ಹಾಸನ: ʻʻಯಾರಪ್ಪ ಅವರು? ಗೊತ್ತಿಲ್ಲಪ್ಪ ನನಗೆ ಯಾರು ಅಂತಾ.. ನನಗೆ ಗೊತ್ತಿಲ್ಲಪ್ಪ ಅದ್ಯಾರು ಅಂತʼʼ ಹೀಗೆಂದು ಹೇಳಿದ್ದು ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ. ಅವರು ಹಾಸನ ವಿಧಾನಸಭಾ ಕ್ಷೇತ್ರದ (Karnataka Elections 2023) ಟಿಕೆಟ್ ಆಕಾಂಕ್ಷಿ ಎಚ್.ಪಿ ಸ್ವರೂಪ್ ಅವರನ್ನು ಕುರಿತಾಗಿ ಈ ಮಾತು ಆಡಿದ್ದಾರೆ! ಸ್ವರೂಪ್ ಯಾರೆಂದು ಗೊತ್ತೇ ಇಲ್ಲ ಅಂತ ಎಚ್.ಡಿ. ರೇವಣ್ಣ ಹೇಳಿದ್ದು ಚರ್ಚೆಗೆ ಕಾರಣವಾಗಿದೆ.
ಹಾಸನದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು ಒಟ್ಟಾರೆ ರಾಜಕೀಯ ಪರಿಸ್ಥಿತಿಯ ಬಗ್ಗೆ ವಿಶ್ಲೇಷಿಸಿದರು. ಮಾತುಕತೆಯ ನಡುವೆ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮಾತು ಪ್ರಸ್ತಾಪಕ್ಕೆ ಬಂತು.
ಆಗ ರೇವಣ್ಣ ʻʻಕುಮಾರಣ್ಣ ಹೇಳ್ತಾರೆ, ನಾವೇನ್ ಮಾಡೋಕೆ ಆಗುತ್ತೆ. ಅದು ನನಗೆ ಗೊತ್ತಿಲ್ಲ, ನನಗೆ ಅವೆಲ್ಲ ಗೊತ್ತಿಲ್ಲಪ್ಪ, ಅದೇನ್ ಗೊತ್ತಿಲ್ಲ, ನಾನ್ ಅವೆಲ್ಲ ನೋಡಿಲ್ಲ, ನೋಡೋದೂ ಇಲ್ಲʼʼ ಎಂದರು.
ಎಚ್.ಪಿ. ಸ್ವರೂಪ್ ಅವರೇ ಕುಮಾರಸ್ವಾಮಿಯರನ್ನು ಭೇಟಿಯಾಗಿದ್ದಾರೆಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ,, ಸ್ವರೂಪ್ ಯಾರೆಂದು ಗೊತ್ತೇ ಇಲ್ಲ ಅಂದರು. ʻʻಯಾರಪ್ಪ ಅವರು? ಗೊತ್ತಿಲ್ಲಪ್ಪ ನನಗೆ.. ಯಾರು ಅಂತʼʼ ಅಂದರು.
ʻʻಕುಮಾರಣ್ಣನವರು ಹೇಳಿದ್ದಾರಲ್ಲ.. ಸಾಮಾನ್ಯ ಕಾರ್ಯಕರ್ತ ಯಾರೆಂದು ಗೊತ್ತಿಲ್ಲಪ್ಪ ನನಗೆ, ಅದ್ಯಾರು ಅಂತಾ ನೋಡೋಣʼʼ ಎಂದರು.
ʻʻನೋಡ್ರಿ.. ಈ ಜಿಲ್ಲೆಯೊಳಗೆ ಕಳೆದ 25 ವರ್ಷದಿಂದ ಶಾಸಕನಾಗಿ ಕೆಲಸ ಮಾಡಿದ್ದೇನೆ. ಈ ಜಿಲ್ಲೆಯದ್ದು ಏನಿದೆ ಅಂತಾ ನನಗೆ ಗೊತ್ತಿದೆ. ನಮ್ಮ ಮುಖಂಡರ ಬಳಿ ಕೂತ್ಕೋತತೀನಿ, ಇದ್ರಲ್ಲಿ ಯಾವ ದಾಕ್ಷಿಣ್ಯವೂ ಇಲ್ಲ. ನಾನು ಹೆದರಿಕೊಂಡು ಓಡಿಹೋಗೋದಿಲ್ಲ. ಈ ಸಾರಿ ಜಿಲ್ಲೆಯಲ್ಲಿ ಅಗ್ನಿಪರೀಕ್ಷೆ ಇದೆ. ಕೂತ್ಕೋತೀನಿ ನೋಡೋಣ. ಈ ಜಿಲ್ಲೆಯ ಜನರು ರೇವಣ್ಣ ಈ ಜಿಲ್ಲೆಗೆ ದುಡಿದಿದ್ದಾನೆ ಅಂದರೆ ಕೈ ಹಿಡಿಯಲಿ. ಇಲ್ಲಪ್ಪ ರೇವಣ್ಣ ದುಡಿದಿಲ್ಲ, ಈ ಜಿಲ್ಲೆಗೆ ಏನೂ ಮಾಡಿಲ್ಲ ಅಂದ್ರೆ ಸೋಲಿಸಲಿ. ಅದು ಜನತೆಗೆ ಬಿಟ್ಟಿದ್ದೇನೆʼʼ ಎಂದರು ರೇವಣ್ಣ.
ರಾಷ್ಟ್ರೀಯ ಪಕ್ಷಗಳೇ ಒದ್ದಾಡುತ್ತಿವೆ
ಟಿಕೆಟ್ ಫೈನಲ್ ಮಾಡುವಲ್ಲಿ ಗೊಂದಲ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻರಾಷ್ಟ್ರೀಯ ಪಕ್ಷಗಳೇ ಒದ್ದಾಡ್ತಾ ಇದ್ದಾವೆ, ನಮ್ಮದು ಪ್ರಾದೇಶಿಕ ಪಕ್ಷ. ರಾಷ್ಟ್ರೀಯ ಪಕ್ಷಗಳೇ ಒಂದೊಂದ್ ಸೀಟ್ ಅನೌನ್ಸ್ ಮಾಡೋಕೇ ಹಗಲು ರಾತ್ರಿ ಯೋಚನೆ ಮಾಡ್ತಾವ್ರೆ. ಕೆಲವರು ರಾಹುಲ್ ಗಾಂಧಿ ಕೇಳ್ತಾವ್ರೆ, ಕೆಲವು ಕಡೆ ನಡ್ಡಾ ಅವರನ್ನ ಕೇಳ್ತಾವ್ರೆ. ಅಮಿತ್ ಶಾ ಮೊನ್ನೆ ಚುನಾವಣೆ ಅನೌನ್ಸ್ ಆಗೋವರೆಗೆ ಮಾಡೋದಿಲ್ಲ ಅಂತಾ ಕೂತವ್ರೆ. ನಮ್ಮದು ಪ್ರಾದೇಶಿಕ ಪಕ್ಷ, ಯಾರೂ ಯೋಚನೆ ಮಾಡಬೇಕಾಗಿಲ್ಲ, ಯಾವ ರೀತಿ, ಯಾರನ್ನ ಮಾಡಬೇಕು ಅಂತಾ ಗೊತ್ತಿದೆ ನಮ್ಗೆ, ಮಾಡ್ತೀವಿʼʼ ಎಂದರು.
ಹಾಸನ ವಿಧಾನಸಭಾ ಕ್ಷೇತ್ರದಿಂದ ತಮ್ಮ ಪತ್ನಿ ಭವಾನಿ ಅವರಿಗೇ ಟಿಕೆಟ್ ನೀಡಬೇಕು ಎಂದು ಹಠ ಹಿಡಿದಿರುವ ಎಚ್.ಡಿ ರೇವಣ್ಣ ಅವರು ಮಾಜಿ ಪ್ರಧಾನಿ ದೇವೇಗೌಡರ ಜತೆಗೂ ಮಾತನಾಡಿದ್ದಾರೆ. ಆದರೆ, ಎಚ್.ಡಿ. ಕುಮಾರಸ್ವಾಮಿ ಅವರು ಎಚ್.ಪಿ ಸ್ವರೂಪ್‌ಗೇ ಟಿಕೆಟ್ ಕೊಡಬೇಕು ಎಂದು ಹಠ ಹಿಡಿದಿದ್ದಾರೆ. ಇದು ಕುಟುಂಬದಲ್ಲೂ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : Karnataka Election: ಈ ಬಾರಿಯೂ ಅತಂತ್ರ ವಿಧಾನಸಭೆ? ಕುಮಾರಸ್ವಾಮಿ ಜತೆ ʼಸಂಧಾನʼಕ್ಕೆ ಬಂದವರಾರು?