ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Elections 2023) ಸಂಬಂಧಿಸಿ ಕಾಂಗ್ರೆಸ್ ಶುಕ್ರವಾರ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಪಟ್ಟಿಯಲ್ಲಿ ಬಹು ನಿರೀಕ್ಷಿತ ಕೋಲಾರದ ಟಿಕೆಟ್ ಘೋಷಣೆಯಾಗುತ್ತದಾ? ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಸಿಗಲಿದೆಯಾ ಎನ್ನುವ ಕುತೂಹಲ ಎಲ್ಲ ಕಡೆ ಇದೆ. ಒಂದು ಮಾಹಿತಿ ಪ್ರಕಾರ, ಸಿದ್ದರಾಮಯ್ಯ ಅವರಿಗೆ ಕೋಲಾರದ ಟಿಕೆಟ್ ಸಿಗುವ ಸಾಧ್ಯತೆ ಇಲ್ಲ.
ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ 124 ಮತ್ತು ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದೆ. ಇನ್ನೂ 58 ಕ್ಷೇತ್ರಗಳ ಟಿಕೆಟ್ ಬಿಡುಗಡೆ ಬಾಕಿ ಇದೆ. ಕಾಂಗ್ರೆಸ್ ಉಳಿದ ಎಲ್ಲ ಟಿಕೆಟ್‌ಗಳನ್ನು ಒಂದೇ ಹಂತದಲ್ಲಿ ಪ್ರಕಟಿಸುತ್ತಾರಾ? ಅಥವಾ ಇನ್ನೂ ಎರಡು ಪಟ್ಟಿ ಮಾಡುತ್ತಾರಾ ಎಂದು ಕಾದು ನೋಡಬೇಕಾಗಿದೆ.
ಕೋಲಾರವೇ ಎಲ್ಲರ ಕುತೂಹಲದ ಕೇಂದ್ರ ಬಿಂದು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪರ್ಧಾಸಕ್ತಿಯ ಕಾರಣದಿಂದ ಗಮನ ಸೆಳೆದ ಕೋಲಾರ ಕ್ಷೇತ್ರದ ಟಿಕೆಟ್ ಮೂರನೇ ಪಟ್ಟಿಯಲ್ಲಿ ಫೈನಲ್ ಆಗುವ ಸಾಧ್ಯತೆಗಳಿವೆ. ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅವರ ನಡುವೆ ಹಲವು ಸುತ್ತಿನ ಚರ್ಚೆಗಳು ನಡೆದಿವೆ. ಕೇಂದ್ರ ಚುನಾವಣಾ ಸಮಿತಿಯಲ್ಲಿ ಅಂತಿಮ ಚರ್ಚೆ ನಡೆದು ಪಟ್ಟಿ ಬಿಡುಗಡೆಯಾಗಲಿದೆ.
ಕೋಲಾರ ಕ್ಷೇತ್ರದ ಟಿಕೆಟ್‌ಗಾಗಿ ಸಿದ್ದರಾಮಯ್ಯ ಅವರು ಭಾರಿ ಪ್ರಯತ್ನ ನಡೆಸುತ್ತಿರುವುದು ನಿಜವಾದರೂ ಹೈಕಮಾಂಡ್ ಈ ಕ್ಷೇತ್ರ ಬೇಡ ಎನ್ನುವ ಸಲಹೆಯನ್ನು ಮೊದಲೇ ನೀಡಿತ್ತು. ವರಿಷ್ಠರ ಸೂಚನೆಯಂತೆ ವರುಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವ ಆಸಕ್ತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಒಂದು ಕಡೆ ಸಿದ್ದರಾಮಯ್ಯ ಅವರು ಸ್ಪರ್ಧಿಸಿದರೆ ಕೋಲಾರ ಭಾಗದಲ್ಲಿ ಕಾಂಗ್ರೆಸ್‌ಗೆ ಒಳಿತಾಗುತ್ತದೆ ಎನ್ನುವ ಅಭಿಪ್ರಾಯ, ಇನ್ನೊಂದು ಕಡೆ ಎರಡೂ ಕಡೆ ಗೆದ್ದರೆ ವರುಣ ಕ್ಷೇತ್ರವನ್ನು ಮರಳಿ ಮಗ ಯತೀಂದ್ರ ಅವರಿಗೆ ಬಿಟ್ಟುಕೊಡಬಹುದು ಎಂಬ ದೂರಾಲೋಚನೆಯ ಹಿನ್ನೆಲೆಯಲ್ಲಿ ಕೋಲಾರದ ಮೇಲೆ ಸಿದ್ದರಾಮಯ್ಯ ಆಸೆ ಇಟ್ಟಿದ್ದಾರೆ.
ಆದರೆ, ಹೈಕಮಾಂಡ್ ಮಾತ್ರ ಈ ವಿಚಾರದಲ್ಲಿ ಹಲವು ಅಂಶಗಳೊಂದಿಗೆ ಖಡಕ್ ಸೂಚನೆ ನೀಡಿದೆ ಎನ್ನಲಾಗಿದೆ. ಕೋಲಾರದಲ್ಲಿ ಸಿದ್ದರಾಮಯ್ಯ ಅವರ ಸ್ಪರ್ಧೆಗೆ ಅನುಕೂಲಕರವಾದ ಸ್ಥಿತಿ ಇಲ್ಲ ಎಂದು ವರಿಷ್ಠರು ಮೊದಲೇ ಕಂಡುಕೊಂಡಿದ್ದರು. ಅಲ್ಲಿನ ಆಂತರಿಕ ಹೊಡೆದಾಟಗಳು, ನಾಯಕರ ಜಗಳಗಳು, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ವೋಟ್ ಬೇಸ್ ಇಲ್ಲದೆ ಇರುವುದನ್ನು ಮನವರಿಕೆ ಮಾಡಿಕೊಟ್ಟಿದೆ.
ಅದರ ಜತೆಗೆ ಚುನಾವಣಾ ತಯಾರಿಗೆ ಸಮಯವಿಲ್ಲದಿರುವುದನ್ನು ವಿವರಿಸಲಾಗಿದೆ. ಕ್ಷೇತ್ರವನ್ನು ರೀಚ್ ಆಗಲು ಕನಿಷ್ಠ ಎರಡು ತಿಂಗಳು ಬೇಕು. ಇನ್ನೂ ಟಿಕೆಟ್ ಫೈನಲ್ ಆಗಿಲ್ಲ. ಹಾಗಿರುವಾಗ ಹೊಸದಾಗಿ ಓಡಾಟ ಕಷ್ಟ. ಈ ನಡುವೆ ವರುಣದಲ್ಲೂ ಒಂದಿಷ್ಟು ಓಡಾಟದ ಅನಿವಾರ್ಯತೆ ಇರುವುದನ್ನು ಮನವರಿಕೆ ಮಾಡಿಕೊಡಲಾಗಿದೆ ಎನ್ನಲಾಗಿದೆ.
ಇದನ್ನು ಸಿದ್ದರಾಮಯ್ಯ ಅವರು ಕೂಡಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಳೆದ ಕೆಲವು ಸಮಯದಿಂದ ಸಿದ್ದರಾಮಯ್ಯ ಅವರು ಕೋಲಾರ ಟಿಕೆಟ್ ಬಗ್ಗೆ ಮಾತನಾಡುತ್ತಿಲ್ಲ. ಹೈಕಮಾಂಡ್ ಹೇಳಿದಂತೆ ನಡೆಯುತ್ತೇನೆ ಎನ್ನುತ್ತಿದ್ದಾರೆ. ಹೈಕಮಾಂಡ್ ಕೊಡುವ ಆಸಕ್ತಿ ಹೊಂದಿಲ್ಲ. ಅದನ್ನು ಸಿದ್ದರಾಮಯ್ಯ ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಕೋಲಾರಕ್ಕೆ ಒಕ್ಕಲಿಗ ಇಲ್ಲವೇ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನ ಕಣಕ್ಕೆ ಇಳಿಸುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ : Karnataka Elections 2023 : ಇಂದು ಬಿಜೆಪಿ 3ನೇ ಪಟ್ಟಿ ನಿರೀಕ್ಷೆ; ಯಾರಿಗುಂಟು ಯಾರಿಗಿಲ್ಲ? ಎಲ್ಲೆಡೆ ಕುತೂಹಲ