಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸುವ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು, ಡಿ.ಕೆ. ಶಿವಕುಮಾರ್‌ ಅವರು ಎರಡನೇ ಪಟ್ಟಿ ಮಾಡುವಾಗ ನಮ್ಮ ಶಾಸಕರಿಗೆ ಕರೆ ಮಾಡಿದ್ದಾರೆ. ವಲಸಿಗರು ಸೇರಿದಂತೆ ಮೂಲ ಬಿಜೆಪಿ ಶಾಸಕರನ್ನ ಸಂಪರ್ಕ ಮಾಡಿದ್ದಾರೆ ಆದರೆ, ಅವರು ಯಾರೂ ಬರುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್‌ಗೆ ಅಭ್ಯರ್ಥಿ ಕೊರತೆ ಕಾಣಿಸುತ್ತಿದೆ ಎಂದು ಹೇಳಿದ್ದರು.

ಬೊಮ್ಮಾಯಿ ಅವರ ಹೇಳಿಕೆಗೆ ಖಾರವಾದ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ಬಿಜೆಪಿಯವರು ಯಾವ ಶಾಸಕರನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ದಾರೆ ಎನ್ನುವುದನ್ನು ನೆನಪಿಸಿಕೊಳ್ಳಲಿ ಎಂದು ಹೇಳಿದರು.

ʻʻಯಾವ ಶಾಸಕರನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ದಾರೆ. ಅವರಿಗೆ ಬಹುಮತ ಬಂದಿತ್ತಾ? ಬಿಜೆಪಿಗೆ ಹೋಗಿದ್ದು ನಮ್ಮ ಶಾಸಕರು ತಾನೇ? ಈಗ ಬಿಜೆಪಿಯಿಂದ ಅವರಾಗಿಯೇ ಬರುತ್ತಿದ್ದಾರೆ. ನಾವು ಸಂಪರ್ಕ ಮಾಡುತ್ತಿಲ್ಲ. ಅವರೇ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ನಮಗೆ ಟಿಕೆಟ್ ಸಹ ನೀಡಲಾಗದಷ್ಟು ರಶ್ ಇದೆʼʼ ಎಂದಿರುವಡಿ.ಕೆ. ಶಿವಕುಮಾರ್‌ ಅವರು, ʻʻಸಿಎಂ ಬಸವರಾಜ ಬೊಮ್ಮಾಯಿ ಅವರು ಯಾವ ಪಕ್ಷದಲ್ಲಿ ಇದ್ದವರು? ಈಗ ಯಾವ ಪಕ್ಷಕ್ಕೆ ಬಂದು ಸಿಎಂ ಆಗಿದ್ದಾರೆʼʼ ಎಂದು ನೆನಪಿಸಿಕೊಳ್ಳಲಿ ಎಂದರು.

ಇನ್ನೂ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ

ʻʻಈಗಲೂ ಸಾಕಷ್ಟು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ನಾನು ಈಗ ಅವರ ಹೆಸರು ಹೇಳಲು ರೆಡಿ ಇಲ್ಲ. ಅವರಿಗೆ ನಾನು ತೊಂದರೆ ಮಾಡಲ್ಲʼʼ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ʻʻಇವತ್ತಿನಿಂದ ಸರ್ಕಾರದ ಕೊನೆ ಕ್ಷಣ ಎಣಿಕೆ ಆರಂಭವಾಗಿದೆ. ಬಿಜೆಪಿ ಬಹುಮತ ಪಡೆಯುವುದು ಬಿಡಿ, 60-65 ಸೀಟಿಗೆ ಬಂದು ನಿಲ್ಲಲಿದೆ. ನಾವು ನಿಚ್ಚಳವಾದ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆʼʼ ಎಂದರು.

ʻʻನಾವು ಮೂರು ತಿಂಗಳು ಮೊದಲೇ ಚುನಾವಣೆಗೆ ರೆಡಿ ಇದ್ದೆವು. ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ. ಅವರು ಹೇಗಾದರೂ ಮಾಡಿಕೊಳ್ಳಲಿ, ಎಷ್ಟು ವೇಗವಾಗಿ ಚುನಾವಣೆ ಆಗುತ್ತದೆಯೋ ಅಷ್ಟು ಕಾಂಗ್ರೆಸ್‌ಗೆ ಒಳ್ಳೆಯದುʼʼ ಎಂದು ಅಭಿಪ್ರಾಯಪಟ್ಟರು ಡಿ.ಕೆ. ಶಿವಕುಮಾರ್‌.

ʻʻಸರ್ಕಾರ ಅಧಿಕಾರವನ್ನು, ಆಡಳಿತ ಯಂತ್ರವನ್ನು ಎಷ್ಟು ದುರ್ಬಳಕೆ ಮಾಡಿಕೊಳ್ಳಬೇಕೋ ಅಷ್ಟೆಲ್ಲವನ್ನೂ ಮಾಡಿ ಆದರೆ. ನಾವು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲʼʼ ಎಂದು ಹೇಳಿದ ಅವರು, ಮೀಸಲಾತಿ ವಿಚಾರದಲ್ಲಿ ಯಾರಿಗೂ ಸಮಾಧಾನ ಇಲ್ಲ. ಕೋರ್ಟ್‌ಗೆ ಹೋದರೆ ಯಾವುದೂ ನಿಲ್ಲುವುದಿಲ್ಲ. ಅವರು ಮಾಡಿದ ತಪ್ಪನ್ನು ನಾವು ಸರಿ ಮಾಡುತ್ತೇವೆ. ಮನೆ ಆಸ್ತಿನ ಹಂಚಿಕೊಂಡಂತೆ ಅವರು ಕೊನೆ ಕ್ಷಣದಲ್ಲಿ ಹಂಚಿಕೊಳ್ಳಲು ಹೊರಟಿದ್ದಾರೆʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್‌.

ಇದನ್ನೂ ಓದಿ Karnataka Election announced : ಅಭ್ಯರ್ಥಿ ಪಟ್ಟಿ ಬಿಡುಗಡೆಯಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮುಂದೆ; ಬಿಜೆಪಿ ಮೊದಲ ಪಟ್ಟಿಯೇ ಬಂದಿಲ್ಲ!

Exit mobile version