Site icon Vistara News

Karnataka Elections 2023 : ಕೋಲಾರದ ಸ್ಪರ್ಧೆಯಿಂದ ಹಿಂದೆ ಸರಿದರಾ ಸಿದ್ದರಾಮಯ್ಯ? ರಾಹುಲ್‌ ಸಲಹೆ ಏನು?

Karnataka Election news If Siddaramaiah contests against C.T. Ravi, fan will gave Rs 1 crore

ನವ ದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) ಕೋಲಾರದಿಂದ ಕಣಕ್ಕಿಳಿಯುವ ತಮ್ಮ ನಿರ್ಧಾರದಿಂದ ಹಿಂದೆ ಸರಿದರೇ? ಹೌದು ಎನ್ನುತ್ತವೆ ಉನ್ನತ ಮೂಲಗಳು.

ಸ್ವತಃ ಸಿದ್ದರಾಮಯ್ಯ ಅವರೇ ಈ ಬಗ್ಗೆ ಪರೋಕ್ಷವಾಗಿ ಸುಳಿವನ್ನು ನೀಡಿದ್ದಾರೆ. ʻʻಶುಕ್ರವಾರ ನಡೆದ ಸಭೆಯಲ್ಲಿ ಕೋಲಾರದ ನನ್ನ ಟಿಕೆಟ್‌ ಫೈನಲ್‌ ಮಾಡಿಲ್ಲ. ನಾನು ಹೈಕಮಾಂಡ್‌ ಎಲ್ಲಿ ಹೇಳುತ್ತೋ ಅಲ್ಲಿಂದ ಸ್ಪರ್ಧೆ ಮಾಡುತ್ತೇನೆʼʼ ಎಂದು ಸಿದ್ದರಾಮಯ್ಯ ಅವರು ಶನಿವಾರ ಮುಂಜಾನೆ ಹೇಳಿದ್ದಾರೆ.

ಕಳೆದ ಬಾರಿ ಬಾದಾಮಿ ಕ್ಷೇತ್ರದಲ್ಲಿ ಪ್ರಯಾಸದ ಗೆಲುವನ್ನು ಪಡೆದಿದ್ದ ಸಿದ್ದರಾಮಯ್ಯ ಅವರು ಈ ಬಾರಿ ಅದು ದೂರವಾಗುತ್ತದೆ ಎಂಬ ಕಾರಣಕ್ಕೆ, ಬೆಂಗಳೂರಿಗೆ ಹತ್ತಿರ ಎಂಬ ನೆಪ ಒಡ್ಡಿ, ಅಹಿಂದ ಮತ್ತು ಮುಸ್ಲಿಂ ಮತಗಳು ಹೆಚ್ಚಾಗಿರುವ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ವತಃ ಸಿದ್ದರಾಮಯ್ಯ ಅವರೇ ಘೋಷಿಸಿದ್ದರು. ಎಲ್ಲವೂ ಸರಿಯಾಗಿದ್ದಿದ್ದರೆ ಸಿದ್ದರಾಮಯ್ಯ ಅವರ ಹೆಸರನ್ನೇ ಕೋಲಾರ ಕ್ಷೇತ್ರಕ್ಕೆ ಫೈನಲ್‌ ಮಾಡಬಹುದಿತ್ತು. ಆದರೆ, ಸ್ವತಃ ಸಿದ್ದರಾಮಯ್ಯ ಅವರೇ ಹಿಂದೇಟು ಹಾಕಿದರಾ ಅಥವಾ ಹೈಕಮಾಂಡ್‌ ಅಲ್ಲಿಂದ ಸ್ಪರ್ಧೆ ಮಾಡುವುದು ಬೇಡ ಸಲಹೆಯನ್ನು ನೀಡಿದೆಯಾ ಎಂಬ ಸಂಶಯ ಹುಟ್ಟಿಕೊಂಡಿದೆ.

ಕೋಲಾರದಿಂದ ಸ್ಪರ್ಧಿಸಲು ಯಾಕೆ ಹಿಂದೇಟು?

ಸಿದ್ದರಾಮಯ್ಯ ಅವರು ಭಾರಿ ಕಸರತ್ತು ನಡೆಸಿ, ಮುನಿಯಪ್ಪ ಸೇರಿದಂತೆ ಹಿಂದೆ ವಿರೋಧಿಗಳಾಗಿದ್ದವರ ಜತೆ ರಾಜಿ ಮಾಡಿಕೊಂಡು ಕೋಲಾರದಲ್ಲಿ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದರು. ಅಲ್ಲೊಂದು ಮನೆಯನ್ನೂ ಬಾಡಿಗೆಗೆ ಪಡೆದಿದ್ದರು. ಆದರೆ, ಪಕ್ಷದೊಳಗಿನ ಒಳಜಗಳ, ನಾಯಕರ ಮುನಿಸುಗಳು, ನಂಬಿದ ಕೆಲವು ವರ್ಗಗಳೇ ಕೈಕೊಡಬಹುದು ಎಂಬ ಆಂತರಿಕ ವರದಿಗಳು ಸಿದ್ದರಾಮಯ್ಯ ಅವರ ವಿರುದ್ಧವಾಗಿದ್ದವು ಎಂದು ಹೇಳಲಾಗಿದೆ.

ಹೀಗಾಗಿ ಸ್ವತಃ ಸಿದ್ದರಾಮಯ್ಯ ಅವರೇ ಕೋಲಾರದಿಂದ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದಿರುವ ಸಾಧ್ಯತೆಗಳು ಇವೆ. ಇದರ ಜತೆಗೆ ಕಾಂಗ್ರೆಸ್‌ ಹೈಕಮಾಂಡ್‌ ಕೂಡಾ ಅದೇ ಸಲಹೆಯನ್ನು ನೀಡಿರುವ ಸಾಧ್ಯತೆ ಇದೆ.

ಒಂದೊಮ್ಮೆ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಿದರೆ ಅವರು ಪ್ರಯಾಸದಿಂದ ಗೆಲುವನ್ನೇನೋ ಸಾಧಿಸಬಹುದು. ಆದರೆ, ಅವರು ಚುನಾವಣಾ ಪ್ರಚಾರದ ವೇಳೆ ಕೋಲಾರಕ್ಕೆ ಸೀಮಿತವಾಗುವ ಅನಿವಾರ್ಯತೆ ಎದುರಾಗುತ್ತದೆ. ಹೀಗಿರುವಾಗ ಬೇರೆ ಕಡೆ ಪ್ರಚಾರ ಮಾಡುವ ಅವಕಾಶವೂ ಸಿಗದೆ ಹೋದರೆ ಉಳಿದ ಕಡೆಯೂ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತದೆ. ಹೀಗಾಗಿ ಇನ್ನಷ್ಟು ಸುರಕ್ಷಿತ ಕ್ಷೇತ್ರವನ್ನು ಕಂಡುಕೊಳ್ಳಲು ಹೈಕಮಾಂಡ್‌ ಸೂಚನೆ ನೀಡಿರುವ ಸಾಧ್ಯತೆ ಇದೆ.

ರಾಹುಲ್‌ ಗಾಂಧಿ ನೀಡಿದ ಸಲಹೆ ಏನು?

ಸಿದ್ದರಾಮಯ್ಯ ಅವರು ಯಾವ ಕಾರಣಕ್ಕೂ ರಿಸ್ಕ್‌ ತೆಗೆದುಕೊಳ್ಳಬಾರದು. ಸುರಕ್ಷಿತ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು. ಯಾಕೆಂದರೆ ಅವರೇ ಕಷ್ಟದಲ್ಲಿ ಸಿಲುಕಿದರೆ ಒಟ್ಟಾರೆ ಪಕ್ಷಕ್ಕೆ ಅಪಾಯ ಎದುರಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ ಎನ್ನಲಾಗಿದೆ. ರಾಹುಲ್‌ ಗಾಂಧಿ ಅವರ ಪ್ರಕಾರ ಮೈಸೂರಿನ ವರುಣಾ ಕ್ಷೇತ್ರವೇ ಸುರಕ್ಷಿತ.

ಆದರೆ, ಸಿದ್ದರಾಮಯ್ಯ ಅವರಿಗೆ ತಮ್ಮ ಮಗನಾದ ಯತೀಂದ್ರ ಅವರನ್ನು ವರುಣಾದಿಂದ ಕದಲಿಸಲು ಮನಸು ಮಾಡುತ್ತಿಲ್ಲ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಅಂತಿಮವಾಗಿ ಕೋಲಾರ ಬಿಟ್ಟು ಇನ್ನೊಂದು ಕ್ಷೇತ್ರವನ್ನು ಸಿದ್ದರಾಮಯ್ಯ ಆಯ್ಕೆ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ನಂಜನಗೂಡಿನಲ್ಲಿ ದರ್ಶನ್‌ಗೇ ಟಿಕೆಟ್‌

ಇದೇ ವೇಳೆ, ನಂಜನಗೂಡು ಕ್ಷೇತ್ರದಲ್ಲಿ ಇತ್ತೀಚೆಗೆ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರ ಪುತ್ರನಿಗೆ ಟಿಕೆಟ್‌ ಸಿಗಲಿದೆ ಎಂದು ಸಿದ್ದರಾಮಯ್ಯ ಅವರು ಖಚಿತಪಡಿಸಿದ್ದಾರೆ. ಇನ್ನೊಬ್ಬ ಆಕಾಂಕ್ಷಿಯಾಗಿರುವ ಎಚ್‌.ಸಿ. ಮಹದೇವಪ್ಪ ಅವರು ತಾನು ನಿಲ್ಲುವುದಿಲ್ಲ ಎಂದು ಘೋಷಣೆ ಮಾಡಿದ್ದರಿಂದ ದರ್ಶನ್‌ಗೆ ಟಿಕೆಟ್‌ ಖಚಿತ, ಯುಗಾದಿ ಹಬ್ಬದಂದು ಬೆಳಗ್ಗೆ ಮೊದಲ ಲಿಸ್ಟ್‌ ಬಿಡುಗಡೆಯಾಗಲಿದ್ದು, ಅದರಲ್ಲಿ ದರ್ಶನ್‌ ಹೆಸರು ಇರುತ್ತದೆ ಎಂದಿದ್ದಾರೆ ಸಿದ್ದರಾಮಯ್ಯ.

ಇದನ್ನೂ ಓದಿ : Karnataka Election 2023 : 130 ಕ್ಷೇತ್ರಗಳಿಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಸಿದ್ಧ; ಡಿ ಕೆ ಶಿವಕುಮಾರ್​

Exit mobile version